ಮಂಗಳವಾರ, ಏಪ್ರಿಲ್ 20, 2021
32 °C

ಗುಲ್ಬರ್ಗದಲ್ಲಿ ಶೌಚಾಲಯಕ್ಕೆ ಬರ

ಪ್ರಜಾವಾಣಿ ವಾರ್ತೆ/ಮಹೇಶ ಕನ್ನೇಶ್ವರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರ, ಬಡವಾಣೆಗಳ ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಲು ಮನೆ, ಬಡಾವಣೆ, ರಸ್ತೆ ಇಕ್ಕೇಲಗಳಲ್ಲಿ ಜನರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ ಮಾಡೋಣ, ನಗರವನ್ನು ಸುಂದರ ನಗರವನ್ನಾಗಿ ನಿರ್ಮಿಸೋಣ ಎನ್ನುವ ಪಾಲಿಕೆಯ ಘೋಷವಾಕ್ಯಗಳು ಉಲ್ಟಾ ಪಲ್ಟಾ. ಹಸಿರು ನಗರ, ಸುಂದರ ನಗರ ಎನ್ನುವ ಘಂಟಾಘೋಷ ವ್ಯಾಕ್ಯಗಳಿಗೆ ಏನು ಪಾಯಿದೆ?.ಹೌದು, ನಗರದ ರಾಮ ಮಂದಿರದಿಂದ ಹಿಡಿದು ಜಗತ್ ವೃತ್ತದವರೆಗೆ  ಸುಲಭ ಶೌಚಾಲಯಗಳನ್ನು ಕಂದೀಲು ಹಿಡಿದು ಹುಡುಕುವಂಥ  ವಾತಾವರಣ ನಗರದಲ್ಲಿ ಕಾಣಸಿಗುತ್ತದೆ. ನಗರ ಹಾಗೂ ಪರ ಊರುಗಳಿಂದ ಬರುವ ಜನರು ಶೌಚಾಲಯಗಳಿಲ್ಲದೆ ಪರದಾಟ ನಡೆಸುವ ದೃಶ್ಯಗಳು ಕಣ್ಣಿಗೆ ರಾಚುವಂತೆ ಕಾಣುತ್ತವೆ. ಇನ್ನೂ ಮಹಿಳೆಯರ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಕಾಣುತ್ತದೆ.

ರಸ್ತೆಗಳ ಎರಡು ಬದಿಗಳಲ್ಲಿ ಹೆಜ್ಜೆಯಿಡುವಾಗ ಜಾಗೃತೆ ತಪ್ಪಿರಿ ಹುಷಾರ್; ಯಾಕೆಂದರೆ ಮಲ ಮೂತ್ರಗಳನ್ನು ಅಲ್ಲಿಯೇ ಮಾಡಿರುವುದರಿಂದ ಹೆಜ್ಜೆ ಇಡುವಾಗ ಮೈಯೆಲ್ಲಾ ಕಣ್ಣಾಗಿಯೇ ಹೆಜ್ಜೆ ಹಾಕಬೇಕು. ರಸ್ತೆ ಬದಿ, ಕಂಪೌಂಡಗಳ ಎದುರು ಮಲ ಮೂತ್ರ  ವಿಸರ್ಜನೆ ಮಾಡುವ ದೃಶ್ಯ ಸಾಮಾನ್ಯವಾಗಿ ಬಿಟ್ಟಿದೆ.

ನಗರ ವ್ಯಾಪ್ತಿಯಲ್ಲಿ ಶೌಚಾಲಯಗಳಿಗೆ ಬರ ಬಂದಿದೆ.

ಇನ್ನು ಇರುವ ಶೌಚಾಲಯಗಳತ್ತ ಮುಖ ಮಾಡುವುದು ಕಷ್ಟಕರ, ಶುಚಿತ್ವದ ಕೊರತೆಯಿಂದ ಸಾರ್ವಜನಿಕರಿಗೆ ಬಳಕೆಗೆ ಬಾರದ ಸ್ಥಿತಿಯಲ್ಲಿ ಇರುವುದರಿಂದ ಸಾರ್ವಜನಿಕರು ಕಂಪೌಂಡ್ ಹಾಗೂ ರಸ್ತೆ ಬದಿಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡುವಂಥ ಅನಿವಾರ್ಯ ನಿರ್ಮಾಣವಾಗುತ್ತವೆ. ಬಯಲು ಶೌಚ ಮಾಡುವುದರಿಂದ ಆರೋಗ್ಯದ ಮೇಲೆ ಹಲವು ಪರಿಣಾಮಗಳು ಉಂಟಾಗುತ್ತವೆ.

ದುರ್ವಾಸನೆ ಹರಡುವುದರಿಂದಾಗಿ ನಗರ ಮಾಲಿನ್ಯಕ್ಕೆ ಕುತ್ತು ಬರುತ್ತಿದೆ. ಸುಂದರ ನಗರದ ಕನಸಿಗೆ ಕೊಡಲಿ ಪೆಟ್ಟು ಬೀಳುತ್ತಿದೆ ಎಂದು ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿದಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.ನಗರ ಹೃದಯ ಭಾಗದಲ್ಲಿಯೇ ಸುಲಭವಾಗಿ ಶೌಚಾಲಯಕ್ಕೆ ಹೋಗಲು ಆಗದಂತಹ ವಾತಾವರಣವಿದೆ. ಹೋಗಬೇಕೆಂದರೂ ಎಲ್ಲಿ ಹುಡುಕಿದರೂ ಶೌಚಾಲಯಗಳು ಕಾಣಸಿಗುವುದಿಲ್ಲ. ಇಂಥ ಕ್ಲೀಷ್ಟಕರವಾದ ಅಸಹ್ಯಕರ ಜೀವನ ನಡೆಸುವಂಥ ವಿಪರ್ಯಾಸ ಇಲ್ಲಿನ ಜನರಿಗೆ ಬೆನ್ನು ಬಿಡದೆ ಕಾಡುತ್ತಿದೆ.

ಸರ್ಕಾರಗಳು ಸ್ವಚ್ಛತೆ, ಶುಚಿತ್ವ, ನೈರ್ಮಲ್ಲೆಕರಣ ಕಾಪಾಡಲು ಶೌಚಾಲಯಗಳ ನಿರ್ಮಾಣಕ್ಕೆ ಸಾಗರೋಪಾದಿಯಲ್ಲಿ ಅನುದಾನ ನೀಡುತ್ತಿದ್ದರೂ ಗುಲ್ಬರ್ಗಕ್ಕೆ ಆ ಭಾಗ್ಯವೇ ಇಲ್ಲ. ಬಯಾನಕ ಕಾಯಿಲೆಗಳಾದ ಡೆಂಗೆ, ಮಲೇರಿಯಾ, ವಾಂತಿ ಭೇದಿ ಪ್ರಕರಣಗಳು ಇಂಥ ಅಶುಚಿತ್ವದ ಪರಿಣಾಮವಾಗಿ ಜನರ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.

“

ನಗರದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ, ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶ, ತಲೆ ಎತ್ತುತಿರುವ ಮಾಲ್‌ಗಳು, ಇವೆಲ್ಲ ತೀವ್ರವಾದ ಬೆಳವಣಿಗೆಯ ವೇಗ ಪಡೆಯುತ್ತಿರುವುದರಿಂದ ಸಾರ್ವಜನಿಕರು ಕೂಡಾ ನಗರದತ್ತ ಮುಖ ಮಾಡುತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ನಗರ ಸುಂದರ, ನಿರ್ಮಲ, ತ್ಯಾಜ್ಯ, ಮಲ ಮೂತ್ರ ವಿಸರ್ಜನೆಗೆ ವ್ಯವಸ್ಥಿತವಾದ ಸೌಲಭ್ಯ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕು.

ಶೌಚಾಲಗಳಿಲ್ಲದೆ ಸಾರ್ವಜನಿಕರು ಒತ್ತಡವನ್ನು ನಿವಾರಿಸಿಕೊಳ್ಳಲಿ ಸರ್ಕಾರಿ ಕಚೇರಿ, ಕಂಪೌಂಡ್‌ಗಳನ್ನು ಆಶ್ರಯಿಸುವಂಥ ದೃಶ್ಯಗಳು ಸರ್ವೆ ಸಾಮಾನ್ಯವಾಗಿ ಬಿಟ್ಟಿವೆ. ಪುರುಷರು ಬಯಲು ಮೂತ್ರ ವಿಸರ್ಜನೆ ಮಾಡಬಹುದು, ಆದರೆ ಮಹಿಳೆಯರ ಪಾಡು ಏನು? ಎನ್ನುವ ಪ್ರಶ್ನೆ ಇಲ್ಲಿನ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ. ಪಾಲಿಕೆ ಶೀಘ್ರವೇ ಸುಲಭ ಶೌಚಾಲಯ ನಿರ್ಮಾಣಕ್ಕೆ ಮುಂದಾಗಲಿ” ಎಂದು ಬಿ.ಎಂ. ಪಾಟೀಲ ಕಲ್ಲೂರ ಆಗ್ರಹಿಸಿದ್ದಾರೆ.

 

ನಗರ ವ್ಯಾಪ್ತಿಯಲ್ಲಿರುವ ಸುಮಾರು 42ಕ್ಕೂ ಹೆಚ್ಚು ಶೌಚಾಲಯಗಳನ್ನು ಉನ್ನತೀಕರಣ ಮಾಡುವಂಥ ಕಾರ್ಯಕ್ಕೆ ಈಗಾಗಲೇ ಪಾಲಿಕೆ ವತಿಯಿಂದ ಚಾಲನೆ ನೀಡಲಾಗಿದೆ. ನೀರು, ಶುಚಿತ್ವ ಕೊರತೆ, ನಿರ್ವಹಣೆ ಇಲ್ಲದೆ ಇರುವಂತ ಶೌಚಾಲಯಗಳಿಗೆ ಕಾಯಕಲ್ಪ ನೀಡಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇರುವಂಥ ಶೌಚಾಲಗಳ ನಿರ್ವಹಣೆಗಾಗಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆ ಚಿಂತನೆ ನಡೆಸಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ನಾಗಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.