ಶನಿವಾರ, ಫೆಬ್ರವರಿ 27, 2021
31 °C

ಗೃಹಿಣಿಯರ ಇಂಗ್ಲಿಷ್ ಕಲಿಕೆ

ಅನಿತಾ ಎಚ್‌. Updated:

ಅಕ್ಷರ ಗಾತ್ರ : | |

ಗೃಹಿಣಿಯರ ಇಂಗ್ಲಿಷ್ ಕಲಿಕೆ

ಇಂಗ್ಲಿಷಿನಲ್ಲಿ ಮಾತನಾಡಬೇಕು ಎನ್ನುವ ಗೃಹಿಣಿಯೊಬ್ಬಳ ತವಕವನ್ನೇ ವಸ್ತುವಾಗಿಟ್ಟುಕೊಂಡು ನಿರ್ಮಿಸಿದ ‘ಇಂಗ್ಲಿಷ್‌ ವಿಂಗ್ಲಿಷ್‌’ ಸಿನಿಮಾದಂತೆ ನಮ್ಮ ಈ ಮೆಟ್ರೊ ಮಹಿಳೆಯರಲ್ಲೂ ಇಂಗ್ಲಿಷ್‌ ಕಲಿಯುವ ತವಕವಿದೆ. ಕಲಿಯದ ಬಗ್ಗೆ ತಲ್ಲಣವೂ ಇದೆ.ಪತಿಗೆ ಸರಿಸಾಟಿಯಾಗಿ ನಿಲ್ಲಬೇಕು, ಪತಿಯ ಕಚೇರಿ ವ್ಯವಹಾರವನ್ನು ತಾನೂ ನಿರ್ವಹಿಸಬೇಕು; ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ ಎಲ್ಲರಂತೆ ತಾನೂ ಇಂಗ್ಲಿಷಿನಲ್ಲಿ ಮಾತನಾಡಬೇಕು, ಮಗುವಿನ ಶಾಲೆಯಲ್ಲಿ ಪೋಷಕರ ಸಭೆಯಲ್ಲಿ ಇಂಗ್ಲಿಷಿನಲ್ಲಿ ಉತ್ತರಿಸಬೇಕು, ಅವಳಿಗೆ ಇಂಗ್ಲಿಷಿನಲ್ಲಿ ಮಾತನಾಡಲು ಬರುವುದಿಲ್ಲ ಎಂದು ಹಂಗಿಸುವವರಿಗೆ ಇಂಗ್ಲಿಷಿನಲ್ಲಿ ಮಾತನಾಡಿ ಸೆಡ್ಡು ಹೊಡೆಯಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು, ಸಂದರ್ಶನಗಳನ್ನು ಧೈರ್ಯವಾಗಿ ಎದುರಿಸಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎಂಬ ಮಹದಾಸೆ ಅವರಲ್ಲೂ ಇದೆ.ಇಂತಹ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ಅವರು ಆಯ್ದುಕೊಂಡಿದ್ದು ಇಂಗ್ಲಿಷ್‌ ಕಲಿಸುವ ಕೇಂದ್ರಗಳನ್ನು. ಆದರೆ ‘ಸ್ಪೋಕನ್ ಇಂಗ್ಲಿಷ್’ ತರಬೇತಿ ಕೇಂದ್ರಗಳ ಪೈಕಿ ನೊಂದವರಲ್ಲಿ ನೈತಿಕ ಸ್ಥೈರ್ಯ ತುಂಬುತ್ತಲೇ ಇಂಗ್ಲಿಷ್‌ ತರಬೇತಿ ನೀಡುತ್ತಿದೆ ಬಸವೇಶ್ವರನಗರದ ಶರ್ಮಾ ಸ್ಪೋಕನ್‌ ಇಂಗ್ಲಿಷ್‌ ತರಗತಿ ಕೇಂದ್ರ.

 

ಸುಮಾರು 25ರಿಂದ 40ರ ಹರೆಯದ ಗೃಹಿಣಿಯರು ಕೈಯಲ್ಲಿ ಪುಸ್ತಕ, ಪೆನ್ನು ಹಿಡಿದು ತರಗತಿಗೆ ಬರುವ ಶಿಸ್ತು ಥೇಟ್ ವಿದ್ಯಾರ್ಥಿಗಳಂತೆಯೇ ಇರುತ್ತದೆ. ಆದರೆ ಅವರಿಗೆದುರಾದ ಕೆಟ್ಟ ಅನುಭವಗಳೇ ಈ ವಯಸ್ಸಿನಲ್ಲೂ ವಿದ್ಯಾರ್ಥಿಗಳಾಗುವಂತೆ ಪ್ರೇರೇಪಿಸಿದೆ.‘ಒಮ್ಮೆ ನನ್ನ ತಾಯಿಯ ಸ್ನೇಹಿತೆ ಮನೆಗೆ ಬಂದಿದ್ದರು. ಅವರು ಇಂಗ್ಲಿಷಿನಲ್ಲಿ ಪ್ರಶ್ನೆಯೊಂದನ್ನು ಕೇಳಿದಾಗ ಕೂಡಲೇ ಇಂಗ್ಲಿಷ್‌ನಲ್ಲಿಯೇ ಉತ್ತರಿಸಲು ಸ್ವಲ್ಪ ತಡವರಿಸಿದೆ. ವ್ಯಾಕರಣ ಬಳಕೆಯಲ್ಲೂ ತಪ್ಪುಗಳಾದವು. ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ದರೂ ಇಂಗ್ಲಿಷಿನಲ್ಲಿ ಮಾತನಾಡಲು ಬರೋದಿಲ್ವಾ ಎಂಬ ಅವರ ವ್ಯಂಗ್ಯ ನುಡಿ. ಇನ್ನೊಮ್ಮೆ ನನ್ನ ಮಗುವಿನ ಶಾಲೆಯ ಪೋಷಕರ ಸಭೆಯಲ್ಲಿ ಮುಖ್ಯೋಪಾಧ್ಯಾಯರು  ನಾವು ಇಂಗ್ಲಿಷಿನಲ್ಲಿ ಕೇಳುವ ಪ್ರಶ್ನೆಗೆ ನಿಮ್ಮ ಮಗು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಮನೆಯಲ್ಲಿ ಸರಿಯಾಗಿ ಹೇಳಿಕೊಡುತ್ತಿದ್ದೀರಾ ಇಲ್ಲವಾ ಎಂಬ ಚುಚ್ಚುಮಾತು ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಇದೆಲ್ಲದಕ್ಕೂ ಉತ್ತರ ನೀಡುವ ಸಲುವಾಗಿ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಯ ಲೇಬೇಕೆಂದು ತೀರ್ಮಾನಿಸಿದೆ’ ಎನ್ನುತ್ತಾರೆ ಗೃಹಿಣಿ ಮಮತಾ.‘ನನ್ನ ಪತಿ ಸಾಫ್ಟ್‌ವೇರ್‌ ಎಂಜಿನಿಯರ್‌. ಅವರಿಗೆ ಇಂಗ್ಲಿಷ್‌ ಚೆನ್ನಾಗಿ ಬರುತ್ತೆ. ನನಗೆ ಅರ್ಥವಾಗುತ್ತೆ ಆದರೆ ಮಾತನಾಡಲು ಕಷ್ಟ. ಪತಿಯ ಕಂಪೆನಿಯಿಂದ ಸಭೆ, ಸಮಾರಂಭ, ಪ್ರವಾಸ ಏರ್ಪಡಿಸಿದಾಗ ಪತಿಯ ಸ್ನೇಹಿತರು ಮತ್ತು ಅವರ  ಪತ್ನಿಯರೊಂದಿಗೆ ಬೆರೆಯಲು ತುಂಬಾ ಕಷ್ಟವಾಗುತ್ತಿತ್ತು. ಮಾತನಾಡಿದ್ದು ತಪ್ಪಾಗಿ ಬಿಟ್ಟರೆ ಎಂಬ ಹಿಂಜರಿಕೆಯಿಂದ ಮೌನವಾಗಿರುತ್ತಿದ್ದೆ. ಇದರಿಂದಾಗಿ ನನ್ನ ಪತಿಯೂ ಅನೇಕ ಸಲ ಮುಜುಗರಕ್ಕೆ ಒಳಗಾಗಿದ್ದುಂಟು. ಬಿಎ ಓದಿದ್ದರೂ ನನಗೇಕೆ ಇಂಗ್ಲಿಷಿನಲ್ಲಿ ಮಾತನಾಡಲು ಬರುತ್ತಿಲ್ಲ. ನಾನು ಗೃಹಿಣಿಯಾಗಿದ್ದರೇನಂತೆ ವ್ಯವಹಾರದ ದೃಷ್ಟಿಯಿಂದಲಾದರೂ ಕಲಿಯಲೇಬೇಕೆಂದು ತೀರ್ಮಾನಿಸಿ ತರಗತಿಗೆ ಬರುತ್ತಿದ್ದೇನೆ’ ಎಂಬುದು ಲತಾ ಅವರ ಅಭಿಪ್ರಾಯ. ‘ನನ್ನ ಪತಿಗೆ ನಾನು ಇಂಗ್ಲಿಷಿನಲ್ಲಿ ಮಾತನಾಡಬೇಕು ಎಂಬ ಇಚ್ಛೆ. ಆದರೆ ನಾನು ಕುಗ್ರಾಮದಲ್ಲಿ ಹುಟ್ಟಿ ಬೆಳೆದವಳು. ಬಿಎಸ್ಸಿ ಮಾಡಿದ್ದೇನೆಯಾದರೂ ಇಂಗ್ಲಿಷಿನಲ್ಲಿ ಮಾತನಾಡಲು ಬಲು ಕಷ್ಟ. ಅವರ ಇಚ್ಛೆಯಂತೆ ಸ್ಪೋಕನ್‌ ಇಂಗ್ಲಿಷ್‌ ತರಗತಿಗೆ ಸೇರಿಕೊಳ್ಳೋಣವೆಂದರೆ ಸಂಪ್ರದಾಯಸ್ಥ ಅತ್ತೆ ಮಾವ ಒಪ್ಪುವುದಿಲ್ಲ. ಈಗ ಇಂಗ್ಲಿಷ್‌ ಕಲಿಯುವ ಅಗತ್ಯವೇನು ಎಂದು ಛೇಡಿಸುತ್ತಾರೆ. ಯಾರ ಅಣತಿಯಂತೆ ನಡೆಯಬೇಕು ಎಂದು ತುಂಬಾ ಗೊಂದಲದಲ್ಲಿದ್ದೆ. ನನ್ನ ಪತಿ ಮತ್ತು ನಾದಿನಿಯರ ಬೆಂಬಲದಿಂದಾಗಿ ಅತ್ತೆ ಮಾವನವರಿಗೆ ಗೊತ್ತಾಗದಂತೆ ಅವರ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿ, ನಂತರ ಇಲ್ಲಿಗೆ ಕಲಿಯಲು ಬರುತ್ತೇನೆ. ಅಲ್ಲದೆ ನಮ್ಮ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಕವಿತಾ.‘ಬಡತನವಿದ್ದರೂ ಅಪ್ಪ ಅಮ್ಮನಿಗೆ ಮಗಳು ಚೆನ್ನಾಗಿ ಕಲಿತು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಲಿ ಎಂಬ ಆಸೆ. ಓದು ನನ್ನ ತಲೆಗೆ ಹತ್ತುತ್ತಿರಲಿಲ್ಲ. ಶಾಲೆಯಲ್ಲಿ ಅವಮಾನಗಳನ್ನು ಎದುರಿಸಬೇಕಾಯಿತು. ಕಷ್ಟಪಟ್ಟು ಎಸ್ಸೆಸ್ಸೆಲ್ಸಿ ಮುಗಿಸಿದೆ. ಪಿಯುಸಿಯಲ್ಲಿ ಕಲಾ ವಿಷಯ ತೆಗೆದುಕೊಳ್ಳಬೇಕು ಎಂಬುದು ಇಚ್ಛೆ. ತಾಯಿ ಒತ್ತಡಕ್ಕೆ ಮಣಿದು ವಾಣಿಜ್ಯ ವಿಷಯ ತೆಗೆದುಕೊಳ್ಳಬೇಕಾಯಿತು. ಕೊನೆಗೆ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದೆ. ಮನೆಯಲ್ಲಿ ಕುಳಿತು ಮಾಡುವುದಾದರೂ ಏನು; ದೊಡ್ಡಮ್ಮನ ಜೊತೆ ಮನೆಗೆಲಸಕ್ಕಾದರೂ ಹೋಗೋಣವೆಂದು ತೀರ್ಮಾನಿಸಿ ನಡೆದೆ. ಆದರೆ ಅಲ್ಲಿ ನಾವು ಮನೆಗೆಲಸದವರೆಂಬ ಕಾರಣಕ್ಕೆ ಆ ಮನೆಯವರಿಂದಾದ ನೋವು ಅಷ್ಟಿಷ್ಟಲ್ಲ. ಇದೆಲ್ಲದರಿಂದ ರೋಸಿ ಹೋಗಿರುವ ನಾನು ಚೆನ್ನಾಗಿ ಓದಲೇಬೇಕು ಎಂಬ ದೃಢ ನಿರ್ಧಾರ ಮಾಡಿದ್ದೇನೆ. ಅದಕ್ಕಾಗಿ ಮನೆಗೆಲಸ ಮಾಡಿಕೊಂಡೇ ಇಂಗ್ಲಿಷ್‌ ಕಲಿಯಲು ಬರುತ್ತಿದ್ದೇನೆ’ ಎನ್ನುವಾಗ ಗೃಹಿಣಿಯರ ತಂಡದೊಂದಿಗೆ ತರಗತಿಯಲ್ಲಿ ಕೂರುವ ಉಮಾ ಕಣ್ಣಾಲಿಗಳು ಒದ್ದೆಯಾಗಿದ್ದವು.ಇಂತಹ ಅದೆಷ್ಟೋ ಸಂಗತಿಗಳನ್ನು ಹಂಚಿಕೊಂಡ ಅವರು, ‘ನಾವಿಲ್ಲಿಗೆ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಯಲೆಂದು ಬರುವುದು ತೋರಿಕೆ ಅಥವಾ ಅಹಂಕಾರಕ್ಕಾಗಿ ಅಲ್ಲ. ಖರೀದಿಗಾಗಿ ಮಾಲ್‌ಗೆ ತೆರಳಿದಾಗ ಮಾಲ್‌ ಸಿಬ್ಬಂದಿ ಕೂಡ ಇಂಗ್ಲಿಷಿನಲ್ಲಿ ಮಾತನಾಡುವವರಿಗೆ ನೀಡುವ ಗೌರವವನ್ನು ಕನ್ನಡದಲ್ಲಿ ಮಾತನಾಡುವವರಿಗೆ ನೀಡುವುದಿಲ್ಲ. ನಾವೆಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿ ಬೆಳೆದವರು.ಓದುವ, ಬರೆಯುವ, ಅರ್ಥೈಸಿಕೊಳ್ಳುವ ಮಟ್ಟಿಗೆ ಇಂಗ್ಲಿಷ್‌ನ್ನು ಬಲ್ಲೆವಾದರೂ ಸಂಪರ್ಕ ಭಾಷೆಯಾಗಿ ಬಳಸುವ ಅಗತ್ಯವೇ ಬಂದಿರಲಿಲ್ಲ. ಆದರೆ ಮದುವೆಯಾಗಿ ಇಲ್ಲಿಗೆ ಬಂದ ನಂತರ ಇಂಗ್ಲಿಷಿನಲ್ಲಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಎದುರಿಸಿದ ಅವಮಾನಗಳು, ಅದಕ್ಕೆ ಉತ್ತರ ನೀಡಬೇಕೆನ್ನುವ ಛಲ ನಮ್ಮನ್ನು ತರಗತಿಗೆ ಬರಲು ಪ್ರೇರೇಪಿಸಿವೆ. ಗೃಹಿಣಿಯರಾಗಿದ್ದರೂ ಕೌಟುಂಬಿಕ ಕೆಲಸಗಳಿಗೆ ಮಾತ್ರ ಸೀಮಿತವಾಗಿರದೆ ಚೆನ್ನಾಗಿ ಕಲಿತು ಏನಾದರೂ ಸಾಧಿಸಬೇಕು. ‘ಮೈ ವೈಫ್‌ ಬಾರ್ನ್‌ ಟು ಮೇಕ್‌ ಎ ಲಡ್ಡು‘ ಎಂಬ ಇಂಗ್ಲಿಷ್‌ ವಿಂಗ್ಲಿಷ್‌ ಸಿನಿಮಾ ಡೈಲಾಗ್‌ನ್ನು ನಮ್ಮ ಜೀವನದಲ್ಲಿ ಇನ್ನೆಂದಿಗೂ ಕೇಳುವಂತಾಗಬಾರದು. ಪತಿ, ಮಕ್ಕಳು, ಬಂಧುಗಳೆಲ್ಲರ ಗೌರವಕ್ಕೆ ಪಾತ್ರರಾಗಬೇಕು ಎಂಬ ಗುರಿ ನಮ್ಮದು ಎನ್ನುತ್ತಾರೆ ಅವರು.ನನಗೂ ಸಮಸ್ಯೆ ಎದುರಾಗಿದೆ

ನಗರ ಪ್ರದೇಶಗಳ ಮಧ್ಯಮ ವರ್ಗದ ಬಹುತೇಕ ಗೃಹಿಣಿಯರು ವಿದ್ಯಾವಂತರಾಗಿದ್ದರೂ ಇಂಗ್ಲಿಷನ್ನು ಸಂಪರ್ಕ ಭಾಷೆಯಾಗಿ ಬಳಸಲು ಬಾರದೆ ನಾನಾ ಸಮಸ್ಯೆಗಳನ್ನು ಎದುರಿಸುವುದುಂಟು. ನಾನೂ ಸಹ ಇಂತಹದ್ದೇ ಸಮಸ್ಯೆಗಳನ್ನು ದಾಟಿ ಬಂದವಳು.ನಾನು ಎದುರಿಸಿದಂತಹ ಸಮಸ್ಯೆ ಮತ್ತೊಬ್ಬರಿಗೆ ಬಾರದಿರಲಿ ಎಂದು ಗೃಹಿಣಿಯರಿಗಾಗಿಯೇ ಪ್ರತ್ಯೇಕ ತರಗತಿಯನ್ನು ನಡೆಸುತ್ತೇನೆ. ವ್ಯಾಕರಣ ಬಳಕೆ, ಮಕ್ಕಳ ಶಾಲೆ, ಮಾಲ್‌, ಮಾರುಕಟ್ಟೆ, ವೈದ್ಯರ ಬಳಿ ಹೋದಾಗ, ಅಡುಗೆ, ಹೊಲಿಗೆ ಮುಂತಾದ ಪ್ರಾಥಮಿಕ ವಿಷಯಗಳಲ್ಲಿ ಇಂಗ್ಲಿಷಿನಲ್ಲಿ ವ್ಯವಹರಿಸುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ಕಲಿಸಿಕೊಡುತ್ತೇನೆ.ಮಹಿಳೆ ಶತಶತಮಾನಗಳಿಂದ ತುಳಿತಕ್ಕೆ ಒಳಗಾದ ಕಾರಣ ಕೀಳರಿಮೆ, ಹಿಂಜರಿಕೆ ಆಕೆಯಲ್ಲಿ ಬೇರೂರಿ ನಿಂತಿದೆ. ಅದನ್ನು ಮೆಟ್ಟಿ ನಿಲ್ಲಲು ಸ್ವಲ್ಪ ಸಮಯ ಬೇಕಷ್ಟೆ. ನನ್ನ ತರಗತಿಗೆ ಬರುವ ಮಹಿಳೆಯರು ತಮ್ಮಲ್ಲಿನ ಕೀಳರಿಮೆ ತೊರೆದು ಅಗತ್ಯವಿರುವೆಡೆ ಇಂಗ್ಲಿಷನ್ನು ಸಂಪರ್ಕ ಭಾಷೆಯಾಗಿ ನಿರ್ಗಳವಾಗಿ ಬಳಸಿದಲ್ಲಿ ಅದಕ್ಕಿಂತ ಸಂತೋಷ ಬೇರೊಂದಿಲ್ಲ.

ಸುನಂದಾ ಶರ್ಮಾ, ಶಿಕ್ಷಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.