ಗುಲಾಬಿ ಹೂ ಮತ್ತು ಹರಿ

7

ಗುಲಾಬಿ ಹೂ ಮತ್ತು ಹರಿ

Published:
Updated:

ಹರಿ ಶಾಲೆಗೆ ಬರುವಾಗ ದಾರಿಯಲ್ಲಿ ಗುಲಾಬಿ ಹೂ ಕಾಣಿಸಿತು. ಅವನಿಗೆ ‘ಹೂವು ಎಷ್ಟೊಂದು ಚೆನ್ನಾಗಿದೆ. ಇದನ್ನು ತನ್ನ ಪ್ರೀತಿಯ ಶಕುಂತಲಾ ಟೀಚರ್‌ಗೆ ಕೊಡಬೇಕು’ ಎನಿಸಿತು. ಆದರೆ ಆ ಹೂವು ಯಾರದೋ ಮನೆಯ ಕಾಂಪೌಂಡ್ ಒಳಗೆ ಇತ್ತು. ಕಾಂಪೌಂಡ್ ಆಚೆಯಿಂದಲೇ ಹರಿ ಗಿಡವನ್ನು ಅಲುಗಿಸುತ್ತಾ, ಹೂವು ಎಟುಕಿಸಿಕೊಳ್ಳಲು ಪ್ರಯತ್ನಿಸಿದ. ಗಿಡದ ಮುಳ್ಳುಗಳು ಅವನಿಗೆ ಚುಚ್ಚಿದವು. ಆದರೂ ಬಿಡದೇ ಅವನು ಹೂವನ್ನು ಕಿತ್ತ. ಅದನ್ನು ತಂದು ಅವನು ಟೀಚರ್‌ಗೆ ಕೊಟ್ಟ. ಅವರಿಗೆ ಖುಷಿಯಾದರೂ ಅವನ ಬೆರಳಿನಲ್ಲಿ ರಕ್ತದ ಕಲೆಯನ್ನು ಗುರುತಿಸಿ ವಿಚಾರಿಸಿದರು.ಅವನು ತಡವರಿಸುತ್ತಲೇ ನಡೆದ ವಿಷಯ ವಿವರಿಸಿದ. ‘ಹರಿ ಈ ಹೂವನ್ನು ಯಾರ ಮನೆಯಲ್ಲಿ ಕಿತ್ತು ತಂದೆಯೋ ಅವರಿಗೆ ಕೊಟ್ಟು ಬಿಡು. ನಿನಗೆ ಈ ಹೂವು ಇಷ್ಟವಾದರೆ, ಗುಲಾಬಿ ಗಿಡವನ್ನು ತಂದು ನೆಡು. ದಿನಾ ನೀರು, ಗೊಬ್ಬರ ಹಾಕಿ ಬೆಳೆಸು. ಆಗ ಬೆಳೆಯುವ ಹೂವನ್ನು ಕೀಳುವಾಗ ಯಾವುದೇ ಆತಂಕ ಇರುವುದಿಲ್ಲ. ಹೀಗೆ ಕೈಗೆ ಮುಳ್ಳು ಚುಚ್ಚುವ ಪ್ರಮೇಯ ಬರುವುದಿಲ್ಲ. ಯಾರದೋ ಕಷ್ಟದ ಫಲವನ್ನು ನಾವು ಸುಲಭವಾಗಿ ಪಡೆಯುವುದಕ್ಕಿಂತ, ನಾವೂ ಕಷ್ಟಪಟ್ಟಾಗ ಅದರ ಬೆಲೆ ನಮಗೆ ತಿಳಿಯುತ್ತದೆ’ ಎಂದು ಟೀಚರ್ ಹೇಳಿದರು.ಸಂಜೆ ಮನೆಗೆ ಹೋಗುವಾಗ- ಗುಲಾಬಿ ಹೂವನ್ನು ಅದರ ಮಾಲೀಕರಿಗೆ ಹಿಂತಿರುಗಿಸಿದ ಹರಿ, ಕದ್ದಿದ್ದಕ್ಕಾಗಿ ಕ್ಷಮೆ ಕೇಳಿದ. ಅವರಿಂದ ಗುಲಾಬಿ ಕಡ್ಡಿಯನ್ನು ತೆಗೆದುಕೊಂಡು ಹೋಗಲು ಮರೆಯಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry