ಭಾನುವಾರ, ಮೇ 22, 2022
21 °C

ಗುಲ್ಬರ್ಗ:ರಾಷ್ಟ್ರಪತಿಗೆ ಅಂತಿಮ ಟೆಲಿಗ್ರಾಂ!

ಪ್ರಜಾವಾಣಿ ವಾರ್ತೆ/ ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಟೆಲಿಗ್ರಾಂ ಸೇವೆ ಭಾನುವಾರ ರಾತ್ರಿಯಿಂದ ಸ್ಥಗಿತಗೊಳ್ಳಲಿದೆ ಎನ್ನುವ ಸುದ್ದಿಗೆ ಎಚ್ಚೆತ್ತುಕೊಂಡ ನಗರದ 12 ಮಂದಿ ಅಂತಿಮ ಸಂದೇಶ ರವಾನಿಸಿ ಭಾವಪೂರ್ಣ ವಿದಾಯ ಹೇಳಿದರು.ನಗರದಿಂದ ಭಾನುವಾರ ಒಟ್ಟು 12 ಟೆಲಿಗ್ರಾಂ ರವಾನೆಯಾಗಿದ್ದು, ಇವುಗಳಲ್ಲಿ ಎರಡು ಸಂದೇಶ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಕಳುಹಿಸಿರುವುದು ವಿಶೇಷ.ನಗರದ ನಿವಾಸಿಗಳಾದ ಕೇತನ್ ದೋಶಿ ಹಾಗೂ ಡಾ. ರಾಜು ಕುಳಗೇರಿ ಅವರು `ನೀವು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು' ಎನ್ನುವ ಸಂದೇಶಗಳನ್ನು ಪ್ರಣವ್ ಮುಖರ್ಜಿಗೆ ರವಾನಿಸಿದ್ದಾರೆ.ಟೆಲಿಗ್ರಾಫ್ ಯಂತ್ರದ ಮೂಲಕ `ಕಟ್ಟ ಕಡಕಡ..' ಎಂದು ಟೈಪ್ ಮಾಡಿ ಸಂದೇಶ ರವಾನಿಸುವ ವಿಧಾನ ನಿಂತುಹೋಗಿ ಬಹಳ ವರ್ಷಗಳಾದರೂ, ಟೆಲಿಗ್ರಾಂ ಹೆಸರಿನಲ್ಲಿ `ಕಿರು ಸಂದೇಶ' ರವಾನಿಸುವುದು ಮಾತ್ರ ಭಾನುವಾರದವರೆಗೂ ಉಳಿದುಕೊಂಡಿತ್ತು.ಕಂಪ್ಯೂಟರ್ ಮೂಲಕ ಒಟ್ಟು 43 ವಿಧಾನದ ಸಂದೇಶಗಳನ್ನು ರವಾನಿಸಲು ಟೆಲಿಗ್ರಾಂ ಸೇವಾ ವಿಭಾಗದಲ್ಲಿ `ಭಾರತ ಸಂಚಾರ ನಿಗಮ ನಿಯಮಿತ' (ಬಿಎಸ್‌ಎನ್‌ಎಲ್) ಅವಕಾಶ ಮಾಡಿಕೊಟ್ಟಿತ್ತು. ನಗರದಲ್ಲಿ ಟೆಲಿಗ್ರಾಂ ಮೂಲಕ ಕೊನೆಯ ಸಂದೇಶ  ರವಾನಿಸಿದವರು `ನಾರಾಯಣ ಪೇಟಕರ್' ಕುಟುಂಬದ ಸದಸ್ಯರು. ರಾಘವ ಓಂಕಾರ ಹಾಗೂ ಶ್ವೇತಾ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಸ್ಥಳೀಯವಾಗಿಯೇ ನಾರಾಯಣ ಪೇಟಕರ್ ಕುಟುಂಬದವರು ಸಂದೇಶ ರವಾನಿಸಿ ಟೆಲಿಗ್ರಾಂ ಸೇವೆಯನ್ನು ಅವಿಸ್ಮರಣೀಯ ಮಾಡಿಕೊಂಡಿರುವುದು ಬಿಎಸ್‌ಎನ್‌ಎಲ್ ಟೆಲಿಗ್ರಾಂ ವಿಭಾಗದಲ್ಲಿ ದಾಖಲಾಗಿದೆ.ಟೆಲಿಗ್ರಾಫ್ ಮಾಸ್ಟರ್ ಮಾಸದ ನೆನಪು: 1983ರಲ್ಲಿ ಹಿರಿಯ ಟೆಲಿಗ್ರಾಫ್ ಮಾಸ್ಟರ್ ಎಂದು ದೂರ ಸಂಚಾರ ಇಲಾಖೆಯಲ್ಲಿ ನೇಮಕಗೊಂಡು, ಸದ್ಯ ಗುಲ್ಬರ್ಗ ಬಿಎಸ್‌ಎನ್‌ಎಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುರುರಾಜ ಅವರ ನೆನಪಿನಿಂದ ಆ ದಿನಗಳು ಮಾಸಿಲ್ಲ. `ಮೊದಲು ಟೆಲಿಗ್ರಾಂ ವಿಭಾಗದಲ್ಲಿ 150 ಮಂದಿ ಕೆಲಸ ಮಾಡುತ್ತಿದ್ದೆವು. ಆ ವಾತಾವರಣ ಕಾರ್ಖಾನೆಯನ್ನು ನೋಡಿದ ಅನುಭವವಾಗುತ್ತಿತ್ತು. ಸಂದೇಶಗಳನ್ನು ಆಲಿಸುವುದು, ಟೈಪ್ ಮಾಡುವುದು, ಅವುಗಳನ್ನು ಹಂಚುವ ಕಾರ್ಯ ಚುರುಕಾಗಿ ನಡೆಯುತ್ತಿತ್ತು.ಪ್ರತಿದಿನ ಕನಿಷ್ಠ 400 ಸಂದೇಶ ರವಾನೆಯಾಗುತ್ತಿದ್ದವು. ಊಟ, ನಿದ್ರೆ ಲೆಕ್ಕಿಸದೆ ಖುಷಿಯಿಂದ ಟೈಪ್ ಮಾಡಿ ಕೆಲಸ ಪೂರೈಸುತ್ತಿದ್ದೆವು' ಎನ್ನುತ್ತಾರೆ ಗುರುರಾಜ. ಟೆಲಿಗ್ರಾಫ್ ಮಾಸ್ಟರ್ ಎಂದು ಉದ್ಯೋಗಕ್ಕೆ ಸೇರ್ಪಡೆಯಾಗಿದ್ದವರಲ್ಲಿ ಮೂವರು ಮಾತ್ರ ಗುಲ್ಬರ್ಗ ಕಚೇರಿಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್. ಎಸ್.ಕೆಸರಟ್ಟಿ ಹಾಗೂ ಎಸ್.ಎ.ಕಟ್ಟಿಮನಿ ಸೇರಿ ಮೂವರು ಸದ್ಯ ಮೊಬೈಲ್‌ಗೆ ಸಂಬಂಧಿಸಿದ ಪೋಸ್ಟ್ ಪೇಯ್ಡ ಹಾಗೂ ಪ್ರಿಪೇಯ್ಡ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.2007ರಲ್ಲೆ ಟೆಲಿಗ್ರಾಫ್ ಮೆಷಿನ್ ಬಳಕೆ ನಿಂತುಹೋಗಿ `ವೆಬ್ ಬೇಸ್ಡ್ ಟೆಲಿಗ್ರಾಫ್ ಮೆಸೆಜಿಂಗ್ ಸಿಸ್ಟಮ್' ಎನ್ನುವುದು ಕಂಪ್ಯೂಟರ್‌ನಲ್ಲಿ ಆರಂಭವಾಗಿದೆ. `ಟೆಲಿಗ್ರಾಂ ನೀಡುವವರು ವಿರಳವಾಗಿದ್ದು, ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ಮಾತ್ರ ಟೆಲಿಗ್ರಾಂ ಬಳಕೆಗುತ್ತಿತ್ತು. ಗುಲ್ಬರ್ಗದಲ್ಲಿ ತಿಂಗಳಿಗೆ 8 ರಿಂದ 10 ಮಾತ್ರ ಟೆಲಿಗ್ರಾಂ ಹೋಗುತ್ತಿವೆ. ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆ ವ್ಯಾಪಕವಾಗಿರುವುದರಿಂದ ಟೆಲಿಗ್ರಾಂ ಬಳಕೆ ಕ್ಷೀಣಿಸಿದೆ' ಎನ್ನುವುದು ಇಲಾಖೆ ಅಧಿಕಾರಿಗಳ ವಿಶ್ಲೇಷಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.