ಗೂಡ್ಸ್ ಗಾಡಿಯಲ್ಲಿ ಕ್ರೀಡಾಪಟುಗಳ ಮೆರವಣಿಗೆ!

7

ಗೂಡ್ಸ್ ಗಾಡಿಯಲ್ಲಿ ಕ್ರೀಡಾಪಟುಗಳ ಮೆರವಣಿಗೆ!

Published:
Updated:
ಗೂಡ್ಸ್ ಗಾಡಿಯಲ್ಲಿ ಕ್ರೀಡಾಪಟುಗಳ ಮೆರವಣಿಗೆ!

ಮೈಸೂರು: ಅಲಂಕಾರವಿಲ್ಲದ, ಬಣ್ಣ ಮಾಸಿದ ಗೂಡ್ಸ್ ವಾಹನವೊಂದರಲ್ಲಿ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ನಿಲ್ಲಿಸಿ ನಡೆಸಿದ ಮೆರವಣಿಗೆಗೆ ಮೈಸೂರಿನ ರಸ್ತೆಗಳು ಭಾನುವಾರ ಸಾಕ್ಷಿಯಾದವು.ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಸರಳ ದಸರಾ ಆಚರಣೆ  ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಅದೇ ಪ್ರಕಾರ ಹಲವು ವಿಷಯಗಳಲ್ಲಿ ಖರ್ಚುಗಳಿಗೆ ಕತ್ತರಿ ಹಾಕಿದೆ. ಅದರ ಪರಿಣಾಮ 14ರಂದು ನಡೆದ ದಸರಾ ಕ್ರೀಡಾಕೂಟದ ಉದ್ಘಾಟನೆ ಮೆರವಣಿಗೆಯಲ್ಲಿಯೂ ಕಂಡುಬಂದಿತು!`ಮಹೀಂದ್ರಾ ಯೂಟಿಲಿಟಿ~ ಗೂಡ್ಸ್ ವಾಹನದಲ್ಲಿ ಅಜಾನುಬಾಹು ದೇಹದ ಒಲಿಂಪಿಯನ್ ವಿಕಾಸಗೌಡ, ಅವರ ತಂದೆ ಶಿವೇಗೌಡ, ಪ್ಯಾರಾಲಿಂಪಿಕ್ಸ್ ರಜತ ಪದಕ ವಿಜೇತ ಎಚ್.ಎನ್. ಗಿರೀಶ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಕರೆತರಲಾದ ವಾಹನವನ್ನು ನೋಡಿದವರೆಲ್ಲರಿಗೂ `ಸಾಂಪ್ರದಾಯಿಕ~ ದಸರಾದ ಪರಿಚಯವಾಗಿದ್ದು ಸುಳ್ಳಲ್ಲ.ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಮಹೀಂದ್ರಾ ಯೂಟಿಲಿಟಿ ವಾಹನದ ಇಕ್ಕಟ್ಟಾದ ಸ್ಟ್ಯಾಂಡ್‌ನಲ್ಲಿ ಏಳೆಂಟು ಜನ ಅಂತರರಾಷ್ಟ್ರೀಯ ಆಟಗಾರರು ತಮ್ಮ ಮುಂದಿದ್ದ ಒಂದೇ ಒಂದು ಆಧಾರವನ್ನು ಹಿಡಿದುಕೊಂಡು ನಿಂತಿದ್ದರು. ಚಾಮುಂಡಿ ವಿಹಾರದವರೆಗೂ ನಡೆದ ಮೆರವಣಿಗೆಯಲ್ಲಿ ಸಮತೋಲನ ಕಾಯ್ದುಕೊಂಡು ನಿಂತಿರುವುದೇ ಅವರಿಗೆ ಒಂದು ಸವಾಲಾಗಿತ್ತು. ಆದ್ದರಿಂದ ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಜನರಿಗೆ ಹೆಚ್ಚು ಹೊತ್ತು ಕೈಬೀಸಿ ಅಭಿನಂದಿಸುವ ಸಾಹಸಕ್ಕೆ ಅವರು ಹೋಗಲಿಲ್ಲ!ಶ್ವಾನಗಳ ಓಟ !

ಚಾಮುಂಡಿ ವಿಹಾರದ ಅಥ್ಲೆಟಿಕ್ಸ್ ಟ್ರ್ಯಾಕ್‌ನಲ್ಲಿ ಭಾನುವಾರ ಸಂಜೆ ಎರಡು ಶ್ವಾನಗಳು ಗಮನ ಸೆಳೆದವು.

ದಸರಾ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದ ವಾಲಿಬಾಲ್ ಆಟಗಾರ್ತಿ ಮಲ್ಲಿಕಾ ಶೆಟ್ಟಿ ಮತ್ತು ಯಶಸ್ವಿನಿ ಟ್ರ್ಯಾಕ್‌ನ ಒಂದು ಸುತ್ತು ಹಾಕಿ ಬಂದು ವೇದಿಕೆ ಮೇಲಿದ್ದ ಸಚಿವ ಎಸ್.ಎ. ರಾಮದಾಸ್ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜ್ಯೋತಿ ಹಿಡಿದು ಓಡಿದ ಕ್ರೀಡಾಪಟುಗಳನ್ನು ಇಡೀ ಟ್ರ್ಯಾಕ್‌ನಲ್ಲಿಯೂ ಹಿಂಬಾಲಿಸಿದ ಎರಡು ನಾಯಿಗಳು ಮೈದಾನದಲ್ಲಿದ್ದ ಸುಮಾರು 600 ಕ್ರೀಡಾಪಟುಗಳು ಮತ್ತು ಪ್ರೇಕ್ಷಕರ ಗಮನ ಸೆಳೆದವು.

ಬಡಾವಣೆಗೊಂದು ಕ್ರೀಡಾಂಗಣ: ರಾಮದಾಸ್

2051ನೇ ಇಸವಿಯವರೆಗೆ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಒಂದು ಮಹಾಯೋಜನೆಯನ್ನು ಮಾಡಲಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಂದು ಬಡಾವಣೆಯಲ್ಲಿಯೂ ಒಂದು ಕ್ರೀಡಾಂಗಣ ನಿರ್ಮಿಸಲಾಗುವುದು. ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕ್ರೀಡಾಪಟುಗಳು ದೇಶಕ್ಕೆ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಬರುವಂತೆ ಬೆಳೆಯಬೇಕು.

 -ಎಸ್.ಎ. ರಾಮದಾಸ್,  ಜಿಲ್ಲಾ ಉಸ್ತುವಾರಿ ಸಚಿವಗೌರವ ವಂದನೆಯಿಲ್ಲದ ಪಥಸಂಚಲನ!

ಕ್ರೀಡಾ ಪ್ರಮಾಣವಚನ ಸ್ವೀಕಾರ ಮತ್ತು ಪಥಸಂಚಲನದಲ್ಲಿ ಆದ ಕೆಲವು ಎಡವಟ್ಟುಗಳನ್ನು ಗಮಿಸಿದ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಕ್ರೀಡಾಪಟುಗಳನ್ನು ತರಾಟೆಗೆ ತೆಗೆದುಕೊಂಡರು.ಪಥ ಸಂಚಲನದಲ್ಲಿ ಧ್ವಜಕಟ್ಟೆಯ ಮೇಲೆ ನಿಂತಿದ್ದ ಗಣ್ಯರಿಗೆ ವಂದನೆ (ಸೆಲ್ಯೂಟ್) ಸಲ್ಲಿಸದೇ ಪ್ರತಿಯೊಂದು ತಂಡಗಳೂ ತಪ್ಪೆಸಗಿದವು. ಅಲ್ಲದೇ ಪ್ರತಿಜ್ಞಾ ವಿಧಿ ಸ್ವೀಕಾರದಲ್ಲಿಯೂ ಧ್ವಜವನ್ನು ಬಾಗಿಸಿ ಹಿಡಿಯಬೇಕು ಮತ್ತು ಎಲ್ಲ ಧ್ವಜಗಳ ಅಂಚುಗಳೂ ಒಂದಕ್ಕೊಂದು ಸೇರಿ ಹಿಡಿದು  ಪ್ರತಿಜ್ಞೆ ಬೋಧಿಸಬೇಕು. ಆದರೆ ಇದರಲ್ಲಿಯೂ ಲೋಪವಾಯಿತು.ಇದರಿಂದ ಅಸಮಾಧಾನಗೊಂಡ ಅಪ್ಪಚ್ಚು ರಂಜನ್  ತಮ್ಮ ಭಾಷಣದ ಆರಂಭದಲ್ಲಿಯೇ ಕ್ರೀಡಾಪಟುಗಳಿಗೆ ಪಾಠ ಹೇಳಿದರು.`ಕ್ರೀಡಾಪಟುಗಳಿಗೆ ಎಲ್ಲಕ್ಕಿಂತ ಮುಖ್ಯವಾಗಿ ಶಿಸ್ತು ಮುಖ್ಯ. ನಿಯಮಗಳಿಗೆ ಬದ್ಧರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಆದರೆ, ಪಥಸಂಚಲನದಲ್ಲಿ ಕೆಲವು ಅಶಿಸ್ತಿನ ನಡವಳಿಕೆಗಳು ಕಂಡು ಬಂದವು. ಅಲ್ಲದೇ ಪ್ರಮಾಣ ವಚನ ಸ್ವೀಕರಿಸುವಾಗ ಪ್ರತಿಯೊಂದು ತಂಡದ ಧ್ವಜಧಾರಿಗಳು ಬಂದು ಒಂದೆಡೆ ವೃತ್ತಾಕಾರದಲ್ಲಿ ನಿಲ್ಲಬೇಕು. ಮುಂದಿನ ಸಾರಿ ಇಂತಹ ಅಶಿಸ್ತು ಕಂಡರೆ ಕ್ರಮ ಕೈಗೊಳ್ಳುತ್ತೇನೆ~ ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry