ಸೋಮವಾರ, ಮೇ 23, 2022
26 °C

ಗುಲ್ಬರ್ಗ ವಿವಿ ಘಟಿಕೋತ್ಸವ ಇಂದು: 133 ಮಂದಿಗೆ ಪಿಎಚ್.ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸ್ನಾತಕ, ಸ್ನಾತಕೋತ್ತರ, ಎಂ.ಫಿಲ್, ಪಿಎಚ್.ಡಿ ಸೇರಿದಂತೆ ವಿವಿಧ ಕೋರ್ಸ್‌ಗಳ 21,607 ಅಭ್ಯರ್ಥಿಗಳು ಗುರುವಾರ ನಡೆಯಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ 29ನೇ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲಿದ್ದಾರೆ.133 ಸಂಶೋಧನಾ ಅಭ್ಯರ್ಥಿಗಳು ಪಿಎಚ್.ಡಿ ಪದವಿ ಸ್ವೀಕರಿಸಲಿದ್ದು, ಈ ಪೈಕಿ 94 ಪುರುಷ ಹಾಗೂ 39 ಮಹಿಳೆಯರು ಇದ್ದಾರೆ. ವಿಜ್ಞಾನ ಹಾಗೂ ತಂತ್ರಜ್ಞಾನ ನಿಕಾಯದಿಂದ ಹೆಚ್ಚು ಅಂದರೆ 58 ಅಭ್ಯರ್ಥಿಗಳು ಪದವಿ ಸ್ವೀಕರಿಸುವರು. ಉಳಿದಂತೆ ಕಲಾ ನಿಕಾಯದ 30, ಸಮಾಜ ವಿಜ್ಞಾನ ನಿಕಾಯದ 29, ವಾಣಿಜ್ಯ ಹಾಗೂ ನಿರ್ವಹಣೆ ನಿಕಾಯದ 8, ಶಿಕ್ಷಣ ನಿಕಾಯದ 7 ಹಾಗೂ ಕಾನೂನು ನಿಕಾಯದ ಒಬ್ಬರು ಪಿಎಚ್.ಡಿ ಪದವಿ ಸ್ವೀಕರಿಸುವರು.ವಿವಿಧ ನಿಕಾಯಗಳಲ್ಲಿ ಒಟ್ಟು 142 ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ 13 ವಿದ್ಯಾರ್ಥಿಗಳು ನಗದು ಬಹುಮಾನ ಸ್ವೀಕರಿಸಲಿದ್ದಾರೆ.ಇದಲ್ಲದೇ 120 ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿ, 2,560 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 18,642 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ. ಈ.ಟಿ.ಪುಟ್ಟಯ್ಯ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಗೌರವ ಡಾಕ್ಟರೇಟ್: ಕೇಂದ್ರ ಸಚಿವ ಖರ್ಗೆ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಉದ್ಯಮಿ ಎಸ್.ಎಸ್.ಪಾಟೀಲ, ಅಂತರರಾಷ್ಟ್ರೀಯ ಕಲಾವಿದ ಶಂಕರಗೌಡ ಬೆಟ್ಟದೂರು, ಧಾರ್ಮಿಕ ಗುರು ಮಾಣಿಕಪ್ರಭು, ನಿವೃತ್ತ ಪ್ರಾಚಾರ್ಯ ಗಣಪತಿ ಬಿ.ಸಜ್ಜನ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಮಹೇಶ ಜೋಶಿ ಹಾಗೂ ಮಹಾರಾಷ್ಟ್ರದ ರಾಮಲಾಲ್ ಮಹಾರಾಜ್ ಅವರಿಗೆ ಗೌರವ ಡಾಕ್ಟರೇಟ್ ಸಹ ನೀಡಲಾಗುತ್ತಿದೆ.ವಿವಿಯ ಜ್ಞಾನಗಂಗಾ ಆವರಣದ ದಿ. ಮಹಾದೇವಪ್ಪ ರಾಂಪುರೆ ಬಯಲು ರಂಗಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಘಟಿಕೋತ್ಸವದ ಅಧ್ಯಕ್ಷತೆಯನ್ನು ಕುಲಾಧಿಪತಿ ಹಾಗೂ ರಾಜ್ಯಪಾಲ ಹಂಸರಾಜ ಭಾರದ್ವಾಜ ವಹಿಸುವರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ದೇಶಕ ಡಾ. ಟಿ.ಕೆ.ಅಲೆಕ್ಸ್ ಘಟಿಕೋತ್ಸವ ಭಾಷಣ ಮಾಡುವರು ಎಂದು ಪ್ರೊ. ಪುಟ್ಟಯ್ಯ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.