ಗೂಳಿಯ ಅಬ್ಬರ ನಿರೀಕ್ಷೆ

7

ಗೂಳಿಯ ಅಬ್ಬರ ನಿರೀಕ್ಷೆ

Published:
Updated:

ಮುಂಬೈ (ಪಿಟಿಐ): ಈ ವಾರವೂ ಮುಂಬೈ ಷೇರುಪೇಟೆಯಲ್ಲಿ ಗೂಳಿಯ ಓಟ ಮುಂದುವರೆಯುವ ಸಾಧ್ಯತೆಗಳಿವೆ. ಕಳೆದ ವಾರಾಂತ್ಯದಲ್ಲಿ ಸೂಚ್ಯಂಕ 516 ಅಂಶಗಳಷ್ಟು ಹೆಚ್ಚಳ ಕಂಡು ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ಅಂದಾಜು ರೂ 1.5 ಲಕ್ಷ ಕೋಟಿಗಳಷ್ಟು ಹೆಚ್ಚುವಂತೆ ಮಾಡಿತ್ತು.ಹಬ್ಬದ ಸಂಭ್ರಮದಲ್ಲಿರುವ ಷೇರು ಪೇಟೆ ಹೂಡಿಕೆದಾರರಿಗೆ ಇನ್ನಷ್ಟು ಉತ್ತಮ ಫಲಗಳನ್ನು ನೀಡುವ ನಿರೀಕ್ಷೆ ಇದೆ. ಅಮೆರಿಕದ ಆರ್ಥಿಕತೆ ಚೇತರಿಸಿಕೊಂಡಿರುವುದು, ಗ್ರೀಕ್ ಸಾಲದ ಬಿಕ್ಕಟ್ಟಿಗೆ  ಹೊಸ ಪರಿಹಾರ ಕಂಡುಕೊಂಡಿರುವುದು ಜಾಗತಿಕ ಷೇರುಪೇಟೆಗಳಲ್ಲಿ ಉತ್ಸಾಹ ಮೂಡಿಸಿದೆ. ಈ ವಾರದಲ್ಲಿ ಸಿಮೆಂಟ್ ಮತ್ತು ವಾಹನ ತಯಾರಿಕೆ ಕಂಪೆನಿಗಳು ತಮ್ಮ ತಿಂಗಳ ವಹಿವಾಟಿನ ಅಂಕಿ ಅಂಶಗಳನ್ನು ಪ್ರಕಟಿಸಲಿವೆ. ಇದು ಕೂಡ ಪೇಟೆಗೆ ಬಲ ನೀಡಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಕಳೆದ ವಾರ ಷೇರುಪೇಟೆ ಒಟ್ಟಾರೆ ಶೇ 6ರಷ್ಟು ಚೇತರಿಕೆ ಕಂಡಿದ್ದು, ರಿಯಾಲ್ಟಿ ಮತ್ತು ಲೋಹ ಕಂಪೆನಿ ಷೇರುಗಳು ಶೇ 9ರಷ್ಟು ಲಾಭ ಮಾಡಿಕೊಂಡಿವೆ.  ಮಧ್ಯಮ ಶ್ರೇಣಿ ಮತ್ತು ಕಳೆ ಮಧ್ಯಮ ಶ್ರೇಣಿ ಸೂಚ್ಯಂಕ ಶೇ 2ರಷ್ಟು ಚೇತರಿಸಿಕೊಂಡಿವೆ.ಕೆಲವು ವಾರಗಳ ನಂತರ ಪೇಟೆಯಲ್ಲಿ ಕರಡಿಯನ್ನು ಹಿಂದಿಕ್ಕಿ, ಗೂಳಿ ಮುನ್ನುಗ್ಗುತ್ತಿದೆ. ಇದು ಉತ್ತಮ ಬೆಳವಣಿಗೆ. ಪ್ರತಿಕೂಲ ವಾತಾವರಣದಲ್ಲೂ ಇದು ಧನಾತ್ಮಕ ಚಲನೆಯನ್ನು ತೋರಿಸುತ್ತದೆ ಎಂದು ವೆಲ್ ಇಂಡಿಯಾ ಕಂಪೆನಿಯ ಹಿರಿಯ ವ್ಯವಸ್ಥಾಪಕ ವಿವೇಕ್ ನೇಗಿ ಪ್ರತಿಕ್ರಿಯಿಸಿದ್ದಾರೆ.`ಈ ಬಾರಿಯ ದೀಪಾವಳಿ ಮುಹೂರ್ತ ವಹಿವಾಟು ಕೂಡ ಶುಭಕರವಾಗಿದೆ.  ಹಲವು ಪ್ರಯತ್ನಗಳ ನಂತರ ಕೊನೆಗೂ ಗೂಳಿ ಮುನ್ನಡೆ ಸಾಧಿಸಿದ್ದು, ಸೂಚ್ಯಂಕವು 17,260 ಗಡಿಯನ್ನು ದಾಟಿದ್ದು, ಶೀಘ್ರದಲ್ಲೇ 18 ಸಾವಿರ ಮತ್ತು `ನಿಫ್ಟಿ~ 5,400ರ ಗಡಿಯನ್ನು ದಾಟಲಿದೆ  ಎಂದು ಷೇರು ದಲ್ಲಾಳಿ ಸಂಸ್ಥೆ ಏಂಜೆಲ್ ಬ್ರೋಕಿಂಗ್ ಅಭಿಪ್ರಾಯಪಟ್ಟಿದೆ.ಮಾರುತಿ ಸುಜುಕಿಯ ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ಶೇ 60ರಷ್ಟು ಕುಸಿದಿರುವುದು ಸೋಮವಾರದ ವಹಿವಾಟಿನ ಮೇಲೆ ಅಲ್ಪ ಪರಿಣಾಮ ಬೀರಬಹುದು.  ಐಸಿಐಸಿಐ, ಕೆನರಾ, ವಿಜಯ ಬ್ಯಾಂಕ್, ವಿಪ್ರೊ, ಸನ್ ಟಿವಿ, ಅಶೋಕ್ ಲೇಲ್ಯಾಂಡ್, ಏರ್‌ಟೆಲ್, ಒಎನ್‌ಜಿಸಿ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಎರಡನೆಯ ತ್ರೈಮಾಸಿಕ ಫಲಿತಾಂಶವನ್ನು ಈ ವಾರ ಪ್ರಕಟಿಸಲಿವೆ.

 


 


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry