ಗುಲ್ಬರ್ಗ: ರಿಯಾಯ್ತಿ ದರದಲ್ಲಿ 40 ಬಸ್‌ಗಳ ಓಡಾಟ:ಇಂದಿನಿಂದ ನೃಪತುಂಗ ನಗರ ಸಾರಿಗೆ ಸೇವೆ

7

ಗುಲ್ಬರ್ಗ: ರಿಯಾಯ್ತಿ ದರದಲ್ಲಿ 40 ಬಸ್‌ಗಳ ಓಡಾಟ:ಇಂದಿನಿಂದ ನೃಪತುಂಗ ನಗರ ಸಾರಿಗೆ ಸೇವೆ

Published:
Updated:

ಗುಲ್ಬರ್ಗ: ಗುಲ್ಬರ್ಗ ನಗರದ ಜನಸಾಮಾನ್ಯರು ಬಹುದಿನದಿಂದ ನಿರೀಕ್ಷಿಸುತ್ತಿದ್ದ ಸುಸಜ್ಜಿತ ನಗರ ಸಾರಿಗೆ ಸೇವೆಯು ಇದೇ 17ರಂದು ಬುಧವಾರ ಸಂಜೆಯಿಂದ ಆರಂಭವಾಗಲಿದ್ದು, ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು `ನೃಪತುಂಗ ನಗರ ಸಾರಿಗೆ ಸೇವೆ~ಗೆ ಚಾಲನೆ ನೀಡಲಿದ್ದಾರೆ.ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.`ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಗುಲ್ಬರ್ಗದಲ್ಲಿ ನಗರ ಸಂಚಾರ ಸೇವೆ ಆರಂಭಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ಏಳು ಜಿಲ್ಲೆಗಳಲ್ಲೂ ಈ ಸೇವೆ ಆರಂಭವಾಗಲಿದೆ.ಸಂಚಾರ ಮತ್ತು ಸಾರಿಗೆಗೆಯ ಸಮಗ್ರ ಯೋಜನೆ (ಸಿಟಿಟಿಪಿ) ಕೈಗೊಂಡಿದ್ದ ಅಧ್ಯಯನ ವರದಿ ಅನ್ವಯ ಮೊದಲ ಹಂತದಲ್ಲಿ ಗುಲ್ಬರ್ಗ ನಗರ ಸಂಚಾರಕ್ಕೆ 40 ಅತ್ಯಾಧುನಿಕ ಬಸ್ ಖರೀದಿಸಲಾಗಿದೆ~ ಎಂದರು. ಕರ್ನಾಟಕ ರಾಜ್ಯ ನಗರ ಸಾರಿಗೆ ನಿಧಿಯಿಂದ ರೂ. 2 ಕೋಟಿ ಹಾಗೂ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ರೂ. 6.66 ಕೋಟಿ ಕ್ರೋಢಿಕರಿಸಿಕೊಂಡು ಉತ್ಕೃಷ್ಟ ತಂತ್ರಜ್ಞಾನವುಳ್ಳ ವಾಹನ ಖರೀದಿಸಲಾಗಿದೆ.

 

ಪ್ರತಿ ಬಸ್‌ಗೆ ರೂ. 22.66 ಲಕ್ಷ ವೆಚ್ಚ ನೀಡಲಾಗಿದೆ. ಮುಂದಿನ ವರ್ಷ ಮತ್ತೆ 30 ಬಸ್ ಸೇವೆ ಅಳವಡಿಸಲಾಗುವುದು. ಈಗಾಗಲೇ ನಗರ ಸಂಚಾರದಲ್ಲಿರುವ 20 ಬಸ್‌ಗಳನ್ನು ಹಂತಹಂತವಾಗಿ ಕೈಬಿಡಲಾಗುವುದು ಎಂದು ವಿವರಿಸಿದರು.ನಗರದ 13 ಮಾರ್ಗಗಳಲ್ಲಿ ಬಸ್ ಕಾರ್ಯಾಚರಣೆ ಮಾಡಲಿದ್ದು, ಪ್ರತಿ 10 ನಿಮಿಷಕ್ಕೊಂದು ಬಸ್ ಸರತಿ ದೊರೆಯಲಿದೆ. ಪ್ರತಿ ವಾಹನಕ್ಕೂ ಮಾರ್ಗಸಂಖ್ಯೆಯ ಜೊತೆಗೆ ಸಂಚರಿಸುವ ಮಾರ್ಗಗಳನ್ನು ಪ್ರದರ್ಶಿಸುವ ಎಲ್‌ಇಡಿ ನಾಮಫಲಕ ಅಳವಡಿಸಲಾಗಿದೆ.ಪ್ರತಿ ಬಸ್‌ನಲ್ಲೂ ಜಿಪಿಎಸ್ ತಂತ್ರಜ್ಞಾನದ ಮೂಲಕ ಬಸ್ ನಿಲುಗಡೆಗಳ ಬಗ್ಗೆ ಧ್ವನಿವರ್ದಕಗಳಲ್ಲಿ ಸ್ವಯಂಘೋಷಣೆಯಾಗುವ ವ್ಯವಸ್ಥೆ ಇದೆ. ಸ್ವಯಂಚಾಲಿತ ದ್ವಾರಗಳನ್ನು ಅಳವಡಿಸಲಾಗಿದ್ದು, ಬಸ್ ಬಾಗಿಲುಗಳಲ್ಲಿ ಜನರು ಜೋತು ಬೀಳುವುದು ಹಾಗೂ ಬಸ್ ನಿರ್ವಾಹಕರು ಪದೆಪದೆ ಬಾಗಿಲು ಹಾಕುವ ಕಿರಿಕಿರಿ ತಪ್ಪಲಿದೆ ಎಂದು ತಿಳಿಸಿದರು.ನಗರದಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲವಾಗಲು 33 ಆಧುನಿಕ ಮಾದರಿಯ ನಗರ ಸಾರಿಗೆ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದರು.ರಿಯಾಯ್ತಿ ಪ್ರಯಾಣ ದರ: ನಗರ ಸಾರಿಗೆ ವಾಹನಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಪ್ರತಿ ಹಂತಕ್ಕೆ ರೂ. 3 ಹಾಗೂ ಗರಿಷ್ಠ ರೂ. 5 ಬಸ್ ಪ್ರಯಾಣ ದರ ನಿಗದಿಗೊಳಿಸಲಾಗಿದೆ. ಆಟೋ ಪ್ರಯಾಣಕ್ಕೆ ಹೋಲಿಸಿದರೆ, ಇದು ತೀರಾ ಕಡಿಮೆಯಾಗುವ ಮೂಲಕ ಜನರ ಹೊರೆ ಕಡಿಮೆಯಾಗುವುದು.ಉದಾ: ಕೇಂದ್ರ ಬಸ್ ನಿಲ್ದಾಣದಿಂದ ಸೂಪರ್ ಮಾರ್ಕೆಟ್‌ಗೆ ರೂ. 3 ಮತ್ತು ಸೂಪರ್ ಮಾರ್ಕೆಟ್‌ನಿಂದ ಬುದ್ಧವಿಹಾರಕ್ಕೆ ರೂ. 5 ನಿಗದಿಗೊಳಿಸಲಾಗಿದೆ. `ನೃಪತುಂಗ ನಗರ ಸಾರಿಗೆ ಸೇವೆ~ಯಲ್ಲಿ ಒಂದು ದಿನದ ಬಸ್‌ಪಾಸ್ ರೂ. 20ಕ್ಕೆ ನೀಡಲಾಗುವುದು. ಮಾಸಿಕ ಬಸ್‌ಪಾಸ್ ಪಡೆಯಲು ರೂ. 500 ನೀಡಬೇಕಾಗುತ್ತದೆ. ಬೆಳಿಗ್ಗೆ 6ರಿಂದ ರಾತ್ರಿ 10.30ರ ನಡುವೆ ನಗರ ಸಾರಿಗೆ ಸೇವೆ ಲಭ್ಯ ಇರುವುದು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry