ಗುಲ್‌ಫೆಸ್ಟ್: ಸಾಂಸ್ಕೃತಿಕ ರಸದೌತಣ

7

ಗುಲ್‌ಫೆಸ್ಟ್: ಸಾಂಸ್ಕೃತಿಕ ರಸದೌತಣ

Published:
Updated:

ಗುಲ್ಬರ್ಗ: ಇಡೀ ದಕ್ಷಿಣ ಭಾರತದ ಕಲೆಗಳನ್ನೆಲ್ಲ ಒಂದೇ ಅಂಗಳದಲ್ಲಿ ಪರಿಚಯಿಸಿಕೊಟ್ಟ ಹೆಗ್ಗಳಿಕೆ ಗುಲ್ಬರ್ಗ ವಿಶ್ವವಿದ್ಯಾಲಯದ್ದು...

ತಮ್ಮಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸಲು ಬಿಸಿಲುನಾಡಿಗೆ ಬಂದ ವಿದ್ಯಾರ್ಥಿಗಳು, ವಿವಿಯನ್ನು  ಸಾಂಸ್ಕೃತಿಕ ತಾಣವನ್ನಾಗಿ ಪರಿವರ್ತಿಸಿದರು. ಪ್ರಥಮ ಬಾರಿಗೆ ಗುಲ್ಬರ್ಗದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಮಹೋತ್ಸವದಲ್ಲಿ ವಿವಿಧ ಭಾಷೆ, ಕಲೆ, ಆಚಾರ-ವಿಚಾರದ ಸೊಬಗನ್ನು ಒಂದೇ ಸೂರಿನಡಿ ನೋಡುವ ಅವಕಾಶ ಸಿಕ್ಕಿತು.ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಪಾಶ್ಚತ್ಯ ಸಂಗೀತ ಸ್ಪರ್ಧೆಯಲ್ಲಿ 13 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಂಗೀತದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ಒಂದಿಲ್ಲೊಂದು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಮ್ಮ ರಾಜ್ಯದ ವಿವಿಧ ಸಾಂಸ್ಕೃತಿಕ ಕಲೆಯ ಅನಾವರಣ ಮಾಡಿ, ಜನರ ಮನರಂಜಿಸಿದರು.ಪಾಶ್ಚಾತ್ಯ ಸಂಗೀತದ ಬಗ್ಗೆ ಅಷ್ಟೊಂದು ಅಭಿರುಚಿ ಕಾಣಿಸದ ಗುಲ್ಬರ್ಗದಲ್ಲಿ, ಈ ಸಂಗೀತದ ರುಚಿ ತೋರಿಸಿ ಜನತೆ ಕುಣಿದು ಕುಪ್ಪಳಿಸುವಂತೆ ಮಾಡಿದ್ದು ವಿಶೇಷವಾಗಿತ್ತು. ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆಯಲ್ಲಂತೂ ವಿವಿಧ ರಾಜ್ಯದ ಸ್ಪಧಾರ್ಥಿಗಳು ತಮ್ಮ ನಾಡಿನ ಸಾಂಪ್ರದಾಯಿಕ ವಾದ್ಯ ಪ್ರರ್ದಶಿಸಿ ಮೆರೆದರು.ಮಹಾದೇವಪ ರಾಂಪುರೆ ಬಯಲು ರಂಗಮಂದಿರದಲ್ಲಿ ನಡೆದ ಮಿಮಿಕ್ರಿ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಮಾಡಿದ ಮಿಮಿಕ್ರಿ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಹಾಸ್ಯದ ಹೊಳೆಯಲ್ಲಿ ತೇಲಾಡಿಸಿತು. ವಿದ್ಯುನ್ಮಾನ ಮಾಧ್ಯಮದಲ್ಲಿ ಸುದ್ದಿ ಓದುವವರು, ವಿವಿಧ ತರಹದ ಪ್ರಾಣಿ-ಪಕ್ಷಿಗಳ ಧ್ವನಿ ಹಾಗೂ ವಿಶೇಷವಾಗಿ ಅಣ್ಣಾ ಹಜಾರೆ ಮತ್ತು ಮನಮೋಹನ ಸಿಂಗ್ ಅವರ ಮಿಮಿಕ್ರಿ ಮಾಡಿದ ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿಷ್ಣು ಎಲ್ಲರ ಗಮನ ಸೆಳೆದರು. ಗುಲ್ಬರ್ಗ ವಿವಿ ವಿದ್ಯಾರ್ಥಿ ಪರಶುರಾಮ ಕನ್ನಡ ಚಿತ್ರನಟರಾದ ಡಾ. ರಾಜ್‌ಕುಮಾರ, ಶಂಕರನಾಗ್, ಧೀರೇಂದ್ರ ಗೋಪಾಲ, ಸಾಯಿಕುಮಾರ ಮಿಮಿಕ್ರಿ ಮಾಡಿ ರಂಜಿಸಿದರು. ಮಚಲಿಪಟ್ಟಣಂ ಕ್ರಿಷ್ಣ ವಿಶ್ವವಿದ್ಯಾಲಯ ವಿದ್ಯಾರ್ಥಿಯೊಬ್ಬ ಹತ್ತು ಸೆಕೆಂಡ್‌ಗಳಲ್ಲಿ 82 ಶಬ್ದಗಳನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿ ಅಚ್ಚರಿ ಮೂಡಿಸಿದರು. ಆಂಧ್ರದ ತಿರುಪತಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಂತೂ ತೆಲಗು ಖ್ಯಾತ ಹಾಸ್ಯನಟರ ಅನುಕರಣೆ ಮಾಡಿ ಜನರ ಮೊಗದಲ್ಲಿ ನಗು  ಚಿಮ್ಮಿಸಿದರು.ಮೂಕಾಭಿನಯ

ಮೂಕಾಭಿನಯದ ಮೂಲಕ ಒಂದಿಲ್ಲೊಂದು ವಿಷಯದ ಬಗ್ಗೆ ಅರಿವು ಮೂಡಿಸಿ ಜನರ ಮನಮುಟ್ಟುವಲ್ಲಿ ಹಲವು ವಿದ್ಯಾರ್ಥಿಗಳು ಸಫಲರಾಗಿದ್ದು ಮಹೋತ್ಸವದ ವಿಶೇಷವಾಗಿತ್ತು. ನಾಗಾರ್ಜುನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾಂಸಾರಿಕ ಜೀವನದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ ಪ್ರತಿಬಿಂಬಿಸಿದರು.ಬೆಳೆಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದವರು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಿಕ್ಕ ಬಿದ್ದ ಪ್ರಮುಖ ಆರೋಪಿ ಅಜ್ಮಲ್ ಕಸಬ್ ನೇಣಿಗೇರಿಸಿದ ದೃಶ್ಯ ಕುತೂಹಲ ಮೂಡಿಸಿತು. ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೆಣ್ಣು ಭ್ರೂಣಹತ್ಯೆ ಮತ್ತು ಹೆಣ್ಣಿನ ಬಗ್ಗೆ ಇರುವ ತಿರಸ್ಕಾರದ  ಕುರಿತು ಮಾಡಿದ ಅಭಿನಯವು ಮೆಚ್ಚುಗೆ ಗಳಿಸಿತು.ಗಣಿತ ವಿಭಾಗದ ಭಾಸ್ಕರ ಹಾಲ್‌ನಲ್ಲಿ ನಡೆದ ರಂಗೋಲಿ ಮತ್ತು ಇನ್‌ಸ್ಟಾಲೆಶನ್ ಸ್ಪರ್ಧೆಯಲ್ಲಿ ರಂಗೋಲಿಗಳು ಆಕರ್ಷಕವಾಗಿದ್ದವು.

ಗುಲ್ಬರ್ಗ ಹೊರತುಪಡಿಸಿದ      (ಇತರ ಹತ್ತು) ವಿವಿ ವಿದ್ಯಾರ್ಥಿಗಳು ತಮ್ಮ ಭಾಷೆಯಲ್ಲಿ ಕಾರ್ಯಕ್ರಮ ನೀಡಿದರೂ ಅದರಲ್ಲಿನ ಅರ್ಥ ಗ್ರಹಿಸಿಕೊಂಡು ಜನತೆ ಶಾಂತಚಿತ್ತದಿಂದ ನೋಡಿದರು.ನಾಲ್ಕು ರಾಜ್ಯಗಳ 25 ವಿಶ್ವವಿದ್ಯಾಲಯಗಳಿಂದ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಗೆ ಬಂದಿದ್ದರು. ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆಯನ್ನು ಶ್ರೀ ಗುರು ವಿದ್ಯಾಪೀಠ ಅಚ್ಚುಕಟ್ಟಾಗಿ ನಿರ್ವಹಿಸಿತು. ವಿವಿ ಉಪಾಹಾರ ಗೃಹದಲ್ಲಿ ಊಟದ ವ್ಯವಸ್ಥೆ                     ಮಾಡಲಾಗಿತ್ತು. ಕುಲಸಚಿವ ಎಸ್.ಎಲ್.ಹಿರೇಮಠ ಖುದ್ದಾಗಿ ಬಂದು ವ್ಯವಸ್ಥೆ ಪರಿಶೀಲಿಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry