ಗುಲ್ಬರ್ಗ ವಿವಿ ವಸತಿ ನಿಲಯ ಕಾರ್ಮಿಕರ ಧರಣಿ

ಶನಿವಾರ, ಜೂಲೈ 20, 2019
22 °C

ಗುಲ್ಬರ್ಗ ವಿವಿ ವಸತಿ ನಿಲಯ ಕಾರ್ಮಿಕರ ಧರಣಿ

Published:
Updated:

ಯಾದಗಿರಿ: ಕಾಯಂ ಅಲ್ಲದ ನೌಕರರಿಗೆ ಕಾಯಂ ನೌಕರರಷ್ಟೇ ವೇತನವನ್ನು ಸಂಚಿತ ವೇತನವನ್ನಾಗಿ ನೀಡಲು ಉನ್ನತ ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಆದೇಶದಂತೆ, ವೇತನ ದೊರಕಿಸಿಕೊಡುವುದು ಹಾಗೂ 10 ವರ್ಷಗಳ ಸೇವೆಯ ಆಧಾರದಲ್ಲಿ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ವಿದ್ಯಾರ್ಥಿ ವಸತಿ ನಿಲಯಗಳ ನೌಕರರು ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು  ಗುರುವಾರ  ಪ್ರತಿಭಟನೆ ನಡೆಸಿದರು.ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 7 ವಿದ್ಯಾರ್ಥಿ ವಸತಿ ನಿಲಯಗಳಿದ್ದು, ಇಲ್ಲಿ 63 ನೌಕರರು ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇಂತಹ ಕಾಯಂ ಅಲ್ಲದ ನೌಕರರಿಗೆ ಸರ್ಕಾರದ ಇದೇ ದರ್ಜೆಯ ಕಾಯಂ ನೌಕರರಿಗೆ ನೀಡುವಷ್ಟೇ ವೇತನವನ್ನು ಸಂಚಿತ ವೇತನವಾಗಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯು 2009 ರ ಜೂನ್ 25 ರಂದು ಆದೇಶ ಹೊರಡಿಸಿದೆ. ಈ ಆದೇಶದಂತೆ ವೇತನ ದೊರಕಿಸಿಕೊಡುವಂತೆ ಆಗ್ರಹಿಸಿದರು.ಆದರೆ ಗುಲ್ಬರ್ಗ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಯ ಆದೇಶವನ್ನು ಉಲ್ಲಂಘಿಸಿ, ಮನಸ್ಸಿಗೆ ಬಂದಂತೆ ವೇತನ ನೀಡುತ್ತಾ ಬಂದಿದೆ. ಹತ್ತಾರು ವರ್ಷಗಳಿಂದ ಕೇವಲ ರೂ. 600 ವೇತನ ನೀಡಿದ ವಿಶ್ವವಿದ್ಯಾಲಯವು, ನೌಕರರ ತೀವ್ರ ಹೋರಾಟದ ನಂತರ 2009 ರಲ್ಲಿ ವೇತನವನ್ನು ರೂ. 1000ಕ್ಕೆ ಹೆಚ್ಚಿಸಿತು.ಈ ನೌಕರರ ಸೇವೆಯನ್ನು ಕಾಯಂ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿ ಕೆಲ ಕಾಲ ತಳ್ಳಲಾಯಿತು. ಉನ್ನತ ಶಿಕ್ಷಣ ಇಲಾಖೆಯ ಆದೇಶದ ಅನುಸಾರ ವೇತನ ನೀಡುವುದು ಹಾಗೂ ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಠ ವೇತನ ಕಾಯ್ದೆಯ ಆದೇಶಗಳನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಸಂಘದ ನೇತೃತ್ವದಲ್ಲಿ ಹೋರಾಟ ಮುಂದುವರಿಯಿತು.2010 ರಲ್ಲಿ ವೇತನವನ್ನು ರೂ. 2000 ಕ್ಕೆ ಹೆಚ್ಚಿಸಲಾಯಿತೇ ಹೊರತು ಇಲಾಖೆಯ ಆದೇಶ ಪಾಲಿಸಲಿಲ್ಲ. ಸಂಘದಿಂದ ಮತ್ತೆ ಪ್ರತಿಭಟನೆ ನಡೆಸಿದ ಪರಿಣಾಮ 2012 ರಿಂದ ಇಲ್ಲಿಯವರೆಗೆ ರೂ. 2500 ರೂ. ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.ಉನ್ನತ ಶಿಕ್ಷಣ ಇಲಾಖೆಯ ಆದೇಶದಂತೆ ವೇತನ ನೀಡುತ್ತಿಲ್ಲ. ವಿಶ್ವವಿದ್ಯಾಲಯದ ವಿಳಂಬ ಧೋರಣೆಯಿಂದ ತಮಗಾಗುತ್ತಿರುವ ಆರ್ಥಿಕ ನಷ್ಟವನ್ನು ಸರಿಪಡಿಸಿಕೊಳ್ಳಲು ನೌಕರರು ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗಿದೆ ಎಂದರು.  ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ ಯಾದಗಿರಿ, ಆಲ್ ಇಂಡಿಯಾ ಯುಟಿಯುಸಿಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಎಸ್.ಪ್ರಕಾಶ, ವಸತಿ ಶಿಕ್ಷಣ ಸಂಸ್ತೆಗಳ ನೌಕರರ ಸಂಘದ ರಾಜ್ಯ ಸಂಚಾಲಕ ಕೆ.ವಿ.ಭಟ್ ಮಾತನಾಡಿದರು.ಸಂಘದ ಗುಲ್ಬರ್ಗ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಎಂ.ಜಿ, ರಾಜಶೇಖರ, ಅನಸೂಯಾ, ಮಾಪಣ್ಣ, ಮಲ್ಲಿಕಾರ್ಜುನ, ರಮಾ, ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.ಸಂಘದ ಪದಾಧಿಕಾರಿಗಳ ನಿಯೋಗವು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿತು. ಸಚಿವರ ಪರವಾಗಿ ಮನವಿ ಸ್ವೀಕರಿಸಿದ ಆಪ್ತ ಕಾರ್ಯದರ್ಶಿಗಳು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೋಮವಾರದ ನಂತರ ಸಭೆ ಏರ್ಪಡಿಸಲಾಗುವುದು. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry