ಬುಧವಾರ, ಮೇ 25, 2022
22 °C

ಗುಲ್ಬರ್ಗ ವಿಶ್ವವಿದ್ಯಾಲಯದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯಲಿರುವ ಸಾಧಕರ ವಿವರ ಇಂತಿದೆ: ಮಲ್ಲಿಕಾರ್ಜುನ ಖರ್ಗೆ: ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ. ರಾಜ್ಯ ವಿಧಾನಸಭೆಗೆ ಸತತ ಒಂಬತ್ತು ಸಲ ಆಯ್ಕೆಯಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ಹೊಂದಿರುವ ಇವರು ದೀನದಲಿತರು, ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಹಿಂದುಳಿದ ಹೈ.ಕ. ಪ್ರದೇಶದಲ್ಲಿ ಕರ್ನಾಟಕ ಪೀಪಲ್ಸ್ ಏಜುಕೇಶನ್ ಸೊಸೈಟಿ ವತಿಯಿಂದ ಅನೇಕ ಶಾಲೆ–ಕಾಲೇಜುಗಳನ್ನು ನಡೆಸುತ್ತ ಬಡವರಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾರೆ.ಬಸವರಾಜ ಪಾಟೀಲ ಸೇಡಂ: ಹೋರಾಟ ಮಾರ್ಗ ತುಳಿಯದೆಯೂ ಅಭಿವೃದ್ಧಿಯನ್ನು ಸಾಧಿಸಬಹುದೆಂದು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಹತ್ತಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಗುಲ್ಬರ್ಗದಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೇ “ಕಲಬುರ್ಗಿ ಕಂಪು–2010’ ಎಂಬ ಅಭೂತಪೂರ್ವ ಕಾರ್ಯಕ್ರಮ ನಡೆಸಿ ಈ ಭಾಗದ ಅಭಿವದ್ಧಿಯ ದಿಸೆಯಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ವಿಧಾನ ಪರಿಷತ್ ಮತ್ತು ಲೋಕಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.ತಪಸ್ವಿ ರಾಮರಾವ ಮಹಾರಾಜ: ಲಂಬಾಣಿ ಸಾಂಸ್ಕೃತಿಕ ನಾಯಕರಾದ ಸಂತ ಶ್ರೀ ಸೇವಾಲಾಲರ ಏಳನೇ ತಲೆಮಾರಿನವರಾಗಿರುವ ಇವರು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಬಂಜಾರರಿಗೆ ಸೇತುವೆಯಾಗಿ ಸಮಸ್ತ ಬಂಜಾರರಿಗೆ ಜಗದ್ಗುರುಗಳಾಗಿ ಲೋಕಕಲ್ಯಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಎಸ್.ಎಸ್.ಪಾಟೀಲ: ಹೆಸರಾಂತ ಕೈಗಾರಿಕೋದ್ಯಮಿ. ಹೈ-ಕ. ಭಾಗದ ಹೆಮ್ಮೆಯ ವ್ಯಕ್ತಿ. ಆಳಂದ ತಾಲ್ಲೂಕಿನ ಕಡಗಂಚಿಯವರಾದ ಪಾಟೀಲ, ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಸುಮಾರು 25ಕ್ಕೂ ಹೆಚ್ಚು ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಿ ಸುಮಾರು 10 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.ಧ್ಯಾನರಾಜ್ ಮಾಣಿಕಪ್ರಭು:

ಸಾಹಿತ್ಯ ಕ್ಷೇತ್ರದಲ್ಲಿ ಇವರ ಕೊಡುಗೆ ಗಣನೀಯವಾಗಿದೆ. ಎಳೆಯ ವಯಸ್ಸಿನಲ್ಲೇ ಹಿಂದಿ ಭಾಷೆಯಲ್ಲಿ ಕಾವ್ಯರಚನೆ ಮಾಡಿದ ಇವರು ದೇಶಾದ್ಯಂತ ಅನೇಕ ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಉರ್ದು ಭಾಷೆಯಲ್ಲಿಯೂ ಪರಿಣಿತಿ ಹೊಂದಿರುವ ಇವರು ಆ ಭಾಷೆಯಲ್ಲಿ ಹಲವಾರು ಗಜಲ್ ರಚಿಸಿದ್ದಾರೆ. ಶಂಕರಗೌಡ ಬೆಟ್ಟದೂರು: ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಬೆಟ್ಟದೂರು ಗ್ರಾಮದವರಾದ ಇವರು ಪಶ್ಚಿಮ ಬಂಗಾಳದಲ್ಲಿ ರವೀಂದ್ರನಾಥ ಟ್ಯಾಗೋರ ನಡೆಸುತ್ತಿದ್ದ ವಿಶ್ವಭಾರತಿ ಶಾಂತಿನಿಕೇತನದಲ್ಲಿ ಅಧ್ಯಯನ ಮಾಡಿ ‘ಡಿಪ್ಲೊಮಾ ಇನ್ ಫೈನ್ ಆರ್ಟ್ಸ್ ಅಂಡ್ ಕ್ರಾಫ್ಟ್’ ಪದವಿ ಪಡೆದಿದ್ದಾರೆ.

ಕೇವಲ ಚಿತ್ರ ಕಲಾವಿದರಾಗಿ ಮುಂದುವರಿಯಲು ಬಯಸದೇ ಕೃಷಿಯಲ್ಲೂ ಆಸಕ್ತಿ ತೋರಿ ಅನೇಕ ಪ್ರಯೋಗ ಮಾಡಿದ್ದಾರೆ. ಹಳ್ಳಿಯ ಬದುಕನ್ನು ಅಪ್ಪಿಕೊಂಡ ಇವರು ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲೂ ಜ್ಞಾನ ಸಂಪಾದಿಸಿದ್ದಾರೆ.

ಮಹೇಶ ಜೋಶಿ: ಭಾರತೀಯ ಪ್ರಸಾರ ಸೇವೆಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ಪ್ರಸ್ತುತ ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಚಂದನ ವಾಹಿನಿ’ಯನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ಇವರದು.

ಪ್ರೊ. ಜಿ.ಬಿ. ಸಜ್ಜನ: ಇವರು ಗುಲ್ಬರ್ಗದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲಿಷ್ ಭಾಷಾ ಬೋಧನೆ ಹಾಗೂ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.