ಮಂಗಳವಾರ, ಮೇ 24, 2022
28 °C

ಗೃಹಾಲಂಕಾರ-ಮಣ್ಣ ಘಮಲು

ಹನಿಯೂರು ಚಂದ್ರೇಗೌಡ Updated:

ಅಕ್ಷರ ಗಾತ್ರ : | |

ಮಾನವ ಸಾವಿರಾರು ವರ್ಷಗಳಿಂದಲೂ ಅಲಂಕಾರಕ್ಕೆ ಪ್ರಾಶಸ್ತ್ಯ ನೀಡುತ್ತಾ ಬಂದವನು. ಕಾಲ ಬದಲಾದಂತೆಲ್ಲ ಅವನ ಅಲಂಕಾರ ಪ್ರಜ್ಞೆ ಹೆಚ್ಚುತ್ತಾ ಬಂತು. ತೊಡುವ ವಸ್ತ್ರಗಳಿಂದ ಹಿಡಿದು ವಾಸಿಸುವ ಪರಿಸರ, ಮನೆಗಳಲ್ಲಿ ಅಲಂಕಾರಕ್ಕೆ ಮಹತ್ವ ಕೊಟ್ಟಿರುವುದನ್ನು  ಕಾಣಬಹುದು.ಅಲಂಕಾರವಿರದ ಯಾವುದೇ ಸ್ಥಳ- ವಸ್ತು ನೋಡಲು ಏನು ಚೆಂದ?  ಅದಕ್ಕಾಗಿಯೇ ಎಂಬಂತೆ ಮಾನವ ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳಿಂದ, ತಯಾರಿಸಿದ ವಸ್ತುಗಳಿಂದ ಸಿಂಗರಿಸಿಕೊಂಡು ಸಂಭ್ರಮಿಸುತ್ತಿದ್ದ. ಇದನ್ನು ವೇದ-ಪುರಾಣಗಳ ಕಾಲದಿಂದಲೂ ಕಾಣಬಹುದು.ಮನೆ ಕಟ್ಟಲು ನಾವೆಷ್ಟು ಜಾಗೃತೆ ವಹಿಸುತ್ತೇವೆಯೋ  ಅಷ್ಟೇ ಗಮನವನ್ನು ಅದರ ಅಂದ ಹೆಚ್ಚಿಸಲು ತೆಗೆದುಕೊಳ್ಳುತ್ತೇವೆ. ಮನೆಯ ಪ್ರತಿ ಕೊಠಡಿ ಹೀಗೇ ಇರಬೇಕು... ಆ ಕೊಠಡಿ ಗೋಡೆಗೆ ಇದೇ ಬಣ್ಣ ಸರಿ.. ಆ ಗೋಡೆಗೆ ಇದೇ ಚಿತ್ರ ಇರಬೇಕು.. ಡೈನಿಂಗ್ ಟೇಬಲ್ ಇಲ್ಲಿದ್ದರೆ- ದಿವಾನ್ ಖಾನೆಯಲ್ಲಿ ಏನಿದ್ದರೆ ಚೆಂದ?  ಮನೆಯ ಒಟ್ಟಂದ ಸಂಪ್ರದಾಯ ಬದ್ಧ ವಸ್ತುಗಳಿಂದ ಅಲಂಕೃತವಾಗಿರಬೇಕೆ?.. ಇಲ್ಲ ಅತ್ಯಾಧುನಿಕವಾಗಿರಬೇಕೆ..?ಈ ಪ್ರಶ್ನೆಗಳು  ಮನದಲ್ಲಿ ಮೂಡುತ್ತವೆ. ಅವರವರ  ಅಭಿರುಚಿಗೆ ತಕ್ಕಂತೆ, ಗೃಹಾಲಂಕಾರಕ್ಕೆ ಮೆರುಗು ನೀಡುವ ಅಲಂಕಾರಿಕ ವಸ್ತುಗಳ ಬೇಟೆಗೆ  ಗ್ರಾಹಕರು ಮಾರುಕಟ್ಟೆಗೆ ಲಗ್ಗೆಯಿಡೋದು ಸಹ ಸಾಮಾನ್ಯವೆ.ಮೊದಲೆಲ್ಲ ಕಂಚು, ಬೆಳ್ಳಿ, ತಾಮ್ರ, ಹಿತ್ತಾಳೆಗಳಿಂದ ತಯಾರಿಸಿದ ವಸ್ತುಗಳಿಗೆ ಮಾರು ಹೋಗುತ್ತಿದ್ದ ಗ್ರಾಹಕರು, ಈಗ ಮಣ್ಣಿನಿಂದ ಮಾಡಿದ ಅಲಂಕಾರಿಕ ವಸ್ತುಗಳತ್ತಲೋ ನೋಟ ನೆಟ್ಟಿದ್ದಾರೆ. ಜೇಡಿಮಣ್ಣು, ಪಾಸ್ಲ್ಟರ್ ಆಫ್ ಪ್ಯಾರಿಸ್, ಆವೆ ಮಣ್ಣಿನಿಂದ ಮಾಡಿದ ಕಲಾಕೃತಿಗಳಿಗೆ ಭಾರಿ ಬೇಡಿಕೆ ಇದೆ.ಮನದ ಬಯಕೆ ಈಡೇರಿಸಲೇನೋ ಎಂಬಂತೆ ಮೈಸೂರು-ಕೆಂಗೇರಿ ವರ್ತುಲ ರಸ್ತೆಯ ಮರಿಯಪ್ಪನ ಪಾಳ್ಯ, ಮೈಸೂರು ರಸ್ತೆ ಅಂಚೆ ಪಾಳ್ಯದ ಬಳಿ ರಸ್ತೆ ಬದಿಯೇ ಇಂಥ ಮಳಿಗೆಗಳು ತಲೆ ಎತ್ತಿವೆ.ದೀಪದ ಕಂಬ, ವಿವಿಧ ಆಕಾರದ ಹಲಗೆ, ಮಣ್ಣಿನ ಆರತಿ ತಟ್ಟೆ, ಬಳೆಗಳ ಚಿತ್ತಾರದ ಮಡಕೆ, ಬಗೆಬಗೆ ಚಿತ್ತಾರಹೊತ್ತ ಹೂಕುಂಡ, ಧೂಪದ ತಟ್ಟೆ, ನೀರಿನ ಹೂಜಿ,  ಮಣ್ಣಿನ ಕುದುರೆ, ಆನೆ,  ಹ್ಯಾಪಿ ಮ್ಯಾನ್, ಆನೆ ಸೊಂಡಿಲು ಆಕಾರದ ಮಡಿಕೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಮನೆಯ ಅಂದಕ್ಕೆ ಮೆರುಗು ನೀಡುವ ವಿವಿಧ ನಮೂನೆ ಗಾಳಿ ಗಂಟೆಗಳೂ ಇಲ್ಲಿವೆ.ಆಂಧ್ರಪ್ರದೇಶದ ಚಿತ್ತೂರು, ಅನಂತಪುರ, ತಮಿಳುನಾಡು, ಉತ್ತರ ಪ್ರದೇಶದಿಂದ ತರಿಸುತ್ತೇವೆ ಎನ್ನುವ ವ್ಯಾಪಾರಿ ಬಷೀರ್ ರಾಜಸ್ತಾನ ಮೂಲದವರು. ದಿನಕ್ಕೆ 1 ಸಾವಿರದಿಂದ 3 ಸಾವಿರ ರೂಪಾಯಿ ವಹಿವಾಟು ನಡೆಸುವ ಬಷೀರ್‌ಗೆ ಎಲ್ಲ ಖರ್ಚು ಕಳೆದು 1 ಸಾವಿರ ರೂಪಾಯಿಗೆ 300 ರೂ ಸಿಗುತ್ತದೆ ಎನ್ನುತ್ತಾರೆ.`ನಾವು ತಯಾರಿಸುವ ಈ ಅಲಂಕಾರಿಕ ವಸ್ತುಗಳು ಬೇರೆಯವರ ಮನೆ ಅಂದಗೊಳಿಸುತ್ತವೆ. ಕೆಲಸದಲ್ಲಿ ತೃಪ್ತಿ ಇದೆ~ ಎನ್ನುತ್ತಾರೆ ಗಣೇಶನ ವಿಗ್ರಹಕ್ಕೆ ಬಣ್ಣ ಹಾಕುತ್ತಿತಿದ್ದ ಬಷೀರ್ ಪತ್ನಿ ಖಾನಮ್,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.