ಭಾನುವಾರ, ಮೇ 22, 2022
27 °C

ಗುಲ್ಬರ್ಗ ರೈಲು ನಿಲ್ದಾಣ ಉನ್ನತೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಿಲ್ದಾಣದ ವಿಸ್ತರಣೆ, ಸ್ವಯಂ ಚಾಲಿತ ಮೆಟ್ಟಿಲುಗಳು (ಎಸ್ಕಲೇಟರ್) ಹಾಗೂ ಮತ್ತಷ್ಟು ಪ್ಲಾಟ್‌ಫಾರ್ಮ್ ನಿರ್ಮಿಸುವುದು ಸೇರಿ ಇನ್ನು ಅನೇಕ ಸೌಲಭ್ಯಗಳು ಗುಲ್ಬರ್ಗ ರೈಲ್ವೆ ನಿಲ್ದಾಣದಲ್ಲಿ ಶೀಘ್ರದಲ್ಲೆ ಪ್ರಯಾಣಿಕರಿಗೆ ಲಭ್ಯವಾಗಲಿವೆ.ಮುಂಬೈ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಬಿ.ಪಿ. ಖಾರೆ ಅವರು ವಿವಿಧ ಅಧಿಕಾರಿಗಳ ತಂಡದೊಂದಿಗೆ ಶನಿವಾರ ವಿಶೇಷ ರೈಲಿನ ಮೂಲಕ ಖುದ್ದಾಗಿ ಆಗಮಿಸಿ ಎರಡು ಗಂಟೆಗೂ ಹೆಚ್ಚು ಕಾಲ ಹೊಸದಾಗಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಮೀಕ್ಷೆ ನಡೆಸಿದರು. ಗುಲ್ಬರ್ಗ, ವಾಡಿ ಹಾಗೂ ಶಹಾಬಾದ್ ರೈಲು ನಿಲ್ದಾಣ, ಗೋದಾಮುಗಳು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ಮಾಡುತ್ತಾ, ಮಾಡಬೇಕಾದ ಹೊಸ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ, `ಈ ಭಾಗದ ಜನರ ನಿರೀಕ್ಷೆ ಸಾಕಷ್ಟಿವೆ. ಹೊಸ ರೈಲು ಆರಂಭಿಸುವುದು, ಕೆಲವು ರೈಲುಗಳ ನಿಲುಗಡೆ ಹಾಗೂ ಹೊಸ ಗೋದಾಮು ನಿರ್ಮಿಸುವಂತೆ ಈಗಾಗಲೇ ಬೇಡಿಕೆ ಸಲ್ಲಿಸಿದ್ದಾರೆ.ಗುಲ್ಬರ್ಗ ರೈಲ್ವೆ ನಿಲ್ದಾಣ ವಿಸ್ತರಣೆ ಮಾಡಲು ಸಾಕಷ್ಟು ಅವಕಾಶವಿದೆ. ಇದೆಲ್ಲದರ ಬಗ್ಗೆ ಸಮೀಕ್ಷೆ ಮಾಡಲಾಗಿದೆ' ಎಂದರು. `ಸೋಲಾಪುರ-ಯಶವಂತಪುರ ಸೂಪರ್ ಫಾಸ್ಟ್ ರೈಲನ್ನು ಪ್ರತಿದಿನ ಓಡಿಸಲು ಪ್ರಸ್ತಾವ ಕಳುಹಿಸಲಾಗಿದೆ. ಮೂರು ಲೆವೆಲ್ ಕ್ರಾಸಿಂಗ್ ನಿರ್ಮಿಸಬೇಕಿದೆ. ಹೈದರಾಬಾದ್ ಕರ್ನಾಟಕ ಕೈಗಾರಿಕೆ ವಾಣಿಜ್ಯ ಸಂಸ್ಥೆಯು ಗೋದಾಮು ನಿರ್ಮಿಸುವಂತೆ ಮನವಿ ಸಲ್ಲಿಸಿದೆ. ಹೊಸ ರೈಲು ಆರಂಭಿಸುವಂತೆ ಮನವಿಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ತೀರ್ಮಾನಿಸಲಾಗುವುದು' ಎಂದು ತಿಳಿಸಿದರು.`ಸದ್ಯ ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಮೂರು ಪ್ಲಾಟ್‌ಫಾರ್ಮ್‌ಗಳಿದ್ದು, ಇನ್ನೊಂದು ಪ್ಲಾಟ್‌ಫಾರ್ಮ್ ನಿರ್ಮಿಸಲಾಗುವುದು.ಗುಲ್ಬರ್ಗದಲ್ಲಿ ಜನದಟ್ಟಣೆ ಸಾಕಷ್ಟಿದ್ದು, ರೈಲು ಸೇವೆ ವಿಸ್ತರಣೆಯಿಂದ ಯಾವುದೇ ಹಾನಿಯಿಲ್ಲ. ಗುಲ್ಬರ್ಗದಲ್ಲಿ ರೈಲ್ವೆ ವಿಭಾಗ ಮಾಡಬೇಕೆನ್ನುವ ಬೇಡಿಕೆಯನ್ನು ರೈಲ್ವೆ ಇಲಾಖೆ ನಿರ್ಧರಿಸುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಲಾಗುವುದು' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.