ಸೋಮವಾರ, ಮೇ 23, 2022
20 °C

ಗುಲಾಮಗಿರಿಯಿಂದ ಹೊರಬರಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಆಧುನೀಕರಣದಿಂದ ಸಮಾಜ ಮುಂದುವರಿಯುತ್ತಿದೆ. ಹೀಗಾಗಿ, ಶೋಷಿತರು ಗುಲಾಮಗಿರಿಯಿಂದ ಹೊರಬರಬೇಕು~ ಎಂದು ನಗರಸಭೆ ಸದಸ್ಯ ಎಸ್. ನಂಜುಂಡಸ್ವಾಮಿ ಸಲಹೆ ನೀಡಿದರು.ನಗರದ ಜಿಲ್ಲಾಡಳಿತ ಭವನದ ವಿವಿಧೋದ್ದೇಶ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯ ಜಿಲ್ಲಾ ಘಟಕದಿಂದ ಶುಕ್ರವಾರ ನಡೆದ ಜಿಲ್ಲಾಮಟ್ಟದ ಕಾರ್ಯಾಗಾರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಆಧುನೀಕರಣದ ಪ್ರಭಾವದಿಂದ ಸಮಾಜ ಪ್ರಗತಿಯತ್ತ ಸಾಗುತ್ತಿದೆ. ಆದರೆ, ಶೋಷಿತ ಸಮುದಾಯದ ಅವಿದ್ಯಾವಂತ ಜನರು ಗುಲಾಮಗಿರಿಯಲ್ಲಿ ನರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಶೋಷಿತ ಸಮುದಾಯದ ಯುವಪೀಳಿಗೆ ವಿದ್ಯಾವಂತರಾದರೆ ಅಂಬೇಡ್ಕರ್ ತತ್ವ ಪಾಲಿಸುವುದರೊಂದಿಗೆ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನುಡಿದರು.`ಸಾಕಷ್ಟು ಮಂದಿ ದಲಿತ ಅಧಿಕಾರಿಗಳಿದ್ದಾರೆ. ಆದರೆ, ಅವರು ಸಮುದಾಯದ ಹೆಸರನ್ನು ಹೇಳುತ್ತಿಲ್ಲ. ರಾಜಕೀಯದಿಂದ ನಮ್ಮ ಸಮುದಾಯ ಒಡೆದಿದೆ. ಸ್ವಾರ್ಥ ಸಾಧನೆಗಾಗಿ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಇದರಲ್ಲಿ ಅನೇಕರು ವಿದ್ಯಾವಂತರೇ ಇರುವುದು ವಿಷಾದನೀಯ. ಅವರನ್ನೆಲ್ಲಾ ಒಂದೇ ವೇದಿಕೆಗೆ ತಂದು ಉತ್ತಮ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕು~ ಎಂದು ಸಲಹೆ ನೀಡಿದರು.ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಪಿ.ಆರ್. ಜನಾರ್ದನ್ ಮಾತನಾಡಿ, `ಕಷ್ಟದ ಪರಿಕಲ್ಪನೆ ಇಲ್ಲದೇ ದುಡಿಯುವಂಯಹ ಹಲವು ಮಂದಿ ಇದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶೋಷಿತರ ಅಭಿವೃದ್ಧಿ ಬಗ್ಗೆಯೂ ಚಿಂತನೆ ನಡೆಯಬೇಕಿದೆ~ ಎಂದರು.ವಕೀಲ ಆರ್. ವಿರೂಪಾಕ್ಷ ಮಾತನಾಡಿ, ವಿದ್ಯೆ ಪಡೆಯವುದು ಸಂವಿಧಾನದ ಮೂಲಭೂತ ಹಕ್ಕು. ಆದರೆ, ಆಡಳಿತ ನಡೆಸುವ ಜನಪ್ರತಿನಿಧಿಗಳ ದೌರ್ಜನ್ಯದಿಂದ ಹಕ್ಕುಗಳು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ವಿಷಾದಿಸಿದರು.ಮಾಹಿತಿ ಹಕ್ಕು ಕಾಯ್ದೆ ಜಾರಿಯಾದ ನಂತರ ಸಾರ್ವಜನಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದೆ.  ಪ್ರತಿಯೊಬ್ಬರು ಈ ಕಾಯ್ದೆಯಡಿ ಅರ್ಜಿ ಸಲ್ಲಿಸಬಹುದು. ಆದರೆ, ನೀವು ನೀಡುವಂತಹ ಮಾಹಿತಿ ಸ್ಪಷ್ಟತೆ ಮತ್ತು ಸಂಕ್ಷಿಪ್ತವಾಗಿರಬೇಕು. ರಾಷ್ಟ್ರದ ಭದ್ರತೆ ವಿಚಾರ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ವಿಚಾರಗಳಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದರು.ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ಕೆ.ಎಂ. ನಾಗರಾಜು, ಸಿ.ಎನ್. ಗೋವಿಂದರಾಜು, ದೇವರಾಜು, ವೆಂಕಟರಮಣಸ್ವಾಮಿ, ಯಜಮಾನ್ ಹನುಮಯ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.