ಶುಕ್ರವಾರ, ಏಪ್ರಿಲ್ 16, 2021
20 °C

ಗುರ್ರೆಸಿ ಕಾವ್ಯ ಸಾಮ್ರಾಜ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಮುನಾ ಗುರ್ರೆಸಿ ಜನಿಸಿದ್ದು ಇಟಲಿಯಲ್ಲಿ. ಯುರೋಪ್‌ನ ಪ್ರಖ್ಯಾತ ಮಹಿಳಾ ಫೋಟೊಗ್ರಾಫರ್ ಎನಿಸಿಕೊಂಡಿದ್ದಾರೆ ಈಕೆ. ಅವರ ಛಾಯಾಚಿತ್ರ, ಶಿಲ್ಪ ಹಾಗೂ ವಿಡಿಯೋ ಇನ್‌ಸ್ಟಾಲೇಷನ್‌ಗಳು ಯುರೋಪ್, ಚೀನಾ, ಅಮೆರಿಕಾ ಹಾಗೂ ಮಧ್ಯ ಏಷ್ಯಾದ ಎಲ್ಲ ಗ್ಯಾಲರಿ ಹಾಗೂ ಮ್ಯೂಸಿಯಂನಲ್ಲಿ ಪ್ರದರ್ಶನ ಕಂಡಿವೆ.ಮೈಮುನಾ ಗುರ್ರೆಸಿ ಅವರ ಛಾಯಾಚಿತ್ರಗಳನ್ನು ಭಾರತೀಯರಿಗೂ ಪರಿಚಯಿಸುವ ಸಾಹಸಕ್ಕೆ ಕೈ ಹಾಕಿದೆ ತಸ್ವೀರ್. ದೇಶದ ಅತಿದೊಡ್ಡ ಛಾಯಾಚಿತ್ರ ಪ್ರದರ್ಶನ ಮೇಳವಾದ `ಫೈವ್ ಸಿಟಿ ಎಕ್ಸಿಬಿಷನ್~ನಲ್ಲಿ ಇವರ ಅಪೂರ್ವ ಚಿತ್ರಗಳು ನಗರದಲ್ಲಿ ಪ್ರದರ್ಶನಗೊಳ್ಳಲಿವೆ. ಅಂದಹಾಗೆ, ಮೈಮುನಾ ಅವರ ಛಾಯಾಚಿತ್ರಗಳು ಈ ವರ್ಷಾಂತ್ಯದಲ್ಲಿ ಪ್ರದರ್ಶನಗೊಳ್ಳಲಿವೆ ಎಂಬುದು ತಸ್ವೀರ್ ಗ್ಯಾಲರಿ ಮಾಲೀಕ ಅಭಿಷೇಕ್ ಪೊದ್ದಾರ್ ಅವರ ಮಾತು.ಮೈಮುನಾ ಅವರ ಚಿತ್ರಗಳು `ಇನ್ನರ್ ಸ್ಪೇಸ್~ ಹೆಸರಿನಡಿ ಪ್ರದರ್ಶನಗೊಳ್ಳಲಿವೆ. ಈ ಛಾಯಾಚಿತ್ರ ಪ್ರದರ್ಶನದಲ್ಲಿ ಮೈಮುನಾ ಅವರ ಭಾರತೀಯ ಪರಿಕಲ್ಪನೆಯನ್ನು ಒಳಗೊಂಡ ಹೊಸ ಸರಣಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕಳೆದ ಇಪ್ಪತ್ತು ವರ್ಷಗಳಿಂದ ಮೈಮುನಾ ಗುರ್ರೆಸಿ ಮಹಿಳಾ ಸಬಲೀಕರಣ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿ ಮಹಿಳೆಯೂ ಸ್ವಾವಲಂಬಿಯಾಗಬೇಕು.ತಮ್ಮ ಸಂಸ್ಕೃತಿ ಹಾಗೂ ಸೊಗಡನ್ನು ಅರಗಿಸಿಕೊಂಡಿರಬೇಕು. ರಾಜಕೀಯವಾಗಿ ಹೆಣ್ಣು ಸಬಲಳಾಗಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ದೇಶ, ಭಾಷೆ, ಗಡಿ ಇವೆಲ್ಲವುಗಳನ್ನು ಮೀರಿ ನಿಲ್ಲುವ ಮಾನವತಾವಾದಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.ಮೈಮುನಾ ಗುರ್ರೆಸಿ ಅವರ ಕಲೆಯಲ್ಲಿ ಇವೆಲ್ಲವೂ ಢಾಳಾಗಿ ಅಭಿವ್ಯಕ್ತಿಗೊಂಡಿವೆ. ಅವರ ಉದ್ದೇಶ ನಿರ್ದಿಷ್ಟವಾಗಿದೆ. ಸ್ವಯಂ-ಅನುಭವವೇ ಅವರ ಕಲೆ ಹಾಗೂ ಕೆಲಸಕ್ಕೆ ಸ್ಫೂರ್ತಿ. ಜತೆಗೆ ಆಕೆ ಹುಟ್ಟಿ ಬಂದ ನೆಲ, ಸಾಂಸ್ಕೃತಿಕ ಶ್ರೀಮಂತಿಕೆ ಇವರ ಕಲೆಗೆ ಇಂಬು ನೀಡಿದೆ.

ಈಕೆ ಕಲೆಯನ್ನಷ್ಟೇ ಅಲ್ಲದೇ ಚರಿತ್ರೆ, ಪುರಾಣ ಕಥೆಗಳು, ನ್ಯಾಯಶಾಸ್ತ್ರ ಹಾಗೂ ಪ್ರಸ್ತುತ ಮಹಿಳೆಯ ಸ್ಥಿತಿಗತಿಯನ್ನು ಅಧ್ಯಯನ ಮಾಡಿದ್ದಾರೆ. ತಮ್ಮ ಜ್ಞಾನವನ್ನು ಕಲೆಗೂ ಬಳಸಿಕೊಂಡಿದ್ದಾರೆ. ಇವರ ಈ ಎಲ್ಲಾ ಜ್ಞಾನ ಅವರ ಪ್ರತಿ ಕಲಾಕೃತಿಯಲ್ಲೂ ಅಭಿವ್ಯಕ್ತಿಗೊಂಡಿವೆ.ಮನುಷ್ಯನ ರಾಗದ್ವೇಷ, ರೋಮನ್ ಕ್ಯಾಥೋಲಿಕ್ ಸನ್ಯಾಸಿನಿಯರು, ಮನೆಗೆಲಸದಲ್ಲಿ ನಿರತಗೊಂಡಿರುವ ಮಹಿಳೆಯ ವಿವಿಧ ಭಂಗಿ ಇವೆಲ್ಲವೂ ಈಕೆಯ ಕ್ಯಾಮೆರಾ ಕಣ್ಣಿನಲ್ಲಿ ಸುಂದರವಾಗಿ ಸೆರೆಸಿಕ್ಕಿವೆ.ಗುರ್ರೆಸಿ ಅವರ ಚಿತ್ರಗಳು ಸೂಕ್ಷ್ಮಗ್ರಾಹಿ ಆದವು. ಅಸ್ಥಿರ ಘಟನೆಗಳ ಪರಂಪರೆಯನ್ನು ತರ್ಕಬದ್ಧವಾಗಿ ವಿಶ್ಲೇಷಿಸುತ್ತಾ ಹೋಗುತ್ತವೆ.`ತಸ್ವೀರ್ ಆಯೋಜಿಸಿರುವ ಫೋಟೊಗ್ರಫಿ ಪ್ರದರ್ಶನಕ್ಕಾಗಿ ನಾನು ಹೊಸ ಸರಣಿಯನ್ನು ಆಯ್ದುಕೊಂಡಿದ್ದೇನೆ. `ಜೈಂಟ್ ಸ್ಪಿರಿಟ್ಸ್~ನಲ್ಲಿ ನನ್ನ ಕಲ್ಪನೆಗಳು ಸಾಕಾರಗೊಂಡಿವೆ.ನಾನು ಈ ವರ್ಗದಲ್ಲಿ ಮೊದಲು ಕೆಲಸ ಮಾಡಲು ಆರಂಭಿಸಿದ್ದು ಆಫ್ರಿಕನ್ನರ ಜತೆಗೆ. ಅದನ್ನೆ ಇಲ್ಲಿಯೂ ಮುಂದುವರಿಸಿದ್ದೇನೆ. ನಾನು ಈ ಸಾಂಸ್ಕೃತಿಕ ಸಂಕರಣದ ಬಗ್ಗೆ ಹೆಚ್ಚು ಆಕರ್ಷಣೆಗೊಂಡಿದ್ದೇನೆ~ ಎಂಬುದು ಗುರ್ರೆಸಿ ಮಾತು.ಅವರ ಚಿತ್ರಗಳ ಪ್ರದರ್ಶನ ಆಗಸ್ಟ್ 24ರಿಂದ ಸೆಪ್ಟೆಂಬರ್14ರವರೆಗೆ ಕಸ್ತೂರ್ಬಾ ರಸ್ತೆಯಲ್ಲಿರುವ `ಸುವಾ~ ಹೌಸ್‌ನಲ್ಲಿ (ಬ್ರಿಟಿಷ್ ಲೈಬ್ರರಿ ಬಳಿ) ಏರ್ಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.