ಬುಧವಾರ, ಜೂಲೈ 8, 2020
28 °C

ಗುಲ್ಬರ್ಗ ಬಂದ್; ಲಘು ಲಾಠಿ ಪ್ರಹಾರ, ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಲಘು ಲಾಠಿ ಪ್ರಹಾರ, ಮುಚ್ಚಿದ ಅಂಗಡಿಗಳು, ವಾಹನ-ಅಂಗಡಿಗಳಿಗೆ ಕಲ್ಲು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ತರಕಾರಿ, ಪರದಾಡಿದ ಜನತೆ, ಸಂಚಾರ ಅಸ್ತವ್ಯಸ್ತ, ಬಿಕೋ ಎಂದ ಮುಖ್ಯ ರಸ್ತೆಗಳು, ಬಿಜೆಪಿ ಕಾರ್ಯಕರ್ತರ ಬಂಧನ...ಭೂ ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದೂರು ದಾಖಲಿಸಲು ‘ಜಸ್ಟೀಸ್ ಲಾಯರ್ಸ್‌ ಫೋರಂ’ ಮಾಡಿದ್ದ ಮನವಿಯನ್ನು ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರು ಪುರಸ್ಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಘಟಕ ನೀಡಿದ್ದ ಗುಲ್ಬರ್ಗ ಬಂದ್‌ಗೆ ಶನಿವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.ಲಾಠಿ ಪ್ರಹಾರ

ನಗರದ ಜನಜೀವನವು ಬೆಳಿಗ್ಗೆ 10 ಗಂಟೆ ತನಕ ಸಹಜವಾಗಿತ್ತು. 10ಕ್ಕೆ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ನೆರೆದ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಜರೆದರು.  ವೃತ್ತದಲ್ಲಿ ನಿಂತು ನಾಲ್ಕು ನಿಟ್ಟಿನಿಂದ ಬಂದ ವಾಹನಗಳನ್ನು ವಾಪಾಸ್ ಕಳುಹಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎ. ಪದ್ಮನಯನ ಸ್ಥಳಕ್ಕೆ ಆಗಮಿಸಿದರು. ಒಂದೆಡೆ ಮುಖಂಡರು ಘೋಷಣೆ ಕೂಗುತ್ತಿದ್ದಂತೆಯ ಇತ್ತ ಕೆಲವು ವಾಹನಗಳ, ಕಟ್ಟಡಗಳತ್ತ ಕಲ್ಲು ತೂರಾಟ ನಡೆಯಿತು. ತಮ್ಮ ಸಮ್ಮುಖದಲ್ಲೇ ಅಹಿತಕರ ಘಟನೆಗಳು ನಡೆಯುತ್ತಿರುವುದನ್ನು ಕಂಡ ಎಸ್ಪಿ ಕುಪಿತಗೊಂಡರು. ‘ಕಾನೂನನ್ನು ಕೈಗೆತ್ತಿಕೊಳ್ಳದಂತೆ’ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ತೇಲ್ಕೂರ ಅವರಿಗೆ ಮನವಿ ಮಾಡಿದರು. ‘ಶಾಂತಿ ಕಾಪಾಡುತ್ತೇವೆ’ ಎಂದು ತೇಲ್ಕೂರ ಭರವಸೆ ನೀಡಿದರು. ಎಸ್ಪಿ ಸ್ಥಳದಿಂದ ತೆರಳಿದ ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಂ ಪಾಟೀಲ್, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮತ್ತಿತರ ಮುಖಂಡರು ಆಗಮಿಸಿದರು.ಪ್ರತಿಭಟನೆ ಘೋಷಣೆಗಳು ಜೋರಾಗುತ್ತಿದ್ದಂತೆಯೇ ಕೆಲ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಪ್ರತಿಭಟನಾಕಾರರು ಸರ್ಕಾರಿ ಜೀಪಿಗೆ, ಅಂಗಡಿ ಮುಗ್ಗಟ್ಟುಗಳಿಗೆ ಕಲ್ಲು ತೂರಾಟ ಹಾಗೂ ರಸ್ತೆಯಲ್ಲಿ ಬೆಂಕಿ ಹಾಕಿದರು. ಕೆಲವರು ರೈಲ್ವೆ ರಸ್ತೆಯಲ್ಲಿರುವ ಕೆಲವು ಅಂಗಡಿಗಳಿಂದ  ಟೊಮ್ಯಾಟೋ, ಈರುಳ್ಳಿ... ತರಕಾರಿಗಳನ್ನು ರಸ್ತೆಗೆಸುದ ದಾಂಧಲೆ ನಡೆಸಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೆಲವರಿಗೆ ಸಣ್ಣ ಗಾಯಗಳಾದವು. ಉಳಿದಂತೆ ನೆರೆದಿದ್ದ ಜನತೆ ದಿಕ್ಕುಪಾಲಾಗಿ ಓಡಿದರು.  ಅಲ್ಲದೇ ಬಿಜೆಪಿ ಮುಖಂಡರನ್ನು ಬಂಧಿಸಿ ಕರೆದೊಯ್ದರು.ಸುಪರ್ ಮಾರ್ಕೆಟ್ ಬಳಿ ಪ್ರತಿಭಟನೆ ನಡೆಯಿತು. ದೊಡ್ಡ ದೊಡ್ಡ ಅಂಗಡಿಗಳು ಮುಚ್ಚಿದ್ದವು. ಆದರೆ ತರಕಾರಿ ಮಾರುಕಟ್ಟೆ ಮತ್ತಿತರ ಅಂಗಡಿಗಳು ಮತ್ತೆ ತೆರೆದುಕೊಂಡವು. ಸಂಜೆಯಾಗುತ್ತಲೇ ನಗರ ಸಹಜ ಸ್ಥಿತಿ ಮರಳಿತು. ಸಂಚಾರ

ಬೆಳಿಗ್ಗೆ 10ರ ಬಳಿಕ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರಮುಖ ರಸ್ತೆಗಳಲ್ಲಿ, ಚೌಕ, ಬಸ್ ನಿಲ್ದಾಣ, ಮಾರುಕಟ್ಟೆ, ಜಗತ್ ಮತ್ತಿತರೆಡೆ ಬಿಜೆಪಿ ಕಾರ್ಯಕರ್ತರು ವಾಹನಗಳನ್ನು ತಡೆದು ನಿಲ್ಲಿಸಿದರು. ಹೀಗಾಗಿ ಒಳರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಅಲ್ಲದೇ ದ್ವಿಚಕ್ರ ವಾಹನಗಳೇ ಹೆಚ್ಚಾಗಿ ಕಂಡುಬಂದವು. ನಗರವನ್ನು ಸಂಪರ್ಕಿಸುವ ಆಳಂದ ನಾಕಾ, ಗಂಜ್, ವರ್ತುಲ ರಸ್ತೆಗಳಲ್ಲಿಯೂ ಬಿಜೆಪಿ ಕಾರ್ಯಕರ್ತರು ಅಡ್ಡನಿಂತು ವಾಹನ ಸಂಚಾರ ತಡೆದರು. ‘ಬಂದ್‌ನಿಂದಾಗಿ ನಮ್ಮದೇ ಜನಗಳಿಗೆ ತೊಂದರೆ ಆಗುತ್ತಿದೆ ಎಂದು ಗೊತ್ತಿದೆ’ ಹಲವರು ಗೊಣಗುಡುತ್ತಿದ್ದರು.ಬಸ್‌ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಬಸ್ ಇಲ್ಲದೇ ಹಿಂತಿರುಗಿದರು. ಕೆಲವರು ಮನೆಗೆ ಹೋಗಲು ಆಟೋ, ಬಸ್ ವಾಹನಗಳು ಸಿಗದ ಕಾರಣ ನಡೆದುಕೊಂಡು ಹೋದರು. ಹಲವು ಹೋಟೆಲ್- ಮುಂಗಟ್ಟುಗಳು ಮುಚ್ಚಿದ್ದವು. ದೈನಂದಿನ ಕೂಲಿಯಿಂದ ಜೀವನ ಸಾಗಿಸುವ ಮಂದಿ ಕೆಲಸವಿಲ್ಲದೇ ಕಂಗೆಟ್ಟರು. ಟಾಂಗಾ, ಆಟೋ, ಸೈಕಲ್ ಗಾಡಿ ಮಂದಿ ಸಂಚಾರವಿಲ್ಲದೇ ನಷ್ಟ ಅನುಭವಿಸಿದರು. ಸರ್ಕಾರ ರಜೆ ಘೋಷಿಸದಿದ್ದರೂ ಬಹುತೇಕ ಶಾಲಾ-ಕಾಲೇಜುಗಳು ಮುಚ್ಚಿದ್ದ ದೃಶ್ಯಗಳು ಕಂಡುಬಂತು. ಸರ್ಕಾರಿ ಕಚೇರಿಗಳು ಅರ್ಧಂಬಂರ್ಧ ತೆರೆದಿದ್ದು, ಜನನಿಬಿಡತೆ ಕಂಡು ಬರಲಿಲ್ಲ. ಎಲ್ಲೆಡೆ ಬಿಜೆಪಿ ಧ್ವಜ ಹಾಗೂ ಖಾಕಿ ಪಡೆಗಳೇ ಕಂಗೊಳಿಸಿದವು. ಸಂಜೆಯಾಗುತ್ತಲೇ ಗುಲ್ಬರ್ಗ ಜನಜೀವನ ಮತ್ತೆ ಹಳಿಗೆ ಮರಳಿತು.

 

ಮಾರ್ಕೆಟ್ ಮೇಲೆ ಬಂದ್ ಎಫೆಕ್ಟ್...

‘ತರಕಾರಿ’ಅಗ್ಗ: ಕೈಗೆಟುಕದ ಈರುಳ್ಳಿ-ಬೆಳ್ಳುಳ್ಳಿ


ಗುಲ್ಬರ್ಗ: ಬದನೆ ಕೆಜಿಗೆ 10 ರೂ., ಕ್ಯಾರೆಟ್ ಕೆಜಿಗೆ 10 ರೂ., ಬೀನ್ಸ್ ಕೆಜಿಗೆ 10 ರೂ., ಟೊಮ್ಯಾಟೋ 12 ರೂ,, ಮೆಂತೆ-ಪಾಲಕ್-ಕೊತ್ತಂಬರಿ ಸೊಪ್ಪು ಏಳು ಕಟ್ಟಕ್ಕೆ ಐದು ರೂ.,  -ತರಕಾರಿ ದರ ಕಂಡು ಯಾವ ದೇಶದಲ್ಲಿ ಎಂದು ಕೇಳಬೇಡಿ, ಅಚ್ಚರಿಯಿಂದ ಹೌಹಾರಬೇಡಿ. ಹಣದುಬ್ಬರ ಇಳಿಯಿತೇ ಎಂದು ಪರಿಭಾವಿಸಬೇಡಿ. ಇಲ್ಲ ರಾಜ್ಯ ಸರ್ಕಾರ ‘ಮಾರುಕಟ್ಟೆ ಮಧ್ಯ ಪ್ರವೇಶ’ ಮಾಡಿತೇ ಎಂಬ ಸಂತಸವೂ ಬೇಡ. ಇದು ನಿಜವಾಗಿಯೂ ಗುಲ್ಬರ್ಗ ಮಾರುಕಟ್ಟೆಯಲ್ಲಿನ ತರಕಾರಿ ದರ. ಆದರೆ ಶನಿವಾರದ ಬಂದ್ ಸಂದರ್ಭದಲ್ಲಿ ಕಂಡು ಬಂದವು. ಬಂದ್ ಎಫೆಕ್ಟ್ ತರಕಾರಿ ಮೇಲೂ ಗೋಚರಿಸಿತ್ತು.ಮಕರ ಸಂಕ್ರಾತಿ ಸಂದರ್ಭದಲ್ಲಿ ಕೆಜಿ ಒಂದಕ್ಕೆ 80 ರೂಪಾಯಿ ತಲುಪಿದ್ದ ಬದನೆ ಶನಿವಾರ ಅದೇ ಹಣಕ್ಕೆ ಎಂಟು ಕೆಜಿ ದೊರಕುತ್ತಿತ್ತು. ಅದರೂ ಕೊಳ್ಳುವವರು ಮುಗ್ಗರಿಸುತ್ತಿಲ್ಲ. ನಲವತ್ತರ ಆಸುಪಾಸಿನಲ್ಲಿದ್ದ ಬೀನ್ಸ್ 10ರಿಂದ 20ರ ಮಧ್ಯೆ ಸುತ್ತುತ್ತಿತ್ತು. ಕ್ಯಾರೆಟ್ ರಾಶಿ ಬಿದ್ದು ಹೊರಳಾಡುವಂತಿತ್ತು. ಇನ್ನು ಸೊಪ್ಪುಗಳಂತು ತೀರಾ ಕಡಿಮೆ. ಅರ್ಧಕ್ಕರ್ಧ ದರಕ್ಕೆ ಬಿಕರಿಯಾದವು. ಬಂದ್‌ನಿಂದಾಗಿ ಕೆಲವು ತರಕಾರಿ ಮಾರಾಟಗಾರರು ದರ ಇಳಿಕೆ ಮಾಡಿದ್ದರು. ಸಂಜೆಯೊಳಗೆ ಮಾರಟಗೊಳ್ಳಬೇಕೆಂಬ ತರಾತುರಿಯಲ್ಲಿ ಅವರು ಇದ್ದಂತೆ ಕಂಡುಬಂತು. ಆದರೆ ಗಗನಕ್ಕೇರಿದ ಈರುಳ್ಳಿ-ಬೆಳ್ಳುಳ್ಳಿ ಮತ್ತಿತರ ದಿನಸಿಗಳು ಕೆಳಗಿಳಿಯಲೇ ಇಲ್ಲ.ಆದರೆ ಸಂಜೆಯಾಗುತ್ತಲೇ ಮಾರುಕಟ್ಟೆ ಎಂದಿನಂತೆ ತುಂಬಿ ತುಳುಕಿತು. ಸಂಚಾರ ಸಹಜ ಸ್ಥಿತಿಗೆ ಮರಳುತ್ತಲೇ ಜನ ಮಾರುಕಟ್ಟೆಗೆ ದೌಡಾಯಿಸಿದರು. ದೈನಂದಿನ ದಿನಸಿ-ತರಕಾರಿ ಕೊಳ್ಳಲು ಎಂದಿನಂತೆ ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂತು.ಕೆಲವು ಹೋಟೆಲ್, ಚಹಾದಂಗಡಿಗಳನ್ನು ತೆರೆಯುವ ತರಾತುರಿಯಲ್ಲಿದ್ದ ಮಾಲೀಕ-ಕಾರ್ಮಿಕರು ಅರ್ಧ ತೆರೆದು ಇಣುಕುತ್ತಿದ್ದ ದೃಶ್ಯಗಳೇ ಹೆಚ್ಚಾಗಿತ್ತು. ಇದು ತರಕಾರಿ- ಹೋಟೆಲ್‌ಗಳ ಸ್ಥಿತಿಯಾದರೆ ಆಟೋ ದರಗಳು ಮಾತ್ರ ವಿರುದ್ಧ ದಿಕ್ಕಿನಲ್ಲಿದ್ದವು. ಕೆಲವು ಅಟೋ ಚಾಲಕರು ದುಪ್ಪಟ್ಟಿಗಿಂತಲೂ ಹೆಚ್ಚುವರಿ ಹಣದ ಬೇಡಿಕೆ ಇಟ್ಟ ಬಗ್ಗೆ ಪ್ರಯಾಣಿಕರು ದೂರಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.