ಭಾನುವಾರ, ಜನವರಿ 19, 2020
20 °C
ಕೃಷಿ ಖುಷಿ

ಗುಳೆ ಕುಟುಂಬದ ‘ಬಂಗಾರದ ಕೊಯ್ಲು!’

ಪ್ರಜಾವಾಣಿ ವಾರ್ತೆ/ವೆಂಕಟೇಶ ನೀಲಗಲ್‌ Updated:

ಅಕ್ಷರ ಗಾತ್ರ : | |

ಗುಳೆ ಕುಟುಂಬದ ‘ಬಂಗಾರದ ಕೊಯ್ಲು!’

ದೇವದುರ್ಗ: ಪಟ್ಟಣದಿಂದ 7ಕಿಲೋ ಮೀಟರ್‌ ದೂರದಲ್ಲಿರುವ ಗಡ್ಡಿ ತಾಂಡಾದ ಡಾಕಪ್ಪ ಮುನಿಯಪ್ಪನವರ ಕುಟುಂಬಕ್ಕೆ 16 ಎಕರೆ ಜಮೀನಿತ್ತು. ಆದರೂ  ಜಮೀನು ಬಿಟ್ಟು ಇಡೀ ಕುಟುಂಬವೇ ಗುಳೆ ಹೋಗಿತ್ತು. ಅದಕ್ಕೆ ಕಾರಣ ಕಿತ್ತು ತಿನ್ನುವ ಬಡತನ. ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲೂ ಅವರಲ್ಲಿ ಹಣ ಇರಲಿಲ್ಲ. ಸಾಲ ಮಾಡಿ ಕೊಳವೆಬಾವಿ ಕೊರೆಸಿ ದರೂ ನೀರು ಬಾರದಿದ್ದರೆ ಸಾಲ ಮುಟ್ಟಿಸುವುದು ಹೇಗೆ? ಎಂಬ ಪ್ರಶ್ನೆ ಇಡೀ ಕುಟುಂಬವನ್ನು ಕಾಡಿತ್ತು. ಹೀಗಾಗಿ ಡಾಕಪ್ಪ (ಕಾಟ್ರಪ್ಪ) ಕುಟುಂಬ ಗುಳೆ ಹೋಗುತ್ತಿತ್ತು.ಆದರೆ, ಐದು ವರ್ಷಗಳ ಹಿಂದೆ ಡಾಕಪ್ಪ ಕುಟುಂಬ ಗುಳೆ ಹೋಗದೇ ಇರಲು ನಿರ್ಧಾರಿ ಸಿತು. ಕುಟುಂಬದ ಸದಸ್ಯರು ಗುಳೆ ಹೋದ ಸಂದರ್ಭದಲ್ಲಿ ದುಡಿದು ಕೂಡಿಟ್ಟಿದ್ದ ಹಣವನ್ನು ಒಟ್ಟು ಮಾಡಿದರು. ಕೊನೆಗೂ ಧೈರ್ಯ ಮಾಡಿ ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿಸಿದರು. ಅದೃಷ್ಟ ಎನ್ನುವಂತೆ ಕೊಳೆವೆಬಾವಿಯಲ್ಲಿ ನೀರು ಚಿಮ್ಮಿತ್ತು. ನೋಡು ನೋಡುತ್ತಿದ್ದಂತೆ 16 ಎಕರೆ ಜಮೀನಿನಲ್ಲಿ  ಅಣ್ಣ, ತಮ್ಮಂ ದಿರು ಹಗಲು, ರಾತ್ರಿ ಎನ್ನದೆ ದುಡಿಯ ತೊಡಗಿದರು. ಈಗ ಬರಡುಭೂಮಿ ನಿಜಕ್ಕೂ ಬಂಗಾರ ಬೆಳೆಯುತ್ತಿದೆ!ಡಾಕಪ್ಪ ಮುನಿಯಪ್ಪನವರದು ಇಂದಿಗೂ ಅವಿಭಕ್ತ ಕುಟುಂಬ. ಅವರಿಗೆ ಐದು ಜನ ಗಂಡು ಮಕ್ಕಳು. ಅವರಲ್ಲಿ ಹಿರಿಯ ಮಗನೇ ಡಾಕಪ್ಪ. ಕೃಷಿಯನ್ನೇ ನಂಬಿರುವುದರಿಂದ ಬೆಳಗಾ ದರೆ ಸಾಕು, ಇಡೀ ಕುಟುಂಬದ ಸದಸ್ಯರು ಜಮೀನಿನಲ್ಲಿ ಕೆಲಸ ಮಾಡು ತ್ತಾರೆ. ಡಾಕಪ್ಪ ಮತ್ತು ಆತನ ಇಬ್ಬರು ತಮ್ಮಂದಿರು ಜಮೀನಿಗೆ ಮೀಸಲಾ ಗಿದ್ದರೆ, ಉಳಿದ ಇಬ್ಬರು ತಮ್ಮಂದಿರು ಕುರಿ ಸಾಕಾಣಿಕೆಯಲ್ಲಿ ತೊಡಗಿ ದ್ದಾರೆ.16 ಎಕರೆಯಲ್ಲಿ  ಪ್ರತಿ ವರ್ಷ ಈರುಳ್ಳಿ, ಕಲ್ಲಂಗಡಿ, ಗೆಣಸು ಮತ್ತು ಸಜ್ಜೆ, ಹತ್ತಿ ಬೆಳೆಯುವ ಜೊತೆಗೆ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ.ಈರುಳ್ಳಿ ಚಾಂಪಿಯನ್‌: ಡಾಕಪ್ಪ ಕಳೆದ ಮುಂಗಾರು ಸಮಯದಲ್ಲಿ 6 ಎಕರೆ ಪ್ರದೇಶ ದಲ್ಲಿ ನಾಟಿ ಮಾಡಿದ ಈರುಳ್ಳಿ ಬೆಳೆ ನವೆಂಬರ್‌ ಕೊನೆಯಲ್ಲಿ ಬಂದಿದೆ. ಎಕರೆಗೆ 100ಕ್ವಿಂಟಲ್‌ ಗಿಂತಲೂ ಹೆಚ್ಚು ಬಂಪರ್‌ ಬೆಳೆಯನ್ನು ಬೆಳೆದಿರುವ ಡಾಕಪ್ಪ ಅವರ ಮನೆಗೆ ಈ ಬಾರಿ ಧನಲಕ್ಷ್ಮೀ ಯೇ ಬಂದಿದ್ದಾಳೆ. ‘ಫಸಲು ಕೈ ಬಂದ ಸಂದರ್ಭದಲ್ಲಿ ಮಾರಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿತು. ಕ್ವಿಂಟಲ್‌ಗೆ ₨ 4500 ರಿಂದ 5ಸಾವಿರ ವರೆಗೂ ಧಾರಣೆ ಇತ್ತು. ಅದೇ ಸಂದರ್ಭದಲ್ಲಿ ಬೆಳೆದ 600 ಕ್ವಿಂಟಲ್‌ ಈರುಳ್ಳಿ ಮಾರಾಟ ಮಾಡಿದೆವು. ₨ 3 ಲಕ್ಷ  ಖರ್ಚು ತೆಗೆದು, 14 ಲಕ್ಷ  ನಿವ್ವಳ ಲಾಭ ಬಂದಿತು’ ಎಂದು ಡಾಕಪ್ಪ ಖುಷಿ ಯಿಂದಲೇ ಹೇಳಿದರು.ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆದು ಈ ಬಾರಿ ಸಾಕಷ್ಟು ರೈತರು ಕೈಸುಟ್ಟು­ಕೊಂಡಿದ್ದಾರೆ. ಡಾಕಪ್ಪ ಮಾತ್ರ ಪ್ರತಿ ಎಕರೆಗೆ 100 ಕ್ವಿಂಟಲ್‌ಗಿಂತ ಹೆಚ್ಚು ಇಳುವರಿ ಪಡೆದ್ದಾರೆ. ಉಳಿದ ರೈತರು ಕೇವಲ 40ರಿಂದ 50 ಕ್ವಿಂಟಲ್‌ ಇಳುವರಿ ಪಡೆದಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಅನಕ್ಷರಸ್ಥರಾದರೂ ವೃತ್ತಿ ಅನುಭವ ಇರುವ ಡಾಕಪ್ಪ ಹೇಳುವುದು ಹೀಗೆ: ‘ಈರುಳ್ಳಿ ಬೆಳೆಗೆ ಸಕಾಲಕ್ಕೆ ಬೇಕಾಗುವ ನಿರ್ವಹಣೆ ಮುಖ್ಯವಾಗುತ್ತದೆ. ಈ ಬಾರಿ ಹೆಚ್ಚು ಮಳೆ ಬಂದಿರುವುದರಿಂದ ಕೆಲವು ರೈತರಿಗೆ ಇಳುವರಿ ಕಡಿಮೆ ಬಂದಿದೆ. ಹೆಚ್ಚು ತೇವಾಂಶ ಇರುವ ಜಮೀನಿನಲ್ಲಿ ಈರುಳ್ಳಿ ಬೆಳೆಯುವುದರಿಂದ ಇಳುವರಿ ಕಡಿಮೆ ಬರುವ ಜೊತೆಗೆ ರೋಗದ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತವೆ’ ಎನ್ನುತ್ತಾರೆ.ನೀರಾವರಿ ಬಂದ ನಂತರ ಭೂಮಿ­ಯಲ್ಲಿ ತೇವಾಂಶ ಹೆಚ್ಚಾದ ಕಾರಣ ವರ್ಷದಿಂದ ವರ್ಷಕ್ಕೆ ಈರುಳ್ಳಿ ಬೆಳೆಯ ಇಳುವರಿ ಕಡಿಮೆ ಯಾಗುತ್ತಿದೆ. ಇಳಿಜಾರು ಇರುವ ಜಮೀನಿನಲ್ಲಿ ಹೆಚ್ಚು ಇಳುವರಿ ಬರುತ್ತದೆ ಮತ್ತು ಬಹಳಷ್ಟು ರೈತರಿಗೆ ಇಂದಿಗೂ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ಇಲ್ಲ. ರೈತರು ಕೇಳುವುದೇ ಬೇರೆ, ಕ್ರಿಮಿನಾಶಕ ಅಂಗಡಿಯವರು ನೀಡುವ ಔಷಧಿಯೇ ಬೇರೆ. ಇದರಿಂದ ರೋಗ ನಿಯಂತ್ರಣಕ್ಕೆ ಬಾರದೆ ಬೆಳೆ ನಾಶ­ವಾಗಲು ಕಾರಣವಾಗುತ್ತದೆ ಎಂದು ವಿವರ ನೀಡುತ್ತಾರೆ.ಈರುಳ್ಳಿ ಬೆಳೆಗೆ ಮುಖ್ಯವಾಗಿ ಕಾಡು­ವುದು ‘ಸುಳಿ ರೋಗ’. ರಾತ್ರಿ ಹೊತ್ತಿ ನಲ್ಲಿ ಈರುಳ್ಳಿ ಬೆಳೆಯ ಸುಳಿಯಲ್ಲಿ ಕೀಟ ಇದ್ದು ಬೆಳೆಯನ್ನು ತಿನ್ನುತ್ತದೆ. ಇದನ್ನು ಆರಂಭದಲ್ಲಿಯೇ ರೈತರು ಗಮನಿಸಿ ತಡೆಗಟ್ಟಲು ಪ್ರಯತ್ನಿಸಿದರೆ ಬೆಳೆ ಕೈಗೆ ಬರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ಇಡೀ ಬೆಳೆಗೆ ಶಾಪವಾಗಿ ಪರಿಣಮಿಸುತ್ತದೆ.ಕುರಿ ಸಾಕಾಣಿಕೆ: ಡಾಕಪ್ಪ ತಮ್ಮ ಜಮೀನಿನಲ್ಲಿಯೇ ಸಿಗುವ ಸೌಲಭ್ಯ ಬಳಸಿಕೊಂಡು ಕುರಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಆರಂಭ ದಲ್ಲಿ ಹತ್ತು ಇದ್ದ ಕುರಿಗಳ ಸಂಖ್ಯೆ ಈಗ 80ರ ಗಡಿದಾಟಿವೆ. (ಡಾಕಪ್ಪ ಅವರ ಮೊಬೈಲ್‌: 9632055526)‘ಈರುಳ್ಳಿಗೆ ಹೆಸರುವಾಸಿ’

ತಾಲ್ಲೂಕಿನ ಅರಕೇರಾ ಹೋಬಳಿಯ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಪೈಕಿ ಬಹುತೇಕ ಗ್ರಾಮಗಳ ರೈತರ ಮುಖ್ಯ ಬೆಳೆ ಈರುಳ್ಳಿ. ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ, ಇರದಿದ್ದರೂ ಇಂದಿಗೂ ಈರುಳ್ಳಿ ಬೆಳೆಯುವುದನ್ನು ನಿಲ್ಲಿಸಿಲ್ಲ. ಹೊರ ರಾಜ್ಯಗಳಲ್ಲೂ ಅರಕೇರಾದ ಈರುಳ್ಳಿ ಹೆಸರು ಪಡೆದಿದೆ. ಪ್ರತಿ ವರ್ಷ ನವೆಂಬರ್‌, ಡಿಸೆಂಬರ್‌ ಬಂದರೆ ಸಾಕು, ದಿನಕ್ಕೆ ಹತ್ತಾರು ಲಾರಿಗಳಷ್ಟು ಈರುಳ್ಳಿ ಮುಂಬೈ, ಹೈದರಾಬಾದ್‌, ರಾಯಚೂರು ಮತ್ತು ಇತರ ಜಿಲ್ಲೆಗಳ ಮಾರುಕಟ್ಟೆಗಳಿಗೆ ಹೋಗುತ್ತದೆ.

ಬಸವರಾಜ ನಾಯಕ ಮಸ್ಕಿ, ರೈತ ಮುಖಂಡ‘ಹಣ ಚೆಲ್ಲಬೇಕು’


ಈ ಹಿಂದೆ ಜಮೀನಿಗೆ ತಿಪ್ಪೆಗೊಬ್ಬರ ಹಾಕಿ ಈರುಳ್ಳಿ ಬೆಳೆಯಲಾ ಗುತ್ತಿತ್ತು. ಈಗ ಕಾಲ ಬದಲಾಗಿದೆ. ನಾಟಿ ಮಾಡಿದ ದಿನದಿಂದ ಕೊನೆಯವರಿಗೂ ಹಣ ಚೆಲ್ಲಿದರೂ ಬೆಳೆ ಕೈಗೆ ಸಿಗುವ ಭರವಸೆ ಇಲ್ಲ. ಇನ್ನೂ ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಕಚೇರಿವರೆಗೂ ಹೋದರೆ ಅವರು ಕಚೇರಿಗೆ ಬರುವುದೇ ಅಪರೂಪ.ರುಳ್ಳಿ ಬೆಳೆಯಲು ಸಲಹೆ

ನಾಟಿ ಮಾಡಿದ 5ನೇ ದಿನಕ್ಕೆ ಕೀಟಗಳ ಹತೋಟೆಗೆ ‘ಮನೊ ಸ್ಟಾರ್‌’ಎಂಬ ಕೀಟನಾಶ ಸಿಂಪರಣೆ. 10ನೇ ದಿನಕ್ಕೆ ಕಳೆ ನಾಶಕ ‘ಆಕ್ಸ್‌ ಗೋಲ್ಡ್‌’ ಸಿಂಪರಣೆ. 10ದಿನದ ನಂತರ ‘ಎಂ. 45’ ಹೆಸರಿನ ಪುಡಿ, 20 ದಿನಗಳ ನಂತರ ‘20.20’ ಹೆಸರಿನ ರಸಗೊಬ್ಬರ, (1ಎಕರೆಗೆ 1ಕ್ವಿಂಟಲ್‌) 20 ದಿನಗಳ ನಂತರ ‘ಬೌಜಾಮ್‌’ ಗುಳಿಗೆ (ಎಕರೆಗೆ ಹತ್ತು ಕೆ.ಜಿ.) ಇದಾದ ನಂತರ 20 ದಿನಗಳಲ್ಲಿಸಮೃದ್ಧ  ಈರುಳ್ಳಿ ಕೈಗೆ ಬರುತ್ತದೆ.ಅತೀ ತೇವಾಂಶ ಇರುವ ಜಮೀನಿಗೆ 1ಎಕರೆಗೆ 1ಕ್ವಿಂಟಲ್‌ ನಂತೆ ‘ಪೊಟಾಸ್’ ಮತ್ತು ತೇವಾಂಶ ಇಲ್ಲದ ಜಮೀನಿಗೆ ಪೊಟಾಸ್‌ ಬೇಕಾಗಿಲ್ಲ. ಇದರ ಬದಲಿಗೆ 1ಎಕರೆಗೆ 1ಕ್ವಿಂಟಲ್‌ನಂತೆ ‘ಡಿಎಪಿ’ ರಸಗೊಬ್ಬರ ಹಾಕಬೇಕು.

 

ಪ್ರತಿಕ್ರಿಯಿಸಿ (+)