ಮಂಗಳವಾರ, ಮೇ 11, 2021
24 °C

ಗುಲ್ಬರ್ಗ ಸಂಕ್ಷಿಪ್ತ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಕೆಡಿಬಿಗೆ ರೂ. 63 ಕೋಟಿ  ಅನುದಾನ

ಗುಲ್ಬರ್ಗ:
ಗುಲ್ಬರ್ಗ ವಿಭಾಗದ ಆರು ಜಿಲ್ಲೆಗಳ ಮತ್ತು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಾರ್ಯ ವ್ಯಾಪ್ತಿ ಹೊಂದಿರುವ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ 2012-13ನೇ ಸಾಲಿಗೆ ರೂ. 63 ಕೋಟಿ ಅನುದಾನವನ್ನು ಸರ್ಕಾರವು ನಿಗದಿಪಡಿಸಿದೆ ಎಂದು ಮಂಡಳಿಯ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತೆ ಕೆ. ರತ್ನಪ್ರಭಾ ಹೇಳಿದರು.ಗುರುವಾರ ಗುಲಬರ್ಗಾದಲ್ಲಿ ಮಂಡಳಿಯ ಅನುಷ್ಠಾನಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ 2011-12ನೇ ಸಾಲಿನಲಿ ್ಲಮಂಡಳಿಯಿಂದ ಒಟ್ಟು 1,189 ಕಾಮಗಾರಿಗಳು ಮಂಜೂರಾಗಿದ್ದು, ಈ ಪೈಕಿ  7,23 ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು 4,66 ಕಾಮಗಾರಿಗಳು ಬಾಕಿ ಉಳಿದಿವೆ ಎಂದರು.   ಮಂಡಳಿಯಿಂದ 2011-12ನೇ ಸಾಲಿಗೆ ಮಂಜೂರಾದ ಕಾಮಗಾರಿಗಳಿಗಾಗಿ ಒಟ್ಟು ರೂ. 29.27 ಕೋಟಿ ಅನುದಾನ ವೆಚ್ಚವಾಗಿದೆ. ಬಾಕಿ ಉಳಿದ ರಸ್ತೆ/ಚೆಕ್ ಡ್ಯಾಂ ಕಾಮಗಾರಿಗಳನ್ನು 2012 ಜೂನ್ ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಮತ್ತು ಕಟ್ಟಡ ಕಾಮಗಾರಿಗಳನ್ನು 2012ರ ಆಗಸ್ಟ್ ಅಂತ್ಯದವರೆಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಂಡಳಿಯ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಬೇರೆ ಯೋಜನೆಯಲ್ಲಿ ತೆಗೆದುಕೊಳ್ಳದಿರುವುದಕ್ಕೆ ಧೃಢೀಕರಣ ಪತ್ರವನ್ನು ಸಲ್ಲಿಸುವಂತೆ ಸೂಚಿಸಿದರು. ಮಂಡಳಿಯ ಉಪಕಾರ್ಯದರ್ಶಿ ಹಾಗೂ ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಹಾಗೂ ಇತರ ಅನುಷ್ಠಾನಾಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.ಹೈಕೋರ್ಟ್ ನ್ಯಾಯಾಧೀಶರ ಪ್ರವಾಸ

ಗುಲ್ಬರ್ಗ:
ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರು ಏಪ್ರಿಲ್ 23ರಿಂದ 26ರವರೆಗೆ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಮೂಲಕ ಗುಲ್ಬರ್ಗಕ್ಕೆ ಆಗಮಿಸಿ 23ರಂದು ಸಂಜೆ 4 ಗಂಟೆಗೆ ಗುಲ್ಬರ್ಗದಿಂದ ಬೀದರ್‌ಗೆ ಪ್ರಯಾಣಮಾಡಿ 25ರವರೆಗೆ ಬೀದರ್‌ನಲ್ಲಿ ವಾಸ್ತವ್ಯ ಮಾಡುವರು.26ರಂದು ಬೆಳಿಗ್ಗೆ 10 ಗಂಟೆಗೆ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿನೀಡುವರು. ಸಂಜೆ 4 ಗಂಟೆಗೆ ಗುಲ್ಬರ್ಗಕ್ಕೆ ಆಗಮಿಸುವರು. ನಂತರ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿರುವ ಗುಲ್ಬರ್ಗ ವಿಭಾಗದ ವಿವಿಧ ಜಿಲ್ಲೆಗಳಲ್ಲಿರುವ ಅಪೌಷ್ಟಿಕತೆ, ಆರೋಗ್ಯ ಸ್ಥಿತಿಗತಿ, ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸುವರು. ಸಂಜೆ 6-40 ಗಂಟೆಗೆ ಉದ್ಯಾನ್       ಎಕ್ಸ್‌ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ತೆರಳುವರು.ದಕ್ಷತೆಯಿಂದ ಕಾರ್ಯನಿರ್ವಹಿಸಲು ಸೂಚನೆ

ಗುಲ್ಬರ್ಗ:
ಅನುಕಂಪ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳು ಜನರಿಗೆ ತೊಂದರೆಯಾಗದಂತೆ ದಕ್ಷತೆ, ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಸರ್ಕಾರಿ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಗುಲ್ಬರ್ಗ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ. ರತ್ನಪ್ರಭಾ ಹೇಳಿದರು.ಶುಕ್ರವಾರ ಗುಲಬರ್ಗಾದಲ್ಲಿ ಅನುಕಂಪ ಆಧಾರದ ಮೇಲೆ ನೇಮಕಗೊಂಡ 8 ಪ್ರಥಮ ದರ್ಜೆ ಸಹಾಯಕರು ಹಾಗೂ 10 ಎರಡನೇ ದರ್ಜೆ ಸಹಾಯಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಆಡಳಿತದಲ್ಲಿ ಕನ್ನಡವನ್ನು ಸರಿಯಾಗಿ ಬಳಸಲು ಅನುವಾಗುವಂತೆ ಕನ್ನಡ ಓದು-ಬರಹ ಮಾಡುವುದನ್ನು ಹೆಚ್ಚು ರೂಢಿಸಿಕೊಳ್ಳಬೇಕು. ಎರಡನೇ ದರ್ಜೆ ಸಹಾಯಕರು ಸೇವೆಯಲ್ಲಿದ್ದು ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಯ ಬಡ್ತಿ ಪಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು.ಸರ್ಕಾರದ 2006ರ ನವೆಂಬರ್ 24ರ ಅಧಿಕೃತ ಜ್ಞಾಪನ ಪತ್ರದನ್ವಯ ಸೇವೆಯಲ್ಲಿದ್ದಾಗ ಮೃತಪಟ್ಟ ನೌಕರರ ಮಾತೃ ಇಲಾಖೆಯಲ್ಲಿ ಅರ್ಜಿದಾರರ ವಿದ್ಯಾರ್ಹತೆಗೆ ತಕ್ಕ ಹುದ್ದೆಗಳು ಲಭ್ಯವಿಲ್ಲದ ಪಕ್ಷದಲ್ಲಿ ಅಂತಹ ಅರ್ಜಿಗಳನ್ನು ಆಯಾ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲು ಅವಕಾಶವಿದೆ ಹಾಗೂ ವಿವಿಧ ಇಲಾಖೆಗಳಿಂದ ಖಾಲಿ ಹುದ್ದೆಗಳ ಮಾಹಿತಿ ಸಂಗ್ರಹಿಸಿ ನೇಮಕಾತಿಗಾಗಿ ಹಂಚಿಕೆ ಮಾಡುವ ಅಧಿಕಾರವನ್ನು ಸಹ ಪ್ರಾದೇಶಿಕ ಆಯುಕ್ತರು ಹೊಂದಿದ್ದಾರೆ. ಗುಲಬರ್ಗಾ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಕಳೆದ ಆರು ತಿಂಗಳ ಅವಧಿಯಲ್ಲಿ 101 ಅಭ್ಯರ್ಥಿಗಳಿಗೆ ಅನುಕಂಪ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೈಯ್ಯದ್ ಅಬ್ದುಲ್ ರಬ್‌ಹಾಜರಿದ್ದರು.ಫಿರೋಜಾಬಾದ:  ಪರಿಹಾರಧನ ವಿತರಣೆಗುಲ್ಬರ್ಗ
: ತಾಲ್ಲೂಕಿನ  ಫಿರೋಜಾಬಾದ ಗ್ರಾಮದಲ್ಲಿ 17 ರಂದು ಗ್ರಾಮ ಪಂಚಾಯಿತಿಯಿಂದ ತೆರೆದ ಬಾವಿಯ ಹೂಳು ಎತ್ತಲು ಹೋದಾಗ ಸಾವನ್ನಪ್ಪಿದ ಐದು ಜನರ ಕುಟುಂಬಗಳ ವಾರಸುದಾರರಿಗೆ ತಲಾ ರೂ. 1.50 ಲಕ್ಷ ಪರಿಹಾರ ಧನದ ಚೆಕ್ಕುಗಳನ್ನು ಗುರುವಾರ ವಿತರಿಸಲಾಯಿತು.ಶಾಸಕರಾದ ಮಾಲೀಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಫಿರೋಜಾಬಾದ ಗ್ರಾಮಕ್ಕೆ ತೆರಳಿ ಪರಿಹಾರ ಧನದ ಚೆಕ್ಕುಗಳನ್ನು ವಿತರಿಸಿದರು.ಸಹಾಯಕ ಆಯುಕ್ತರು, ತಹಸೀಲ್ದಾರರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು. ಸಾವಿಗೀಡಾದ ಪ್ರತಿ ಕುಟುಂಬಕ್ಕೆ ವಿಪತ್ತು ಯೋಜನೆಯಡಿ ಜಿಲ್ಲಾಧಿಕಾರಿ ತಲಾ ರೂ. 1.50 ಲಕ್ಷ ಪರಿಹಾರ ಧನ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಿರುತ್ತಾರೆ.ತೆರೆದ ಬಾವಿ ಹೂಳೆತ್ತಲು ಹೋದಾಗ ಡಿಸೈಲ್ ಎಂಜಿನ್ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟ ಐದು ಜನರ ವಾರಸುದಾರರಾದ ದೌಲತಬೀ ನವಾಬ್‌ಸಾಬ್, ಅಂಬವ್ವ ಸೂರ್ಯಕಾಂತ ಕರಕನಳ್ಳಿ, ಪುತಳಾಬಾಯಿ ಚಂದ್ರಶೇಖರ್ ನಾಟೀಕಾರ, ಶಾಂತಯ್ಯ ಗುರುಪಾದಯ್ಯ ಮಠಪತಿ ಹಾಗೂ ಸುಫಿಯಾ ಬೇಗಂ ಹಮೀದ್ ಪಟೇಲ್ ಪರಿಹಾರ ಧನದ ಚೆಕ್ಕುಗಳನ್ನು ಪಡೆದರು.23ರಂದು ಪಾಲಿಕೆ ಸಾಮಾನ್ಯ ಸಭೆ

ಗುಲ್ಬರ್ಗ:
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ಇಂದಿರಾ ಸ್ಮಾರಕ ಭವನ (ಟೌನ್‌ಹಾಲ್) ದಲ್ಲಿ 23ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ. ಮಹಾನಗರ ಪಾಲಿಕೆಯ ಮಹಾಪೌರ ಸೋಮಶೇಖರ್ ಮೇಲಿನಮನಿ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.