ಗೃಹ ಸಚಿವಾಲಯದ ಗಡುವು ಜೂನ್ 18ಕ್ಕೆ ಮುಕ್ತಾಯ:ಸ್ಥಿರಾಸ್ತಿ ವಿವರ ಸಲ್ಲಿಸದ ಐಪಿಎಸ್ ಅಧಿಕಾರಿಗಳು

7

ಗೃಹ ಸಚಿವಾಲಯದ ಗಡುವು ಜೂನ್ 18ಕ್ಕೆ ಮುಕ್ತಾಯ:ಸ್ಥಿರಾಸ್ತಿ ವಿವರ ಸಲ್ಲಿಸದ ಐಪಿಎಸ್ ಅಧಿಕಾರಿಗಳು

Published:
Updated:
ಗೃಹ ಸಚಿವಾಲಯದ ಗಡುವು ಜೂನ್ 18ಕ್ಕೆ ಮುಕ್ತಾಯ:ಸ್ಥಿರಾಸ್ತಿ ವಿವರ ಸಲ್ಲಿಸದ ಐಪಿಎಸ್ ಅಧಿಕಾರಿಗಳು

ನವದೆಹಲಿ: ಗೃಹ ಸಚಿವಾಲಯದ ಗಡುವು ಮುಗಿದರೂ ಕೇಂದ್ರ ತನಿಖಾ ದಳ (ಸಿಬಿಐ)ದ ಹೆಚ್ಚುವರಿ ಕಮಿಷನರ್ ರೂಪಕ್‌ಕುಮಾರ್ ದತ್ತ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಒಳಗೊಂಡಂತೆ ರಾಜ್ಯದ 76 ಐಪಿಎಸ್ ಅಧಿಕಾರಿಗಳು ತಮ್ಮ ಸ್ಥಿರಾಸ್ತಿ ವಿವರಗಳನ್ನು ಸಲ್ಲಿಸಿಲ್ಲ.ಸಕಾಲಕ್ಕೆ ಆಸ್ತಿ ವಿವರ ಸಲ್ಲಿಸದ ಅಧಿಕಾರಿಗಳ ಪಟ್ಟಿಯಲ್ಲಿ ವಿವಿಧ ರಾಜ್ಯಗಳ 550 ಐಪಿಎಸ್ ಅಧಿಕಾರಿಗಳಿದ್ದಾರೆ.

ಸ್ಥಿರಾಸ್ತಿ ವಿವರ ಸಲ್ಲಿಸದ ಅಧಿಕಾರಿಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಆ ರಾಜ್ಯದ 508 ಐಪಿಎಸ್ ಅಧಿಕಾರಿಗಳ ಪೈಕಿ 81 ಅಧಿಕಾರಿಗಳು ಆಸ್ತಿ ವಿವರ ನೀಡಿಲ್ಲ. ನಂತರದ ಸ್ಥಾನ ಕರ್ನಾಟಕದ್ದು.33 ಅಧಿಕಾರಿಗಳು ಸ್ಥಿರಾಸ್ತಿ ವಿವರ ಘೋಷಣೆ ಮಾಡದೆ ಇರುವುದರೊಂದಿಗೆ ಜಾರ್ಖಂಡ್ ಮೂರನೇ ಸ್ಥಾನದಲ್ಲಿದೆ. ಐಪಿಎಸ್ ಅಧಿಕಾರಿಗಳು ಜೂನ್ 18ರೊಳಗಾಗಿ 2011ರ ಸ್ಥಿರಾಸ್ತಿ ವಿವರಗಳನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಬೇಕಿತ್ತು.ಸಸ್ಪೆಂಡ್ ಆಗಿರುವ ಗುಜರಾತ್ ಐಪಿಎಸ್ ಅಧಿಕಾರಿ ಸಂಜೀವ್ ಭಟ್, ಒಡಿಶಾ ಕೇಡರ್‌ನ ಎಡಿಜಿಪಿ ಎ.ಕೆ. ಉಪಾಧ್ಯಾಯ, ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಮುಖ್ಯಸ್ಥ ಶಫಿ ಆಲಂ, ಸಿಬಿಐ ಹೆಚ್ಚುವರಿ ನಿರ್ದೇಶಕ ಆರ್.ಕೆ. ದತ್ತ, ಜಮ್ಮು ಮತ್ತು ಕಾಶ್ಮೀರದ ನೂತನ ಪೊಲೀಸ್ ಮಹಾನಿರ್ದೇಶಕ ಅಶೋಕ್ ಪ್ರಸಾದ್, ಜಾರ್ಖಂಡ್‌ನ ಪೊಲೀಸ್ ಮಹಾನಿರ್ದೇಶಕ ರ‌್ಯಾಂಕ್ ಅಧಿಕಾರಿ ಜ್ಯೋತಿ ಸ್ವರೂಪ್ ಪಾಂಡೆ ಸೇರಿದಂತೆ ಹಲವು ಹಿರಿಯ ಐಪಿಎಸ್ ಅಧಿಕಾರಿಗಳು ಗೃಹ ಸಚಿವಾಲಯದ ಎಚ್ಚರಿಕೆಗೆ ಕಿವಿಗೊಟ್ಟಿಲ್ಲ.ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳಾದ ಜಿ.ಎಂ.ಹಯಾತ್, ಡಾ.ಹರ್ಷವರ್ಧನರಾಜು, ಎಚ್.ಸಿ. ಕಿಶೋರ್‌ಚಂದ್ರ, ಡಾ.ಎಂ. ನಾರಾಯಣರೆಡ್ಡಿ, ಅಶಿತ್ ಮೋಹನ್ ಪ್ರಸಾದ್, ಪ್ರವೀಣ್ ಸೂದ್, ಪಿ.ಕೆ. ಗರ್ಗ್, ರಾಘವೇಂದ್ರ ಔರಾದ್‌ಕರ್ ಸೇರಿದಂತೆ 76 ಅಧಿಕಾರಿಗಳು 550 ಅಧಿಕಾರಿಗಳಲ್ಲಿ ಸೇರಿದ್ದಾರೆ.ದೇಶದ ಒಟ್ಟು 3393 ಐಪಿಎಸ್ ಅಧಿಕಾರಿಗಳಲ್ಲಿ ಸಕಾಲಕ್ಕೆ ಸ್ಥಿರಾಸ್ತಿ ವಿವರ ಸಲ್ಲಿಸದವರ ಸಂಖ್ಯೆ 1/6ರಷ್ಟು.

ಜನವರಿ 31ರ ಒಳಗೆ ಬಹುತೇಕ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಜೂನ್ 18ರವರೆಗೆ ಗಡುವು ವಿಸ್ತರಿಸಿತ್ತು.ಈ ಗಡುವಿನೊಳಗೆ ವಿವರ ನೀಡದ ಅಧಿಕಾರಿಗಳ ಹೆಸರನ್ನು ಸ್ವಾತಂತ್ರ್ಯ ದಿನಾಚರಣೆ ಪದಕಗಳಿಗೆ ಪರಿಗಣಿಸುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಇಷ್ಟಾದರೂ ಹಿರಿಯ ಅಧಿಕಾರಿಗಳು ಗೃಹ ಸಚಿವಾಲಯದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.ಇದಲ್ಲದೆ, ಆಂಧ್ರದ 29, ಜಮ್ಮು- ಕಾಶ್ಮೀರದ 26, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ತಲಾ 23, ಗುಜರಾತ್ 18, ತಮಿಳುನಾಡು 17 ಮತ್ತು ಒಡಿಶಾದ ಎಂಟು ಐಪಿಎಸ್ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಗೃಹ ಸಚಿವಾಲಯಕ್ಕೆ ಆಸ್ತಿ ವಿವರ ಸಲ್ಲಿಸದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಈ ಹಿಂದೆ ಕೆಲವು ಅಧಿಕಾರಿಗಳು ಸಕಾಲಕ್ಕೆ ತಾವು ಆಸ್ತಿ ವಿವರ ಸಲ್ಲಿಸಿದರೂ ರಾಜ್ಯ ಸರ್ಕಾರ ಅದನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲು ವಿಳಂಬ ಮಾಡಿದೆ.ಇದರಿಂದ ತಮಗೆ ಒಂದು ರೀತಿ ಮುಜುಗರವಾಗಿದೆ ಎಂದು ದೂರಿದ್ದರು. ರಾಜ್ಯ ಸರ್ಕಾರ ಆಸ್ತಿ ವಿವರಗಳನ್ನು ಕಳುಹಿಸಲು  ವಿಳಂಬ ಮಾಡಿದ ಸಂದರ್ಭದಲ್ಲಿ ಅದನ್ನು ತನ್ನ ಗಮನಕ್ಕೆ ತರಬೇಕೆಂದು ಗೃಹ ಸಚಿವಾಲಯ ಅಧಿಕಾರಿಗಳಿಗೆ ತಿಳಿಸಿತ್ತು.  ಮುಖ್ಯಾಂಶಗಳು

*  ಪಟ್ಟಿಯಲ್ಲಿ  ರೂಪಕ್‌ಕುಮಾರ್ ದತ್ತ , ಮಿರ್ಜಿ, ಸೇರಿ ರಾಜ್ಯದ 76 ಅಧಿಕಾರಿಗಳು

*  ರಾಷ್ಟ್ರದ 550 ಐಪಿಎಸ್ ಅಧಿಕಾರಿಗಳು

*  ಸಕಾಲಕ್ಕೆ ವಿವರ ಸಲ್ಲಿಸದ ರಾಜ್ಯಗಳ ಪೈಕಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry