ಗುಲ್ಬರ್ಗ ವಿವಿ ಕುಲಪತಿ, ಕುಲಸಚಿವರ ವಜಾಗೆ ಆಗ್ರಹ

7

ಗುಲ್ಬರ್ಗ ವಿವಿ ಕುಲಪತಿ, ಕುಲಸಚಿವರ ವಜಾಗೆ ಆಗ್ರಹ

Published:
Updated:

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯವು ದೂರ ಶಿಕ್ಷಣ ನೀತಿ ಅಡಿಯಲ್ಲಿ ದೇಶದಾದ್ಯಂತ 70 ಎಂ.ಬಿ.ಎ. ಕಾಲೇಜುಗಳ ಸ್ಥಾಪನೆಗೆ ಅನಧಿಕೃತ ಅನುಮೋದನೆ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳು ಮಾಡಿದೆ. ರಾಜ್ಯಪಾಲರು ಕೂಡಲೇ ಗುಲ್ಬರ್ಗ ವಿವಿ ಕುಲಪತಿ ಹಾಗೂ ಕುಲಸಚಿವರನ್ನು ವಜಾಗೊಳಿಸಬೇಕು ಎಂದು ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಬುಧವಾರ ಇಲ್ಲಿ ಆಗ್ರಹಿಸಿದರು.`ದೂರ ಶಿಕ್ಷಣ ನೀತಿ ಅಡಿಯಲ್ಲಿ ಗುಲ್ಬರ್ಗ ವಿವಿ ಸಿದ್ಧಪಡಿಸಿದ ನಿಯಮಾವಳಿ~ ಕಡತ ಇನ್ನೂ ರಾಜ್ಯಪಾಲರ ಬಳಿಯಲ್ಲೆ ನೆನೆಗುದಿಗೆ ಬಿದ್ದಿದೆ. ಆದರೂ ಕುಲಪತಿ ಡಾ. ಈ.ಟಿ. ಪುಟ್ಟಯ್ಯ ಮತ್ತು ಕುಲಸಚಿವ ಡಾ. ಎಸ್.ಎಲ್. ಹಿರೇಮಠ ಅವರು ಕೂಡಿಕೊಂಡು ಅವ್ಯವಹಾರ ಆರಂಭಿಸಿಕೊಂಡು ಎಂ.ಬಿ.ಎ.  ಕಾಲೇಜುಗಳ ಸ್ಥಾಪಿಸಲು ಅನುಮೋದನೆ ನೀಡಿದ್ದಾರೆ~ ಎಂದು ಸುದ್ದಿಗೋಷ್ಠಿಯಲ್ಲಿ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು.`ವಿವಿ ಅನುಮೋದನೆ ಪಡೆದ ಈ ಕಾಲೇಜುಗಳು ಪುಣೆ, ಮುಂಬೈ, ಬೆಂಗಳೂರು, ಗುಲ್ಬರ್ಗ ಸೇರಿದಂತೆ ದೇಶಾದ್ಯಂತ 2011ರಲ್ಲೆ ಸ್ಥಾಪನೆಯಾಗಿವೆ. ಅನೇಕ ವಿದ್ಯಾರ್ಥಿಗಳು ಇಂತಹ ಕಾಲೇಜುಗಳಲ್ಲಿ ಸುಮಾರು ರೂ. 1.85 ಲಕ್ಷ ಶುಲ್ಕ ಭರಿಸಿ ಪ್ರವೇಶ ಪಡೆದುಕೊಂಡಿದ್ದಾರೆ. ಎಂಟು ತಿಂಗಳಾದರೂ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿಲ್ಲ. ನಿಯಮಾವಳಿಗೆ ರಾಜ್ಯಪಾಲರು ಅನುಮತಿ ನೀಡದೆ ಪರೀಕ್ಷೆ ನಡೆಸುವುದು ಅಸಾಧ್ಯವಾಗಿದೆ~ ಎಂದು ತಿಳಿಸಿದರು.ಕ್ರಿಮಿನಲ್ ಮೊಕದ್ದಮೆ: ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲು ಕಾರಣವಾಗಿರುವ ಕುಲಸಚಿವ, ಕುಲಪತಿ ಹಾಗೂ ಇವರೊಂದಿಗೆ ಒಪ್ಪಂದ ಮಾಡಿಕೊಂಡು ಕಾಲೇಜು ಆರಂಭಿಸಿರುವ ಮುಖ್ಯಸ್ಥರ ವಿರುದ್ಧ ಕೂಡಲೇ ಭಾರತೀಯ ದಂಡ ಸಂಹಿತೆ 420ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.ವಿವಿ ಘನತೆಗೆ ಧಕ್ಕೆ: ಹಾ.ಮಾ. ನಾಯಕ ಅವರಂತಹ ಮಾನ್ಯರು ಗುಲ್ಬರ್ಗ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಿದ್ದರು. ಆದರೆ ಹಾಲಿ ಕುಲಪತಿ, ಕುಲಸಚಿವರು ಡಾಕ್ಟರೇಟ್ ಪದವಿ ಕೊಡುವುದರಲ್ಲಿ, ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಸುತ್ತಿರುವ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಘನತೆಯನ್ನು ಇವರಿಬ್ಬರು  ಹಾಳುಗೆಡುವುತ್ತಿದ್ದಾರೆ ಎಂದರು.ಗುಲ್ಬರ್ಗ ವಿವಿ ಅನುಮೋದನೆಯಂತೆ ಅನಧಿಕೃತವಾಗಿ ಸ್ಥಾಪನೆಯಾದ `ಸೆಂಟ್ರಲ್ ಇನ್ಸ್‌ಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಗುಲ್ಬರ್ಗ~ದಲ್ಲಿ ಒಟ್ಟು 22 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ, ಈ ವಿದ್ಯಾರ್ಥಿಗಳು ಬೇರೆ ಎಂಬಿಎ ಕಾಲೇಜುಗಳಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಅಡ್ಡಪಲ್ಲಕ್ಕಿ ಉತ್ಸವಕ್ಕೆ ಕಾಂತಾ ಆಕ್ಷೇಪ:  ಆಳಂದ ತಾಲ್ಲೂಕಿನ ಕಮಲಾನಗರ ಗ್ರಾಮದಲ್ಲಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಉತ್ಸವ ನಡೆಸುವುದಕ್ಕೆ ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ತೀವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಜನರೆಲ್ಲ ಸಮಸ್ಯೆಯಲ್ಲಿ ಮುಳುಗಿದ್ದಾರೆ. ಜಾನುವಾರುಗಳು ಮೇವು ನೀರಿಗಾಗಿ ಪರಿತಪಿಸುತ್ತಿವೆ. ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿರುವ ಸಂದರ್ಭದಲ್ಲಿ ಸ್ವಾಮೀಜಿಗಳು ಅಡ್ಡಪಲ್ಲಕ್ಕಿ ಉತ್ಸವ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸದ ಸ್ವಾಮೀಜಿಗಳಿಂದ ಯಾವುದೇ ಅನುಕೂಲವಾಗುವುದಿಲ್ಲ. ಉತ್ಸವದ ಹೆಸರಿನಲ್ಲಿ ಲಕ್ಷ ದಿಪೋತ್ಸವ ಮಾಡಿ ದುಂದುವೆಚ್ಚ ಮಾಡುವುದರಿಂದ ಏನು ಸಿಗುವುದಿಲ್ಲ. ಜನರಿಗೆ ನೀರು, ಆಹಾರ ಒದಗಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ. ಜನರಲ್ಲಿ ಮೂಢನಂಬಿಕೆಗಳನ್ನು ತುಂಬುವ ಸ್ವಾಮೀಜಿಗಳ ಮೆರವಣಿಗೆಯನ್ನು ಕೈಬಿಡಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry