ಗುಳೆ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ

7

ಗುಳೆ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ

Published:
Updated:

ಕೊಪ್ಪಳ:ಉದ್ಯೋಗ ಅರಸಿ ಜಿಲ್ಲೆಯ  ಜನರು ಗುಳೆ ಹೋಗುತ್ತಿರುವ ಕುರಿತು ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ತಕ್ಷಣ ಉದ್ಯೋಗ ಒದಗಿಸುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಬೇಕು. ಯಾವ ಗ್ರಾಮಗಳಿಂದ ಜನರು ಗುಳೆ ಹೋಗುತ್ತಿದ್ದಾರೆ ಎಂಬುದನ್ನು ಅರಿತು ಅಂತಹ ಗ್ರಾಮಗಳಿಗೆ ಭೇಟಿ ನೀಡಬೇಕು. ಗುಳೆ ಹೋಗುವುದಕ್ಕೆ ನಿಖರ ಕಾರಣಗಳನ್ನು ತಿಳಿದುಕೊಂಡು, ಸ್ಥಳೀಯವಾಗಿ ಪರಿಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿರುವ ಗ್ರಾಮಗಳಲ್ಲಿ ಯಾವುದೇ ಕೈಪಂಪ್ ಕೆಟ್ಟು ಹೋದಲ್ಲಿ ದುರಸ್ತಿಗಾಗಿ ಎಲ್ಲ ಉಪಕರಣಗಳಿಂದ ಸುಸಜ್ಜಿತವಾಗಿರುವ ಸಂಚಾರಿ ಘಟಕ ಪ್ರಾರಂಭಿಸಲು ಯೋಜಿಸಲಾಗಿದೆ. ಇನ್ನೊಂದು ವಾರದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.ನೀರಿನ ಸಮಸ್ಯೆ ಕುರಿತಂತೆ ಸಾರ್ವಜನಿಕರು ಮಾಹಿತಿ ಒದಗಿಸಲು ಪ್ರತಿ ತಾಲ್ಲೂಕಿನಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು. ದೂರು ಬಂದ ಕೂಡಲೇ ಸಂಚಾರಿ ದುರಸ್ತಿ ಘಟಕದ ಮೂಲಕ ಕೈಪಂಪ್ ಅಥವಾ ಮಿನಿ ನೀರು ಸರಬರಾಜು ಘಟಕಗಳನ್ನು ದುರಸ್ತಿಗೊಳಿಸಲು ಅಗತ್ಯ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಮ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry