ಭಾನುವಾರ, ಮಾರ್ಚ್ 7, 2021
28 °C

ಗುಲ್‌ಮೊಹರ್ ಕೆಂಪು ಪೆಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್‌ಮೊಹರ್ ಕೆಂಪು ಪೆಂಪು

ವಸಂತ ಬರೆದ ಪ್ರೀತಿಯ ಓಲೆಗೆ ಭೂಮಿ ಪುಳಕಿತಗೊಂಡಿದ್ದಾಳೆ. ವಸಂತ ಬರಲೆಂದೇ ಕಾತರಿಸುತ್ತಿದ್ದ ಧರಿತ್ರಿ ತನ್ನ ಒಡಲ ಜೀವಗಳಿಗೆ ಚೈತನ್ಯ ಸುರಿಸಿದ್ದಾಳೆ. ಅವ ಬರುವ ದಾರಿಯಲ್ಲಿ ಹೂವುಗಳ ರಾಶಿ ಹಾಸಿ ಹೊದಿಸಿದ್ದಾಳೆ.ಬೇಸಿಗೆಯ ಸುಡು ಬಿಸಿಲಲ್ಲಿ ಚಿಗುರೊಡೆದು ನಗುವ ಹಸಿರು ರಾಶಿಯ ಮಧ್ಯೆ ನಳನಳಿಸುವ ಹೂವುಗಳು ನೂರಾರು. ಸುಮಗಳಿಂದಲೇ ಭೂಮಿ ಅಲಂಕಾರಗೊಂಡಂತೆ. ಅದರಲ್ಲೂ ಏಪ್ರಿಲ್ ಮೇ ತಿಂಗಳು ಬಂತೆಂದರೆ ಎಲ್ಲೆಲ್ಲೂ ಮೈದುಂಬುವ ಗುಲ್‌ಮೊಹರ್‌ನದ್ದೇ ಕಾರುಬಾರು. ರಸ್ತೆ ರಸ್ತೆಗಳಲ್ಲೂ ತನ್ನ ಕೆಂಬಣ್ಣದ ರಂಗು ಚೆಲ್ಲುವ ಗುಲ್‌ಮೊಹರ್‌ಗಳು. ಮಳೆ ಬಂದು ನಿಂತರೆ ನೆಲದ ಮೇಲೆ ಗುಲ್‌ಮೊಹರ್ ರಂಗೋಲಿ. ಎಲ್ಲರ ಮನದಲ್ಲಿ ಗುಲ್‌ಮೊಹರ್‌ನ ಚೆಲುವಿನ ಚಿತ್ತಾರ.ಜನವರಿಯಿಂದಲೇ ಈ ಮರದ ಎಲೆಗಳು ಉದುರಲು ಆರಂಭಗೊಂಡು, ಮಾರ್ಚ್ ವೇಳೆಗೆ ಸಂಪೂರ್ಣ ಎಲೆ ಉದುರಿಸಿಕೊಂಡು ಬೋಳು ಬೋಳಾಗಿ ಕಾಣುವ ಗುಲ್‌ಮೊಹರ್ ಮರ ಏಪ್ರಿಲ್ ಬಂತೆಂದರೆ ತನ್ನ ಒಡಲನ್ನು ಚಿಗುರಿಸಿಕೊಂಡು ಹೂವು ಬಿಡಲು ಆರಂಭಿಸುತ್ತದೆ.

ಮೇ ತಿಂಗಳು ಕಾಲಿಡುತ್ತಿದ್ದಂತೆ ಇನ್ನೂ ಹೆಚ್ಚು ಕೆಂಪು ಪುಷ್ಪಗಳಿಂದ ಕಂಗೊಳಿಸುತ್ತದೆ. ಮೇಲೆ ನಿಂತು ನೋಡಿದರೆ ಎಲ್ಲೆಲ್ಲೂ ಕೆಂಪು ಓಕುಳಿ ಚೆಲ್ಲಿದಂತೆ. ಬೆಂಗಳೂರಿನ ಬೀದಿ ಬೀದಿಗಳಲ್ಲೂ ಗುಲ್‌ಮೊಹರ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.ಹಿಂದಿನ ಕಾಲದಲ್ಲಿ ರಾಜಮಹಾರಾಜರು ಗುಲ್‌ಮೊಹರನ್ನು ನಗರದ ಸೌಂದರ್ಯಕ್ಕೆ ಮತ್ತು ಬಳಲಿರುವ ಜನರಿಗೆ ನೆರಳನ್ನೀಯಲು ನೆಡಿಸುತ್ತಿದ್ದರು ಎಂಬ ಮಾತಿದೆ.ಗುಲ್‌ಮೊಹರ್ ಎಂಬ ಹೆಸರೇ ಆಸಕ್ತಿದಾಯಕ. ಗುಲ್ ಎಂದರೆ ಹೂವು, ಮೊಹರ್ ಎಂದರೆ ನವಿಲು. ನವಿಲಿನ ಗರಿಯ ಬಣ್ಣ ಆಕರ್ಷಕವಾಗಿದ್ದಂತೆ ಗುಲ್‌ಮೊಹರ್‌ನ ಬಣ್ಣವೂ ಆಕರ್ಷಕವಾಗಿದೆ ಮತ್ತು ಹೂವೂ ನವಿಲಿನ ಗರಿಯ ಆಕಾರದಲ್ಲಿದೆ ಎಂದು ಈ ಹೂವಿಗೆ ಗುಲ್‌ಮೊಹರ್ ಎಂಬ ಹೆಸರು ಬಂದಿದೆ. ಈ ಹೂಗಳ ಆಕರ್ಷಣೆಯಿಂದ ಎಷ್ಟೋ ಕವಿಗಳು ಕಾವ್ಯ ಕಟ್ಟಿದ್ದಾರೆ. ಕೆ.ಎಸ್.ನಿಸಾರ್ ಅಹಮದ್ ಅವರ `ಗುಲ್‌ಮೊಹರ್~ ಜನಮನ ಗೆದ್ದ ಅಂಥ ಒಂದು ಕವಿತೆ.  ಗುಲ್‌ಮೊಹರ್‌ನ ಇಂಗ್ಲಿಷ್ ಹೆಸರು ಡೆಲೊನಿಕ್ಸ್ ರೇಜಿಯಾ. ರೇಜಿಯಾ ಎಂದರೆ ಲ್ಯಾಟಿನ್‌ನಲ್ಲಿ ರಾಜಯೋಗ್ಯ ಎಂದರ್ಥ. ಗೋಲ್ಡ್ ಮೊಹರ್, ದಿ ಪಿಕಾಕ್ ಫ್ಲವರ್, ಫ್ಲಾಂ ಬಂತೂಂಟ್, ಮೇ ಫ್ಲವರ್, ರಾಯಲ್ ಪಾಯಿನ್‌ಶಯಾನ್, ಫೈರ್‌ಆಫ್ ದಿ ಫಾರೆಸ್ಟ್ ಹೀಗೆ ಹಲವು ಹೆಸರುಗಳಿವೆ.ಮೇ ತಿಂಗಳಿನಲ್ಲಿ ಈ ಹೂವು ಹೆಚ್ಚು ಬಿಡುವುದರಿಂದ ಇದಕ್ಕೆ `ಮೇ ಫ್ಲವರ್~ ಎಂಬ ಹೆಸರು ಬಂದಿದೆ. ಕನ್ನಡದಲ್ಲಿ ಇದಕ್ಕೆ ಬೆಂಕಿ ಹೂವು, ಕಾಡಿನ ಅಗ್ನಿ, ಕೃಷ್ಣನ ಹೂವು, ದೊಡ್ಡ ರತ್ನಗಂಧಿ ಎನ್ನುತ್ತಾರೆ, ತಮಿಳಿನಲ್ಲಿ ಈ ಹೂವನ್ನು ಮಯೂರ ಎನ್ನುತ್ತಾರೆ. ಈ ಹೂವು ಫ್ಯಾಬೇಸಿ ಜಾತಿಯ ಸಸ್ಯ ಮೂಲದಿಂದ ಬಂದದ್ದು. ಈ ಮರವನ್ನು ನೆಟ್ಟರೆ ಮಣ್ಣಿನ ಫಲವತ್ತತೆಯೂ ವೃದ್ಧಿಸುತ್ತದೆ ಎಂಬ ಮಾತಿದೆ.ಗುಲ್‌ಮೊಹರ್ ಕೇಸರಿಗೆಂಪು ಬಣ್ಣದಲ್ಲಿದ್ದು, ಒಂದೊಂದು ಹೂವಿನ ಗೊಂಚಲಿನ ಒಂದು ದಳದಲ್ಲಿ ಹಳದಿ ಅಥವಾ ಬಿಳಿ ಗೆರೆಗಳಿರುತ್ತವೆ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಇದರ ಬೀಜೋತ್ಪತ್ತಿ ಆರಂಭವಾಗುತ್ತದೆ. ಮೇ ಹೊತ್ತಿಗೆ ಮೈ ತುಂಬ ಹೂವುಗಳನ್ನು ಹರಡಿಕೊಂಡು ತನ್ನದೇ ವಿಶಿಷ್ಟ ಸುವಾಸನೆಯನ್ನು ಹೊರಹೊಮ್ಮಿಸುತ್ತದೆ.

ಏನೇ ಆಗಲಿ ಗೋಳುಹೊಯ್ದುಕೊಳ್ಳುವ ಸೂರ್ಯನೆದೆಯಲ್ಲೂ ಒಲವು ಚಿಗುರೊಡೆಯುವಂತೆ ಮಾಡುವ ಗುಲ್‌ಮೊಹರ್‌ಗೆ ಗುಲ್‌ಮೊಹರ್‌ಮಾತ್ರ ಸಾಟಿ.

-

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.