ಶುಕ್ರವಾರ, ಫೆಬ್ರವರಿ 26, 2021
28 °C

ಗುರುವಿನ ಕಣ್ಣಿನಲ್ಲಿ ಇಣುಕಿದಾಗ...

ಭರತ್ ಮತ್ತು ಶಾಲನ್ ಸವೂರ್ Updated:

ಅಕ್ಷರ ಗಾತ್ರ : | |

ಗುರುವಿನ ಕಣ್ಣಿನಲ್ಲಿ ಇಣುಕಿದಾಗ...

ಬದುಕು ಮತ್ತು ಸಾವಿನಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂದು ಸಂತರು ಹೇಳುತ್ತಾರೆ. ನೆಮ್ಮದಿಯಿಂದ ಸಾಯಬೇಕಾದರೆ ಆರೋಗ್ಯಕರವಾದ ಮತ್ತು ಪ್ರಶಾಂತ ಜೀವನ ಸಾಗಿಸುತ್ತಿರಬೇಕು. ಬದುಕಿನಲ್ಲಿನ ಸಂಕಷ್ಟವನ್ನು ಕೊನೆಗಾಣಿಸಲು ಈ ಕ್ಷಣದಿಂದಲೇ ಯತ್ನಿಸಬೇಕು. ಅದಕ್ಕಾಗಿ ನಾವೆಲ್ಲರೂ ಇತರರ ಬಗ್ಗೆ ದಯೆ ಮತ್ತು ಪ್ರೀತಿ ಹೊಂದಿರಬೇಕು.ಹುಟ್ಟಿದ ಕೆಲವು ವರ್ಷಗಳವರೆಗೆ ನಾವು ಬೇರೊಬ್ಬರ ಮರ್ಜಿಯಲ್ಲಿಯೇ ಇರುತ್ತೇವೆ. ಹೆತ್ತವರು ಮತ್ತು ಕುಟುಂಬದವರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದಲ್ಲಿ ನಾವು ಬದುಕಿರಲು ಸಾಧ್ಯವೇ ಇಲ್ಲ. ದೊಡ್ಡವರಾದ ಮೇಲೂ ನಮಗೆ ಒಳ್ಳೆಯ ಹೃದಯವಂತ ಜನರು ಸಿಕ್ಕೇ ಸಿಗುತ್ತಾರೆ. ನಾವು ಇತರರ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು.ನಾನು ಎಲ್ಲರ ಬಗ್ಗೆ ಕಾಳಜಿ ವಹಿಸುತ್ತೇನೆಯೇ? ಪ್ರೀತಿ ತುಂಬಿದ ಮಾತುಗಳನ್ನಾಡುತ್ತೇನೆಯೇ? ಒಳ್ಳೆಯ ನೌಕರಿ ಹಿಡಿಯುವುದು, ಅಡುಗೆ ಮಾಡುವುದು, ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು..ಇವೆಲ್ಲ ಕುಟುಂಬದ ಬಗ್ಗೆ ಕಾಳಜಿ ವಹಿಸುವ ವಿಧಾನ ಎಂದು ನಾವು ಅಂದುಕೊಂಡಿರುತ್ತೇವೆ. ನಮ್ಮ ಮಾತು ಮತ್ತು ವರ್ತನೆ ಇತರರಿಗೆ ನೋವುಂಟುಮಾಡುತ್ತದೆಯೇ ಎಂದೂ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ನಾವು ಇತರರನ್ನು ಖಂಡಿಸುತ್ತೇವೆಯೇ, ಪ್ರೋತ್ಸಾಹಿಸುತ್ತಿದ್ದೇವೆಯೇ, ಅಣಕಿಸುತ್ತಿದ್ದೇವೆಯೇ ಎಂಬುದನ್ನೂ ಪ್ರಶ್ನಿಸಿಕೊಳ್ಳಬೇಕು.ಬೌದ್ಧಸನ್ಯಾಸಿಯೊಬ್ಬ ಬರೆದ ಅನುಭವ ಕಥನವೊಂದು ಹೀಗಿದೆ: ಆ ಯುವಸನ್ಯಾಸಿ ತನ್ನ ಗುರುವಿನ ಜೊತೆ ಗಾಢ ಅನುಬಂಧ ಹೊಂದಿದ್ದ. ಎಲ್ಲ ವಿಚಾರಗಳ ಬಗೆಗೂ ಗುರುವಿನ ಜೊತೆ ಮುಕ್ತವಾಗಿ ಚರ್ಚಿಸುತ್ತಿದ್ದ. ತನಗೆ ನೆರವು, ಮಾರ್ಗದರ್ಶನ ಬೇಕಾದಾಗಲೆಲ್ಲ ಗುರುವಿನ ಬಳಿ ಹೋಗುತ್ತಿದ್ದ. ಕಷ್ಟದಲ್ಲಿ ಸಿಲುಕಿಕೊಂಡಾಗಲೆಲ್ಲ ಗುರುವಿನ ಸನ್ನಿಧಿಯಲ್ಲಿ ಮೌನವಾಗಿ ಕುಳಿತು ಧ್ಯಾನ ಮಾಡುತ್ತಿದ್ದ. ಆ ಮೂಲಕ ಮತ್ತಷ್ಟು ಬಲ ಗಳಿಸಿಕೊಳ್ಳುತ್ತಿದ್ದ.ಆ ಸನ್ಯಾಸಿ ಒಂದು ದಿನ ಯುವತಿಯೊಬ್ಬಳನ್ನು ಕಾಮದಾಸೆಯಿಂದ ದಿಟ್ಟಿಸಿ ನೋಡಿದ. ಮರುಕ್ಷಣವೇ ತನ್ನ ಕೃತ್ಯಕ್ಕೆ ನಾಚಿಕೊಂಡ. ಗುರುವಿನ ಬಳಿ ತಪ್ಪೊಪ್ಪಿಕೊಳ್ಳಲು ತೆರಳಿದ. ಆದರೆ, ಹಾಗೆ ಮಾಡಲು ಧೈರ್ಯ ಸಾಲದೇ ತಲೆ ತಗ್ಗಿಸಿ ಕುಳಿತುಬಿಟ್ಟ. ನಾನು ಮಾಡಿದ್ದೆಲ್ಲವೂ ಗುರುವಿಗೆ ತಿಳಿದಿದೆ. ಆತನನ್ನು ಎದುರಿಸುವುದು ಹೇಗೆ ಎಂಬ ಮುಜುಗರ ಆತನನ್ನು ಕಾಡುತ್ತಿತ್ತು. ಸತತ ಮೂರು ದಿನಗಳ ಕಾಲ ಗುರುವಿನ ಕುಟಿರಕ್ಕೆ ಹೋದ ಆತ ಮೂರು ದಿನವೂ ಗುರುವಿನ ಬಳಿ ಮಾತನಾಡದೇ ವಾಪಸ್ಸು ಬಂದ.ಗುರು ಸಹ ಒಂದೇ ಒದು ಶಬ್ದ ಉಚ್ಚರಿಸಲಿಲ್ಲ. ನಾಲ್ಕನೇ ದಿನ ಧೈರ್ಯ ತಂದುಕೊಂಡು ಗುರುವಿನ ಕಣ್ಣುಗಳಲ್ಲಿ ಇಣುಕಿದ. ಅಲ್ಲಿ ಯಾವ ಆರೋಪವೂ ಇರಲಿಲ್ಲ.ನಿರಾಸೆಯಾಗಲಿ, ಬೇಡಿಕೆಯಾಗಲಿ ಇರಲಿಲ್ಲ. ಗುರುವಿನ ಕಣ್ಣುಗಳು ನಾ ನಿನ್ನ ಪ್ರೀತಿಸುತ್ತೇನೆ ಎಂದು ಹೇಳುತ್ತಿದ್ದವು. ಸುಮ್ಮನೆ ತನ್ನ ಕೊಠಡಿಗೆ ತೆರಳಿದ ಯುವಸನ್ಯಾಸಿ ಅತ್ತು ತನ್ನ ಹೃದಯವನ್ನು ಹಗುರಾಗಿಸಿಕೊಂಡ.ಇಂತಹ ಷರತ್ತುರಹಿತ ಪ್ರೀತಿಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ನಾವು ಒಬ್ಬರನ್ನೊಬ್ಬರು ಹೀಗೆ ಪ್ರೀತಿಸುತ್ತಿದ್ದೇವೆಯೇ? ನಮ್ಮ ಕೆಲಸಕ್ಕೆ ಆದ್ಯತೆ ನೀಡಿ ‘ನನಗೀಗ ಸಮಯವಿಲ್ಲ’ ಎಂದು ಪದೇಪದೇ ನಮ್ಮ ಕುಟುಂಬದವರಿಗೆ ಹೇಳುತ್ತೇವೆಯೇ? ‘ನನಗೀಗ ಸಮಯವಿಲ್ಲ’ ಎನ್ನುವುದು ಅತ್ಯಂತ ನಿರ್ದಯವಾದ, ಕ್ರೂರವಾದ ಪದಪುಂಜ. ಈ ಪದಗಳಲ್ಲಿ ಪ್ರೀತಿಯೇ ಇರುವುದಿಲ್ಲ. ಇದರರ್ಥ ನಿಮ್ಮ ಕೆಲಸವನ್ನು ನಿರ್ಲಕ್ಷ್ಯಿಸಿ ಹರಟೆ ಹೊಡೆಯಬೇಕು ಎಂದಲ್ಲ. ನಿಮ್ಮ ಸಂಗಾತಿಗೆ, ಮಕ್ಕಳಿಗೆ ಕೆಲವು ಕ್ಷಣಗಳಾದರೂ ಮೀಸಲಿಡಬೇಕು.ನಿಮ್ಮ ಬದುಕು ಹೇಗೆ ಸಾಗುತ್ತಿದೆ ಎನ್ನುವುದನ್ನು ಒಮ್ಮೆ ಅವಲೋಕಿಸಿಕೊಳ್ಳಿ. ನಿಮ್ಮ ಮನೋಭಾವ, ಇತರರೊಂದಿಗಿನ ನಿಮ್ಮ ವರ್ತನೆ ಎಲ್ಲವನ್ನೂ ಒರೆಗೆ ಹಚ್ಚಿ. ನೀವು ಹಿಂದೆ ಆಡಿದ್ದ ಒರಟು ಮಾತುಗಳಿಗೆ ಪಶ್ಚಾತ್ತಾಪ ಪಡಿ. ಇನ್ನು ಮುಂದೆ ಮೃದುವಾಗಿ ಮಾತನಾಡುತ್ತೇನೆ ಎಂದು ಹೇಳಿಕೊಳ್ಳಿ. ಒರಟಾಗಿ ಮಾತನಾಡುವವರಿಗೆ, ನನ್ನ ಬಳಿ ಹೀಗೆ ಮಾತನಾಡಲು ‘ನಿನಗೆಷ್ಟು ಧೈರ್ಯ’ ಎಂದು ಹೇಳಬೇಡಿ. ‘ನಿನ್ನ ಸಮಸ್ಯೆ ಏನು, ಕುಳಿತುಕೊಂಡು ಮಾತನಾಡೋಣ’ ಎಂದು ಹೇಳಿ. ‘ನಾನು ಈ ನೋವನ್ನು, ರೋಗವನ್ನು ಹೇಗೆ ಕಡಿಮೆಮಾಡಲಿ’ ಎಂದು ಕೇಳಿಕೊಳ್ಳಿ.ನಮ್ಮ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಗತ್ಯಗಳನ್ನು ಕಡೆಗಣಿಸಿದಾಗ ರೋಗ ಕಾಣಿಸಿಕೊಳ್ಳುತ್ತದೆ ಎಂದು ಬೌದ್ಧಧರ್ಮ ಹೇಳುತ್ತದೆ. ದೇಹಕ್ಕೆ ಆರಾಮ ನೀಡಲು ವ್ಯಾಯಾಮ ಮಾಡಿ. ಸಕಾರಾತ್ಮಕ ಚಿಂತನೆಗಳ ಮೂಲಕ ಮನಸ್ಸನ್ನು ಪ್ರಫುಲ್ಲಕರವಾಗಿಟ್ಟುಕೊಳ್ಳಿ. ಅಧ್ಯಾತ್ಮ ಅಂದರೆ ಕೆಲವರು, ಯೋಗ ಮತ್ತು ಧ್ಯಾನ ಎಂದುಕೊಂಡಿರುತ್ತಾರೆ. ನಮ್ಮೊಳಗಿನ ಪುಟಿಯುವ ಚೈತನ್ಯದ ಆಧ್ಯಾತ್ಮಿಕ ಮುಖವನ್ನೂ ಅರಿಯಲು ಯತ್ನಿಸಬೇಕು.ನಮ್ಮ ದೇಹ ಸತ್ತಾಗ ಎಲ್ಲವೂ ಅಂತ್ಯವಾಗುವುದಿಲ್ಲ. ನಮ್ಮ ಚೈತನ್ಯ ಮತ್ತೊಂದು ಪಯಣಕ್ಕೆ ಅಣಿಯಾಗುತ್ತದೆ. ಇದನ್ನು ಊಹಿಸಿಕೊಂಡು ನಾವು ಭಯಭೀತರಾಗಬೇಕಿಲ್ಲ. ಅದನ್ನು ಸಂತಸದಿಂದ ಸ್ವೀಕರಿಸಬೇಕು. ಸಂತರೊಬ್ಬರು ಹೇಳಿದಂತೆ ಸಾವು ಅಂದರೆ ಹಳೆಯ ಜೀವನವಿಧಾನವನ್ನು ತ್ಯಜಿಸುವುದು ಅಷ್ಟೇ. ಬದುಕು-ಸಾವು, ರಾತ್ರಿ-ಹಗಲು ಇವೆಲ್ಲ ವಿರೋಧಾಭಾಸದ ವಿದ್ಯಮಾನಗಳಲ್ಲ. ಇವೆಲ್ಲ ಒಂದಕ್ಕೊಂದು ಪೂರಕವಾಗಿರುತ್ತವೆ. ಹಾಗಾಗಿ ನಿಮ್ಮೊಳಗೆ ಯಾವುದೇ ವಿರೋಧಾಭಾಸ ಇಟ್ಟುಕೊಂಡು ಜೀವಿಸಬೇಡಿ. ನಿಮ್ಮ ಜಾಗೃತ ಮನಸ್ಸಿಗೆ ಇದು ಗೊತ್ತಿಲ್ಲದೇ ಇದ್ದರೂ ನಿಮ್ಮೊಳಗಿನ ಚೈತನ್ಯಕ್ಕೆ ಇದೆಲ್ಲ ಗೊತ್ತಿರುತ್ತದೆ. ಈ ಅರಿವಿನ ಕಾಂತಿಯಲ್ಲಿ ಜೀವಿಸಿ....

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.