ಶನಿವಾರ, ಮೇ 15, 2021
24 °C

ಗುರುವಿಗೆ ಶಿಷ್ಯರ ಆತ್ಮೀಯ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಅಥ್ಲೆಟಿಕ್ ರಂಗದ ವಯೋವೃದ್ಧ ಕೋಚ್ ಲಿಂಗಪ್ಪ ಅವರ 88ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗ ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ವಿಶಿಷ್ಟ ರೀತಿಯಲ್ಲಿ ಆಚರಿಸಿ, ಅವರನ್ನು ಸನ್ಮಾನಿಸಿತು.ಹಿಂದೆ ಐದು ಸಲ ರಾಷ್ಟ್ರೀಯ ಮೆರಥಾನ್ ಚಾಂಪಿಯನ್ ಆಗಿದ್ದ ಡಿ.ವೈ. ಬಿರದಾರ್ ಸೇರಿದಂತೆ ಲಿಂಗಪ್ಪ ಅವರಿಂದ ತರಬೇತು ಪಡೆದ ಹಲವು ಖ್ಯಾತ ಅಥ್ಲೀಟ್‌ಗಳು ಈ ಸಂದರ್ಭದಲ್ಲಿ ಪಾಲ್ಗೊಂಡು ತಮ್ಮ ಗುರುವಿನ ಬಗ್ಗೆ ಮನದಾಳದ ಮಾತುಗಳನ್ನು  ಹೇಳಿದರು.ಕಳೆದ ಶತಮಾನದ ಕೊನೆಯ ಐದು ದಶಕಗಳ ಕಾಲ ಬೆಂಗಳೂರಿನ ಕ್ರೀಡಾಂಗಣಗಳಲ್ಲಿ ನೂರಾರು ಅಥ್ಲೀಟ್‌ಗಳಿಗೆ ಓಡುವ, ಜಿಗಿಯುವ ಬಗ್ಗೆ ಮಾರ್ಗದರ್ಶನ ನೀಡಿದ ಲಿಂಗಪ್ಪ ಅವರ ಕೊಡುಗೆಯ ಬಗ್ಗೆ ಈ ಸಮಾರಂಭದಲ್ಲಿ ಕೊಂಡಾಡಲಾಯಿತು.1970ರಲ್ಲಿ ಏಷ್ಯಾಡ್ ಕಂಚಿನ ಪದಕ ಗಳಿಸಿದ್ದೇ ಅಲ್ಲದೆ, ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಕೆನೆತ್ ಪೊವೆಲ್, 1974ರ ಏಷ್ಯಾಡ್‌ನಲ್ಲಿ ಲಾಂಗ್‌ಜಂಪ್ ಕಂಚು ಗೆದ್ದ ಸತೀಶ್ ಪಿಳ್ಳೆ, 1978ರ ಏಷ್ಯಾಡ್‌ನಲ್ಲಿ 400 ಮೀಟರ್ಸ್ ಓಟದಲ್ಲಿ ರಜತ ಪದಕ ಗಳಿಸಿದ್ದ ಉದಯ್ ಕೆ ಪ್ರಭು, 1989ರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಲಾಂಗ್‌ಜಂಪ್ ಕಂಚು ಗೆದ್ದ ರೀತ್‌ಅಬ್ರಹಾಂ, ಎಂ.ಇ.ಜಿ.ಯ ಕೋಚ್ ಮುರಳೀಧರನ್, ಹೆಸರಾಂತ ಅಥ್ಲೆಟಿಕ್ ಕೋಚ್ ವಿ.ಆರ್.ಬೀಡು, ಬೆಂಗಳೂರು ಗ್ರಾಮೀಣ ಜಿಲ್ಲೆ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಮುನಿಸಂಜೀವಪ್ಪ ಸೇರಿದಂತೆ ಅಥ್ಲೆಟಿಕ್ ಕ್ಷೇತ್ರದ ಹಲವಾರು ಸಾಧಕರು, ಆಡಳಿತಗಾರರು ಈ ಸಂದರ್ಭದಲ್ಲಿ ಹಾಜರಿದ್ದರು. ಅಲ್ಲದೆ ನೂರಾರು ಕಿರಿಯ ಅಥ್ಲೀಟ್‌ಗಳು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.