ಗೂಳೂರು ಹೋಬಳಿ ತಾಂಡಾಗಳ ಸಮಸ್ಯೆ

7

ಗೂಳೂರು ಹೋಬಳಿ ತಾಂಡಾಗಳ ಸಮಸ್ಯೆ

Published:
Updated:

ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿಯ ಕೊಯ್ಯಗುಟ್ಟ ತಾಂಡಾದಲ್ಲಿ ಕುಡಿಯುವ ನೀರಿಗೂ ತೊಂದರೆ. ಗುಡಿಸಲು ಮನೆಗಳಲ್ಲೆ ಇಲ್ಲಿನವರ ವಾಸ. ನೈರ್ಮಲ್ಯ, ರಸ್ತೆ, ಬಸ್ ಸೌಕರ್ಯ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ತುರ್ತು ಆರೋಗ್ಯ ತಪಾಸಣೆಗೆಂದರೂ 4 ಕಿ.ಮೀ. ನಡೆಯಬೇಕು. ಈ ಗ್ರಾಮದ ಜನರು ಕೂಲಿಗಾಗಿ ಮುಂಬೈ, ದೆಹಲಿ, ಬೆಂಗಳೂರಿಗೆ ವಲಸೆ ಹೋಗ್ದ್ದಿದು, ಅವರು ದುಡಿದ ಹಣದಲ್ಲಿ ಕುಟುಂಬ ಸದಸ್ಯರಿಗೆ ಹಣ ಕಳುಹಿಸಿದರಷ್ಟೆ ಜೀವನ ನಿರ್ವಹಣೆ. ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಲಂಬಾಣಿ ಸಮುದಾಯಕ್ಕೆ ಮೂಲಸೌಕರ್ಯ ಸಮಸ್ಯೆ ಕಾಡುತ್ತಿದೆ.ತಾಲ್ಲೂಕು ಕೇಂದ್ರಕ್ಕೆ 12 ಕಿ.ಮೀ. ದೂರದಲ್ಲಿರುವ ಗೂಳೂರು ಹೋಬಳಿಯ ಕೊಯ್ಯಗುಟ್ಟತಾಂಡಾ, ಲಕ್ಷ್ಮಣತಾಂಡಾ, ತಿಪ್ಪನ್ನಕುಂಟತಾಂಡಾಗಳೂ ಮೂಲಸೌಕರ್ಯದಿಂದ ವಂಚಿತವಾಗಿವೆ. ಕೊಯ್ಯಗುಟ್ಟ ತಾಂಡಾದಲ್ಲಿ 18 ಕುಟುಂಬ ನೆಲೆಸಿದ್ದು, ಆ ಪೈಕಿ 10 ಕುಟುಂಬ ಗುಡಿಸಲು ಮನೆಗಳಲ್ಲಿ ವಾಸವಿದೆ. ಇದರಲ್ಲೆ ಜಾನುವಾರುಗಳ ವಾಸ್ತವ್ಯಕ್ಕೂ ವ್ಯವಸ್ಥೆ ಆಗಬೇಕು.ಗ್ರಾಮದ ಡಾಂಬರು ಕಾಣದ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿ ಬೆಳೆದಿದೆ. ಕೊಳವೆ ಬಾವಿ ಇದ್ದರೂ ವಿದ್ಯುತ್ ಅಭಾವದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಒಳಚರಂಡಿ ಇಲ್ಲದೆ ಬಳಸಿದ ನಿರು ರಸ್ತೆಗೆ ಹರಿದು ದುರ್ನಾತ ಬೀರುತ್ತಿದೆ. ಗ್ರಾಮದ ಸುತ್ತಮುತ್ತ ತಿಪ್ಪೆಗುಂಡಿ ಇದ್ದು, ನೀರಿನ ಟ್ಯಾಂಕ್ ಹಾಗೂ ತೊಟ್ಟಿಗಳಲ್ಲಿ ನಿಂತಿರುವ ನೀರು ಕಲುಷಿತಗೊಂಡು ಇದೇ ನೀರನ್ನು ಜಾನುವಾರು, ಗ್ರಾಮಸ್ಥರು ಬಳಸಬೇಕಾಗಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ಬಹುತೇಕ ಗ್ರಾಮಸ್ಥರು ಬಯಲು ಶೌಚಾಲಯಬಳಸುತ್ತಾರೆ.ಗೂಳೂರು ಹೋಬಳಿಯ ಕೊಯ್ಯಗುಟ್ಟತಾಂಡಾ, ಲಕ್ಷ್ಮಣತಾಂಡಾ, ತಿಪ್ಪನ್ನಕುಂಟ ತಾಂಡಾಗಳಿಗೆ ಸಾರಿಗೆ ಬಸ್ ಸಂಚರಿಸುವುದಿಲ್ಲ. ಏನೇ ಪರಿಕರ ಬೇಕಾದರೂ ಗೂಳೂರಿಗೆ 5 ಕಿ.ಮೀ. ನಡೆಯಬೇಕು. `ಮೂಲಸೌಕರ್ಯದಿಂದ ವಂಚಿತವಾಗಿರುವ ತಾಂಡಾಗಳಿಗೆ ಕುಡಿಯಲು ನೀರು ಬೇಕು. ರಸ್ತೆ, ಮನೆ, ನಿವೇಶನ ಕಲ್ಪಿಸಬೇಕು. ಒಳಚರಂಡಿ ನಿರ್ಮಿಸಬೇಕು. ಶಾಸಕರು, ಪಂಚಾಯಿತಿ ಜನಪ್ರತಿನಿಧಿಗಳು ಇವೆಲ್ಲ ಕಲ್ಪಿಸಬೇಕು' ಎಂದು ಗ್ರಾಮದ ಶಾಂತಾ ಬಾಯಿ  `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry