ಬುಧವಾರ, ಜನವರಿ 29, 2020
24 °C

ಗೃಹೋಪಯೋಗಿ ಅನಿಲ ಬಳಕೆದಾರರಲ್ಲಿ ಆತಂಕ: ತೆವಳುತ್ತಿದೆ ‘ಆಧಾರ್’ ನೋಂದಣಿ

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಸಾವಿರಾರು ಗೃಹೋಪಯೋಗಿ ಅಡುಗೆ ಅನಿಲ ಬಳಕೆದಾರರಲ್ಲಿ ‘ಆಧಾರ್’ ಕುರಿತ ಆತಂಕ ಮತ್ತು ಗೊಂದಲ ಮುಂದುವರಿಯುತ್ತಲೇ ಇದೆ. ಇದೇ ವೇಳೆ, ಆಧಾರ್ ನೋಂದಣಿ ಕಾರ್ಯ ತೆವಳುತ್ತಿರುವುದು ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.ಗೃಹೋಪಯೋಗಿ ಅಡುಗೆ ಅನಿಲ ಸಹಾಯಧನ­ವನ್ನು ಆಧಾರ್ ಜೊತೆ ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ ಇದೇ ಅರ್ಥದ ಹೇಳಿಕೆಯನ್ನು ಇತ್ತೀಚೆಗಷ್ಟೇ ನೀಡಿದ್ದಾರೆ. ಆದರೂ ಆಧಾರ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯ ಎಂದು ಅನಿಲ ವಿತರಕರು ಹೇಳುತ್ತಿರುವುದು ಬಳಕೆದಾರರಲ್ಲಿ ಆತಂಕವನ್ನಷ್ಟೇ ಅಲ್ಲದೆ ಅಸಮಾಧಾನವನ್ನೂ ಹುಟ್ಟುಹಾಕುತ್ತಿದೆ.ಆಧಾರ್‍ ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ಈಗಾಗಲೇ ನೀಡಿದವರು ಸಹಾಯಧನ ಎಷ್ಟು ದಿನಕ್ಕೆ ತಮ್ಮ ಖಾತೆಗೆ ಬರುತ್ತದೆ ಎಂದು ಕೇಳುತ್ತಿದ್ದಾರೆ. ಆಧಾರ್ ಕಾರ್ಡ್ ಹೊಂದಿಲ್ಲದವರು ಆಧಾರ್ ಕೇಂದ್ರ­ಗಳಿಗೆ ಅರ್ಜಿ ಸಲ್ಲಿಸಿ ದಿನವೂ ಎಡತಾಕಿ ಬಸವ­ಳಿ­ಯುತ್ತಿದ್ದಾರೆ. ಕೆಲವರಿಗೆ ಸಹಾಯಧನದ ಚಿಂತೆ, ಬಹುತೇಕರಿಗೆ ಆಧಾರ್ ಕಾರ್ಡ್, ಅನಿಲ ಸೌಕರ್ಯ ದೊರಕದೇ ಹೋದರೆ ಎಂಬ ಚಿಂತೆ ಕಾಡುತ್ತಿದೆ.ಕಳೆದ ಜೂನ್ ಅಂತ್ಯದ ವೇಳೆಗೆ ಜಿಲ್ಲೆಯ ಐದು ತಾಲ್ಲೂಕಿನಲ್ಲಿ ಒಂದು ಸಿಲಿಂಡರ್ ಉಳ್ಳವರು 76,804 ಮತ್ತು ಎರಡು ಸಿಲಿಂಡರ್ ಉಳ್ಳವರು 59,646 ಸೇರಿ ಒಟ್ಟು 1,36,450  ಮಂದಿ ಇದ್ದಾರೆ. ಆರು ತಿಂಗಳ  ಅವಧಿಯಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.ಸುಮಾರು 1.40 ಲಕ್ಷ ಮಂದಿಯಲ್ಲಿ ಬಹುತೇಕರಿಗೆ ಆಧಾರ್ ಕಾರ್ಡ್ ದೊರೆತಿಲ್ಲ. ಅವರೆಲ್ಲರೂ ಇನ್ನೂ ಕಾರ್ಡ್ ಮಾಡಿ­ಕೊಡುವ ಕೇಂದ್ರಗಳಲ್ಲಿ ಕಾಯುತ್ತಿದ್ದಾರೆ. ಡಿಸೆಂಬರ್ ಕೊನೆಗೊಂಡರೆ ಜನವರಿಯಿಂದ ಹೊಸ ಯೋಜನೆ ಜಾರಿಯಾಗಲಿದೆ. ಆಗ ನಮ್ಮ ಪಾಡೇನು ಎಂಬುದು ಹಲವರ ಪ್ರಶ್ನೆ.ಅವಧಿ ವಿಸ್ತರಣೆ: ಅನಿಲ ವಿತರಕರ ಪ್ರಕಾರ, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಜನವರಿಯಿಂದ ಕೋಲಾರ ಜಿಲ್ಲೆಯಲ್ಲಿ ಆಧಾರ್ ಉಳ್ಳವರ ಬ್ಯಾಂಕ್ ಖಾತೆಗೆ ಸಹಾಯಧನ ಹಣ ಜಮಾ ಮಾಡಲಾಗುತ್ತದೆ. ಆದರೆ ಆಧಾರ್ ಹೊಂದಿಲ್ಲದವರು ಆ ಬಗ್ಗೆ ಪ್ರಮಾಣಪತ್ರವನ್ನು ಹಾಗೂ ಭಾವಚಿತ್ರವುಳ್ಳ ಯಾವುದಾದರೂ ಗುರುತಿನ ಚೀಟಿಯನ್ನು ನೀಡಬೇಕು.ಮಾರ್ಚ್ 31ರ ಒಳಗೆ ಅವರು ಆಧಾರ್ ಮಾಡಿಸಿ ಸಲ್ಲಿಸಬೇಕು. ಸಲ್ಲಿಸದಿದ್ದರೆ ಏನಾಗುತ್ತದೆ ಎಂಬ ಬಗ್ಗೆ ನಮಗೂ ಸ್ಪಷ್ಟವಿಲ್ಲ ಎನ್ನುತ್ತಾರೆ ಜಿಲ್ಲೆಯಲ್ಲೇ ಅತಿ ಹೆಚ್ಚು (29 ಸಾವಿರ) ಗ್ರಾಹಕರನ್ನು ಹೊಂದಿರುವ ನಗರದ ಕೇದಾರ್ ಏಜೆನ್ಸಿಯ ಮಾಲೀಕ ರೂಪೇಶ್ ಆರ್ಯ.ಆಧಾರ್  ಇಲ್ಲವೆಂಬ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯನ್ನು ಪಡೆದು ಸಿಲಿಂಡರ್ ಪೂರೈಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೂಚನೆಯನ್ನು ನಾವು ಪಾಲಿಸುತ್ತಿದ್ದೇವೆ ಅಷ್ಟೆ. ಆದರೆ ಆಧಾರ್ ಕಾರ್ಡ್ ಅಗತ್ಯವಿಲ್ಲ ಎಂದು ಜನಪ್ರತಿನಿಧಿಗಳು ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದರಿಂದ ಗ್ರಾಹಕರ ಆಕ್ರೋಶಕ್ಕೆ ನಾವು ತುತ್ತಾಗಬೇಕಾಗಿದೆ ಎನ್ನುತ್ತಾರೆ ಅವರು.ಅವರಲ್ಲಿ ನೋಂದಾಯಿಸಿರುವ 29 ಸಾವಿರ ಗ್ರಾಹಕರ ಪೈಕಿ ಕಳೆದ ನಾಲ್ಕೈದು ತಿಂಗಳಿಂದ ಕೇವಲ ಸುಮಾರು ಮೂರು ಸಾವಿರ ಮಂದಿಯಷ್ಟೇ ಆಧಾರ್ ಮತ್ತು ಬ್ಯಾಂಕ್‌ನ ಖಾತೆಯ ಮಾಹಿತಿ  ನೀಡಿದ್ದಾರೆ. ಆಧಾರ್ ನೀಡದಿದ್ದರೆ ಜನವರಿಯಿಂದ ಅನಿಲ ಸೌಲಭ್ಯ ಕೊಡುವುದಿಲ್ಲ ಎಂಬ ಸೂಚನೆ ಪ್ರಕಟಿಸಿದ ಬಳಿಕ ದಿನಕ್ಕೆ ನೂರಾರು ಮಂದಿ ಮಾಹಿತಿ ನೀಡುತ್ತಿ­ದ್ದಾರೆ.ಆಧಾರ್‌ ಇಲ್ಲದವರು ಘೋಷಣಾ ಪತ್ರವನ್ನು ನೀಡುತ್ತಿದ್ದಾರೆ. ಹಲವರು ಘೋಷಣಾ ಪತ್ರವನ್ನು ಏಕೆ ನೀಡಬೇಕು ಎಂದು ಪ್ರಶ್ನಿಸುವುದಲ್ಲದೆ, ಆಧಾರ್ ನೋಂದಣಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆಯೂ ಏಜೆಂಟರ ಬಳಿ ಜಗಳವಾಡುವ ಸನ್ನಿವೇಶಗಳು ಕಂಡುಬರುತ್ತಿವೆ.ಆಧಾರ್ ವಿಳಂಬ: ಅಡುಗೆ ಅನಿಲ ಸಂಪರ್ಕವುಳ್ಳ 1.40 ಲಕ್ಷ ಮಂದಿಯ ಪೈಕಿ ಕೆಲವು ಸಾವಿರ ಮಂದಿ ಬಳಿ ಮಾತ್ರ ಆಧಾರ್ ಇವೆ. ಉಳಿದವರು ಅದನ್ನು ಪಡೆಯಲು ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.ತಾಲ್ಲೂಕು ಆಡಳಿತವು ಹೋಬಳಿ ಕೇಂದ್ರಗಳಿಗೇ ತೆರಳಿ ಆಧಾರ್ ಆಂದೋಲನವನ್ನು ಕೈಗೊಂಡಿತ್ತು. ನಗರ ಪ್ರದೇಶಗಳಲ್ಲೂ ಇದು ನಡೆದಿತ್ತು. ಆದರೆ ಮಂದಿ ಹೆಚ್ಚು ಆಸಕ್ತಿ ತೋರದೇ ಇದ್ದುದರ ಪರಿ­ಣಾಮ ನೋಂದಣಿ ನಿರೀಕ್ಷೆಯಂತೆ ನಡೆದಿಲ್ಲ.ದಿನಕ್ಕೆ 50 ಮಾತ್ರ: ಕೋಲಾರದ ಜಿಲ್ಲಾಧಿಕಾರಿ ಕಚೇರಿಯ ಬಾಲಕಾರ್ಮಿಕ ನಿರ್ಮೂಲನೆ ಪ್ರಚಾರ ಸಂಘದ ಸಣ್ಣ ಕೊಠಡಿಯಲ್ಲಿ ಇಬ್ಬರು ದಿನಕ್ಕೆ  50 ಆಧಾರ್  ನೋಂದಣಿ ಮಾಡುತ್ತಾರೆ. ಆದರೆ ಅವ­ರಿಗೆ ದಿನವೂ ನೂರಾರು ಅರ್ಜಿ ಸಲ್ಲಿಕೆಯಾಗುತ್ತಿವೆ.ದಿನಕ್ಕೆ ಐವತ್ತರಂತೆ, ಅಡುಗೆ ಅನಿಲ ಸಂಪರ್ಕವುಳ್ಳ ಸಾವಿರಾರು ಮಂದಿಗೆ ಆಧಾರ್ ಮಾಡಿಕೊಡಲು ವರ್ಷಗಳೇ ಬೇಕಾಗುತ್ತವೆ. ಆದರೆ ಅಲ್ಲಿವರೆಗೂ ಗೃಹೋ­ಪಯೋಗಿ ಅನಿಲ ಸಿಲಿಂಡರ್ ಪಡೆಯಲು ನಾವೇನು ಮಾಡಬೇಕು ಎಂಬುದು ಗ್ರಾಹಕರ ಪ್ರಶ್ನೆ.ನಗರದ ಕೇದಾರ್ ಏಜೆನ್ಸಿ ಒಂದರಲ್ಲೇ ಇನ್ನೂ 24 ಸಾವಿರ ಮಂದಿಗೆ ಆಧಾರ್ ದೊರೆತಿಲ್ಲ. ಜಿಲ್ಲೆಯ ಎಲ್ಲ ಏಜೆನ್ಸಿಗಳಲ್ಲೂ ಇದೇ ಸನ್ನಿವೇಶವಿದೆ. ಈಗ ನೀಡಿರುವ ಮಾರ್ಚ್ 31ರವರೆಗಿನ ಗಡುವು ಕೂಡ ಸಾಕಾಗುವುದಿಲ್ಲ. ಹೀಗೆ ಒಂದಕ್ಕೊಂದು ಹೊಂದಿಕೆ­ಯಾಗದ ಸನ್ನಿವೇಶಗಳ ನಡುವೆ ನಾವು ಬಸವಳಿಯಬೇಕೆ ಎನ್ನುತ್ತಿದ್ದಾರೆ ಗ್ರಾಹಕರು.

-----------------------------------------------------------------------------------------------------------

ಆಧಾರ್ ಎಲ್ಲರಿಗೂ ಶೀಘ್ರವಾಗಿ ಮಾಡಿಕೊಡುವ ವ್ಯವಸ್ಥೆಯನ್ನೇ ರೂಪಿಸದೆ ಸರ್ಕಾರ ಗೃಹೋಪಯೋಗಿ ಅನಿಲ ಪಡೆಯಲು ಆಧಾರ್ ಮಾಹಿತಿ ನೀಡುವುದು ಕಡ್ಡಾಯ ಎಂದು ಹೇಳುವುದು ಸರಿಯಲ್ಲ. ಮೊದಲು ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಸರಿಪಡಿಸಬೇಕು. ದಿನವೂ ಬಂದು ವಾಪಸು ಹೋಗುವ ಸಮಸ್ಯೆ ಪರಿಹಾರವಾಗಬೇಕು.

- ಜಯರಾಂ, ಕನಕನಪಾಳ್ಯ

ಆರು ತಿಂಗಳ ಹಿಂದೆ ನಾನು, ನನ್ನ ಪತ್ನಿ ಒಟ್ಟಿಗೇ ಆಧಾರ್‌ಗಾಗಿ ಹೆಸರು ನೋಂದಾಯಿಸಿ ಮಾಹಿತಿ ನೀಡಿದೆವು. ಪತ್ನಿಗೆ ಕಾರ್ಡು ಬಂತು. ಆದರೆ ನನ್ನ ಕಾರ್ಡು ಇನ್ನೂ ಬರಲಿಲ್ಲ. ಗೃಹೋಪಯೋಗಿ ಅನಿಲ ಪಡೆಯಲು ಆಧಾರ್ ಮಾಹಿತಿಯನ್ನು ನಾನು ಹೇಗೆ ನೀಡಲಿ?

-ಮಲ್ಲಿಕಾರ್ಜುನ, ತೊಟ್ಲಿಆಧಾರ್ ಕಾರ್ಡ್ ಮಾಹಿತಿ ನೀಡುವ ಕುರಿತು ಗೊಂದಲವನ್ನು ನಿವಾರಿಸದಿದ್ದರೆ ಏಜೆನ್ಸಿಗಳ ಮಾಲೀಕರು ಗ್ರಾಹಕರಿಂದ ನಿಂದನೆಗೊಳ­ಗಾಗು­ವುದು ತಪ್ಪುವುದಿಲ್ಲ. ಆಧಾರ್  ಇಲ್ಲದವರಿಂದ ಹಾಗೆ ಪ್ರಮಾಣಪತ್ರ ಪಡೆದು ಅನಿಲ ವಿತರಿಸಿ ಎಂದು ಐಓಸಿ ಸೂಚಿಸಿದೆ. ಅದರಂತೆ ಕೆಲಸ ಮಾಡುತ್ತಿದ್ದೇವೆ. ಆದರೆ ಸರ್ಕಾರದ ಪ್ರತಿನಿಧಿಗಳ ಹೇಳಿಕೆಗಳನ್ನು ಆಧರಿಸಿ ಜನ ನಮ್ಮೊಂದಿಗೆ ಜಗಳ­ಕ್ಕಿಳಿಯುತ್ತಾರೆ. ಆಧಾರ್ ಕುರಿತು ಸರ್ಕಾರ ಗೊಂದ­ಲಕ್ಕೆ ಆಸ್ಪದ ನೀಡದಂತೆ ಸ್ಪಷ್ಟನೆ ನೀಡಿದರೆ ಸನ್ನಿವೇಶ ಸುಧಾರಿಸುತ್ತದೆ.  ಗ್ರಾಹಕರ ಆತಂಕವೂ ಕಡಿಮೆಯಾಗುತ್ತದೆ.

- ರೂಪೇಶ್ ಆರ್ಯ, ಕೇದಾರ್ ಏಜೆನ್ಸಿಯ ಮಾಲೀಕ

ಪ್ರತಿಕ್ರಿಯಿಸಿ (+)