ಗೆಜ್ಜಲಗುಡ್ಡೆಯಲ್ಲಿ 9 ಗುಡಿಸಲು ಭಸ್ಮ

7

ಗೆಜ್ಜಲಗುಡ್ಡೆಯಲ್ಲಿ 9 ಗುಡಿಸಲು ಭಸ್ಮ

Published:
Updated:

ರಾಮನಗರ : ನಗರದ ಗೆಜ್ಜಲಗುಡ್ಡೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಒಂಬತ್ತು ಗುಡಿಸಲು ಮನೆಗಳು ಭಸ್ಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ರೇಷ್ಮೆ  ಫಿಲೇಚರ್‌ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಗೆಜ್ಜಲ ಗುಡ್ಡೆಯ ತೊಪ್ಪಲಲ್ಲಿ ಸುಮಾರು 15 ವರ್ಷಗಳಿಂದ ವಾಸ ಇದ್ದರು. ಇಟ್ಟಿಗೆಯ ಗೋಡೆಗಳಿಗೆ ಗರಿಗಳಿಂದ ಮೇಲ್ಛಾವಣಿ ನಿರ್ಮಿಸಿಕೊಂಡು ಈ ಜನತೆ ಇಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಆಕಸ್ಮಿಕವಾಗಿ ಉಂಟಾದ ಬೆಂಕಿ ಅನಾಹುತದಿಂದ ಅವರ ಬದುಕು ಇದೀಗ ಬೀದಿಪಾಲಾಗಿದೆ.ಬೆಂಕಿ ಹೇಗೆ ತಗುಲಿತು ? : `ಗೆಜ್ಜೆಲಗುಡ್ಡದ ಸುತ್ತಮುತ್ತ ಹುಲ್ಲು ಒಣಗಿತ್ತು. ಇಲ್ಲಿ ಕಂಡು ಬಂದ ಸಣ್ಣ ಬೆಂಕಿಯ ಕಿಡಿಯೊಂದು ಕ್ಷಣಮಾತ್ರದಲ್ಲಿ ಒಣಗಿದ್ದ ಹುಲ್ಲನ್ನು ಭಸ್ಮ ಮಾಡಿತು. ನೋಡನೋಡುತ್ತಿದ್ದಂತೆಯೇ ಅದು ಮನೆಗಳ ಮೇಲ್ಛಾವಣಿಯ ಗರಿಗಳಿಗೂ ತನ್ನ ಕೆನ್ನಾಲಗೆಯನ್ನು ಹಾಯಿಸಿತು~ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.`ಅದೃಷ್ಟವಶಾತ್ ಬಹುತೇಕರು ಕೂಲಿ ಕೆಲಸಕ್ಕೆ ಹೋಗಿದ್ದರು. ಮನೆಗಳಲ್ಲಿ ಒಂದಿಬ್ಬರು ಸಣ್ಣ ಮಕ್ಕಳನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಬೆಂಕಿ ಕಂಡು ಅವರೂ ಮನೆಯಿಂದ ಬೇಗನೇ ಹೊರ ಬಂದರು. ಅಕ್ಕ ಪಕ್ಕದಲ್ಲಿ ಇದ್ದ ಜನತೆ ಬಕಿಟ್‌ಗಳಿಂದ ನೀರನ್ನು ಎರಚುವಷ್ಟರಲ್ಲಿ ಮನೆಗಳ ಮೇಲ್ಛಾವಣಿ ಸೇರಿದಂತೆ ಮರದ ವಸ್ತುಗಳು, ಬಟ್ಟೆಗಳು ಸುಟ್ಟು ಕರಕಲಾಗಿದ್ದವು.ಕೆಲವು ಮನೆಗಳಲ್ಲಿ ಟಿವಿ, ಬೈಸಿಕಲ್, ಟಿವಿಎಸ್ ಗಾಡಿ, ವಾಷಿಂಗ್ ಮೆಷಿನ್ ಬೆಂಕಿಗೆ ಆಹುತಿಯಾಗಿವೆ. `ನಾವು ಬೀದಿ ಪಾಲಾಗಿದ್ದೇವೆ~ ಎಂದು ನಿವಾಸಿಗಳು ಅಳಲು ತೋಡಿಕೊಂಡರು.ಶಾಸಕರ ಭೇಟಿ: ಶಾಸಕ ಕೆ.ರಾಜು, ನಗರಸಭೆ ಉಪಾಧ್ಯಕ್ಷ ಬಿ.ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ರಾಜ್, ಸದಸ್ಯ ಸೋಮಶೇಖರ್ ಅವರು ಬೆಂಕಿಯಿಂದ ಭಸ್ಮಗೊಂಡ ಪ್ರದೇಶವನ್ನು ವೀಕ್ಷಿಸಿದರು.ಶಾಸಕರು ಈ ಮನೆಗಳ ನಿವಾಸಿಗಳ ತುರ್ತ ಅಗತ್ಯ ಪೂರೈಕೆಗೆ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂಪಾಯಿ ನೀಡಿದರು. ಅಲ್ಲದೆ ನಗರಸಭೆಯಿಂದ ತಲಾ 5 ಸಾವಿರ ರೂಪಾಯಿ ನೀಡಲು ಕ್ರಮ ತೆಗೆದುಕೊಳ್ಳುವಂತೆ ನಗರಸಭೆ ಉಪಾಧ್ಯಕ್ಷ ಉಮೇಶ್ ಅವರಿಗೆ ಸೂಚಿಸಿದರು. ಅದಕ್ಕೆ ಉಪಾಧ್ಯಕ್ಷರು ಸಮ್ಮತಿಸಿದರು. ಜೊತೆಗೆ ತಹಶೀಲ್ದಾರ್ ಅವರಿಂದಲೂ ಸೂಕ್ತ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದರು.`ದುರಂತದಿಂದ ಬೀದಿಪಾಲಾಗಿರುವ ಈ ಭಾಗದ ಜನತೆಗೆ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಶೀಘ್ರವೇ ಕ್ರಮ ತೆಗೆದುಕೊಳ್ಳುವಂತೆ ಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗುವುದು~ ಎಂದು ಅವರು ತಿಳಿಸಿದರು.ಕಾಂಗ್ರೆಸ್ ಮುಖಂಡ ಮರಿದೇವರು ಅವರು ಬೆಂಕಿಯಿಂದ ಭಸ್ಮವಾಗಿರುವ ಗುಡಿಸಲು ಮನೆಗಳನ್ನು ವೀಕ್ಷಿಸಿದರು. ಅಲ್ಲದೆ ನಿವಾಸಿಗಳಿಗೆ ಅಗತ್ಯವಿರುವ ಆಹಾರ ಪದಾರ್ಥ, ಬಟ್ಟೆ ಮತ್ತು ಹೊದಿಕೆಗಳನ್ನು ಒದಗಿಸುವ ವ್ಯವಸ್ಥೆ ಮಾಡುವುದಾಗಿಯೂ ಅವರು ಭರವಸೆ  ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry