ಗೆದ್ದದ್ದು `ಮೋದಿ ಬ್ರಾಂಡ್'

7

ಗೆದ್ದದ್ದು `ಮೋದಿ ಬ್ರಾಂಡ್'

Published:
Updated:

 


ಬೆಂಗಳೂರು: `ಗುಜರಾತ್‌ನಲ್ಲಿ ಮತ್ತೆ ಅಧಿಕಾರ ಹಿಡಿದಿರುವುದು ಬಿಜೆಪಿಯ ಗೆಲುವು ಅಲ್ಲ. ಅದು ಮೋದಿ ಬ್ರಾಂಡ್‌ನ ಗೆಲುವು' ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದರು.

 

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, `ಅದು ಬಿಜೆಪಿಯ ಗೆಲುವು ಆಗಿದ್ದರೆ ಹಿಮಾಚಲ ಪ್ರದೇಶದಲ್ಲೂ ಬಹುಮತ ಪಡೆಯಬೇಕಿತ್ತಲ್ಲವೇ' ಎಂದು ಪ್ರಶ್ನಿಸಿದರು.

 

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಯಡಿಯೂರಪ್ಪ ಈ ವರ್ಷದ ಮೇ 24ರಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಈ ಕುರಿತು ಗುರುವಾರ ಗಮನ ಸೆಳೆದಾಗ, `ಮೋದಿ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂಬ ಹಿಂದಿನ ಹೇಳಿಕೆ ಕುರಿತು ಈಗ ಏನನ್ನೂ ಹೇಳುವುದಿಲ್ಲ. ಈಗ ನಾನು ಬಿಜೆಪಿಯಲ್ಲಿ ಇಲ್ಲ. ಆದ್ದರಿಂದ ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ರಾಜಕೀಯಕ್ಕೂ ಗೆಳೆತನಕ್ಕೂ ವ್ಯತ್ಯಾಸವಿದೆ' ಎಂದರು.ದಿಕ್ಸೂಚಿ: ಶೆಟ್ಟರ್

`ಗುಜರಾತ್ ಚುನಾವಣೆ ಫಲಿತಾಂಶವು ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು. ಓಕಳಿಪುರದಲ್ಲಿ ಸಿಗ್ನಲ್‌ರಹಿತ ಕಾರಿಡಾರ್ ನಿರ್ಮಾಣ ಯೋಜನೆಗೆ ಗುರುವಾರ ಚಾಲನೆ ನೀಡಿದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡಿದರು.

 


`ಗುಜರಾತ್‌ನಲ್ಲಿ ಬಿಜೆಪಿ ಜಯ ನಿರೀಕ್ಷಿತ. ಅಲ್ಲಿನ ಫಲಿತಾಂಶವು ರಾಜ್ಯದ ಮೇಲೂ ಪ್ರಭಾವ ಬೀರಲಿದೆ. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಬಿಜೆಪಿ ಸಂಘಟನೆ ಬೇರು ಬಿಟ್ಟಿದೆ. ಮುಂದೆ ಬರುವ ಚುನಾವಣೆಗಳಲ್ಲಿ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಬಿಜೆಪಿ ಗೆಲುವು ಸಾಧಿಸಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 


`ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಬೇಕೆಂದು ಜನರು ಬಯಸುತ್ತಿದ್ದಾರೆ. ಮೋದಿ ಪ್ರಧಾನಿ ಆಗಲಿ. ಅವರನ್ನು ಸತತ ಮೂರನೇ ಬಾರಿಗೆ ಬೆಂಬಲಿಸಿದ ಗುಜರಾತ್ ಜನರನ್ನು ನಾನು ಅಭಿನಂದಿಸುತ್ತೇನೆ' ಎಂದು ಅವರು ನುಡಿದರು.

 


`ಗುಜರಾತ್‌ನಲ್ಲಿ ಮೂರು ಅವಧಿಗೆ ಒಬ್ಬರೇ ಮುಖ್ಯಮಂತ್ರಿ. ರಾಜ್ಯದಲ್ಲಿ ಒಂದೇ ಅವಧಿಗೆ ಮೂವರು ಮುಖ್ಯಮಂತ್ರಿಗಳಾಗಿರುವುದು ಪರಿಣಾಮ ಬೀರುವುದಿಲ್ಲವೇ?' ಎಂಬ ವರದಿಗಾರರ ಪ್ರಶ್ನೆಗೆ, `ಅದು ಕರ್ನಾಟಕದ ಬಿಜೆಪಿ ವೈಶಿಷ್ಟ್ಯ' ಎಂದು ನಕ್ಕರು.`ಮೋದಿ ಅವರದ್ದು ಸೀಮಿತ ಪ್ರಭಾವ'

ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಹಿಂದಿಗಿಂತಲೂ ಹೆಚ್ಚಿನ ಸ್ಥಾನಗಳು ದೊರೆತಿವೆ. ನರೇಂದ್ರ ಮೋದಿ ಅವರದ್ದು ಗುಜರಾತ್‌ಗೆ ಸೀಮಿತವಾದ ಪ್ರಭಾವ. ಅವರು ಹಿಮಾಚಲ ಪ್ರದೇಶದಲ್ಲೂ ಪ್ರಚಾರ ನಡೆಸಿದ್ದರು. ಆದರೆ, ಅದರಿಂದ ಬಿಜೆಪಿಗೆ ಹಿನ್ನಡೆಯೇ ಆಗಿದೆ


ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್


 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry