ಗೃಹಿಣಿ ಕನಸಿನ ಮೋಹಿನಿ

7

ಗೃಹಿಣಿ ಕನಸಿನ ಮೋಹಿನಿ

Published:
Updated:
ಗೃಹಿಣಿ ಕನಸಿನ ಮೋಹಿನಿ

ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?

ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಕುತೂಹಲದ ಜತೆ ಆಸಕ್ತಿಯೂ ಇತ್ತು. ನನ್ನೂರು ಹುಬ್ಬಳ್ಳಿ. ಬಿ.ಕಾಂ ದ್ವಿತೀಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಒಂದು ದಿನ ಕಾಲೇಜಿನಲ್ಲಿ `ಸ್ಯಾರಿ ಡೇ' ಇತ್ತು. ಅಷ್ಟು ದಿನ ಸಲ್ವಾರ್‌ನಲ್ಲಿ ಅಂದ ಚೆಂದವನ್ನು ಬಚ್ಚಿಟ್ಟುಕೊಂಡ ಹುಡುಗಿಯರು ಬಣ್ಣಬಣ್ಣದ ಸೀರೆ ಉಟ್ಟುಕೊಂಡು ವೇದಿಕೆಯ ಮೇಲೆ ನಿಂತಿದ್ದರು. ನನಗೂ ಸೀರೆ ಅಚ್ಚುಮೆಚ್ಚು. ಕಾಲೇಜಿನ ಸಮೀಪದ ಹೋಟೆಲ್ ಒಂದರಲ್ಲಿ ಮಾಡೆಲ್‌ಗಳ ಆಯ್ಕೆ ನಡೆಯುತ್ತಿತ್ತು. ಏಕೆ ಪ್ರಯತ್ನಿಸಬಾರದು ಎಂಬ ಕುತೂಹಲದಿಂದ ಹೋಗಿದ್ದೆ. ಅಲ್ಲಿ ಆಯ್ಕೆಯೂ ಆದೆ. ಇದು ನಾನು ಈ ಕ್ಷೇತ್ರಕ್ಕೆ ಬಂದ ಬಗೆ.ನಿಮ್ಮ ಆಯ್ಕೆ ಬಗ್ಗೆ ಮನೆಯವರ ಪ್ರತಿಕ್ರಿಯೆ ಹೇಗಿತ್ತು?

ಎಲ್ಲರ ಹಾಗೆ ಇದು ಬೇಡ ಎಂಬ ರಾಗ ಶುರುವಾಗಿತ್ತು. 2007ರಲ್ಲಿ `ಮಿಸ್ ಸನ್‌ಸಿಲ್ಕ್ ಸೌತ್ ಇಂಡಿಯಾ' ಶೋನಲ್ಲಿ `ಸುಂದರ ನಗು' ಎಂಬ ಗರಿ ನನ್ನ ಪಾಲಿಗೆ ಒಲಿದಿತ್ತು. ಇದನ್ನೆಲ್ಲಾ ನೋಡಿ ಮನೆಯವರು ನನ್ನ ಆಸಕ್ತಿಗೆ ಬೆಂಬಲವಾಗಿ ನಿಂತರು. ಈ ಬಾರಿ `ಮಿಸ್ ಕರ್ನಾಟಕ'ದಲ್ಲಿ ಮೊದಲ ರನ್ನರ್ ಅಪ್ ಎಂಬ ಇನ್ನೊಂದು ಗರಿ ಸಿಕ್ಕಿದೆ. ಇದನ್ನು ನನಗೆ ಬೆಂಬಲ ನೀಡಿದ ಅಪ್ಪ-ಅಮ್ಮನಿಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ.ಮಾಡೆಲಿಂಗ್ ಕ್ಷೇತ್ರದಲ್ಲಿ ಎಷ್ಟು ವರ್ಷದ ಅನುಭವ, ಹೇಗಿದೆ ಈ ಕ್ಷೇತ್ರ?

ಎಲ್ಲರೂ ತಿಳಿದುಕೊಂಡಷ್ಟು ಸುಲಭವಲ್ಲ ಇದು. ಚಿಕ್ಕ ಬಟ್ಟೆ ಹಾಕುತ್ತಾರೆ, ಮಾಡೆಲಿಂಗ್ ಕ್ಷೇತ್ರ ಸರಿಯಿಲ್ಲ ಎಂದು ಹೇಳುವುದೂ ತಪ್ಪು. ಸ್ಟೈಲ್ ಅನ್ನು ನಾವಿಲ್ಲಿ ಪ್ರತಿನಿಧಿಸುತ್ತೇವೆ. ವಿನ್ಯಾಸಗಳನ್ನು ಪರಿಚಯಿಸುತ್ತೇವೆ. ನಾಲ್ಕು ವರ್ಷದ ಅನುಭವ ನನಗಿದೆ. ಆದರೂ ಇನ್ನೂ ಸಂಪೂರ್ಣವಾಗಿ ಕಲಿತಿಲ್ಲ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ.ಮಾಡೆಲಿಂಗ್ ಬಿಟ್ಟು ಬೇರೆ ಆಸಕ್ತಿಗಳು ಇವೆಯಾ?

ನಾನು ಸಾಲ್ಸಾ ನೃತ್ಯಗಾರ್ತಿ. ನೃತ್ಯದಿಂದ ಉತ್ಸಾಹ, ನೆಮ್ಮದಿ ಸಿಗುತ್ತದೆ. ದೇಹವೂ ಫಿಟ್ ಆಗಿರುತ್ತದೆ. ಗ್ಲಾಸ್, ಪಾಟ್‌ನಲ್ಲಿ ಚಿತ್ರ ಮೂಡಿಸುವುದು ನನ್ನ ಹವ್ಯಾಸ.ಮಾಡೆಲಿಂಗ್‌ಗೆ ಯಾವ ರೀತಿ ತಯಾರಿ ಮಾಡಿಕೊಳ್ಳುತ್ತೀರಿ?

ಫ್ಯಾಷನ್‌ಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುತ್ತೇನೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಡುತ್ತೇನೆ.ನಿಮ್ಮಿಷ್ಟದ ರೂಪದರ್ಶಿ ಯಾರು?

ಅಂತರರಾಷ್ಟ್ರೀಯ ರೂಪದರ್ಶಿಯಾದ ಕ್ಯಾರೆಲ್ ನನಗಿಷ್ಟ. ನನ್ನನ್ನು ತುಂಬಾ ಆಕರ್ಷಿಸಿದ್ದು ಅವರ ನಡಿಗೆಯ ಶೈಲಿ. ಕೆಲವೊಮ್ಮೆ ನಾನು ಅವರನ್ನು ಅನುಕರಣೆ ಮಾಡುತ್ತೇನೆ.ಬಾಲ್ಯದಲ್ಲಿ ಕಟ್ಟಿಕೊಂಡ ಕನಸು ಏನು?

ಡಾಕ್ಟರ್ ಆಗಬೇಕು ಎಂಬ ಕನಸಿತ್ತು. ಆದರೆ ರಕ್ತ ನೋಡಿದರೆ ನನಗೆ ಆಗಲ್ಲ. ಇದೆಲ್ಲಾ ಆಗುವ ಕೆಲಸವಲ್ಲ ಎಂದು ಕನಸನ್ನು ಅರ್ಧದಲ್ಲಿಯೇ ಕೈಬಿಟ್ಟೆ.ನಿಮ್ಮಿಷ್ಟದ ಡಿಸೈನರ್ ಯಾರು?

ಮನೀಷ್, ನೀತು, ನೀರೂಸ್ ಅವರ ಕಲೆಕ್ಷನ್ ಚೆನ್ನಾಗಿದೆ.

ಸಿನಿಮಾದಿಂದ ಅವಕಾಶಗಳು ಬಂದಿವೆಯಾ? ಮಾಡೆಲಿಂಗ್ ಮತ್ತು ಸಿನಿಮಾಗೆ ಇರುವ ವ್ಯತ್ಯಾಸವೇನು?

ಹರೀಶ್ ರಾಜ್ ಜತೆ `ನಾವು ನಮ್ಮ ಹೆಂಡ್ತೀರು' ಸಿನಿಮಾ ಮಾಡಿದ್ದೇನೆ. ಸಿನಿಮಾ ಸ್ವಲ್ಪ ಕಾಲಾವಕಾಶ ಕೇಳುತ್ತದೆ. ಮಾಡೆಲಿಂಗ್ ಶೋ ಬೇಗ ಮುಗಿಯುತ್ತದೆ.ಇಷ್ಟದ ಶಾಪಿಂಗ್ ಸ್ಥಳ ಯಾವುದು?

ನನಗೆ ಇಷ್ಟವಾದ ಸ್ಥಳಕ್ಕೆ ಹೋಗಿ ಶಾಪಿಂಗ್ ಮಾಡಿ ಬರುತ್ತೇನೆ. ಮಾಡೆಲ್‌ಗಳು ಮಾಲ್‌ನಲ್ಲಿಯೇ ಶಾಪಿಂಗ್ ಮಾಡುತ್ತಾರೆ ಎಂಬುದು ತಪ್ಪು ಗ್ರಹಿಕೆ. ಇಷ್ಟವಾದ ಬಟ್ಟೆ ಕಂಡರೆ ಅದು ಎಲ್ಲಿಯೇ ಇದ್ದರೂ ಹೋಗಿ ಕೊಂಡುಕೊಳ್ಳುತ್ತೇನೆ.   ನಿಮ್ಮ ಸೌಂದರ್ಯದ ಗುಟ್ಟು?

ಕೆಲವರು ನನ್ನನ್ನು ನೋಡಿ ನಿಮ್ಮ ನಗು ಚೆನ್ನಾಗಿದೆ ಎನ್ನುತ್ತಾರೆ. ನೋಡುವ ಕಣ್ಣುಗಳಲ್ಲಿ ಸೌಂದರ್ಯ ಇರುತ್ತದೆ. ಆಂತರಿಕ ಸೌಂದರ್ಯ ಮುಖ್ಯ. ಈಗಿನವರು ಮೇಕಪ್ ಮೂಲಕ ಚೆನ್ನಾಗಿ ಕಾಣಿಸುತ್ತಾರೆ. ಹಿಂದಿನವರದ್ದು ಸಹಜ ಸೌಂದರ್ಯ. ಅವರು ನಮಗಿಂತ ಹೆಚ್ಚು ಚೆನ್ನಾಗಿ ಕಾಣಿಸುತ್ತಾರೆ.ನಿಮ್ಮ ಮಹತ್ವಾಕಾಂಕ್ಷೆ ಏನು?

ತುಂಬಾ ದೊಡ್ಡ ಕನಸುಗಳನ್ನು ನಾನು ಹೆಣೆದಿಲ್ಲ. ಮದುವೆಯಾಗಿ ಗಂಡನಿಗೆ ತಕ್ಕ ಹೆಂಡತಿಯಾಗಬೇಕು, ಮಗುವಿಗೆ ಒಳ್ಳೆಯ ತಾಯಿಯಾಗಬೇಕು. ಜೀವನದಲ್ಲಿ ಹೆಣ್ಣಿಗೆ ಬೇಕಿರುವುದು ಇದೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry