ಬುಧವಾರ, ಜೂನ್ 23, 2021
28 °C

ಗುರುವೆಂಬ ದೈವವೂ.. ಶಿಕ್ಷಕರಾಗುವ ಕನಸೂ...

ಸಿದ್ದಯ್ಯ ಹಿರೇಮಠ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನೂ, ಕಾಲೇಜಿಗೆ ದಾನ ನೀಡಿದ ಮಹನೀಯರನ್ನೂ ಸ್ಮರಿಸ ಲೆಂದೇ ಇತ್ತೀಚೆಗೆ ಆಯೋಜಿಸಲಾಗಿದ್ದ ಆ ಸಮಾರಂಭದಲ್ಲಿ ಕೇಳಿ ಬಂದ ಒಂದು ಅಮೋಘ ಭಾಷಣ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ, ನೆರೆದವರನ್ನೆಲ್ಲ ಚಿಂತನೆಗೆ ಹಚ್ಚಿಸಿತು.ಶಿಕ್ಷಕರಾಗುವ ಕನಸಿನೊಂದಿಗೆ ನಗರದ ಎಸ್‌ಜಿ ಕಾಲೇಜು ಆವರಣದ ಕೊಟ್ಟೂರುಸ್ವಾಮಿ ಶಿಕ್ಷಣ ಕಾಲೇಜಿ ನಲ್ಲಿ ಬಿ.ಇಡಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆ ಭಾಷಣ ಆಲಿಸುತ್ತಿದ್ದಂತೆಯೇ ಸ್ತಂಭೀಭೂತರಾದರು.ಮುಂದಿನ ವರ್ಷ ತನ್ನ ಸುವರ್ಣ ಮಹೋತ್ಸವಕ್ಕೆ ಅಣಿಯಾಗುತ್ತಿರುವ ಈ ಕಾಲೇಜಿನಲ್ಲೇ ಹಿಂದೆ ಪ್ರಾಚಾರ್ಯ ರಾಗಿದ್ದು, ಎರಡು ದಶಕಗಳ ಹಿಂದೆಯೇ ನಿವೃತ್ತರಾದ ಜಿ.ಎಂ. ವೀರಭದ್ರಯ್ಯ ಅವರು ಶಿಕ್ಷಕನ ವೃತ್ತಿಯ ಘನತೆ, ಗೌರವ, ಕರ್ತವ್ಯ, ಜವಾಬ್ದಾರಿ, ಸಮಾಜಕ್ಕೆ ಅಗತ್ಯವಾದ ಅವರ ಸೇವೆಯ ಕುರಿತು ಮನಮುಟ್ಟುವಂತೆ ಮಾತನಾಡಿ, ಒಂದು ನಿರ್ದಿಷ್ಟ ಗುರಿಯತ್ತ ಸಾಗಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಛಲ ಮತ್ತು ಪ್ರೀತಿ ಹುಟ್ಟುವಂತೆ ಮಾಡಿದರು.ಶಿಕ್ಷಕ ಆಗಬೇಕೆಂಬ ಆಸೆ ಇಟ್ಟು ಕೊಂಡವರು ಪ್ರತಿಯೊಂದೂ ಸಭೆ ಸಮಾರಂಭಗಳಲ್ಲಿನ ಭಾಷಣಗಳನ್ನು, `ಸುಮ್ಮನೆ ಇದೊಂದು ಭಾಷಣ~ ಎಂದು ಭಾವಿಸದೆ, ಆ ಭಾಷಣದಲ್ಲಿನ ಸಾರವನ್ನು `ನೋಟ್~ ಮಾಡಿಕೊಳ್ಳ ಬೇಕು ಎಂದು ಅವರು ಸೂಚಿಸು ತ್ತಿದ್ದಂತೆಯೇ, ಸೂಜಿ ಬಿದ್ದರೂ ಸದ್ದಾಗುತ್ತಿದ್ದ ಆ ಸಭಾಂಗಣದಲ್ಲಿ ನೋಟ್‌ಬುಕ್ ಮತ್ತು ಪೆನ್‌ಗಳನ್ನು ತಡಕಾಡಿದ ವಿದ್ಯಾರ್ಥಿಗಳು, ಪುಟ ತಿರುವುತ್ತಿದ್ದಂತೆಯೇ ತೇಲಿಬಂದ ಹಾಳೆ ಗಳ ಸದ್ದು ಅವರಲ್ಲಿನ ಮಹತ್ವಾಕಾಂಕ್ಷೆ ಜಾಗೃತಗೊಳಿಸಿದ್ದು ಕಂಡು ಬಂತು.ದೈವತ್ವ: ವಿಜಾಪುರ ಜಿಲ್ಲೆಯಲ್ಲಿನ ಅಥರ್ಗಾ ಎಂಬ ಗ್ರಾಮದಲ್ಲಿ 1895ರಲ್ಲಿ ಶಿಕ್ಷಣ ವೃತ್ತಿ ಆರಂಭಿಸಿದ ರೇವಣಸಿದ್ದಪ್ಪ ಎಂಬುವವರ ಸೇವೆ, ಗ್ರಾಮದಲ್ಲಿ ಜಾಗೃತಿ ಮೂಡಿಸಿದ ಕರ್ತವ್ಯಪರತೆ ಕಂಡು ಅವರ ಹೆಸರಿನ ಒಂದು ದೇವಾಲಯವನ್ನೇ ಅಲ್ಲಿನ ಜನ ಕಟ್ಟಿಸಿದ್ದು, ಪ್ರತಿವರ್ಷ ಜಾತ್ರೆ ಆಚರಿಸು ತ್ತಾರೆ. `ಶಿಕ್ಷಕ~ ಎಂಬ ವ್ಯಕ್ತಿಯನ್ನು ದೈವಕ್ಕೆ ಹೋಲಿಸಲಾಗಿದೆ.ಅಷ್ಟೇ ಅಲ್ಲ, ಆತ ಮಾಡುವ ಕೆಲಸವನ್ನು `ಉದ್ಯೋಗ~ ಎನ್ನದೆ `ವೃತ್ತಿ~ ಎಂದು ಕರೆಯುವುದಕ್ಕೆ ಆತನ ಸೇವೆಯೇ ಕಾರಣ ಎಂದು ಅವರು ಹೇಳಿದ ಕೂಡಲೇ ಭಾವಿ ಶಿಕ್ಷಕರ ಕಣ್ಣಾಲಿಗಳು ತುಂಬಿಬಂದವು.

ಜಾಗತೀಕರಣ, ಉದಾರೀಕರಣ ದಿಂದಾಗಿ ಪ್ರಸ್ತುತ ಶಿಕ್ಷಣ ಕ್ಷೇತ್ರವು ಹಣ ಮಾಡುವ ವ್ಯಾಪಾರವಾಗಿದೆ.ಆದರೆ, ಶಿಕ್ಷಕ ವೃತ್ತಿ ಖಂಡಿತವೂ ಹಣ ಗಳಿಸುವುದಕ್ಕೆ ದಾರಿಯಲ್ಲ. ಅದೊಂದು ಪವಿತ್ರ ಕಾರ್ಯ. ಇದೂ ಒಂದು ನೌಕರಿ ಮಾತ್ರ ಎಂದು ಭಾವಿಸಿದವರು ಖಂಡಿತ ಆ ಭಾವನೆಯನ್ನು ದೂರವಿರಿಸಿ, ಪುಣ್ಯ ಕಾರ್ಯ ಎಂದೇ ಭಾವಿಸಬೇಕು ಎಂದು ಅವರು ಕಿವಿಮಾತು ಹೇಳಿದರು.ಸ್ವರ್ಗ, ನರಕಗಳ ಕಲ್ಪನೆಯೇ ಈಗ ದೂರವಾಗಿದೆ. ದೈವದ ಬಗ್ಗೆ ಭಕ್ತಿ, ಭಯವೂ ಇಲ್ಲವಾಗಿದೆ. ಭಯ ಇಲ್ಲದ್ದ ರಿಂದ ಏನೆಲ್ಲ ಘಟಿಸುತ್ತಿದೆ. ಜಗತ್ತು  ಬದಲಾಗಿದೆ. ಮಳೆ- ಬೆಳೆ ಕಡಿಮೆ ಯಾಗಿದೆ. ಜಾಗತಿಕ ತಾಪಮಾನವೂ ಹೆಚ್ಚುತ್ತಿದೆ. ಮನುಷ್ಯನಲ್ಲಿನ ದುರಾಸೆ ಪ್ರತಿಫಲವೇ ಈ ಅನಾಹುತಗಳಿಗೆ ಮೂಲ ಕಾರಣ. ಮುಂದಿನ ಪೀಳಿಗೆಗೆ ಇದನ್ನು ಮನವರಿಕೆ ಮಾಡುವ ತುರ್ತು ಇದೀಗ ಇದೆ.ಚಿಕ್ಕಮಕ್ಕಳ ಮನಃ ಸ್ಥಿತಿಯನ್ನು ಬದಲಾಯಿಸುವ ಶಕ್ತಿ ಕೇವಲ ಶಿಕ್ಷಕನಿಗೆ ಮಾತ್ರ ಇದೆ. ಕೇವಲ ಅಕ್ಷರ ಕಲಿಸಿವುದು, ಅಂಕಗಳನ್ನು ನೀಡುವುದು ಮಾತ್ರವಲ್ಲ, ಮಕ್ಕಳ ಮನಸ್ಸಿನಲ್ಲಿ ದುರಾಸೆಗಳು ಮೂಡ ದಂತೆ ತಿದ್ದಿ ತೀಡುವುದೇ ಶಿಕ್ಷಕನ ಕೆಲಸ ಎಂದು ಅವರು ಅಲ್ಲಿದ್ದ ಭಾವಿ ಶಿಕ್ಷಕ ಮನಸ್ಸುಗಳನ್ನು ಎಚ್ಚರಿಸಿದರು.`ಗುರುಬ್ರಹ್ಮ, ಗುರುರ್ವಿಷ್ಣು, ಗುರುದೇವೋ ಮಹೇಶ್ವರ, ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮಃ~ ಎಂಬುದು ಯಾರೋ ತಿಳಿಯ ದವರು ಸೃಷ್ಟಿಸಿದ ಪದವಲ್ಲ. ಬದಲಿಗೆ, ಗುರುವಿನಲ್ಲಿ ಇರಬಹುದಾದ ಗುಣಗಳನ್ನು ಬಿಂಬಿಸುವ ಈ ಪದದಲ್ಲಿ ಅಪಾರ ಅರ್ಥ ಅಡಗಿದೆ. ಇದನ್ನು ಅರ್ಥ ಮಾಡಿಕೊಂಡೇ ಶಿಕ್ಷಕ `ಗುರು~ ವಿನ ಪರಮ ಪವಿತ್ರ ಸ್ಥಾನ ಅಲಂಕರಿಸ ಬೇಕು. ಸಮಾಜಕ್ಕೂ, ನಿಮಗೂ ಕಲಿ ಸಿದ ಗುರುವಿನ ಋಣಸಂದಾಯ ಮಾಡುವತ್ತ ಶಿಕ್ಷಕರಾಗುವವರು ಆಲೋಚಿಸಬೇಕು ಎಂದು ತಿಳಿಸಿದರು.`ಸಭೆ- ಸಮಾರಂಭಗಳಲ್ಲಿನ ಭಾಷಣಗಳು ಅರ್ಥ ಕಳೆದುಕೊಳ್ಳುತ್ತ, ಔಪಚಾರಿಕತೆಗೆ ಸೀಮಿತವಾಗಿರುವ ಈ ದಿನಗಳಲ್ಲಿ ಹಿರಿಯ ಗುರುವಿನ ಒಂದು ಭಾಷಣ ನಮ್ಮ ಕಣ್ಣು ತೆರೆಸಿದೆ. ನಮ್ಮ ಗುರಿ ಏನಾಗಿರಬೇಕು ಎಂಬುದನ್ನು ತಿಳಿಸಿದೆ~ ಎಂದು ವಿದ್ಯಾರ್ಥಿ ಮುಖಂಡ ರಾದ ಅನಿಲ್‌ಕುಮಾರ್, ಸೋಫಿಯಾ, ದಿವಾಕರ್, ಬಸವಜ್ಯೋತಿ, ಮಹಮ್ಮದ್ ಇಲಿಯಾಸ್ ಹಾಗೂ ಇತರರು ಸಂತಸ ವ್ಯಕ್ತಪಡಿಸಿದರು.ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಅನೇಕ ಅತಿಥಿಗಳಿದ್ದು, ಭಾಷಣವನ್ನು ಗಂಭೀರವಾಗಿ ಆಲಿಸಿದರು.ಕೇವಲ ಭಾವಿ ಶಿಕ್ಷಕರಿಗೆ ಮಾತ್ರವಲ್ಲ, ಇದೀಗ ಶಿಕ್ಷಕ ವೃತ್ತಿಯಲ್ಲಿ ತೊಡಗಿದ ವರಿಗೂ ಈ ಭಾಷಣ ಒಂದು ರೀತಿಯ ಪಾಠದಂತೆಯೇ ಇತ್ತು. ಗುರುವಿನ ಮಹತ್ವವನ್ನು ಅರುಹಿದ ಈ ಭಾಷಣ ಮನಸೆಳೆಯಿತು ಎಂದು ಕಾಲೇಜಿನ ಪ್ರಾಚಾರ್ಯ ಸತೀಶ ಹಿರೇಮಠ ಮತ್ತಿತರರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.