ಗೂಡು ಪೊರಕೆಯೇ ಆಸರೆ

7

ಗೂಡು ಪೊರಕೆಯೇ ಆಸರೆ

Published:
Updated:

ಶ್ರೀನಿವಾಸಪುರ ಕರ್ನಾಟಕ ಆಂಧ್ರಪ್ರದೇಶದ ಗಡಿ ಸಮೀಪದ ಒಂದು ಪಟ್ಟಣ. ಆಂಧ್ರಪ್ರದೇಶದ ಕುಶಲ ಕರ್ಮಿಗಳಿಗೆ ಶ್ರೀನಿವಾಸಪುರ ತಾಲ್ಲೂಕೆಂದರೆ ಅಚ್ಚು ಮೆಚ್ಚು. ಕಾರಣ ಅವರ ಕರ ಕುಶಲ ಉತ್ಪನ್ನಗಳಿಗೆ ಇದು ಮಾರುಕಟ್ಟೆಯನ್ನು ಒದಗಿಸುತ್ತದೆ. ಹಾಗಾಗಿ ಆಂಧ್ರಪ್ರದೇಶದ ಬುಟ್ಟಿ ತಯಾರಕರು, ಮಕ್ಕರಿ ಹೆಣೆಯುವವರು, ಪೊರಕೆ ಹಾಗೂ ಗೂಡು ಪೊರಕೆ ಕಟ್ಟುವವರು ಇಲ್ಲಿ ಬಂದು ತಮ್ಮ ವ್ಯವಹಾರದಲ್ಲಿ ನಿರತರಾಗಿದ್ದಾರೆ.ಈ ಸಾಲಿನಲ್ಲಿ ಈಗ ಗೂಡು ಪೊರಕೆ ತಯಾರಿಸಿ ಮಾರಿ ಹೊಟ್ಟೆ ಹೊರೆದುಕೊಳ್ಳುವ ಜನರ ತಂಡಗಳೂ ಸೇರುತ್ತವೆ. ಈ ತಂಡಗಳು ತಾಲ್ಲೂಕಿನಲ್ಲಿ ಅಲ್ಲಲ್ಲಿ ಬೀಡುಬಿಟ್ಟಿವೆ. ತಮ್ಮ ಕುಟುಂಬಗಳೊಂದಿಗೆ ಬಂದಿರುವ ಇವರು, ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಂಡು, ಅಲ್ಲಿ ದೊರೆಯುವ ಈಚಲು ಮರಗಳಿಂದ ಗರಿಗಳನ್ನು ಸಂಗ್ರಹಿಸುತ್ತಾರೆ. ಹಾಗೆ ಸಂಗ್ರಹಿಸಿದ ಗರಿಗಳನ್ನು ಹದವಾಗಿ ಒಣಗಿಸಿ, ತಮಗೆ ಅಗತ್ಯವಾದ ಭಾಗವನ್ನು ಮಾತ್ರ ಕತ್ತರಿಸಿ, ಕಂಬಿ ಬ್ರೆಷ್‌ನಿಂದ ತೀಡಿ ಸಣ್ಣ ಎಳೆಗಳನ್ನಾಗಿ ಮಾಡುತ್ತಾರೆ. ಆ ಎಳೆಗಳನ್ನು ಒಟ್ಟುಗೂಡಿಸಿ ಉದ್ದನೆಯ ಬಿದಿರು ಕೋಲಿನ ಕೊನೆಗೆ ಕಟ್ಟುತ್ತಾರೆ. ಆಗ ಗೂಡು ಪೊರಕೆ ತಯಾರಾಗುತ್ತದೆ.ಮನೆ ಮೂಲೆಗಳಲ್ಲಿ ಕಟ್ಟುವ ಜೇಡರ ಬಲೆಯನ್ನು ತೆಗೆಯಲು ಬಳಸುವುದರಿಂದ ಇದನ್ನು ಗೂಡು ಪೊರಕೆ ಎಂದು ಕರೆಯಲಾಗುತ್ತದೆ. ಈ ಪೊರಕೆಗೆ ಹಳ್ಳಿ ಹಾಗೂ ಪಟ್ಟಣದಲ್ಲಿ ಬೇಡಿಕೆ ಇದೆ. ಹಾಗಾಗಿ ಹಳ್ಳಿಗಾಡಲ್ಲಿ ತಯಾರಿಸುವ ಈ ಪೊರೆಕೆಗಳನ್ನು ತಲೆಯ ಮೇಲೆ ಹೊತ್ತು ಸಮೀಪದ ಗ್ರಾಮ ಹಾಗೂ ಪಟ್ಟಣಕ್ಕೆ ಕೊಂಡೊಯ್ದು ಮಾರಿ ಜೀವನ ನಡೆಸುತ್ತಾರೆ.ಕರ್ನಾಟಕದಲ್ಲಿ ಈ ಪೊರಕೆಗೆ ಒಳ್ಳೆ ಬೇಡಿಕೆ ಇದೆ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಈಚಲು ಮರಗಳು ಇರುವುದರಿಂದ ನಮ್ಮ ವೃತ್ತಿ ಸುಲಭವಾಗಿದೆ. ಸರ್ಕಾರಿ ಜಮೀನಲ್ಲಿ ಬೆಳೆದಿರುವ ಈಚಲು ಗರಿ ಕೊಯ್ಯಲು ಯಾವುದೇ ಅಭ್ಯಂತರ ಇಲ್ಲ. ಈಚಲು ಗರಿ ಉಚಿತವಾಗಿ ಸಿಕ್ಕಿದರೂ, ಪೊರಕೆ ಕಟ್ಟಲು ಬಳಸುವ ಬಿದಿರು ಕೋಲಿನ ಬೆಲೆ ಹೆಚ್ಚಾಗಿದೆ. ಕಷ್ಟಪಟ್ಟು ಕಟ್ಟಿ ಬೀದಿ ಬೀದಿ ಸುತ್ತಿದರೆ ನಾಲ್ಕು ಕಾಸು ಸಿಗುತ್ತದೆ. ಮಡದಿ ಮಕ್ಕಳಿಗೆ ಅನ್ನ ಸಿಗುತ್ತದೆ. ಭಾಷೆಯ ತೊಡಕಿಲ್ಲ ಎನ್ನುತ್ತಾರೆ ಪೊರಕೆ ಕಟ್ಟುವ ರಾಮಾಂಜಪ್ಪ.ಈಚಲು ಗರಿಯನ್ನು ಗೂಡು ಪೊರಕೆ ತಯಾರಿಸಲು ಮಾತ್ರವಲ್ಲದೆ, ಮನೆಗಳಿಗೆ ಸುಣ್ಣ ಬಳಿಯಲು ಕುಂಚವನ್ನೂ ಕಟ್ಟುತ್ತಾರೆ. ಈ ಕುಂಚಗಳನ್ನು ಸಿಮೆಂಟ್ ಅಂಗಡಿಗಳಿಗೆ ಸಗಟಾಗಿ ಮಾರುತ್ತಾರೆ. ಅಂಗಡಿಯವರು ತಮ್ಮ ಗಿರಾಕಿಗಳಿಗೆ ಲಾಭ ಪಡೆದು ಮಾರುತ್ತಾರೆ. ಇದು ಸರಳ ಹಾಗೂ ಸಾಮಾನ್ಯ ಕಸಬಾಯಿತು. ಈಚಲು ಗರಿಯ ದಂಟನ್ನು ಬಳಸಿ ಕಲಾತ್ಮಕ ಬುಟ್ಟಿ ತಯಾರಿಕೆ ಒಂದು ವಿಶೇಷ. ಈ ಬುಟ್ಟಿಗಳಿಂದ ಕಲಾವಿದರಿಗೆ ಒಳ್ಳೆಯ ಲಾಭ ಸಿಗುತ್ತದೆ.ಹಿಂದೆ ಗ್ರಾಮೀಣ ಜನ ಈಚಲು ಎಲೆಯನ್ನು ಸಂಗ್ರಹಿಸಿ ಚಾಪೆಗಳನ್ನು ಹೆಣೆಯುತ್ತಿದ್ದರು. ಅವುಗಳನ್ನು ಮಲಗಲು ಮತ್ತು ಹುಣಸೆ ಹಣ್ಣನ್ನು ಕಟ್ಟಲು ಬಳಸುತ್ತಿದ್ದರು. ಆದರೆ ಕಾಲ ಬದಲಾದಂತೆ ಈಚಲು ಚಾಪೆಗೆ ಮಾನ್ಯತೆ ಕಡಿಮೆಯಾಗಿದೆ. ಹುಣಸೆ ಹಣ್ಣನ್ನು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿ ರವಾನಿಸಲಾಗುತ್ತಿದೆ.ಕಳ್ಳು ಮಾರಾಟ ಇದ್ದ ಕಾಲದಲ್ಲಿ ಈಚಲು ಮರವನ್ನು ಕಡಿಯುವಂತಿರಲಿಲ್ಲ. ಕಳ್ಳು ನಿಷೇಧ ಜಾರಿಗೆ ಬಂದ ಮೇಲೆ, ಈಚಲು ತೋಪುಗಳನ್ನು ಕಡಿದು ಕೃಷಿ ಚಟುವಟಿಕೆಗೆ ಬಳಸಲಾಯಿತು. ಹಾಗಾಗಿ ಈಗ ಸರ್ಕಾರಿ ಜಮೀನಲ್ಲಿ ಮಾತ್ರ ಈಚಲು ಮರಗಳನ್ನು ಕಾಣಲು ಸಾಧ್ಯವಾಗಿದೆ. ಅನ್ಯ ರಾಜ್ಯದ ಕರಕುಶಲ ವಸ್ತು ತಯಾರಿಸುವ ಬಡ ಕಲಾವಿದರು ಅದರ ಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry