ಗೃಹ ನಿರ್ಮಾಣ ಕ್ಷೇತ್ರಕ್ಕೆ 2013 ಆಶಾಕಿರಣ

7

ಗೃಹ ನಿರ್ಮಾಣ ಕ್ಷೇತ್ರಕ್ಕೆ 2013 ಆಶಾಕಿರಣ

Published:
Updated:
ಗೃಹ ನಿರ್ಮಾಣ ಕ್ಷೇತ್ರಕ್ಕೆ 2013 ಆಶಾಕಿರಣ

ಋತು ಚಕ್ರ ತಿರುಗುವುದು   ಕಾಲನೆದೆ ಮರುಗುವುದು

ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವುದು

ಕ್ಷಿತಿ ಗರ್ಭ ಧರಿಸುವಳು    ಮತ್ತುದಿಸುವುದು ಜೀವ

ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ

ಕಗ್ಗದ ಈ ಪದ್ಯ ಓದಿದರೆ ಸಾಕು ಕಷ್ಟದಲ್ಲಿ ಕೈಕಟ್ಟಿ ಕೂತವರಲ್ಲಿ ಜೀವನೋತ್ಸಾಹ ಚಿಮ್ಮದೇ ಇರದು.ಎಲ್ಲಾ ಕಷ್ಟಗಳಿಗೂ, ನಿರಾಶದಾಯಕ ವಾತಾವರಣಕ್ಕೂ ಕೊನೆ ಎಂಬುದು ಉಂಟು. ಮೂಡಣದ ದಿನಮಣಿ ಕಣ್ದೆರೆಯುತ್ತಿದ್ದಂತೆ ಕತ್ತಲು ಮರೆಯಾಗುವಂತೆ, ಮೃತನ ಮಣ್ಣಿಂದ ಹೊಸಹುಲ್ಲು ಚಿಗುರುವಂತೆ, ನಿರಾಶೆಯ ಕತ್ತಲ ಕೂಪದಿಂದ ಆಸೆಯ ಬೀಜಗಳು ಅಂಕುರಿಸುತ್ತವೆ. ಇದೇ ತತ್ವ-ಜೀವಸತ್ವ ಜೀವನದ ಸಕಲ ರಂಗಗಳಿಗೂ ಅನ್ವಯವಾಗುತ್ತದೆ.

ಅಂತೆಯೇ 2012ರಲ್ಲಿ ಕಳೆಗುಂದಿ ಮಸಕು ಮಸಕಾಗಿರುವ ದೇಶದ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರವೂ 2013ನೇ ಸಾಲಿನಲ್ಲಿ ಮತ್ತೆ ಗರಿಗೆದರುವ ಎಲ್ಲಾ ಲಕ್ಷಣಗಳೂ ಇವೆ ಎಂದು ಅಭಿಪ್ರಾಯಪಟ್ಟಿದ್ದಾರೆ ತಜ್ಞರು.ಸರ್ಕಾರ ಕೈಗೊಳ್ಳುತ್ತಿರುವ ಹೆಚ್ಚಿನ ಆರ್ಥಿಕ ಸುಧಾರಣಾ ಕ್ರಮಗಳಿಂದ ರಿಯಲ್ ಎಸ್ಟೇಟ್ ವಲಯ 2013ರಲ್ಲಿ ಮತ್ತೆ ರಂಗೇರಲಿದೆ ಎಂಬುದು ಈ ಕ್ಷೇತ್ರದಲ್ಲಿ  ನುರಿತವರ ಲೆಕ್ಕಾಚಾರ.

ಮುಖ್ಯವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ತಜ್ಞರಲ್ಲಿದೆ. ಇದು ರಿಯಲ್ ಎಸ್ಟೇಟ್‌ಗಷ್ಟೇ ಅಲ್ಲ, ದೇಶದ ಸಕಲ ಆರ್ಥಿಕ-ಉದ್ಯಮ ವಲಯಕ್ಕೂ ಸಿಹಿಸುದ್ದಿಯೇ.ದೇಶದ ರಿಯಲ್ ಎಸ್ಟೇಟ್ ವಲಯ ಮತ್ತೆ ಯಶಸ್ಸಿನ ಏಣಿ ಏರಲಾರಂಭಿಸಲು ಕಾರಣಗಳು ಹಲವು. ಅವನ್ನು ಹೀಗೆ ಪಟ್ಟಿ ಮಾಡಬಹುದು;1. ಚಿಲ್ಲರೆ ವಹಿವಾಟು ವಲಯದಲ್ಲಿ ವಿದೇಶಿ ನೇರ ಹೂಡಿಕೆಗೆ ಶೇ 51ರಷ್ಟು ಪಾಲಿಗೆ ಅನುಮತಿ ನೀಡಿದ ಕ್ರಮ.2. ಬ್ಯಾಂಕಿಂಗ್ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ಇದರಿಂದಾಗಿ ಕಾರ್ಪೊರೇಟ್ ಶಕ್ತಿಗಳು ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಿಸಲಿವೆ. ಪರಿಣಾಮ ಹೊಸ ಬ್ಯಾಂಕುಗಳು ತಲೆ ಎತ್ತಲಿವೆ. ತುರುಸಿನ ಸ್ಪರ್ಧೆ ಕಾರಣದಿಂದಾಗಿ ಬಡ್ಡಿದರ ತಗ್ಗುವ, ಸಾಲ ಸೌಲಭ್ಯ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.3. ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 29ರಂದು ಬಡ್ಡಿದರವನ್ನು ತಗ್ಗಿಸಲಿದೆ ಎನ್ನುವ ನಿರೀಕ್ಷೆ ದೊಡ್ಡದಾಗಿದೆ.4. ನವದೆಹಲಿಯ ಗ್ರೇಟರ್ ನೋಯಿಡಾ ಮೆಟ್ರೊ  ರೈಲು ಕಾಮಗಾರಿ ಹಾಗೂ ಬೆಂಗಳೂರಿನ ವಾಯವ್ಯ ಭಾಗದ ಮೆಟ್ರೊ ರೈಲು ಯೋಜನೆ 2013ರಲ್ಲಿ ಮುಕ್ತಾಯಗೊಳ್ಳಲಿವೆ. ಆಗ ಇಲ್ಲಿ ರಿಯಲ್ ಎಸ್ಟೇಟ್ ವಲಯ ಗರಿಗೆದರುವ ನಿರೀಕ್ಷೆ ಇದೆ.5. ವಿಶೇಷವಾಗಿ ಬೆಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯನ್ನು ಅಗಲಗೊಳಿಸುವ ಕಾಮಗಾರಿ ಪೂರ್ಣಗೊಂಡರೆ ಈ ಭಾಗದಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಕಾಣುವ ಸಾಧ್ಯತೆ ಇದೆ. 

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಆಧರಿಸಿ 2013ರಲ್ಲಿ ರಿಯಲ್ ಎಸ್ಟೇಟ್ ಪ್ರಗತಿ ಇರಲಿದೆ ಎನ್ನುವುದು ತಜ್ಞರ ಅಭಿಮತ. ಸರ್ಕಾರ ಎಷ್ಟೇ ಸುಧಾರಣಾ ಕ್ರಮ ಕೈಗೊಂಡರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ನಗದು ಆಧರಿಸಿ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆ ಆಗಲಿದೆ. ಹೆಚ್ಚಿನ ಬಂಡವಾಳ ಹರಿದು ಬರಲು `ಆರ್‌ಬಿಐ' ಅಲ್ಪಾವಧಿ ಬಡ್ಡಿ ದರ ತಗ್ಗಿಸಬೇಕು ಮತ್ತು ಅಗ್ಗದ ದರದ  ಮನೆ ನಿರ್ಮಾಣದ ಮೇಲೆ ಶೇ 1ರಷ್ಟು ಬಡ್ಡಿ ವಿನಾಯ್ತಿ ನೀಡಬೇಕು ಎನ್ನುವುದು ಈ ಕ್ಷೇತ್ರದ ಉದ್ಯಮಿಗಳ ಆಗ್ರಹ.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry