ಗುಲ್ಬರ್ಗದಲ್ಲಿ ರಂಗತೋರಣ

7

ಗುಲ್ಬರ್ಗದಲ್ಲಿ ರಂಗತೋರಣ

Published:
Updated:

ರಂಗಬಿನ್ನಹ

ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ರಂಗಭೂಮಿ ಬಗ್ಗೆ ಅರಿವು ನೀಡುವ ಮೂಲಕ ಅವರಲ್ಲಿ ಜೀವನಪ್ರೀತಿ ತುಂಬುವ ಕೆಲಸವನ್ನು `ರಂಗತೋರಣ~ ಮಾಡುತ್ತಿದೆ. ಬಳ್ಳಾರಿಯನ್ನು ಕೇಂದ್ರವಾಗಿ ಇರಿಸಿಕೊಂಡಿರುವ `ರಂಗತೋರಣ~ ಈಚೆಗೆ ಗುಲ್ಬರ್ಗದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಐದು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು.ರಾಜೇಂದ್ರ ಕಾರಂತ ನಿರ್ದೇಶನದ `ಮುದ್ದಣ್ಣನ ಪ್ರೊಮೋಷನ್ ಪ್ರಸಂಗ~ ನಾಟಕವನ್ನು ಬಳ್ಳಾರಿ ಭಾಗದ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದರು. ಹಾಸ್ಯದ ಜೊತೆಗೆ ಕುಟುಂಬ ಕಾಳಜಿಯಂತಹ ಗಂಭೀರ ವಿಷಯವನ್ನು ಒಳಗೊಂಡಿದ್ದ ಈ ನಾಟಕ ಸಹೃದಯರ ಗಮನಸೆಳೆಯಿತು.

 

ಹಿಂದಿಯ ಹೆಸರಾಂತ ನಾಟಕಕಾರ ಹಬೀಬ್ ತನ್ವೀರ್ ಅವರ `ಚೋರ ಚರಣದಾಸ~ದ ಕನ್ನಡ ರೂಪಾಂತರವನ್ನು ಮೈಸೂರಿನ ನಟನ ತಂಡ ಪ್ರದರ್ಶಿಸಿತು. `ಮಾತು ಎನ್ನುವುದು ಕೇವಲ ಶಬ್ದವಲ್ಲ. ಅದು ಅಂತರಾತ್ಮದ ಕೂಗು~ ಎಂಬ ವಾಸ್ತವ ಅಂಶವನ್ನು ನಾಟಕ ಮನದಟ್ಟಾಗಿಸಿತು.

 

ಇನ್ನೇನು ನಾಟಕ ಮುಗಿಯಿತು ಎನ್ನುವ ಸಮಯದಲ್ಲೇ ರಂಗಪ್ರವೇಶ ಮಾಡುವ ನಾಟಕದ ನಿರ್ದೇಶಕ ಮಂಡ್ಯ ರಮೇಶ್, ನಾಟಕದ ಕ್ಲೈಮ್ಯಾಕ್ಸ್ ಹೇಗಿರಬೇಕು ಎಂದು ಪ್ರೇಕ್ಷಕರನ್ನು ಪ್ರಶ್ನಿಸಿ, `ಎಲ್ಲ ಮುಕ್ತಾಯಗಳೂ ಸಾಧ್ಯತೆಯನ್ನು ಉಳಿಸಿಕೊಳ್ಳುವಂತೆ ಬದುಕು ಕೂಡ ಹೀಗೆ ನಿರಂತರ ಹುಡುಕಾಟದಲ್ಲಿ ಸಾಗಬೇಕು~ ಎಂಬ ಆಶಯ ವ್ಯಕ್ತಪಡಿಸಿ ರಂಗಮಂಚದಿಂದ ಮರೆಯಾಗುವುದು ಹೊಸದೆನಿಸಿತು.ಪ್ರೇಮಾನಂದ ಗಜವಿ ರಚಿಸಿದ ಮರಾಠಿ ಮೂಲದ, ಡಿ.ಎಸ್. ಚೌಗಲೆ ಕನ್ನಡಕ್ಕೆ ರೂಪಾಂತರಿಸಿದ `ಗಾಂಧಿ ಮತ್ತು ಅಂಬೇಡ್ಕರ್~ ನಾಟಕವನ್ನು `ನಟನ~ ಕಳೆಗಟ್ಟಿಸಿತು. ಹರಿಜನರ ಉದ್ಧಾರಕ್ಕಾಗಿ ಅಹರ್ನಿಶಿ ದುಡಿದ ಈ ಇಬ್ಬರ ನಡುವೆ ಉಂಟಾಗುವ ಭಿನ್ನಾಭಿಪ್ರಾಯ, ವಾಗ್ವಾದ, ವೈಚಾರಿಕ ಸಂಘರ್ಷಗಳನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ ಈ ನಾಟಕಕ್ಕೆ ವಿದೂಷಕನ ಪಾತ್ರವೇ ಜೀವಾಳವಾಗಿತ್ತು.ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ರಂಗದ ಮೇಲೆ ತರುವ ಸವಾಲಿನಲ್ಲಿ ನಿರ್ದೇಶಕ ಸಿ. ಬಸವಲಿಂಗಯ್ಯ ಸೈ ಅನಿಸಿಕೊಂಡಿದ್ದಾರೆ ಎಂಬ ಮಾತು ಪ್ರೇಕ್ಷಕರಿಂದ ಕೇಳಿಬಂದಿತು.

ಕವಿ ಕೆ.ಎಸ್. ನರಸಿಂಹಸ್ವಾಮಿ ಮತ್ತು ದ.ರಾ. ಬೇಂದ್ರೆ ಅವರ ಕವನಗಳನ್ನಾಧರಿಸಿ, ರಾಜೇಂದ್ರ ಕಾರಂತ ಅವರು ರಚಿಸಿ-ನಿರ್ದೇಶಿಸಿರುವ  `ಮೈಸೂರು ಮಲ್ಲಿಗೆ~ ಮತ್ತು `ಗಂಗಾವತರಣ~ ನಾಟಕಗಳನ್ನು ಬೆಂಗಳೂರಿನ ವಿಜಯಾ ಕಾಲೇಜಿನ ರಂಗಸೌರಭ ತಂಡದವರು ಪ್ರದರ್ಶಿಸಿದರು.

 

ಈ ಎರಡು ನಾಟಕಗಳನ್ನು ಹಲವು ಸಾಂಸ್ಕೃತಿಕ ನೆನಪುಗಳನ್ನು ಕೆಣಕುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.ಹೆಚ್ಚಿನ ಪ್ರೇಕ್ಷಕರು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕೋತ್ಸವವನ್ನು ಯಶಸ್ವಿಗೊಳಿಸಿದ್ದು ವಿಶೇಷ. ಉತ್ಸವದ ಯಶಸ್ಸಿನಲ್ಲಿ `ರಂಗತೋರಣ~ ತಂಡದ ಕೆ. ಭೀಮಸೇನ, ಪ್ರಭುದೇವ ಕಪಗಲ್, ಸೂರ್ಯಕಾಂತ ಡೋಣಿ, ವೈಜನಾಥ ಜಳಕಿ, ಶರಣು ಪಾಟೀಲ ಅವರ ಶ್ರಮವಿತ್ತು.ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry