ಗುಲ್ಬರ್ಗ–ದಾವಣಗೆರೆ ಮಧ್ಯೆ ಹೊಸ ಬಸ್‌

7
ಎನ್‌ಇಕೆಆರ್‌ಟಿಸಿಯಿಂದಲೇ ‘ಸ್ಲೀಪರ್‌’ ಬಸ್‌ ಕವಚ ನಿರ್ಮಾಣ

ಗುಲ್ಬರ್ಗ–ದಾವಣಗೆರೆ ಮಧ್ಯೆ ಹೊಸ ಬಸ್‌

Published:
Updated:

ಗುಲ್ಬರ್ಗ: ಯಾದಗಿರಿಯಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆ­ಆರ್‌ಟಿಸಿ)ಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಇದೇ ಮೊದಲ ಬಾರಿಗೆ ನಾನ್‌ ಎಸಿ ಸ್ಲೀಪರ್‌ ಕವಚವುಳ್ಳ ಎರಡು ಬಸ್‌ ನಿರ್ಮಿಸಲಾಗಿದ್ದು, ಗುಲ್ಬರ್ಗ–ದಾವಣಗೆರೆ ಮಧ್ಯೆ ಪ್ರಾಯೋಗಿಕವಾಗಿ ಅವುಗಳನ್ನು ಸಂಚಾರ ಸೇವೆಗೆ ಬಿಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್‌. ಶಿವಮೂರ್ತಿ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ­ಡಿದ ಅವರು, ‘ಸಾಮಾನ್ಯ ಬಸ್‌ಗೆ ನಾನ್‌ ಎಸಿ ಸ್ಲೀಪರ್‌ ಕವಚ ಹಾಕುವುದನ್ನು ಬೇರೆ ಕಂಪೆನಿ­ಗಳಿಗೆ ವಹಿಸಿದ್ದರೆ ₨ 28.4 ಲಕ್ಷ ಕೊಡಬೇಕಾಗು­ತ್ತಿತ್ತು. ಸಂಸ್ಥೆಯ ಕಾರ್ಯಾಗಾರದಲ್ಲಿ ₨24 ಲಕ್ಷ ವೆಚ್ಚದಲ್ಲಿ ಕವಚ ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಏರ್‌ ಸಸ್ಪೆನ್ಷನ್‌ ಅಳವಡಿಸ­ಲಾ­ಗಿದ್ದು, ಸುರಕ್ಷತೆಯನ್ನು ಗಮನದಲ್ಲಿಟ್ಟು­ಕೊಂಡು ಎರಡು ಬದಿಗಳಲ್ಲಿ ತುರ್ತು ನಿರ್ಗಮನ ದ್ವಾರಗ­ಳನ್ನು ಮಾಡಲಾಗಿದೆ. ಒಟ್ಟು 30 ಆಸನ­ಗಳಿದ್ದು, ಪ್ರತಿ ಆಸನದಲ್ಲಿ ಮೊಬೈಲ್‌ ಚಾರ್ಜರ್‌ ಹಾಗೂ ರಿಡೀಂಗ್‌ ಲೈಟ್‌ ಅಳವಡಿಸಲಾಗಿದೆ’ ಎಂದರು.ಪ್ರತಿದಿನ ರಾತ್ರಿ 9ಕ್ಕೆ ಗುಲ್ಬರ್ಗದಿಂದ ನಿರ್ಗಮಿ­ಸುವ ಬಸ್‌ ಸಿಂಧನೂರು, ಗಂಗಾವತಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ ಮೂಲಕ ಬೆಳಿಗ್ಗೆ 7ಕ್ಕೆ ದಾವಣಗೆರೆ ತಲುಪುವುದು. ಪ್ರತಿದಿನ ದಾವಣಗೆರೆಯಿಂದ 8ಕ್ಕೆ ನಿರ್ಗಮಿಸಿ ಬೆಳಿಗ್ಗೆ 6ಕ್ಕೆ ಗುಲ್ಬರ್ಗ ತಲುಪುವುದು.ಪ್ರಯಾಣ ದರ ₨689. ಈ ಮೊದಲು ಗುಲ್ಬರ್ಗ–ದಾವಣಗೆರೆ ಮಧ್ಯೆ ಸಂಚರಿಸುತ್ತಿದ್ದ ನಾನ್‌ ಎಸಿ ಕರೋನಾ ಬಸ್‌ ಸೇವೆಯನ್ನು ಶಿವಮೊಗ್ಗಕ್ಕೆ ವಿಸ್ತರಿಸಲಾಗಿದೆ. ಪ್ರತಿದಿನ ರಾತ್ರಿ 8.30ಕ್ಕೆ ಗುಲ್ಬರ್ಗದಿಂದ ನಿರ್ಗಮಿಸಿ ಲಿಂಗಸಗೂರು, ತಾವರಗೇರಾ, ಗಂಗಾವತಿ, ಹೊಸಪೇಟೆ, ಕೂಡ್ಲಿಗಿ, ಚಿತ್ರದುರ್ಗದ ಮೂಲಕ ಬೆಳಿಗ್ಗೆ 7.15ಕ್ಕೆ ಶಿವಮೊಗ್ಗ ತಲುಪುವುದು. ಶಿವಮೊಗ್ಗದಿಂದ ಪ್ರತಿದಿನ ರಾತ್ರಿ 8.30ಕ್ಕೆ ಹೊರಟು ಬೆಳಿಗ್ಗೆ 7.15ಕ್ಕೆ ಗುಲ್ಬರ್ಗ ತಲುಪಲಿದೆ. ಪ್ರಯಾಣ ದರ ₨800. ಪ್ರಯಾಣಿಕರು ಹೊಸ ಬಸ್‌ ಸಂಚಾರ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.ಹೊಸದಾಗಿ 329 ಬಸ್‌: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಒಂಬತ್ತು ಕಡೆ­ಗಳಲ್ಲಿ ನಗರ ಸಂಚಾರ ಬಸ್‌ ಸೇವೆ ಆರಂಭಿಸ­ಲಾಗಿದ್ದು, ಸದ್ಯ 250 ಬಸ್‌ ಸಂಚರಿಸುತ್ತಿವೆ. ಮಾರ್ಚ್‌ ಅಂತ್ಯದೊಳಗೆ ಇನ್ನು 329 ಹೊಸ ಬಸ್‌ ಸೇರ್ಪಡೆಗೊಳಿಸಲಾಗುವುದು. ಗಂಗಾವತಿ–ಅಂಕಲಗಿ, ಸಿಂಧನೂರ–ಕಾರಟಗಿಯಂತಹ ಕ್ಲಸ್ಟರ್‌ ಮಾಡಿಕೊಂಡು ಹೊಸದಾಗಿ ನಗರ ಸಾರಿಗೆ ಸೇವೆ ಆರಂಭಿಸಲು ಯೋಜಿಸಲಾಗಿದೆ ಎಂದು ಹೇಳಿದರು.ಗುಲ್ಬರ್ಗ ನಗರಕ್ಕೆ 75, ಬಳ್ಳಾರಿಗೆ 20, ಬೀದರ್‌ಗೆ 20, ವಿಜಾಪುರಗೆ 30, ಗಂಗಾವತಿ ಕ್ಲಸ್ಟರ್‌ಗೆ 75, ಹೊಸಪೇಟೆಗೆ 30, ಕೊಪ್ಪಳಗೆ 20, ರಾಯಚೂರಿಗೆ 30, ಸಿಂಧನೂರಗೆ 20, ಯಾದಗಿರಿಗೆ 14 ಹೊಸ ಬಸ್‌ಗಳನ್ನು ನಗರ ಸೇವೆಗೆ ಸೇರ್ಪಡೆಗೊಳಿಸಲಾಗುವುದು.ಈ ಎಲ್ಲ ಬಸ್‌ಗಳನ್ನು ‘ಜವಾಹರಲಾಲ್‌ ನೆಹರು ನಗರ ಪುನರುತ್ಥಾನ ಯೋಜನೆ–ಜೆಎನ್‌ಯುಆರ್‌ಎಂ’ ಯೋಜನೆ ಅಡಿಯಲ್ಲಿ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರ ಶೇ80ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 20ರಷ್ಟು ಅನುದಾನ ನೀಡಿವೆ. ಒಟ್ಟು ₨105 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಬಸ್‌ ಖರೀದಿ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಅಂತಿಮಗೊಳಿಸಿಲ್ಲ ಎಂದರು.ಇದೇ ಯೋಜನೆ ಅಡಿಯಲ್ಲಿ ನಗರ ಸಂಚಾರ ಬಸ್‌ ಡಿಪೋ ನಿರ್ಮಿಸಲು ರೂ 18 ಕೋಟಿ ಲಭ್ಯವಾಗಿದ್ದು, ಗುಲ್ಬರ್ಗ, ಬಳ್ಳಾರಿ, ರಾಯಚೂರು, ವಿಜಾಪುರದಲ್ಲಿ ನಗರ ಬಸ್‌ ಡಿಪೋ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗುಲ್ಬರ್ಗದಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣದ ಬಹು ಉದ್ದೇಶಿತ ಕಟ್ಟಡ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳಿಸಲು ಸೂಚಿಸ­ಲಾಗಿದೆ ಎಂದು ಹೇಳಿದರು.ಸಿಬ್ಬಂದಿ ವರ್ಗಾವಣೆ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಹಳ ವರ್ಷಗಳಿಂದ ಚಾಲಕ ಹಾಗೂ ನಿರ್ವಾಹಕರ ವರ್ಗಾವಣೆಯನ್ನು ತಡೆಯ­­ಲಾಗಿತ್ತು. ಗುಲ್ಬರ್ಗ ಭಾಗದಲ್ಲಿ ನೇಮಕ­ಗೊಂಡಿರುವ ವಿಜಾಪುರ ಕಡೆಯವರು ವರ್ಗಾವಣೆ­ಗಾಗಿ ಬಹಳ ವರ್ಷಗಳಿಂದ ಒತ್ತಡ ಹಾಕುತ್ತಿದ್ದರು. ಈ ವರ್ಷದಿಂದ ಗುಲ್ಬರ್ಗದಿಂದ ವಿಜಾಪುರಕ್ಕೆ ಸಿಬ್ಬಂದಿ ವರ್ಗಾವಣೆ ಆರಂಭಿಸಲು ನಿರ್ಧರಿಸಲಾಗಿದೆ. ಜೇಷ್ಠತೆ ಆಧರಿಸಿ ಮೊದಲ ಹಂತದಲ್ಲಿ 100 ಚಾಲಕ, ನಿರ್ವಾಹಕರನ್ನು ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.ಹೈದರಾಬಾದ್‌ ಕರ್ನಾಟಕದಲ್ಲಿ 371 (ಜೆ) ಅಡಿಯಲ್ಲಿ ನೇಮಕವಾಗುವುದರಿಂದ ಶೇ 80ರಷ್ಟು ಈ ಭಾಗದವರೇ ಚಾಲಕರು, ನಿರ್ವಾಹಕರು ಬರಲಿದ್ದಾರೆ. ಹೀಗಾಗಿ ವಿಜಾಪುರಕ್ಕೆ ವರ್ಗಾವಣೆ ಬಯಸುವವರಿಗೆ ಅನುಕೂಲ ಮಾಡಿಕೊಡುವ ಸಮಯ ಬಂದಿದೆ ಎಂದು ಹೇಳಿದರು.ಹಣಕಾಸು ವಿಭಾಗದ ನಿರ್ದೇಶಕ ಕೆ.ಎನ್‌. ಖಾನಪ್ಪನವರ, ಬಸಲಿಂಗಪ್ಪ, ಎಸ್‌.ಡಿ. ಭಾವಿಕಟ್ಟಿ, ಬಿ.ಸಿ. ರಮೇಶ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry