ಗುಲ್ಬರ್ಗ ಜಿಲ್ಲಾ ಪಂಚಾಯಿತಿ: ಶರಣಪ್ಪ ಅಧ್ಯಕ್ಷ- ಪಾರ್ವತಿ ಉಪಾಧ್ಯಕ್ಷೆ

7

ಗುಲ್ಬರ್ಗ ಜಿಲ್ಲಾ ಪಂಚಾಯಿತಿ: ಶರಣಪ್ಪ ಅಧ್ಯಕ್ಷ- ಪಾರ್ವತಿ ಉಪಾಧ್ಯಕ್ಷೆ

Published:
Updated:

ಗುಲ್ಬರ್ಗ: ಅವಿಶ್ವಾಸ ನಿರ್ಣಯದಿಂದ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದ ಬಿಜೆಪಿ ಮಹಾ ಚುನಾವಣೆಯ (ವಿಧಾನಸಭೆ-ಲೋಕಸಭೆ) ಹೊಸ್ತಿಲಲ್ಲಿ ಮತ್ತೆ ಅರಳಿ ನಿಂತಿದೆ.ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಮಳಖೇಡ ಮತಕ್ಷೇತ್ರದ ಶರಣಪ್ಪ ವೀರಶೆಟ್ಟಿ ಪೊಲೀಸ್ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಭಂಕೂರ ಮತಕ್ಷೇತ್ರದ ಪಾರ್ವತಿ ಚೌಹಾಣ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್‌ನ ಗುರುಲಿಂಗಪ್ಪ ಗೌಡ ಮತ್ತು ಅನಿತಾ ವಳಕೇರಿ ಅವರನ್ನು 22-19 ಮತಗಳ ಅಂತರದಲ್ಲಿ ಸೋಲಿಸಿ ಆಯ್ಕೆಯಾದರು.ಚುನಾವಣೆ: ಮೊದಲ 20 ತಿಂಗಳ ಅವಧಿ ಮುಗಿದ ಕಾರಣ ಮತ್ತೆ ಹೊಸ ಚುನಾವಣೆಗೆ ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷರ ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷರ ಹುದ್ದೆ ಅನುಸೂಚಿತ ಜಾತಿ (ಮಹಿಳೆ)ಗೆ ಮೀಸಲಿರಿಸಲಾಗಿತ್ತು. ಅಭಿವೃದ್ಧಿಗಿಂತ ಹೆಚ್ಚಾಗಿ ಅವಿಶ್ವಾಸ, ಆರೋಪ- ಪ್ರತ್ಯಾರೋಪಗಳಲ್ಲೇ ಹೆಸರು ಮಾಡಿದ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯ ಈ ಅವಧಿಯ ಮೂರನೇ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಸ್ಥಾನ :ಒಟ್ಟು 43 ಸ್ಥಾನದ ಜಿಪಂನಲ್ಲಿ ಬಿಜೆಪಿ- 20, ಕಾಂಗ್ರೆಸ್- 19, ಜೆಡಿಎಸ್-3 ಮತ್ತು ಪಕ್ಷೇತರ ಅಭ್ಯರ್ಥಿ-1 ಇದ್ದಾರೆ. ಈ ಪೈಕಿ ಸೋಮವಾರದ ಮತದಾನದಲ್ಲಿ ಬಿಜೆಪಿಯನ್ನು ಪಕ್ಷದ 20 ಸದಸ್ಯರ ಜೊತೆಗೆ ಜೆಡಿಎಸ್‌ನ ಮಂಗಳಾ ಅರವಿಂದ ನರೋಣಿ ಮತ್ತು ಪಕ್ಷೇತರ ಅಭ್ಯರ್ಥಿ ಶೋಭಾ ಬಾಣಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಪಕ್ಷದ 17 ಕಾಂಗ್ರೆಸ್ ಸದಸ್ಯರು ಮತ್ತು ಜೆಡಿಎಸ್‌ನ ಇಬ್ಬರು ಸದಸ್ಯರು ಬೆಂಬಲಿಸಿದ್ದಾರೆ.ಕಾಂಗ್ರೆಸ್‌ನ ಅಡಕಿ ಕ್ಷೇತ್ರದ ಪುಷ್ಪಾವತಿ ಅನಂತ ರೆಡ್ಡಿ ಮತ್ತು ನಾಲವಾರದ ಸಾಬಣ್ಣ ಹನುಮಂತ ಗೈರಾಗ್ದ್ದಿದರು.  ಮತದಾನದ ವೇಳೆ ಇಬ್ಬರು ಸದಸ್ಯರು ಅನಾರೋಗ್ಯವಿದ್ದ ಕಾರಣ ವೈದ್ಯರನ್ನು ಕರೆಯಿಸಿ ಪರೀಕ್ಷಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಸಂಭ್ರಮ: ಚುನಾವಣೆ ಮುಗಿಯುತ್ತಿದ್ದಂತೆಯೇ ಸಭಾಂಗಣದ ಹೊರಗೆ ಜಮಾಯಿಸಿದ್ದ ಬಿಜೆಪಿ ಬೆಂಬಲಿಗರ ಘೋಷಣೆಗಳು ಮುಗಿಲು ಮುಟ್ಟಿದವು. ಹೂ ಹಾರ ಹಾಕಿ, ಪಟಾಕಿ ಸಿಡಿಸಿ ಅಧ್ಯಕ್ಷ- ಉಪಾಧ್ಯಕ್ಷರ ಮೆರವಣಿಗೆ ಮಾಡಿದರು. ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ರಾಜಕುಮಾರ ಪಾಟೀಲ ತೇಲ್ಕೂರ, ಮುಕುಂದ ದೇಶಪಾಂಡೆ, ವಿದ್ಯಾಸಾಗರ ಶಹಬಾದಿ, ಶರಣಪ್ಪ ತಳವಾರ ಹಾಗೂ ಬಿಜೆಪಿ ಜಿಲ್ಲಾ ಮತ್ತು ಸೇಡಂನ ಪದಾಧಿಕಾರಿಗಳು ಇದ್ದರು.ಅಧ್ಯಕ್ಷರು:

ಸೇಡಂ ತಾಲ್ಲೂಕಿನ ತೇಲ್ಕೂರದ ವೀರಶೆಟ್ಟಿ ಪಾಟೀಲ ಮತ್ತು ಸರಸ್ವತಿ ಪಾಟೀಲ್ ದಂಪತಿಯ ಏಳು ಮಕ್ಕಳಲ್ಲಿ ಹಿರಿಯವರು ಜಿಪಂ ನೂತನ ಅಧ್ಯಕ್ಷ ಶರಣಪ್ಪ ವೀರಶೆಟ್ಟಿ ಪೊಲೀಸ್ ಪಾಟೀಲ. ಪತ್ನಿ ಮಹಾನಂದ ಪಾಟೀಲ್.  ವೈದ್ಯ, ವ್ಯವಹಾರ ಆಡಳಿತ, ಕಾನೂನು ಮತ್ತು ಬಿಬಿಎಂ ಪದವೀಧರರಾದ ನಾಲ್ಕು ಜನ ಗಂಡು ಮಕ್ಕಳು.

 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ  ಅವರು ಶರಣಪ್ಪ ಅವರ ಕೊನೆಯ ಸಹೋದರ. ಉದ್ಯಮಿ ಶರಣಪ್ಪ ವೀರಶೆಟ್ಟಿ ಹಿಂದೆ ಸೇಡಂ ಎಪಿಎಂಸಿಯನ್ನು ವರ್ತಕರ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. ಮಳಖೇಡ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಅವರ  ಚುನಾವಣಾ ರಾಜಕೀಯ ಆರಂಭಗೊಂಡಿತ್ತು. ಮೊದಲ ಬಾರಿಯಲ್ಲೇ ಅಧ್ಯಕ್ಷ ಗಾದಿ ಒಲಿದು ಬಂದಿದೆ.`ಬರದಿಂದ ತತ್ತರಿಸಿದ ಜಿಲ್ಲೆಯಲ್ಲಿ ಕುಡಿವ ನೀರು, ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಹಿಂದಿನ ಅಧ್ಯಕ್ಷ- ಉಪಾಧ್ಯಕ್ಷರು, ಪಕ್ಷದ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳ ನೆರವು ಪಡೆದು ಸುಸೂತ್ರ ಆಡಳಿತ ನೀಡಲು ಯತ್ನಿಸುತ್ತೇನೆ~ ಎಂದು ನೂತನ ಅಧ್ಯಕ್ಷರು ಪ್ರತಿಕ್ರಿಯಿಸಿದರು.ಉಪಾಧ್ಯಕ್ಷೆ:  ಉಪಾಧ್ಯಕ್ಷೆ ಪಾರ್ವತಿ ಚೌಹಾಣ್ ಚಿತ್ತಾಪುರ ತಾಲ್ಲೂಕಿನ ಭಂಕೂರದವರು. ಶಂಕರ ಚೌಹಾಣ್ ಅವರನ್ನು ವಿವಾಹವಾಗಿ ಪತಿ ಮನೆ ಮಳಖೇಡಕ್ಕೆ ಸೇರಿದ್ದರು. ಬಿಎ, ಬಿಇಡಿ ಪದವೀಧರೆಯಾಗಿದ್ದ ಅವರು, ಕೆಲ ಕಾಲ ಶಿಕ್ಷಕರಾಗಿ ವೃತ್ತಿ ನಿರ್ವಹಿಸಿದ್ದರು. ಆ ಬಳಿಕ ರಾಜಕೀಯ ಅವಕಾಶ ಒಲಿದು ನಾಲವಾರದಿಂದ ಚುನಾವಣೆಗೆ ನಿಂತು ಸೋತಿದ್ದರು. ಎರಡನೇ ಬಾರಿಗೆ ಚಿತ್ತಾಪುರ ತಾಲ್ಲೂಕಿನ ಭಂಕೂರದಿಂದ ಗೆದ್ದು ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಪ್ರವೇಶಿಸಿದ್ದರು. ಇವರಿಗೆ ಇಬ್ಬರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದಾರೆ.  ಸೇಡಂ ಪ್ರಾಬಲ್ಯ: ಗುಲ್ಬರ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಸೇಡಂ ತಾಲ್ಲೂಕಿನ ಪ್ರಾಬಲ್ಯ ಹೆಚ್ಚಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶರಣ ಪ್ರಕಾಶ ಪಾಟೀಲ ಸೇಡಂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ ಸೇಡಂ ತಾಲ್ಲೂಕಿನವರು. ಈಗ ಜಿಪಂ ಅಧ್ಯಕ್ಷ ಶರಣಪ್ಪ ವೀರಶೆಟ್ಟಿ ಪಾಟೀಲ ಸೇರ್ಪಡೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry