ಗುಲ್ಬರ್ಗ ಹಾಗೂ ಬೀದರ್‌ನಲ್ಲಿ ಗುಜ್ರಾಲ್ ಪಾಲಿನ ಕಹಿ ನೆನಪು !

7

ಗುಲ್ಬರ್ಗ ಹಾಗೂ ಬೀದರ್‌ನಲ್ಲಿ ಗುಜ್ರಾಲ್ ಪಾಲಿನ ಕಹಿ ನೆನಪು !

Published:
Updated:

ಗುಲ್ಬರ್ಗ: ರಾಜಕೀಯ ಜೀವನದ ಸುದೀರ್ಘ ಪಯಣ ಮುಗಿಸಿ ಶುಕ್ರವಾರ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್, ತಮ್ಮ ಬದುಕಿನಲ್ಲಿ ಎಂದೂ ಮರೆಯದ ಕೆಲ ಕಹಿ ನೆನಪುಗಳನ್ನು ಅನುಭವಿಸಿರಬಹುದು. ಅವುಗಳ ಸಾಲಿನಲ್ಲಿ ಗುಲ್ಬರ್ಗ ಹಾಗೂ ಬೀದರ್‌ನಲ್ಲಿ ಅವರಿಗಾಗಿದ್ದ ಕಹಿ ಘಟನೆಗಳು ಸಹ ಎಂದಿಗೂ ಮರೆಯುವಂತಿರಲಿಲ್ಲ.ಅದು ಸೆಪ್ಟೆಂಬರ್ 1988. ಬೀದರ್‌ನಲ್ಲಿ ಹಿಂಸಾಕೃತ್ಯ ಆರಂಭಿಸಿದ್ದ ಗುಂಪೊಂದು ಆರು ಅಮಾಯಕ ಸಿಖ್ ವಿದ್ಯಾರ್ಥಿಗಳ ಕಗ್ಗೊಲೆ ಮಾಡಿದ್ದಲ್ಲದೆ, ಆಸ್ತಿಪಾಸ್ತಿಯನ್ನು ಕೊಳ್ಳೆ ಹೊಡೆದಿತ್ತು. ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ಅವರು ಆಶೀರ್ವಚನ ನೀಡಿರುವ ಐದು ಪವಿತ್ರ ಸ್ಥಳಗಳಲ್ಲೊಂದಾದ `ನಾನಕ್ ಝಿರಾ ಸಾಹಿಬ್' ಇರುವ ಬೀದರ್ ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು. 1984ರಲ್ಲಿ ಇಂದಿರಾಗಾಂಧಿ ಹತ್ಯೆಯ ನಂತರ ಇಡೀ ದೇಶದಲ್ಲಿ ಸಿಖ್ ಸಮುದಾಯ ಮೌನಕ್ಕೆ ಶರಣಾಗಿತ್ತು. ಎರಡು ದಿನ ದಳ್ಳುರಿಯಲ್ಲಿ ಹೊತ್ತಿ ಉರಿದ ಬೀದರ್ ಹೆಸರು ಹೀನಾಯ ಸ್ಥಿತಿಗೆ ತಲುಪಿತಲ್ಲದೆ, ಒತ್ತಡದ ಪರಿಸ್ಥಿತಿಗೆ ಸಿಲುಕಿದ ಸಿಖ್‌ರು ನಾಲ್ಕು ವರ್ಷ ಅಲ್ಲಿಂದ ಹೊರನಡೆಯುವಂತಾಯಿತು.ಬೀದರ್‌ನಲ್ಲಿ ನಡೆದ ಘಟನೆಯು ರಾಜ್ಯದ ಗೌರವಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿ ಮಾರ್ಪಟ್ಟು, ಗಂಭೀರ ಸ್ವರೂಪ ಪಡೆದುಕೊಂಡಿತು. ಹಿಂದು-ಸಿಖ್ ಸಮುದಾಯದವರನ್ನು ಒಂದುಗೂಡಿಸಿ ಮತ್ತೆ ಸೌಹಾರ್ದ ಪುನರ್‌ಸ್ಥಾಪಿಸುವ ಸಲುವಾಗಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ, ಪಂಜಾಬ್ ರಾಜ್ಯದ ಗಣ್ಯರನ್ನು ಒಳಗೊಂಡ `ಸೌಹಾರ್ದ ತಂಡ'ವೊಂದನ್ನು ರಚಿಸಿ ಬೀದರ್ ಭೇಟಿಗೆ ಆಹ್ವಾನಿಸಿದರು. ಬೊಮ್ಮಾಯಿ ಆಹ್ವಾನವನ್ನು ಮನ್ನಿಸಿ ಐ.ಕೆ. ಗುಜ್ರಾಲ್ ಸೌಹಾರ್ದ ತಂಡದ ನೇತೃತ್ವ ವಹಿಸಿಕೊಂಡರು.ಬೀದರ್‌ಗೆ ಆಗಮಿಸಿದ ತಂಡಕ್ಕೆ ಯುದ್ಧಭೂಮಿಗೆ ಬರಮಾಡಿಕೊಳ್ಳುವ ರೀತಿಯಲ್ಲಿ ಸ್ವಾಗತ ಸಿಕ್ಕಿತು. ಜಿಲ್ಲಾಡಳಿತವು ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಸ್ಥಳೀಯರ ಮುಖಂಡತ್ವ ವಹಿಸಿದ್ದ ಭೀಮಣ್ಣ ಖಂಡ್ರೆ, ಸೌಹಾರ್ದ ತಂಡಕ್ಕೆ `ದುರುದ್ದೇಶದ ತಂಡ' ಎಂದು ಛಾಪು ಒತ್ತಿದರು. ಇನ್ನುಳಿದ ಸ್ಥಳೀಯರೆಲ್ಲ ಖಂಡ್ರೆ ಅವರನ್ನು ಅನುಸರಿಸಿ ಬೀದರ್ ತೊರೆಯುವಂತೆ ಒತ್ತಾಯಿಸಿದರು. ಮೃದುಭಾಷಿ ಐ.ಕೆ. ಗುಜ್ರಾಲ್ ಅಕ್ಷರಶಃ ಮಂಕಾದರೂ ಯಾವುದೇ ಪ್ರತೀಕಾರದ ಮಾತು ಆಡಲಿಲ್ಲ. ಆದರೆ, ತಂಡದ ಸದಸ್ಯರಲ್ಲೊಬ್ಬರಾಗಿದ್ದ 1971ನೇ ಯುದ್ಧದಲ್ಲಿ ನಾಯಕನಾಗಿ ಮೆರೆದಿದ್ದ ಲೆ.ಜನರಲ್ ಜೆ.ಎಸ್. ಅರೋರಾ, ಬೀದರ್ ಜನರು ಸೌಹಾರ್ದ ತಂಡವನ್ನು ನಡೆಸಿಕೊಂಡ ರೀತಿಯ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸೌಹಾರ್ದ ತಂಡವು ಬರಿಗೈಯಲ್ಲಿ ವಾಪಸ್ಸಾಯಿತು.ಹತ್ತು ವರ್ಷಗಳ ನಂತರ ಪ್ರಧಾನಿ ಐ.ಕೆ.ಗುಜ್ರಾಲ್ ಬೀದರ್ ಪಕ್ಕದ ಗುಲ್ಬರ್ಗ ನಗರದಲ್ಲಿ ಮತ್ತೊಂದು ಕಹಿ ಘಟನೆಯನ್ನು ಎದುರಿಸುವಂತಾಯಿತು. ಫೆಬ್ರುವರಿ 1998ರಲ್ಲಿ ಲೋಕಸಭಾ ಚುನಾವಣೆ ಪ್ರಚಾರಕಾರ್ಯ ನಡೆದಿತ್ತು. ಒಡೆದ ಮನೆಯಾಗಿದ್ದ ಜನತಾದಳದ ಪರವಾಗಿ ಪ್ರಚಾರ ಮಾಡಲು ಗುಲ್ಬರ್ಗಕ್ಕೆ ಆಗಮಿಸಿದ್ದರು. ಆದರೆ ಸ್ವಂತ ಪಕ್ಷದವರೇ ಅವರನ್ನು ಬಲಿಪಶು ಮಾಡಿದರು.ಮರುದಿನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಫೆ. 19, 1998ರ ರಾತ್ರಿ ಗುಲ್ಬರ್ಗದಲ್ಲಿ ತಂಗಿದ್ದರು. ಅದೇ ಸಂದರ್ಭದಲ್ಲಿ ಗುಲ್ಬರ್ಗದಿಂದ 70 ಕಿ.ಮೀ. ದೂರದ ಭೀಮರಾಯನಗುಡಿಯಲ್ಲಿ ಐ.ಕೆ. ಗುಜ್ರಾಲ್ ನಂತರ ಪ್ರಧಾನಿಯಾದ ಎಚ್.ಡಿ. ದೇವೇಗೌಡರು ಭರದಿಂದ ಪ್ರಚಾರ ಸಭೆ ನಡೆಸಿದ್ದರು. ಇಡೀ ಜನತಾದಳ ಕಾರ್ಯಕರ್ತರು, ಮುಖಂಡರು ಭೀಮರಾಯನಗುಡಿಯಲ್ಲಿ ಬಿಡಾರ ಹೂಡಿದ್ದರು. ಆದರೆ ಇತ್ತ ಪ್ರಧಾನಿಗೆ ಶುಭ ಕೋರಲು ಒಬ್ಬ ಮುಖಂಡನೂ ಹಾಜರಿರಲಿಲ್ಲ.ಮರುದಿನ ಬೆಳಿಗ್ಗೆ 9ಕ್ಕೆ ಗುಲ್ಬರ್ಗದ ಡಿಎಆರ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಬೇಕಿತ್ತು. 11 ಗಂಟೆಯಾದರೂ ಜನ ಸೇರಲೇ ಇಲ್ಲ. ಅದೇ ವೇಳೆ, ಪಕ್ಕದ ಸೇಡಂನಲ್ಲಿ ದೇವೇಗೌಡರು ಪ್ರಚಾರಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರಧಾನಿ ಭಾಷಣಕ್ಕೆ ಜನರನ್ನು ಕರೆತರುವ ಕೆಲಸವನ್ನು ಯಾವ ಮುಖಂಡರು ಮಾಡಲಿಲ್ಲ.ದೇವೇಗೌಡ ಹಾಗೂ ಐ.ಕೆ. ಗುಜ್ರಾಲ್ ಒಂದೇ ರೀತಿಯ ರೆಕ್ಕೆಯ ಹಕ್ಕಿಯಾಗಿದ್ದರೂ ಕೂಡಿ ಹಾರಲಿಲ್ಲ! ಕೊನೆಗಾಲದವರೆಗೂ ಗುಜ್ರಾಲ್ ಅವರ ಪಾಲಿಗೆ ಗುಲ್ಬರ್ಗ ಹಾಗೂ ಬೀದರ್ ಕಹಿನೆನಪುಗಳಾಗಿ ಉಳಿದವು ಎಂಬುದನ್ನು ಸಾಂದರ್ಭಿಕವಾಗಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry