ಗುರುವಿಲ್ಲದೆ ಸಾಧಿಸಿದ ಕ್ರೀಡಾಸಾಧಕ ಹೊಂಬಳ

7

ಗುರುವಿಲ್ಲದೆ ಸಾಧಿಸಿದ ಕ್ರೀಡಾಸಾಧಕ ಹೊಂಬಳ

Published:
Updated:

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ. ಗುರುವಿಗೆ ವಿದ್ಯಾರ್ಥಿಯಾದವನ್ನು ಗುಲಾಮನಾಗಲೇ ಬೇಕು. ಸಾಧನೆಗಾಗಿ ಗುರು ಮತ್ತು ಗುರುವಿನ ಮಾರ್ಗದರ್ಶನ ಅವಶ್ಯಕ, ಗುರುವಿನ ಮಾರ್ಗದರ್ಶನವಿದ್ದಾಗ ಒಳ್ಳೆಯ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇನ್ನು ಕೆಲವರು ಗುರುವಿಲ್ಲದೆ ಸಾಧನೆ ಮಾಡುವ ಛಲಕ್ಕೆ ಬೀಳುತ್ತಾರೆ. ಸಾಧನೆಯ ಉತ್ತುಂಗ ಶಿಖರಕ್ಕೂ ತಲುಪಿ ಬಿಡುತ್ತಾರೆ. ಗುರುವಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡುವ ಮೂಲಕ 26ಚಿನ್ನದ ಪದಕಗಳನ್ನು ಪಡೆದು ಗೆಲುವಿನ ಉತ್ತುಂಗ ಶಿಖರಕ್ಕೆ ಎರಿದ ಖ್ಯಾತ ಅಥ್ಲೀಟ್ ಐ.ಎ. ಶಿವಾನಂದ ಹೊಂಬಳ ಗುರುವಿಲ್ಲದೆ ಸಾಧನೆ ಮಾಡುವ ವಿರಳ ಕ್ರೀಡಾಪಟುಗಳ ಅಗ್ರಪಂಕ್ತಿಗೆ ಸೇರುತ್ತಾರೆ.ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಬಡತನದ ನಡುವೆಯೂ ಸಾಧನೆಯ ಕನಸು. ಸಾಧನೆ ಹಾದಿಯತ್ತ ಮುಖ ಮಾಡಿದ ಶಿವಾನಂದ ಸಾಗುವ ಹಾದಿಯಲ್ಲಿ ಮುಳ್ಳು, ಕಲ್ಲುಗಳು ಇಲ್ಲದೆ ಇರಲಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿ ಹೆಸರು ಮಾಡುವ ಛಲಗಾರಿಕೆ ಬೆಳೆಸಿಕೊಂಡು ಕ್ರೀಡೆಯಲ್ಲಿ ತಮ್ಮ ಭವಿಷ್ಯವನ್ನು ಒರೆಗೆ ಹಚ್ಚಿಕೊಂಡು ಸಾಧನೆಯತ್ತ ಮುಖ ಮಾಡಿದರು. ಮಗನ ಉತ್ಸಾಹಕ್ಕೆ ತಂದೆ- ತಾಯಿ ಪ್ರೋತ್ಸಾಹ ನೀಡಿದರು.\ ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಕುಗ್ರಾಮದ ಈ ಕ್ರೀಡಾ ಪ್ರತಿಭೆ ಕ್ರೀಡಾಲೋಕದಲ್ಲಿ ಚಿನ್ನದಂತೆ ಹೊಳೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.ಶಿವಾನಂದ ಹೊಂಬಳ ರಾಜ್ಯ ಹಾಗೂ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಹೊರ ಹಾಕುವ ಮೂಲಕ ವಿಜಯದ ನಗೆ ಬೀರಿದ್ದಾರೆ. 1500 ಮೀಟರ್ ಓಟದಲ್ಲಿ ಚಾಂಪಿಯನ್ ಆಗುವ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 16 ಓಪನ್ ನ್ಯಾಷನಲ್ ಚಿನ್ನದ ಪದಕ ಹಾಗೂ 10 ಡೊಮೆಸ್ಟಿಕ್ ಮೀಟ್ ಚಾಂಪಿಯನ್‌ಷಿಪ್ ಚಿನ್ನದ ಪದಕಗಳನ್ನು ಪಡೆದುಕೊಂಡು ದೇಶದ ಕ್ರೀಡಾ ಪ್ರತಿಭೆಯಾಗಿ ರಾರಾಜಿಸುತ್ತಿದ್ದಾರೆ.

 

ಯಾವುದೇ ಕ್ರೀಡಾ ಗುರುವಿನ ಮಾರ್ಗದರ್ಶನ ಹಾಗೂ ತರಬೇತಿ ಇಲ್ಲದೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಚಿರಪರಿಚಿತರು. ಕ್ರೀಡಾ ಸಾಧನೆಯ ಹಾದಿಯಲ್ಲಿ ನೋವು, ಸಂತೋಷ, ಸಡಗರವನ್ನು ಸಮನಾಗಿ ಹಂಚಿಕೊಂಡವರು. ಏಕಲವ್ಯನಂತೆ ಸತತವಾದ ಪರಿಶ್ರಮದ ಮೂಲಕ ಕ್ರೀಡಾ ಸಾಧನೆಗೆ ನೀಡುವ ಏಕಲವ್ಯ, ಭಾರತೀಯ ರೈಲ್ ಖೇಲ್‌ಶ್ರೀ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯ ಸಾಧಾರಣ ಒಬ್ಬ ಕೃಷಿಕನ ಮಗನಾಗಿ ಹುಟ್ಟಿದ ಶಿವಾನಂದ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಿರುವುದು ಗ್ರಾಮೀಣ ಕ್ರೀಡಾಪಟುಗಳಲ್ಲಿ ಉತ್ತೇಜನ ನೀಡಿದೆ. ಸತತವಾದ ಪರಿಶ್ರಮಕ್ಕೆ ಕ್ರೀಡೆಯಲ್ಲಿ ಉತ್ತಮವಾದ ಭವಿಷ್ಯದ ಜತೆ ಸರ್ಕಾರಿ ಕೆಲಸವು ಕ್ರೀಡೆಯಿಂದ ನನಗೆ ಸಿಕ್ಕಿರುವುದು ಸಂತಸ ಹಾಗೂ ನೆಮ್ಮದಿ ತಂದಿದೆ. ಕ್ರೀಡೆಯಿಂದ ಕೆಲಸ ಸಿಗುತ್ತದೆ ಎಂದು ನಾನು ಎಂದೂ ಭಾವಿಸಿರಲಿಲ್ಲ ಎಂದು ಹೊಂಬಳ ತಿಳಿಸಿಸುತ್ತಾರೆ.ಮದುವೆಯಾಗಿ ಸಂತೃಪ್ತ ಜೀವನ ನಡೆಸುತ್ತಿರುವ ಇವರ ಕ್ರೀಡಾ ಸಾಧನೆ ಮಾತ್ರ ಇನ್ನೂ ಉತ್ಸಾಹದ ಚಿಲುಮೆಯಂತೆ ಪುಟಿಯುತ್ತಿದೆ. ಸದ್ಯ  ಹುಬ್ಬಳಿಯ ನೈಋತ್ಯ ರೈಲ್ವೆ ಇಲಾಖೆಯಲ್ಲಿ ಉಪ ಮುಖ್ಯ ಟಿಕೆಟ್ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆಯ ಬಗ್ಗೆ ಮಾಹಿತಿ ಅರಿಸಿ ಬರುವ ಕ್ರೀಡಾಪ್ರತಿಭೆಗಳಿಗೆ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ತಮ್ಮ ಸುದೀರ್ಘವಾದ ಕ್ರೀಡಾ ಸಾಧನೆಯ ಹಾದಿಯ ಹಲವು ಅನಿಸಿಕೆಗನ್ನು ಪ್ರಜಾವಾಣಿ ಜತೆ ಹಂಚಿಕೊಂಡಿದ್ದಾರೆ.*ಕ್ರೀಡೆಯಲ್ಲಿ ಬದುಕು ಹೇಗೆ ಕಟ್ಟಿಕೊಂಡಿರಿ?

 ಕ್ರೀಡೆ ಎಂದರೆ ಏನು ಎಂಬುದೇ ಗೊತ್ತಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿದ ಕೃಷಿಕನ ಮಗನಾಗಿದ್ದ ನನಗೆ ಸಾಧಿಸುವ ಹಟ ಬಂತು. ಒಬ್ಬ ಸ್ಕೂಲ್ ಹುಡಗನನ್ನು ನೋಡಿ ಕ್ರೀಡಾ ಆಸಕ್ತಿ ಬೆಳಸಿಕೊಂಡೆ. ಅಂದಿನಿಂದಲೇ ಕ್ರೀಡಾ ಪ್ರಾಕ್ಟಿಸ್ ಶುರು ಮಾಡಿದೆ. ಕ್ರೀಡೆಯಲ್ಲಿ ಬದುಕು ಕಟ್ಟಿಕೊಳ್ಳುವ ಗುರಿ ಇಟ್ಟುಕೊಂಡೆ.*ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕ್ರೀಡೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ?

ಹೈ-ಕ ಭಾಗದಲ್ಲಿ ಉತ್ತಮ ಗ್ರಾಮೀಣ ಪ್ರತಿಭೆಗಳಿವೆ. ಕ್ರೀಡೆಗೆ ಹೇಳಿ ಕೊಳ್ಳುವಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡಾ ಸಂಪತ್ತನ್ನು ಶಕ್ತಿಯ ಮೂಲಕವಾಗಿ ಹೊರತೆಗೆಯಬೇಕು. ಕ್ರೀಡಾ ಜೀವನವೂ ಸಾಮಾನ್ಯ ಜೀವನಮಟ್ಟಕ್ಕಿಂತ ಬದಲಾಗಿರುತ್ತದೆ. ಕ್ರೀಡೆಗೆ ಹೈ ಕ ಭಾಗದಲ್ಲಿ ಉತ್ತಮ ಪ್ರೋತ್ಸಾಹ ಸಿಗಬೇಕು.*ಕ್ರೀಡಾ ಸಾಧನೆಗೆ ಪ್ರೇರಣೆ ಏನು?

 26 ಬಾರಿ ಚಿನ್ನದ ಪದಕ ಗಳಿಸಿರುವ ನನಗೆ ಪ್ರತಿ ಸಲ ಅಥ್ಲೇಟಿಕ್ಸ್‌ನಲ್ಲಿ ಪಾಲ್ಗೊಂಡು ಪದಕ ಗಳಿಸಿದಾಗಲೂ ಇನ್ನಷ್ಟು ಸಾಧನೆಯ ಹುಮ್ಮಸ್ಸು ಬರುತ್ತಿತ್ತು. 1500 ಮೀಟರ್ ಅಥ್ಲೇಟಿಕ್ಸ್‌ನಲ್ಲಿ ಕೇವಲ 3.50 ಸೆಕೆಂಡ್‌ಗಳಲ್ಲಿ ಓಡುವ ಮೂಲಕ ಚಿನ್ನದ ಪದಕ ಪಡೆದುಕೊಂಡೆ. 5000, 10,000, 3000 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದೇನೆ. ಪ್ರತಿ ಸ್ಪರ್ಧೆಯಲ್ಲಿ ನೋಡಿ ಕಲಿ ತತ್ವದ ಮೇಲೆ ನನ್ನ ಕ್ರೀಡಾ ಕೃಷಿಯನ್ನು ಹಸನು ಮಾಡಿಕೊಂಡು ಬಂದಿದ್ದೆನೆ. 14 ಬಾರಿ ಅಂತರರಾಷ್ಟ್ರೀಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದೇನೆ. ಥಾಯ್ಲೆಂಡ್, ಬ್ಯಾಂಕಾಕ್ ದೇಶಗಳಲ್ಲಿ ಆಟವಾಡಿದ್ದೇನೆ.* ಕ್ರೀಡಾ ಸಾಧನೆಯಲ್ಲಿ ನಿರಾಸೆಯ ಛಾಯೆ?

ಕ್ರೀಡೆಯಲ್ಲಿ ಸಾಧನೆ ಜತೆ ನಿರಾಸೆ ಕೂಡಾ ನಿರಾಂತಕವಾಗಿ ಬಂದು ಹೋಗುತ್ತಲೇ ಇರುತ್ತದೆ. ಏಷಿಯನ್ ಗೇಮ್ಸ್‌ನಲ್ಲಿ ನನಗೆ ಅರ್ಹತೆ ಇದ್ದರೂ  ತರಬೇತುದಾರರು ನನ್ನ ಹೆಸರು ಕಳಿಸದೆ ಇದ್ದಾಗ ಬೇಸರ ಉಂಟಾಯಿತು. ಕ್ರೀಡೆಯನ್ನು ಬಿಟ್ಟು ಬಿಡುವ ನಿರ್ಧಾರಕ್ಕೆ ಬಂದಿದ್ದೆ. ಆದರೆ ಅದೃಷ್ಟ ನನ್ನ ಕೈಬಿಡಲಿಲ್ಲ. ಇದು ನನ್ನ ಕ್ರೀಡಾ ಸಾಧನೆಗೆ ಮೆಟ್ಟಿಲಾಯಿತು.*ಕ್ರೀಡಾಪಟುಗಳಿಗೆ ನಿಮ್ಮ ಸಲಹೆ?

ಅಥ್ಲೀಟ್‌ಗಳು ನಿರ್ದಿಷ್ಟವಾದ ವಯಸ್ಸಿನಲ್ಲಿ ಕ್ರೀಡಾ ಸಾಧನೆಯಲ್ಲಿ ತೊಡಗಿಕೊಳ್ಳಬೇಕು. 16ರಿಂದ 26 ವರ್ಷಗಳಲ್ಲಿ ಮಾತ್ರ ಕ್ರೀಡಾಪಟುಗಳು ಏನು ಬೇಕಾದರೂ ಸಾಧನೆ ಮಾಡಬಹುದು.* ಸಾಧನೆ ಸವೆಸಿದ ನಿಮ್ಮ ದಾರಿ?

ಹೊಂಬಳ: ಜಮೀನಿನಲ್ಲಿ ಕೃಷಿ ಮಾಡುವುದಕ್ಕಿಂತ ಕ್ರೀಡೆ ಕನಿಷ್ಠವೇನು ಅಲ್ಲ. ಪ್ರತಿ ಸ್ಪರ್ಧೆಯೂ ನನಗೆ ಹಬ್ಬವಾಗುತ್ತಿತ್ತು. ನನಗೊಬ್ಬ ಉತ್ತಮ ತರಬೇತುದಾರ ಸಿಕ್ಕಿದ್ದರೆ ಇನ್ನೂ ಉತ್ತಮ ಸಾಧನೆ ಮಾಡಬಹುದು ಎನ್ನುವ ಕೊರಗು ಇನ್ನೂ ನನ್ನನ್ನು ಕಾಡುತ್ತಿದೆ. ಕ್ರೀಡಾ ಜೀವನದ ಸುದೀರ್ಘವಾದ ಹಾದಿಯಲ್ಲಿ ಹಲವು ಸಿಹಿ ಕಹಿ ಘಟನೆಗಳನ್ನು ಅನುಭವಿಸಿದ್ದೇನೆ, ಪ್ರತಿ ಕ್ರೀಡಾಪಟುವಿಗೂ ಗುರಿ, ಗುರು, ಸಾಧನೆ ಇರಲೇಬೇಕು.      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry