ಗೃಹಾಲಂಕಾರ; ಸೌಂದರ್ಯದ ಪ್ರತಿಬಿಂಬ

7

ಗೃಹಾಲಂಕಾರ; ಸೌಂದರ್ಯದ ಪ್ರತಿಬಿಂಬ

Published:
Updated:

ಗೃಹಾಲಂಕಾರ ಒಂದು ಕಲೆ. ಅನೇಕ ಮಹಿಳೆಯರು ಇಂದು ಕೆಲಸಕ್ಕೆ ಹೋಗುತ್ತಿದ್ದರೂ,ಗಂಡಸರಿಗೆ ಹೋಲಿಸಿದರೆ ಮನೆಯ ಬಗ್ಗೆ ಮಹಿಳೆಯರಲ್ಲಿಯೇ ಕಾಳಜಿಯೇ ಹೆಚ್ಚು. ಯಾವ ಯಾವ ವಸ್ತುಗಳು ಎಲೆಲ್ಲಿ ಇದ್ದರೆ ಚೆನ್ನ ಮತ್ತು ಹೇಗಿಟ್ಟರೆ ಚೆಂದ ಎನ್ನುವುದು ಮಹಿಳೆಯರಿಗೇ ಚೆನ್ನಾಗಿ ತಿಳಿದಿರುತ್ತದೆ.ನಾವು ಮಾತ್ರ ಸುಂದರವಾಗಿದ್ದರೆ ಸಾಲದು, ನಾವು ವಾಸ ಮಾಡುವ ಸ್ಥಳವೂ ಸುಂದರವಾಗಿರಬೇಕು. ಗೃಹಾಲಂಕಾರವು ಸೌಂದರ್ಯದ ಪ್ರತಿಬಿಂಬ. ಪತ್ರಿಕೆಗಳಲ್ಲಿ ಮುದ್ರಿತವಾಗಿರುವ, ಸಿನಿಮಾ-ಟಿವಿಗಳಲ್ಲಿ ಬರುವ ಬೃಹತ್ ಬಂಗಲೆಗಳನ್ನು ನೋಡಿ `ಅಂತಹ ಮನೆ ಇದ್ದರೆ ನಾವೂ ಅಲಂಕಾರ ಮಾಡಬಹುದು~ ಎಂಬ ಭಾವನೆ ಅನೇಕರಲ್ಲಿ ಇರುತ್ತದೆ.ಆದರೆ, ನಾವು ಇರುವ ಚಿಕ್ಕ ಮನೆಯನ್ನೇ, ನಮ್ಮ ಮನೆಯಲ್ಲಿರುವ  ವಸ್ತುಗಳನ್ನು ಬಳಸಿ, ಕಡಿಮೆ ಖರ್ಚಿನಲ್ಲೇ ಆಕರ್ಷಕವಾಗಿಟ್ಟುಕೊಳ್ಳಲು ಸಾಧ್ಯ. ಪುಟ್ಟ ಮನೆಯನ್ನು ಒಪ್ಪುವಂತೆ ಇಟ್ಟುಕೊಳ್ಳುವ ಉಪಾಯ ಇಲ್ಲಿದೆ.ಹಾಲ್: ಸಾಮಾನ್ಯವಾಗಿ ಮನೆಯೊಂದರಲ್ಲಿ ಹಾಲ್, ಬೆಡ್ ರೂಮ್, ಅಡುಗೆಮನೆ, ಸ್ನಾನ ಹಾಗೂ ಶೌಚಾಲಯ ಇದ್ದೆೀ ಇರುತ್ತವೆ. ಮನೆಯಲ್ಲಿ ಅಡಿಯಿರಿಸಿದ ತಕ್ಷಣ ಮೊದಲಿಗೆ ಕಾಣುವುದು ಹಾಲ್. ಇದರಲ್ಲಿ ಸಹಜವಾಗಿ ಸೋಫಾ, ದಿವಾನ್ ಕಾಟ್, ಟೇಬಲ್ ಅಥವಾ ಟೀ ಪಾಯ್ ಇರುತ್ತವೆ ಎಂದುಕೊಳ್ಳಿ. ಸುಮ್ಮನೇ ಜಾಗ ಇದೆ ಎಂದು ಎಲ್ಲಿ ಬೇಕೆಂದಲ್ಲಿ ವಸ್ತುಗಳನ್ನು ಇಡುವ ಬದಲು ಯಾವ ವಸ್ತುವಿಗೆ ಎಷ್ಟೆಷ್ಟು ಜಾಗ ಬೇಕು ಎಂಬುದನ್ನು ಅಂದಾಜು ಮಾಡಿಕೊಂಡು ಆಯಾ ವಸ್ತುಗಳನ್ನು ಆಯಾ ಜಾಗಕ್ಕೇ ಹೊಂದಿಸಿಟ್ಟರೆ ಚೆಂದ.ಮನೆ ಚಿಕ್ಕದಾಗಿದ್ದರೆ ಸೋಫಾದಂಥ ವಸ್ತುಗಳು ತುಂಬಾ ಜಾಗ ಆಕ್ರಮಿಸುವ ಮೂಲಕ ಅತಿಥಿಗಳು ಬಂದಾಗ ಉಂಟಾಗುವ ತೊಂದರೆ ತಪ್ಪಿಸಲು, ಉತ್ತಮ ಗುಣಮಟ್ಟದ ಪಾಸ್ಲ್ಟಿಕ್ ಕುರ್ಚಿಗಳನ್ನು ಬಳಸಬಹುದು. ಅಗತ್ಯ ಮುಗಿದ ಬಳಿಕ ಅವನ್ನು ಎತ್ತಿಡುವ ಮೂಲಕ ಹೆಚ್ಚಿನ ಜಾಗ ಮಾಡಿಕೊಳ್ಳಬಹುದು. ಕುರ್ಚಿಗಳನ್ನು ಆಯ್ದುಕೊಳ್ಳುವಾಗ ಮನೆಯ ಗೋಡೆಯ ಬಣ್ಣಕ್ಕೆ ಹೊಂದುವಂತೆ ಆಯ್ದುಕೊಳ್ಳಿ.ಹಾಗೆಯೇ ಮನೆಯ ಕಿಟಕಿಗಳಿಗೆ ಪರದೆ (ಕರ್ಟನ್) ತುಂಬಾ ಅಗತ್ಯ. ಅವನ್ನು ಕೊಳ್ಳುವಾಗ ಚೆಂದದ ಬಣ್ಣಕ್ಕಿಂತ ಅವು ಪಾರದರ್ಶಕವಾಗಿವೆಯೇ ಎಂಬುದನ್ನು ಪರೀಕ್ಷಿಸಬೇಕು. ಪರದೆಗಳು ಪಾರದರ್ಶಕವಾಗಿದ್ದರೆ ರಾತ್ರಿಯಲ್ಲಿ ಮನೆಯ ಒಳಗಿನ ನೋಟ ಹೊರಗಿನವರಿಗೆ ಕಾಣಬಹುದು. ಇದು ಸುರಕ್ಷಿತಲ್ಲ ಹಾಗೂ  ನಿಮ್ಮ ಖಾಸಗಿ ಜೀವನಕ್ಕೆ ಭಂಗ ತರುತ್ತದೆ.ಪರದೆಗಳನ್ನು ಹಾಕುವುದರಲ್ಲೂ ಜಾಣ್ಮೆಯಿದೆ. ಮನೆಯಲ್ಲಿರುವ ಸಾಮಾನುಗಳು ಅಥವಾ ಗೋಡೆಯ ಬಣ್ಣಕ್ಕೆ ಹೊಂದುವಂತಹ ಪರದೆಗಳನ್ನು ಆಯ್ದುಕೊಳ್ಳಬೇಕು. ನೋಡಿದ ತಕ್ಷಣ ಮನಸ್ಸಿಗೆ ಆನಂದ ಮತ್ತು ಸಮಾಧಾನ ನೀಡುವಂತಹ ಬಣ್ಣ ಅವುಗಳಿಗೆ ಇರಬೇಕು. ಅದರಲ್ಲೂ ಬಳ್ಳಿ, ಹೂಗಳ ಚಿತ್ರ ಇರುವ ಕರ್ಟನ್ ಆಯ್ಕೆ ಮಾಡಿದರೆ ನಮ್ಮ ಸುತ್ತಲೂ ನೈಸರ್ಗಿಕ ಪರಿಸರದ ಅನುಭವವಾಗುತ್ತದೆ ಹಾಗೂ ನೋಡಲೂ ಸುಂದರವಾಗಿರುತ್ತವೆ.ದುಬಾರಿ ಫ್ಲವರ್ ಪಾಟ್ ಮತ್ತು ಫ್ಲವರ್ ವಾಸ್ ಬದಲಾಗಿ ಮನೆಯಲ್ಲೇ ಇರುವ ವಸ್ತುಗಳಿಂದಲೇ ಅಲಂಕರಿಸಬಹುದು. ಮನೆಯಲ್ಲಿ ಗಾಜಿನ ಮತ್ತು ಪ್ಲಾಸ್ಟಿಕ್ ಬಾಟಲಿಗಳು ಇದ್ದೆೀ ಇರುತ್ತವೆ. ಅವುಗಳಲ್ಲಿ ನೀರು ಹಾಕಿ, ಮನಿ ಪ್ಲಾಂಟ್ ಇರಿಸಿ ಗಾಳಿ ಬೆಳಕು ಇರುವ ಕಡೆ ಅಥವಾ ಅತಿಥಿಗಳು ಕೂರುವ ಕಡೆ ಇರಿಸಿದರೆ ಸುಂದರವಾಗಿ ಕಾಣುತ್ತವೆ. ಈ ಪ್ಲಾಂಟ್ ಇರುವ ಬಾಟಲಿಯಲ್ಲಿನ ನೀರನ್ನು ವಾರಕ್ಕೊಂದು ಸಾರಿ ಬದಲಿಸುತ್ತ ಹೋದರೆ ಚೆನ್ನಾಗಿ ಬೆಳೆಯುತ್ತದೆ.ಖಾಲಿಯಿರುವ  ಪ್ಲಾಸ್ಟಿಕ್ ಅಥವಾ ಗಾಜಿನ ಡಬ್ಬಗಳಲ್ಲಿ ಶೋ ಗಿಡಗಳ ಹಸಿರು ಟೊಂಗೆ ಇರಿಸಿ, ಮಧ್ಯೆ ಯಾವುದಾದರೂ ಗಾಢ ಬಣ್ಣದ ಹೂವು ಇಟ್ಟು ಡೆಕೊರೇಟ್ ಮಾಡಬಹುದು. ಸುತ್ತ ಕುರ್ಚಿಗಳನ್ನು ಇಟ್ಟು ಮಧ್ಯದಲ್ಲಿ ಉತ್ತಮ ಕುಸುರಿ ಇರುವ ಬಟ್ಟೆಯಿಂದ ಹೊದಿಸಿದ ಟೀಪಾಯ್ ಮೇಲೆ ಅಲಂಕಾರ ಮಾಡಿದ ಡಬ್ಬ ಇರಿಸಿದರೆ ಸುಂದರವಾಗಿ ಕಾಣುತ್ತದೆ.ಗೃಹಾಲಂಕಾರದಲ್ಲಿ ಪೋಸ್ಟರ್‌ಗೂ ಈಗ ಪ್ರಮುಖ ಸ್ಥಾನ. ದುಬಾರಿ ದುಡ್ಡು ತೆತ್ತು ಅವನ್ನು ಹೊರಗಿನಿಂದ ತರುವ ಬದಲು ಮನೆಗೆ ಬರುವ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಇರುವ ಕಣ್ಣಿಗೆ ಮುದ ನೀಡುವ ಹಾಗೂ ನಿಮ್ಮ ಗೋಡೆಯ ಬಣ್ಣಕ್ಕೆ ಒಪ್ಪುವ ಚಿತ್ರಗಳನ್ನು ಕತ್ತರಿಸಿ ಅಂಟಿಸಬಹುದು.ಅಡುಗೆಮನೆ: ಅಡುಗೆಮನೆ ನಮ್ಮ ದೇಹದ ಹೃದಯದ ಭಾಗವಿದ್ದಂತೆ. ಹೃದಯ ಚನ್ನಾಗಿ ಕೆಲಸ ಮಾಡಿದರೆ ನಾವು ಆರೋಗ್ಯವಾಗಿರುತ್ತೇವೆ. ಹಾಗೆಯೇ, ಅಡುಗೆಮನೆ ಸ್ವಚ್ಛವಾಗಿದ್ದರೆ ನಾವೂ ಆರೋಗ್ಯವಾಗಿರುತ್ತೇವೆ.ಅಡುಗೆ ಕೋಣೆ ಕೇವಲ ಅಡುಗೆ ಮಾಡಲು ಮಾತ್ರ ಎಂದು ಉದಾಸೀನ ಮಾಡಿ, ಪಾತ್ರೆ-ಪಗಡೆ ಹಾಗೂ ಅಡುಗೆ ವಸ್ತುಗಳನ್ನು ಎಲ್ಲಿಬೇಕೆಂದಲ್ಲಿ ಇಟ್ಟರೆ ಅದರ ಅಂದವೇ ಕೆಟ್ಟು ಹೋಗುತ್ತದೆ. ಆದ್ದರಿಂದ ಪ್ರತಿನಿತ್ಯ ಅಡುಗೆಗೆ ಬೇಕಾಗುವ ಪಾತ್ರೆಗಳು, ಸಾಮಗ್ರಿಗಳನ್ನು ಕೈಗೆಟುಕುವ ಹಾಗೆ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಬೇಕು.ಪಾತ್ರೆ ತೊಳೆದಾದ ಮೇಲೆ ಸಿಂಕ್‌ಗೆ ಬಿಸಿನೀರು ಹಾಕಿ ತೊಳೆಯಬೇಕು.  ಅಡುಗೆ ಮನೆಯಲ್ಲೂ ಮನಿಪ್ಲಾಂಟ್ ಇಟ್ಟುಕೊಳ್ಳುವ ಮೂಲಕ ಮನಸ್ಸಿಗೆ ಮುದ ತಂದುಕೊಳ್ಳಬಹುದು. ಅಡುಗೆ ಮಾಡುವಾಗ ಎಕ್ಸಾಸ್ಟ್ ಫ್ಯಾನ್ ಹಾಕುವುದನ್ನು ಮರೆಯಬೇಡಿ.ಬೆಡ್ ರೂಮ್: ನಿಮ್ಮ ಖಾಸಗಿ ಕೋಣೆಯಾದ ಇದನ್ನು ಒಪ್ಪವಾಗಿರಿಸಿಕೊಳ್ಳಬೇಕು. ಈ ಕೋಣೆಯಲ್ಲಿ ಮಂಚವಿದ್ದರೆ ಅದರ ಮೇಲೆ ಸುಂದರ ಮೇಲು ಹಾಸು (ಬೆಡ್‌ಶೀಟ್) ಹಾಕಿ, ಅದರ ಮೇಲೆ ದಿಂಬುಗಳನ್ನು ನೀಟಾಗಿ ಇರಿಸುವ ಮೂಲಕ ಆಕರ್ಷಕವಾಗಿಸಬಹುದು. ದಿನವೂ ಒಂದೇ ತೆರನಾದ ದಿಂಬುಗಳನ್ನಿಟ್ಟರೆ ಏಕತಾನತೆ ಬರುತ್ತದೆ. ಇದನ್ನು ತಪ್ಪಿಸಲು ಪ್ರತಿದಿನವೂ ವಿವಿಧ ಆಕೃತಿಯ, ವಿವಿಧ ಬಣ್ಣದ ದಿಂಬುಗಳನ್ನು ಇರಿಸಿ ಈ ಕೋಣೆಯ ಅಂದ ಹೆಚ್ಚಿಸಬಹುದು.ಬೇರೆ ಕೋಣೆಗಳಿಗಿಂತ ಪರದೆಗಳ ಅಗತ್ಯ ಬೆಡ್‌ರೂಮ್‌ಗೆ ಹೆಚ್ಚು. ಆದ್ದರಿಂದ ಪಾರದರ್ಶಕವಲ್ಲದ, ಗಾಢ ಬಣ್ಣದ, ಸುಂದರ ಪರದೆಗಳನ್ನು ಈ ಕೋಣೆಗೆ ಆಯ್ದುಕೊಳ್ಳಿ. ನಿಮಗೊಪ್ಪುವ ಪೋಸ್ಟರ್‌ಗಳನ್ನು ಅಂಟಿಸಿ ಕೋಣೆಯ ಸೌಂದರ್ಯ ಹೆಚ್ಚಿಸಬಹುದು.ಬಾತ್ ರೂಮ್: ಅಡುಗೆ ಮನೆಗೆ ಕೊಟ್ಟಷ್ಟೇ ಮಹತ್ವವನ್ನೂ ಶೌಚಾಲಯಕ್ಕೂ ನೀಡಬೇಕು.

ಈಗಂತೂ ಮನೆಗಳಲ್ಲೇ ಶೌಚಾಲಯ ಇರುವುದರಿಂದ ಅವನ್ನು ಸ್ವಚ್ಛವಾಗಿಟ್ಟುಕೊಂಡಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಇದಕ್ಕೆ ಪ್ರತಿದಿನವೂ ಫಿನಾಯಿಲ್ ಅಥವಾ ಇತರ ಕ್ರಿಮಿನಾಶಕಗಳನ್ನು ಬಳಸಿ ಶುಭ್ರವಾಗಿಟ್ಟುಕೊಳ್ಳಬೇಕು. ಬಾತ್‌ರೂಂನಲ್ಲಿ ಇರುವ ಟೈಲ್ಸ್ ಬಣ್ಣಕ್ಕೆ ತಕ್ಕಂತೆ ಬಕೆಟ್ ಮತ್ತು ಮಗ್ ಇರಿಸಿದರೆ ಸುಂದರವಾಗಿ ಕಾಣುತ್ತವೆ. ಈ ವಸ್ತುಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛವಾಗಿ ತೊಳೆದಿಟ್ಟುಕೊಳ್ಳಬೇಕು.`ಮನೆಯೇ ದೇವಾಲಯ ಮನಸ್ಸೇ ದೇವರು~ ಎನ್ನುವ ಮಾತಿದೆ. ನಾವಿರುವ ಈ ಗುಡಿಯನ್ನು ನಮ್ಮಲ್ಲೇ ಇರುವ ವಸ್ತುಗಳನ್ನು ಬಳಸಿ ಸ್ವಚ್ಛ, ಸುಂದರವಾಗಿ ಇರಿಸಿಕೊಳ್ಳಬಹುದು.             

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry