ಭಾನುವಾರ, ಜನವರಿ 26, 2020
22 °C

ಗುಲ್ಬರ್ಗ: ಬಂದ್‌ಗೆ ಭಾರಿ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಸುಕಿನಿಂದಲೇ ಬಸ್ ಸಂಚಾರ ಸ್ಥಗಿತ; ಆಟೋ ಚಾಲಕರಿಂದಲೂ ಬೆಂಬಲ. ಸ್ವಯಂಪ್ರೇರಿತರಾಗಿ ವರ್ತಕರು ಅಂಗಡಿ- ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರೆ, ಹತ್ತಾರು ಸಂಘಟನೆಗಳ ನೂರಾರು ಕಾರ್ಯಕರ್ತರು ರ‌್ಯಾಲಿಯಲ್ಲಿ ಪಾಲ್ಗೊಂಡರು.ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಒತ್ತಾಯಿಸಿ ಮಂಗಳವಾರ ನಡೆದ ಬಂದ್‌ನ ಪ್ರಭಾವ ಗುಲ್ಬರ್ಗ ಜಿಲ್ಲೆಯಲ್ಲಿ ದಟ್ಟವಾಗಿತ್ತು. ದಶಕಗಳ ಹಿಂದೆಯೇ ಈ ಹೋರಾಟ ಜಿಲ್ಲೆಯಲ್ಲಿ ಆರಂಭವಾಗಿದ್ದರಿಂದ, ಬಂದ್‌ಗೆ ಇಲ್ಲಿ ಸಿಕ್ಕ ಪ್ರತಿಕ್ರಿಯೆ ಕೂಡ ಹೆಚ್ಚೇ ಎಂದು ಹೇಳಬಹುದು.ಸಂಚಾರ ಸ್ತಬ್ಧ: ಬೆಳಿಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಬಂದ್‌ನ ಬಿಸಿ ಹೆಚ್ಚಿಸಿತು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತಾಸುಗಟ್ಟಲೇ ಕಾಯಬೇಕಾಯಿತು. ಕುತೂಹಲದ ಸಂಗತಿ ಎಂದರೆ, ಕೆಲವು ಜನರಿಗೆ ಬಂದ್‌ನ ಹಿನ್ನೆಲೆ ಗೊತ್ತೇ ಇರಲಿಲ್ಲ. “ಯದಕ್ಕ ಬಂದ್ ಮಾಡ್ಯಾರ ನಮಗ ಗೊತ್ತಿಲ್ರಿ. ಈಗ ನಮ್ಮೂರಿಗೆ ಬಸ್ ಇಲ್ಲಂತ ಹೇಳ್ಯಾರ...” ಎಂದು ಲಿಂಗಸುಗೂರು ತಾಲ್ಲೂಕಿನ ಕಂಕಲ್ ಗ್ರಾಮಕ್ಕೆ ತೆರಳುತ್ತಿದ್ದ ಯಮುನಪ್ಪ ಎಂಬುವವರು ಹೇಳಿದರು.ಆಟೋ ಚಾಲಕರು ಬಂದ್‌ಗೆ ಬೆಂಬಲ ನೀಡಿದ್ದರಿಂದ, ಆಟೋಗಳೂ ರಸ್ತೆಗೆ ಇಳಿಯಲಿಲ್ಲ. ಇದರಿಂದ ವಿವಿಧೆಡೆ ತೆರಳಬೇಕಾದ ಜನರು ತೊಂದರೆ ಪಡಬೇಕಾಯಿತು. ವಾಹನ ಸಂಚಾರವಿಲ್ಲದೇ ಮುಖ್ಯರಸ್ತೆಗಳು ಬಣಗುಟ್ಟಿದವು. ಬಸ್‌ಗಳಿಲ್ಲದೇ ಬಸ್‌ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ವಾಹನಗಳು ಊರ ಹೊರಗೆ ನಿಂತಿದ್ದರಿಂದ, ಜನರು ಅಲ್ಲಿಂದಲೇ ನಡೆದುಕೊಂಡು ಬರುವ ದೃಶ್ಯ ಸಾಮಾನ್ಯವಾಗಿತ್ತು.ಅರ್ಧ ತೆರೆದ ಬಾಗಿಲು!: ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೆಲವು ಖಾಸಗಿ ಶಾಲೆಗಳು ಮೊದಲೇ ಸೂಚನೆ ಕೊಡದ ಪರಿಣಾಮ, ಮಕ್ಕಳು ಶಾಲೆಯವರೆಗೆ ಹೋಗಿ ಬಾಗಿಲು ಮುಚ್ಚಿದ್ದು ನೋಡಿ ವಾಪಸಾದರು. ಹೋಟೆಲ್, ಅಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ ಮುಖ್ಯರಸ್ತೆಯ ಒಳಭಾಗದಲ್ಲಿದ್ದ ಕೆಲವು ಹೋಟೆಲ್‌ಗಳು ಅರ್ಧ ಬಾಗಿಲು ತೆಗೆದು, ಜನರ ಹಸಿವು ತಣಿಸಿದವು. ಇಂಥ ಕಡೆ ವ್ಯಾಪಾರವೂ ಜೋರಾಗಿತ್ತು.

 

ಎಲ್ಲಕ್ಕಿಂತ ಅದೃಷ್ಟ ಖುಲಾಸಿದ್ದು ತಳ್ಳು ಬಂಡಿ ವ್ಯಾಪಾರಸ್ಥರಿಗೆ. ಗ್ರಾಹಕರಿಗೆ ಉಪಾಹಾರ- ಚಹಾ ನೀಡುವ ಸಣ್ಣ ಬಂಡಿಗಳ ಮುಂದೆ ಜನರ ಗುಂಪು ಕಾಣಿಸುತ್ತಿತ್ತು. ಗುಟಖಾ, ಪಾನ್ ಅಂಗಡಿಗಳು ಅರ್ಧ ಭಾಗ ತೆರೆದು, ಹೆಚ್ಚು ದರ ವಸೂಲಿ ಮಾಡಿದವು!

ಪೆಟ್ರೋಲ್ ಪಂಪ್‌ಗಳು ಕಾರ್ಯಸ್ಥಗಿತಗೊಳಿಸಿದವು. ರಿಂಗ್ ರಸ್ತೆಯಲ್ಲಿನ ಪೆಟ್ರೋಲ್ ಪಂಪ್ ಯಥಾಪ್ರಕಾರ ಕೆಲಸ ನಿರ್ವಹಿಸುತ್ತಿದ್ದುದನ್ನು ಗಮನಿಸಿದ ಪ್ರತಿಭಟನಾಕಾರರು, ತಕ್ಷಣ ಅಲ್ಲಿಗೆ ತೆರಳಿ ಮುಚ್ಚಿಸಿದರು.ಗರ್ಜನೆ: ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಸಕ್ರಿಯವಾಗಿ ಬಂದ್‌ನಲ್ಲಿ ಪಾಲ್ಗೊಂಡಿದ್ದು ವಿಶೇಷ. ದ್ವಿಚಕ್ರವಾಹನಕ್ಕೆ ಧ್ವಜ ಕಟ್ಟಿಕೊಂಡು ರಸ್ತೆಯಲ್ಲಿ `ಬೇಕೇ ಬೇಕು... ನ್ಯಾಯ ಬೇಕು~ ಎಂದು ಗರ್ಜಿಸುತ್ತ ಸಾಗಿದರು. ಅರುಣಕುಮಾರ ಪಾಟೀಲ ನೇತೃತ್ವದಲ್ಲಿ ಜೈಕರವೇ ಕಾರ್ಯಕರ್ತರು ಎಲ್ಲೆಡೆ ಸಂಚರಿಸಿ, ಬಂದ್ ಸಫಲವಾಗುವಂತೆ ನೋಡಿಕೊಂಡರು.

 

ಜಗತ್ ವೃತ್ತದಿಂದ ಸಾವಿರಾರು ಜನರು ಮೆರವಣಿಗೆಯಲ್ಲಿ ಹೊರಟರು. ಉರಿಬಿಸಿಲು ಇದ್ದರೂ ಲೆಕ್ಕಿಸದೇ ಇನ್ನಷ್ಟು ಜನರು ಪಾಲ್ಗೊಂಡರು. ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬಂದ ಮೆರವಣಿಗೆಯು, ಸಮಾವೇಶವಾಗಿ ಪರಿವರ್ತನೆಗೊಂಡಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ವೈಜನಾಥ ಪಾಟೀಲ, ಶಾಸಕರಾದ ಶಶೀಲ ನಮೋಶಿ, ಸುನಿಲ್ ವಲ್ಯಾಪುರೆ, ಸುಲಫಲ ಮಠಾಧೀಶ ಮಹಾಂತ ಶಿವಾಚಾರ್ಯರು, ಲಕ್ಷ್ಮಣ ದಸ್ತಿ ಸೇರಿದಂತೆ ಹಲವರು ಮಾತನಾಡಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಮಧ್ಯಾಹ್ನ ಊಟದ ಪ್ಯಾಕೆಟ್ ವಿತರಿಸಲಾಯಿತು.

ಬಂದೋಬಸ್ತ್: ಅಹಿತಕರ ಘಟನೆ ನಡೆಯದಂತೆ ಪೊಲೀಸ್  ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಮುಖ ವೃತ್ತಗಳು, ಮುಖ್ಯರಸ್ತೆಯುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದಾಗ್ಯೂ ದೇವಿನಗರ ಬಡಾವಣೆಯಲ್ಲಿ ಹೊರಟಿದ್ದ ಆಟೋವೊಂದರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿ, ಗಾಜನ್ನು ಜಖಂಗೊಳಿಸಿದರು. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು.ಎಚ್‌ಕೆಸಿಸಿಐ ಅಧ್ಯಕ್ಷ ಗೋಪಾಲಕೃಷ್ಣ ರಘೋಜಿ, ಮುಖಂಡರಾದ ಉಮಾಕಾಂತ ನಿಗ್ಗುಡಗಿ, ಲಿಂಗರಾಜ ಸಿರಗಾಪೂರ, ಕಲ್ಯಾಣರಾವ ಪಾಟೀಲ, ಮಂಜುನಾಥ ನಾಲವಾರಕರ, ನಾಗಲಿಂಗಯ್ಯ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ವಿವಿಧ ಕನ್ನಡಪರ ಹಾಗೂ ಜನಪರ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಇದರಿಂದಾಗಿ ಬಂದ್ ಯಶಸ್ವಿಯಾಯಿತು. ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿಪತ್ರ ರವಾನಿಸಿದ ಮುಖಂಡರು, `ಕೇಂದ್ರ ಸರ್ಕಾರ ಇನ್ನಷ್ಟು ವಿಳಂಬ ಮಾಡಿದರೆ, ಉಗ್ರ ಹೋರಾಟ ಅನಿವಾರ್ಯವಾಗಲಿದೆ~ ಎಂಬ ಎಚ್ಚರಿಕೆಯೊಂದಿಗೆ ಪ್ರತಿಭಟನೆಗೆ ತಾತ್ಕಾಲಿಕ ವಿರಾಮ ಹಾಕಿದರು.

ಪ್ರತಿಕ್ರಿಯಿಸಿ (+)