ಮಂಗಳವಾರ, ಜನವರಿ 28, 2020
25 °C

ಗುಲ್ಬರ್ಗ ವಿವಿ ತಂಡದ ಫಲಪ್ರದ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಆಹಾರ, ಇಂಧನ ಮತ್ತು ನೀರು ಈ ಮೂರು ವರ್ತಮಾನ ಮತ್ತು ಭವಿಷ್ಯಕ್ಕೆ ತೀರಾ ಅತ್ಯಗತ್ಯ. ಇವುಗಳಲ್ಲಿ ಕೊರತೆ ಉಂಟಾದರೆ ನಾಗಾಲೋಟದಲ್ಲಿ ಓಡುತ್ತಿರುವ ಜಗತ್ತಿಗೆ ಕಡಿವಾಣ ಹಾಕಿದಂತಾಗುತ್ತದೆ.ಇದನ್ನು ಚೆನ್ನಾಗಿಯೇ ಮನಗಂಡಿರುವ ವಿಜ್ಞಾನಿಗಳು ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಿದ್ದಾರೆ.ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈ ಕೊರತೆಯನ್ನು ನೀಗಿಸುವುದಕ್ಕಾಗಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ `ಅಂತರರಾಷ್ಟ್ರೀಯ ಮಟ್ಟದ ಆಹಾರ, ಇಂಧನ ಮತ್ತು ನೀರು ಸಂರಕ್ಷಣೆ~ ಸಂಸ್ಥೆಯ ಸ್ಥಾಪನೆ ಕುರಿತು ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ, ಗ್ರಂಥಪಾಲಕ ಆರ್.ಬಿ. ಗದ್ಗಿಮಠ ಅಮೆರಿಕಾದ ಕೊಲಾಡಾರೋ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಬಂದಿದ್ದಾರೆ. ಡಿಸೆಂಬರ್‌ನಲ್ಲಿ ಅಲ್ಲಿಗೆ ತೆರಳಿದಾಗ ತಮಗಾದ ಅನುಭವಗಳನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡಿದ್ದಾರೆ.ಅಲ್ಲಿದ್ದ ಹತ್ತು ದಿನಗಳ ಕಾಲ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಮತ್ತು ವಿವಿಧ ವಲಯಗಳಿಗೆ ಭೇಟಿ ನೀಡಿದಾಗ ಎಲ್ಲರೂ ಸದಾ ಏನಾದರೊಂದು ಕೆಲಸದಲ್ಲಿ ತೊಡಗಿರುವಂತೆ ಕಂಡು ಬಂದರು. ಅಲ್ಲಿನ ಸಾರ್ವಜನಿಕರು ಸಹ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಲ್ಲಿನ ಪಠ್ಯ, ಪಾಠ ಬೋಧನೆ ಕ್ರಮವೂ ತುಂಬಾ ವಿಭಿನ್ನವಾಗಿದೆ. ಕೆಲವು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಬೋಧನೆ ಪಡೆದುಕೊಳ್ಳುತ್ತಿದ್ದರು.ನಮ್ಮಲ್ಲಿ ಮಹಾನಗರ ಪಾಲಿಕೆ ಇರುವಂತೆ ಅಲ್ಲಿ ಸಿಟಿ ಕೌನ್ಸಿಲ್ ಇದೆ. ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ರಸ್ತೆ, ಕುಡಿಯುವ ನೀರು ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸಲಾಗಿದೆ.ಮೂಲಸೌಕರ್ಯಕ್ಕೆ ಸಂಚಕಾರ ಉಂಟಾದಾಗ ಸಿಟಿ ಕೌನ್ಸಿಲ್‌ನವರು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಅಲ್ಲಿನ ಅಧ್ಯಾಪಕರು ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಂಡ ಅನೇಕ ಉದಾಹರಣೆಗಳನ್ನು ಅಲ್ಲಿ ಕಣ್ಣಾರೆ ಕಂಡಿದ್ದೇವೆ.ಸೌರಶಕ್ತಿ, ಜೈವಿಕ ಇಂಧನ ಉತ್ಪಾದನೆ ಜೊತೆಗೆ ಆಹಾರ ಮತ್ತು ನೀರಿನ ಕೊರತೆ ನೀಗಿಸುವುದಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ಅಧ್ಯಾಪಕರು ಸೇರಿದಂತೆ ಸಾರ್ವಜನಿಕರಿಗೂ ಸಾಮಾಜಿಕ ಹೊಣೆಗಾರಿಕೆ ಇರುವುದರಿಂದಲೇ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಸಿಗುತ್ತಿವೆ.ತಂಡದ ಈ ಭೇಟಿ ಹಾಗೂ ಒಡಂಬಡಿಕೆಯಿಂದಾಗಿ ಸುಮಾರು 250 ಕೋಟಿ ರೂಪಾಯಿ ಯೋಜನೆ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ದೊರಕುತ್ತಿರುವುದು ಹೆಮ್ಮೆಯ ಹಾಗೂ ಪ್ರತಿಷ್ಠೆಯ ವಿಷಯವಾಗಿದೆ ಅನ್ನುತ್ತಾರೆ. ಒಟ್ಟಾರೆಯಾಗಿ ಪ್ರವಾಸ ಉದ್ದೇಶ ಫಲಪ್ರದವಾಗಿದೆ ಎಂಬುದು ಅವರ ಅನಿಸಿಕೆ.

ಪ್ರತಿಕ್ರಿಯಿಸಿ (+)