ಮಂಗಳವಾರ, ನವೆಂಬರ್ 19, 2019
28 °C

ಗುಲ್ಬರ್ಗ: ಮಹಿಳೆಯರಿಗಿಲ್ಲ ಮಣೆ

Published:
Updated:

ಗುಲ್ಬರ್ಗ: ಹೆಣ್ಣು ಶಿಶುಗಳ ಮಾರಾಟ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಮತ್ತಿತರ ಸಮಸ್ಯೆಗಳಿಂದ ಸುದ್ದಿ ಮಾಡಿದ ಗುಲ್ಬರ್ಗ ಜಿಲ್ಲೆಯ ರಾಜಕೀಯದಲ್ಲೂ ಮಹಿಳೆಯರು ನಿರ್ಲಕ್ಷಿತರಾಗಿದ್ದಾರೆ.ಈ ಬಾರಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ 131 ಅಭ್ಯರ್ಥಿಗಳ ಪೈಕಿ ಕೇವಲ 8 ಮಹಿಳಾ ಅಭ್ಯರ್ಥಿ ಗಳಿದ್ದಾರೆ.  ಆದರೆ ಅವರಾರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲ. ರಾಷ್ಟ್ರೀಯ ಅಧ್ಯಕ್ಷೆಯನ್ನು ಹೊಂದಿದ ಕಾಂಗ್ರೆಸ್, ಲೋಕಸಭಾ ವಿರೋಧ ಪಕ್ಷದ ನಾಯಕಿಯ ಬಿಜೆಪಿ, ಮಹಿಳೆಯೇ ತೆನೆ ಹೊತ್ತ ಜೆಡಿಎಸ್, `ಭಾಗ್ಯಲಕ್ಷ್ಮಿ ಯೋಜನೆ' ಹೆಸರಲ್ಲಿ ಮತ ಕೇಳುತ್ತಿರುವ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಒಬ್ಬ ಮಹಿಳೆಯನ್ನೂ  ಕಣಕ್ಕಿಳಿಸಿಲ್ಲ.ಜಿಲ್ಲೆಯ ಜನಸಂಖ್ಯೆ 25,64,892 (2011 ಜನಗಣತಿ). ಈ ಪೈಕಿ 12,57,831 ಮಹಿಳೆಯರಿದ್ದಾರೆ. ಪ್ರತಿ ಸಾವಿರ ಪುರುಷರಿಗೆ 962ರಂತೆ ಜನಸಂಖ್ಯೆಯಲ್ಲಿ ಶೇ 49ರಷ್ಟು ಮಹಿಳೆಯರು.ಐದು ಕ್ಷೇತ್ರಗಳಲ್ಲಿ (ಅಫಜಲಪುರ, ಸೇಡಂ, ಚಿಂಚೋಳಿ, ಆಳಂದ ಮತ್ತು ಗುಲ್ಬರ್ಗ ಗ್ರಾಮೀಣ) ಮಹಿಳಾ ಸ್ಪರ್ಧಿಗಳೇ ಇಲ್ಲ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ತಲಾ ಎರಡು ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ನಾಲ್ವರು (ಜೇವರ್ಗಿ- ಕೌಸರ್ ಬೇಗಂ, ಚಿತ್ತಾಪುರ-ರಮಾದೇವಿ, ಗುಲ್ಬರ್ಗ ಉತ್ತರ- ಶ್ಯಾಮಲಾ ಮತ್ತು ಸೈಯ್ಯದ್ ರಜಿಯಾ ಬೇಗಂ) ಪಕ್ಷೇತರರು. ಜೇವರ್ಗಿಯಲ್ಲಿ ಅಖ್ತರ್ ಪರ್ವೀನ್ (ಎಸ್‌ಪಿ), ಚಿತ್ತಾಪುರದಲ್ಲಿ ಧನಲಕ್ಷ್ಮಿ ರಾಠೋಡ್ (ಡಬ್ಲ್ಯೂಪಿಐ), ಗುಲ್ಬರ್ಗ ದಕ್ಷಿಣದಲ್ಲಿ ವಿ.ನಾಗಮ್ಮ (ಎಸ್‌ಯುಸಿಐ) ಮತ್ತು ಪಾರ್ವತಿ ಜಗನ್ನಾಥ ಚವ್ಹಾಣ್ (ಎನ್‌ಡಿಪಿ) ಮಾತ್ರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು.2010ರಲ್ಲಿ ಗುಲ್ಬರ್ಗ ದಕ್ಷಿಣಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಜೆಡಿಎಸ್‌ನ ಅರುಣಾ ಸಿ. ಪಾಟೀಲ ರೇವೂರ ಜಿಲ್ಲೆಯ ಏಕೈಕ ಶಾಸಕಿ ಆಗಿದ್ದರು. 1956ರ ರಾಜ್ಯ ಪುನರ್‌ವಿಂಗಡಣೆ ಬಳಿಕ 1957ರಿಂದ ಈ ತನಕ ನಡೆದ ಚುನಾವಣೆಗಳಲ್ಲಿ ಚಿತ್ತಾಪುರ, ಸೇಡಂ, ಚಿಂಚೋಳಿ, ಜೇವರ್ಗಿ, ಅಫಜಲಪುರ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳು ಆಯ್ಕೆಯೇ ಆಗಿಲ್ಲ. 2008ರ ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಅಸ್ತಿತ್ವಕ್ಕೆ ಬಂದ ಗುಲ್ಬರ್ಗ ಗ್ರಾಮೀಣ ಮತ್ತು ಗುಲ್ಬರ್ಗ ಉತ್ತರ ಕ್ಷೇತ್ರಗಳಲ್ಲೂ ಮಹಿಳೆಯರು ಚುನಾಯಿತರಾಗಿಲ್ಲ.ಗುಲ್ಬರ್ಗ ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಕೀರ್ತಿ ಆಳಂದ ಕ್ಷೇತ್ರಕ್ಕೆ ಸಲ್ಲುತ್ತದೆ. 1961ರಲ್ಲಿ ಕಾಂಗ್ರೆಸ್‌ನ ಲಲಿತಾಬಾಯಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿತ್ತು. ಮುಂದೆ ಕಮಲಾಪುರ ಕ್ಷೇತ್ರದಿಂದ ಲಲಿತಾಬಾಯಿ 1962 ಮತ್ತು 1967ರಲ್ಲಿ ಗೆದ್ದಿದ್ದರು. ನಂತರ ಚಿತ್ತಾಪುರ ಕ್ಷೇತ್ರದಿಂದ 1973ರಲ್ಲಿ ಕಾಂಗ್ರೆಸ್‌ನ ವಿಜಯಾ ದೇಸಾಯಿ ಆಯ್ಕೆಯಾಗಿದ್ದರು.1973ರ ಬಳಿಕ ಆಯ್ಕೆಯಾದ ಮಹಿಳಾ ಅಭ್ಯರ್ಥಿ ಅರುಣಾ ಸಿ. ಪಾಟೀಲ ರೇವೂರ ಮಾತ್ರ. ಆದರೆ ಅವರು ಈ ಬಾರಿ ಸ್ಪರ್ಧಿಸದೇ ಮಗನ ಬೆನ್ನಿಗೆ ನಿಂತಿದ್ದಾರೆ. ಲಲಿತಾಬಾಯಿ ಮತ್ತು ಅರುಣಾ ಅವರು ಪತಿ ನಿಧನದಿಂದ  ತೆರವಾದ ಸ್ಥಾನ ತುಂಬಲು ಮೊದಲ ಬಾರಿಗೆ ಕಣಕ್ಕಿಳಿದಿದ್ದರು.

ಪ್ರತಿಕ್ರಿಯಿಸಿ (+)