ಗುಲ್ಬರ್ಗ: ಮದುವೆ ನೆಪದಲ್ಲಿ ಅಕ್ರಮ ಚಟುವಟಿಕೆ

7

ಗುಲ್ಬರ್ಗ: ಮದುವೆ ನೆಪದಲ್ಲಿ ಅಕ್ರಮ ಚಟುವಟಿಕೆ

Published:
Updated:

ಗುಲ್ಬರ್ಗ: ಬಡ ಹೆಣ್ಣು ಮಕ್ಕಳನ್ನು ಮದುವೆಯಾಗಿ ವಂಚಿಸುವ ಜಾಲದ ಬಗ್ಗೆ ಚಿಂತಾಮಣಿ ಮಹಿಳಾ ಒಕ್ಕೂಟವು ಶುಕ್ರವಾರ ಜಿಲ್ಲಾಧಿಕಾರಿಗೆ ದೂರು ನೀಡಿದೆ.ರಾಜಸ್ತಾನ, ದೆಹಲಿ, ಮುಂಬಯಿ ಮೂಲದವರು ಎಂದು ಹೇಳಿಕೊಂಡು ಹೆಣ್ಣು ಮಕ್ಕಳಿರುವ ಬಡವರ ಮನೆಗೆ ಬರುತ್ತಾರೆ. ಆ ಕುಟುಂಬಕ್ಕೆ ಸುಮಾರು 50 ಸಾವಿರ ರೂಪಾಯಿ ನೀಡಿ, ಯುವತಿಯನ್ನು ಮದುವೆ (ಕೆಲವೊಮ್ಮೆ ಬಾಲ್ಯವಿವಾಹ) ಆಗುತ್ತಾರೆ. ಬಳಿಕ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಯಂಥ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ ಎಂದು ಮಹಿಳೆಯರು ದೂರಿದ್ದಾರೆ.ಚಿತ್ತಾಪುರ, ಕಾಳಗಿ, ಆಳಂದದಲ್ಲಿ ಇಂತಹ ಮದುವೆಗಳು ನಡೆದಿದ್ದು, ಬಳಿಕ ಯುವತಿಯರ ಪತ್ತೆ ಇಲ್ಲ. ಆದರೆ ಇತ್ತೀಚೆಗೆ ಮದುವೆಯಾದ ಕಾಳಗಿಯ ಒಬ್ಬ ಯುವತಿ ದೆಹಲಿಯಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಆಗ ಈ ವಿಷಯ ಬಹಿರಂಗಗೊಂಡಿದೆ. ಅಲ್ಲದೇ ಈ ಜಾಲಕ್ಕೆ ಸ್ಥಳೀಯ ಏಜೆಂಟರು ಇದ್ದಾರೆ ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.ಕಾಳಗಿಯಲ್ಲಿ ಎರಡು ವಿವಾಹ, ಆಳಂದ ತಾಲ್ಲೂಕಿನ ಚಿಂಚೋಳಿಯಲ್ಲಿ ನಡೆದ ವಿವಾಹ ಪ್ರಯತ್ನ ಮತ್ತಿತರ ಪ್ರಕರಣಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.ಈ ವಿಚಾರವು ಮಹಿಳಾ ಸಮಖ್ಯಾ ತಿಂಗಳಿಗೊಮ್ಮೆ ನಡೆಸುವ ಜಿಲ್ಲಾ ನಾರಿಯರ ಸಭೆಯಲ್ಲಿ ಬೆಳಕಿಗೆ ಬಂದಿದೆ ಎಂದು ರಶೀದಾ, ಪದ್ಮಾವತಿ ಕೆ. ಅಂಬೂರೆ, ಮಲ್ಲಮ್ಮ, ಭೀಮಾಬಾಯಿ, ಸರಸ್ವತಿ ಮತ್ತಿತರರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry