ಗುರುವಾರ , ನವೆಂಬರ್ 21, 2019
20 °C

ಗೂಗಲ್‌ನಿಂದ ಡಿಜಿಟಲ್ ಉಯಿಲು!

Published:
Updated:

ಹ್ಯೂಸ್ಟನ್ (ಪಿಟಿಐ): ವ್ಯಕ್ತಿಯೊಬ್ಬನ ನಿಧನದ ನಂತರ ಆತನ ವೈಯಕ್ತಿಕ ಇ-ಮೇಲ್‌ಗಳನ್ನು ಯಾರು ಓದುತ್ತಾರೆ? ಅಥವಾ ಅದರಲ್ಲಿ ಉಳಿಸಿಕೊಂಡಿರುವ ಮಹತ್ವದ ದಾಖಲೆಗಳ ಮಾಹಿತಿಗಳನ್ನು, ದತ್ತಾಂಶಗಳು ಇನ್ನೊಬ್ಬರಿಗೆ ತಿಳಿಯುವುದಾದರೂ ಹೇಗೆ?- ಇಂಟರ್‌ನೆಟ್ ಬಳಕೆದಾರರ ಮನದಲ್ಲಿರುವ ಈ ಆತಂಕವನ್ನು ದೂರ ಮಾಡಲು ಅಂತರ್ಜಾಲದ ಮುಂಚೂಣಿ ಕಂಪೆನಿ ಗೂಗಲ್ ಮಾರ್ಗೋಪಾಯ ಕಂಡು ಹಿಡಿದಿದೆ.ಈ ಉದ್ದೇಶಕ್ಕಾಗಿಯೇ ಗೂಗಲ್ `ಇನ್‌ಆ್ಯಕ್ಟಿವ್ ಅಕೌಂಟ್ ಮ್ಯಾನೇಜರ್' ಎಂಬ ಹೊಸ ಟೂಲ್  (ಸೌಲಭ್ಯ) ಆರಂಭಿಸಿದೆ. ಇದನ್ನು ಡಿಜಿಟಲ್ ಉಯಿಲಿನಂತೆ ಬಳಸಬಹುದು ಎಂದು ಗೂಗಲ್ ಹೇಳಿಕೊಳ್ಳುತ್ತಿದೆ.ಕಾರ್ಯನಿರ್ವಹಣೆ ಬಗೆ: ಸುದೀರ್ಘ ನಿಷ್ಕ್ರಿಯತೆಯ ಅಥವಾ ಸಾವಿನ ನಂತರ ಕಂಪೆನಿ ಒದಗಿಸುವ ವಿವಿಧ ಸೇವೆಗಳಾದ ಇ-ಮೇಲ್, ಯೂ ಟ್ಯೂಬ್, ಸಾಮಾಜಿಕ ಜಾಲತಾಣ ಗೂಗಲ್+ನಲ್ಲಿರುವ ದತ್ತಾಂಶಗಳನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ರವಾನಿಸುವಂತೆ ಅಥವಾ ಸಂಪೂರ್ಣವಾಗಿ ಅಳಿಸಿ ಹಾಕುವಂತೆ `ಇನ್‌ಆ್ಯಕ್ಟಿವ್ ಅಕೌಂಟ್ ಮ್ಯಾನೇಜರ್' ಮೂಲಕ ಸಂಸ್ಥೆಗೆ ಮೊದಲೇ ನಿರ್ದೇಶಿಸಬಹುದು.ದತ್ತಾಂಶಗಳನ್ನು ಗೆಳೆಯ ಅಥವಾ ಕುಟುಂಬದ ಸದಸ್ಯ ಸೇರಿದಂತೆ ನಂಬಿಕಸ್ಥರೊಂದಿಗೆ  ಹಂಚಿಕೊಳ್ಳುವ ಅಥವಾ ಸಂಪೂರ್ಣವಾಗಿ ಅಳಿಸಿ ಹಾಕುವ ಆಯ್ಕೆಯನ್ನು ಗೂಗಲ್,  ಖಾತೆ ಸೆಟ್ಟಿಂಗ್ ಪುಟದಲ್ಲಿ ಬಳಕೆದಾರರಿಗೆ ನೀಡಿದೆ. ಗರಿಷ್ಠ ಹತ್ತು ನಂಬಿಕಸ್ಥ ವ್ಯಕ್ತಿಗಳನ್ನು ಇಲ್ಲಿ ಹೆಸರಿಸಬಹುದು.ದತ್ತಾಂಶಗಳನ್ನು ರವಾನಿಸುವುದಕ್ಕೂ ಮುನ್ನ ಎಷ್ಟು ಸಮಯ ಕಾಯಬೇಕು ಎಂಬುದನ್ನು ನಮೂದಿಸಲೂ ಅವಕಾಶ ಕಲ್ಪಿಸಲಾಗಿದೆ. ನಮೂದಿಸಿರುವ ಸಮಯ ಕೊನೆಗೊಳ್ಳುವುದಕ್ಕೂ ಒಂದು ತಿಂಗಳು ಮೊದಲು ಸಂಸ್ಥೆಯು ಬಳಕೆದಾರರಿಗೆ ಇ-ಮೇಲ್ ಮೂಲಕ ಜ್ಞಾಪನಾ ಸಂದೇಶ ಕಳುಹಿಸುತ್ತದೆ.ಈ ಸಂದೇಶಕ್ಕೂ ಖಾತೆದಾರರು ಪ್ರತಿಕ್ರಿಯಿಸದೇ ಇದ್ದರೆ, ಈ ಮೊದಲೇ ನಮೂದಿಸಿದ ನಂಬಿಕಸ್ಥ ವ್ಯಕ್ತಿಗಳನ್ನು ಸಂಪರ್ಕಿಸಿ ನಿರ್ದಿಷ್ಟ ಬಳಕೆದಾರರ ಖಾತೆ  ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತದೆ.ಅಂತಿಮವಾಗಿ, ಯೂಟ್ಯೂಬ್ ಸೇರಿದಂತೆ ಸಂಸ್ಥೆ ಒದಗಿಸುವ ಸೇವೆಗಳ ಎಲ್ಲಾ ಖಾತೆಗಳನ್ನು ರದ್ದುಪಡಿಸುವ ಮತ್ತು ಅವುಗಳಲ್ಲಿರುವ ದತ್ತಾಂಶಗಳನ್ನು ಶಾಶ್ವತವಾಗಿ ಅಳಿಸಿ ಹಾಕುವ ಆಯ್ಕೆಯನ್ನೂ ಬಳಕೆದಾರರಿಗೆ  ಸಂಸ್ಥೆ ನೀಡುತ್ತದೆ.

ಪ್ರತಿಕ್ರಿಯಿಸಿ (+)