ಗುರುವಾರ , ಏಪ್ರಿಲ್ 15, 2021
23 °C

ಗುಲ್ಬರ್ಗ- ಹೈದರಾಬಾದ್ ಸುಖಾಸೀನ ಪಯಣ: ಸುಹಾಸ ಸಂಚಾರಕ್ಕೆ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆರಾಮದಾಯಕ ಪ್ರಯಾಣದ ಸೌಲಭ್ಯ ನೀಡುವ ಗುರಿಯೊಂದಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗುಲ್ಬರ್ಗ-ಹೈದರಾಬಾದ್ ಮಾರ್ಗದಲ್ಲಿ ಆರಂಭಿಸಲಾದ `ಸುಹಾಸ~ ಸುಖಾಸೀನ ಬಸ್ ಸೇವೆಗೆ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಅವರು ಬುಧವಾರ ಹಸಿರು ನಿಶಾನೆ ತೋರಿದರು.

ಸ್ವಾತಂತ್ರೋತ್ಸವದ ದಿನಾಚರಣೆಯಂದು ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗಿದೆ. “ಸಂಸ್ಥೆಯು ಒಟ್ಟು 50 `ಸುಹಾಸ~ ಬಸ್‌ಗಳನ್ನು ಖರೀದಿಸಿದ್ದು, ಪ್ರಥಮ ಹಂತವಾಗಿ 12 ಬಸ್‌ಗಳು ಹೈದರಾಬಾದಿಗೆ ಸಂಚರಿಸಲಿವೆ. ಇನ್ನುಳಿದ ವಾಹನಗಳನ್ನು ಸಂಸ್ಥೆಯ ಇತರ ವಿಭಾಗಗಳಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗುವುದು” ಎಂದು ವ್ಯವಸ್ಥಾಪಕ ನಿರ್ದೇಶಕ ಜಿ.ಎನ್.ಶಿವಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

`ನೃಪತುಂಗ ಬಸ್~: ಬೆಂಗಳೂರಿನಲ್ಲಿ ನಗರ ಸಾರಿಗೆ ಸೇವೆಗೆ ಬಳಸಲಾಗುವ `ವಜ್ರ~ ಬಸ್‌ಗಳ ಮಾದರಿಯಲ್ಲಿಯೇ ಗುಲ್ಬರ್ಗ ನಗರದಲ್ಲಿ ಸಂಚಾರಕ್ಕೆ ಹೊಸದಾಗಿ 40 `ನೃಪತುಂಗ ನಗರ ಸಾರಿಗೆ ಬಸ್~ ಸೇವೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಎಲ್ಲ ಬಡಾವಣೆಗಳಿಗೂ ಸಂಚರಿಸುವ ಈ ಬಸ್‌ಗಳಲ್ಲಿ ಅತ್ಯಾಧುನಿಕ ಜಿಪಿಎಸ್ ತಂತ್ರಜ್ಞಾನವುಳ್ಳ ಎಲ್‌ಇಡಿ ಪ್ರದರ್ಶನ ಫಲಕ ಇರಲಿದ್ದು, ಮುಂದಿನ ನಿಲ್ದಾಣವನ್ನು ಪ್ರಯಾಣಿಕರಿಗೆ ತಿಳಿಸುವ ಸೌಲಭ್ಯ ಹೊಂದಿದೆ. ಈ ಸೇವೆ ನಗರದ ಜನತೆಗೆ ಶೀಘ್ರ ದೊರಕಲಿದೆ. ಸಂಸ್ಥೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಗಣಕೀಕೃತ ಉದ್ಘೋಷಣೆ ವ್ಯವಸ್ಥೆ ಜಾರಿಗೆ ತರಲಾಗುವುದು ಹಾಗೂ ಪ್ರಯಾಣಿಕರಿಗೆ ಎಸ್.ಎಂ.ಎಸ್. ಮೂಲಕ ಬಸ್ ವೇಳಾಪಟ್ಟಿಯನ್ನು ತಿಳಿಸುವ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಲಾಗುವುದು ಎಂದು ಅವರು ವಿವರಿಸಿದರು.

ಹಸಿರೀಕರಣ: ಬಸ್ ನಿಲ್ದಾಣ ಎಂದ ಕೂಡಲೇ ಗಲೀಜು, ಅಸಹನೀಯ ದುರ್ವಾಸನೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. “ಇದನ್ನು ನಿವಾರಿಸಲು ಸಂಸ್ಥೆಯು ಗುಲ್ಬರ್ಗ ನಿಲ್ದಾಣ, ವಿಭಾಗೀಯ ಕಚೇರಿ, ವಿಭಾಗೀಯ ಕಾರ್ಯಾಗಾರ ಹಾಗೂ ಕೇಂದ್ರ ಕಚೇರಿ ಎದುರು ಖಾಲಿಯಿರುವ ಜಾಗದಲ್ಲಿ ಉದ್ಯಾನ ನಿರ್ಮಿಸಲಿದೆ. ಮುಂಬರುವ ದಿನಗಳಲ್ಲಿ ಇತರ ಬಸ್‌ನಿಲ್ದಾಣ ಹಾಗೂ ಘಟಕಗಳಲ್ಲೂ ಇದೇ ಮಾದರಿಯ ಉದ್ಯಾನ ನಿರ್ಮಾಣವಾಗಲಿವೆ” ಎಂದು ಶಿವಮೂರ್ತಿ ಹೇಳಿದರು.

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ್ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.