ಗುಲ್ಬರ್ಗ: ಕೆಲಸ ಮಾಡದ ಅಧಿಕಾರಿಗಳಿಗೇಕೆ ಪಗಾರ

7
ಹೈಕೋರ್ಟ್‌ ಪ್ರಶ್ನೆ

ಗುಲ್ಬರ್ಗ: ಕೆಲಸ ಮಾಡದ ಅಧಿಕಾರಿಗಳಿಗೇಕೆ ಪಗಾರ

Published:
Updated:

ಬೆಂಗಳೂರು: ನಿಗದಿತ ಕಾರ್ಯಕ್ಕಾಗಿ ನೇಮಿಸಲಾದ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸದಿದ್ದಲ್ಲಿ ಅವರ ವೇತನವನ್ನು ತಡೆ ಹಿಡಿಯಲು ರಾಜ್ಯ ಸರ್ಕಾರ ಏಕೆ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.

ಗುಲ್ಬರ್ಗ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಶರಣ ದೇಸಾಯಿ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅಧಿಕಾರಿಗಳು ಕೆಲಸ ಮಾಡದಿದ್ದಲ್ಲಿ ಅವರ ವೇತನವನ್ನು ತಡೆ ಹಿಡಿಯಲು ಏಕೆ ಆದೇಶಿಸಬಾರದು ಎಂದು ಮೌಖಿಕವಾಗಿ ಪ್ರಶ್ನಿಸಿದೆ.

ಗುಲ್ಬರ್ಗ ನಗರದಲ್ಲಿ ಕಸ ವಿಲೇವಾರಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಹಣ ಬಿಡುಗಡೆಯಾಗಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಆಸ್ಪತ್ರೆಗಳಲ್ಲಿನ ತ್ಯಾಜ್ಯಗಳನ್ನು ಬೀದಿ ಬದಿಯಲ್ಲಿ ಹಾಕಲಾಗುತ್ತಿದೆ. ಜತೆಗೆ ಈ ಭಾಗದಲ್ಲಿ  ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಕ್ತದ ಕಲೆಗಳುಳ್ಳ ಚೀಲಗಳನ್ನು  ಹಿಡಿದ ನಾಯಿಗಳು ರಸ್ತೆಗಳಲ್ಲಿ ಸುತ್ತಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ತಿಳಿಸಿದರು.ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನಗೊಂಡ ವಿಭಾಗೀಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತ ಹುದ್ದೆಗೆ ಮೇಲ್ಪಟ್ಟ ಎಲ್ಲ ಅಧಿಕಾರಿಗಳು ಇದೇ 17ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry