ಗುಲ್ಬರ್ಗದಲ್ಲಿ ರಂಗಾಯಣ ಆರಂಭಗೊಳ್ಳಲಿ

7

ಗುಲ್ಬರ್ಗದಲ್ಲಿ ರಂಗಾಯಣ ಆರಂಭಗೊಳ್ಳಲಿ

Published:
Updated:

ಧಾರವಾಡ: `ರಂಗಭೂಮಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಗುಲ್ಬರ್ಗದಲ್ಲಿ ಸರ್ಕಾರ ರಂಗಾಯಣವನ್ನು ಸ್ಥಾಪಿಸಬೇಕು~ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ಆಗ್ರಹಿಸಿದರು.ನಗರದ ರಂಗಾಯಣದ ಆವರಣದಲ್ಲಿ ಒಂಬತ್ತು ದಿನಗಳವರೆಗೆ ಆಯೋಜಿಸಿರುವ ನವರಾತ್ರಿ ಯುವ ರಂಗೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.`ಗುಲ್ಬರ್ಗಯಲ್ಲಿಯೂ ಅನೇಕ ನಾಟಕಕಾರರು ಹಾಗೂ ಕಲಾವಿದರಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅಲ್ಲಿಯೂ ರಂಗಾಯಣವನ್ನು ತೆರೆಯುವ ವಿಚಾರ ಕೈಗೆತ್ತಿಕೊಳ್ಳಬೇಕು. ಸರ್ಕಾರದವರು ಸಿನಿಮಾಗಳಿಗೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದ್ದಾರೆ ಇದರಿಂದ ನಾಟಕ ಕಂಪನಿಗಳನ್ನು ಕಡೆಗಣಸಿದಂತಾಗಿದೆ ಎಂದರು.ರಾಜ್ಯದಲ್ಲಿ 21 ನಾಟಕ ಕಂಪನಿಗಳಿದ್ದು, ಅವುಗಳ ಸ್ಥಿತಿ ಈಗ ಚಿಂತಾಜನಕವಾಗಿದೆ.ಆದ್ದರಿಂದ ಸರ್ಕಾರ ಪ್ರತಿ ನಾಟಕ ಕಂಪನಿಗಳಿಗೆ ಪ್ರತಿವರ್ಷಕ್ಕೆ ಹತ್ತು ಲಕ್ಷ ರೂಪಾಯಿಗಳನ್ನು ನೀಡಬೇಕು. ಈಗಾಗಲೇ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿ ನಾಟಕ ಕಂಪನಿಗೆ ಐದು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಇದನ್ನು ಹತ್ತು ಲಕ್ಷಕ್ಕೆ ಹೆಚ್ಚಿಸಬೇಕು. ಅಲ್ಲದೇ ನಾಟಕ ಕಂಪನಿಯ ಕಲಾವಿದರಿಗೆ ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಮಾಸಾಶನವನ್ನು ನೀಡಬೇಕು~ ಎಂದು ಪಾಪು ಒತ್ತಾಯಿಸಿದರು.ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, `ರಂಗಾಯಣ ನಮ್ಮ ಭಾಗದ ಅಭಿಮಾನದ ಸಂಸ್ಥೆಯಾಗಿದೆ. ನಾಟಕ, ಸಂಗೀತ ಹಾಗೂ ಸಂಸ್ಕೃತಿ ಒಬ್ಬರಿಗೆ ಮಾತ್ರ ಸೀಮಿತವಲ್ಲ. ಜಾತಿ ಹಾಗೂ ಧರ್ಮವನ್ನು ಮೀರಿ ಬೆಳೆಯಬಲ್ಲಂತ ಶಕ್ತಿ ನಾಟಕಗಳಿಗಿದೆ. ಪ್ರತಿಯೊಂದು ನಾಟಕ ಕಂಪನಿಗಳಿಗೆ ಹತ್ತು ಲಕ್ಷ ರೂಪಾಯಿಗಳನ್ನು ನೀಡುವಲ್ಲಿ ಮುಖ್ಯಮಂತ್ರಿಗಳೊಡನೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, `ಇಂದಿನ ಸಿನಿಮಾ ಜಗತ್ತಿನಲ್ಲಿ ನಾಟಕಗಳು ಮಾಯವಾಗುತ್ತಿದ್ದು,ಈ ನಿಟ್ಟಿನಲ್ಲಿ ಸರ್ಕಾರ ರಂಗಭೂಮಿ ಉಳಿವಿಕೆಗಾಗಿ ಹೆಚ್ಚು ಒತ್ತು ನೀಡಬೇಕು. ನಾಟಕಗಳು ಒಬ್ಬ ವ್ಯಕ್ತಿಯಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಿ ವೇದಿಕೆಯ ಮೇಲೆ ಲೀಲಾಜಾಲವಾಗಿ ಮಾತನಾಡುವ ಶಕ್ತಿ ಕಲಿಸಿಕೊಡುತ್ತದೆ~ ಎಂದರು.ಶಾಸಕಿ ಸೀಮಾ ಮಸೂತಿ, ಪಾಲಿಕೆ ಮೇಯರ್ ಡಾ. ಪಾಂಡುರಂಗ ಪಾಟೀಲ ಮಾತನಾಡಿದರು. ರಂಗಾಯಣದ ನಿರ್ದೇಶಕ ಸುಭಾಷ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್.ಚೆನ್ನೂರ ಇದ್ದರು. ನಂತರ ನಗರದ ಜಿಗಳೂರು ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ, ಇಂದುಹಾಸ ಜೇವೂರ ರಚಿಸಿ, ವಿಷಯಾ ಜೇವೂರ ನಿರ್ದೇಶಿಸಿದ `ಮುತ್ತಿನ ಬಲೆ~ ನಾಟಕ ಪ್ರದರ್ಶನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry