ಮಂಗಳವಾರ, ಜನವರಿ 21, 2020
20 °C

ಗೃಹಿಣಿ ಅನುಮಾನಾಸ್ಪದ ಸಾವು: ಪತಿ ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೃಹಿಣಿ ಅನುಮಾನಾಸ್ಪದ ಸಾವು: ಪತಿ ಪೊಲೀಸ್‌ ವಶಕ್ಕೆ

ಬೆಂಗಳೂರು: ಎಚ್‌ಎಎಲ್‌ ಬಳಿಯ ಕರಿಯಮ್ಮನ ಅಗ್ರಹಾರ ನಿವಾಸಿ ಮಹೇಶ್‌ಬಾಬು ಎಂಬುವರ ಪತ್ನಿ ಕಾವ್ಯಾ (23) ಶುಕ್ರ­ವಾರ ರಾತ್ರಿ ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದಾರೆ.ಅವರ ಸಾವಿನಿಂದ ಆಕ್ರೋಶಗೊಂಡ ಪೋಷಕರು ಮತ್ತು ಸಂಬಂಧಿಕರು ಶನಿವಾರ ಬೆಳಿಗ್ಗೆ ಮಹೇಶ್‌ಬಾಬು ಅವರ ಮನೆಗೆ ನುಗ್ಗಿ ಕಿಟಕಿ ಬಾಗಿಲುಗಳ ಗಾಜು ಒಡೆದು, ಪೀಠೋಪ­ಕರಣಗಳನ್ನು ಜಖಂಗೊಳಿಸಿದರು.ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಎಚ್‌ಎಎಲ್‌ ಠಾಣೆ ಇನ್‌ಸ್ಪೆಕ್ಟರ್‌ ರಾಜೇಶ್‌ ಮತ್ತು ಸಿಬ್ಬಂದಿಗೆ ಮುತ್ತಿಗೆ ಹಾಕಿದ ಮೃತರ ಸಂಬಂಧಿಕರು, ಮಹೇಶ್‌ಬಾಬು ಹಾಗೂ ಕುಟುಂಬ ಸದಸ್ಯರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ಅಲ್ಲದೇ, ಒಂದು ತಾಸಿಗೂ ಹೆಚ್ಚು ಕಾಲ ಪೊಲೀಸರನ್ನು ಗೃಹಬಂಧನದಲ್ಲಿ ಇರಿಸಿದ್ದರು. ಬಳಿಕ ಠಾಣೆಯ ಬಳಿಯೂ ಮಧ್ಯಾಹ್ನ ಪ್ರತಿಭಟನೆ ಮಾಡಿದರು.ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾವ್ಯಾ ಅವರ ಶವ ಪತ್ತೆಯಾಗಿದೆ. ಅವರ ಕತ್ತಿನ ಭಾಗದಲ್ಲಿ ಗಾಯದ ಗುರುತು ಇದೆ ಮತ್ತು ಬಾಯಿಗೆ ಥರ್ಮಾಕೋಲ್‌ ತುಂಡನ್ನು ತುರುಕಲಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂ­ಡಿದ್ದಾರೆಯೇ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.‘ಅಳಿಯ, ಆತನ ತಂದೆ ಮುನಿ ರಾಜು, ತಾಯಿ ಭಾಗ್ಯಮ್ಮ ಮತ್ತು ತಮ್ಮ ಮದನ್ ಅವರು ವರದಕ್ಷಿಣೆ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಅವರೇ ಮಗಳನ್ನು ಕೊಲೆ ಮಾಡಿ, ಬಳಿಕ ನೇಣು ಹಾಕಿದ್ದಾರೆ’ ಎಂದು ಕಾವ್ಯಾ ಅವರ ಪೋಷಕರು ದೂರು ಕೊಟ್ಟಿದ್ದಾರೆ. ಕೊಲೆ, ವರದಕ್ಷಿಣೆ ಸಾವು ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮಹೇಶ್‌ಬಾಬು ಹಾಗೂ ಮದನ್‌ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.ಬಿ.ಇ ಪದವೀಧರೆಯಾದ ಕಾವ್ಯಾ, ಎರಡು ವರ್ಷಗಳ ಹಿಂದೆ ಮಹೇಶ್‌ಬಾಬು ಅವರನ್ನು ಮದುವೆಯಾಗಿದ್ದರು. ದಂಪತಿಗೆ ಹತ್ತು ತಿಂಗಳ ಗಂಡು ಮಗುವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‘ಮಹೇಶ್‌ಬಾಬುಗೆ ಮದುವೆ ಸಂದರ್ಭದಲ್ಲಿ 850 ಗ್ರಾಂ ಚಿನ್ನಾಭರಣ ಮತ್ತು ನಿವೇಶನವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದೆವು. ಆದರೂ ಆತ ಕುಟುಂಬ ಸದಸ್ಯರೊಂದಿಗೆ ಸೇರಿ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದ’ ಎಂದು ಕಾವ್ಯಾ ಅವರ ಪೋಷಕರು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)