ಗೆದ್ದವರೇ ನಿಜವಾಗಿ ಬಲಿಷ್ಠರು

7

ಗೆದ್ದವರೇ ನಿಜವಾಗಿ ಬಲಿಷ್ಠರು

Published:
Updated:
ಗೆದ್ದವರೇ ನಿಜವಾಗಿ ಬಲಿಷ್ಠರು

ಬಲಿಷ್ಠ ತಂಡವೇ ಯಾವಾಗಲೂ ಗೆಲ್ಲುತ್ತದೆ ಎಂಬುದು ತಪ್ಪು ಕಲ್ಪನೆ ಎಂಬ ವಿಷಯ ಅನೇಕ ಸಲ ಸಿದ್ಧವಾಗಿದೆ. ಬೇರೆ ಬೇರೆ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಇದು ಸಾಬೀತಾಗಿದೆ. ಇದು ಬಹಳವಾದರೆ ಒಂದು ನಿರೀಕ್ಷೆ. ನಿರೀಕ್ಷೆಗಳು ನಿಜವಾಗಬಹುದು, ಅದರಂತೆ ಸುಳ್ಳಾಗಲೂಬಹುದು. ಕ್ರಿಕೆಟ್‌ನಲ್ಲಂತೂ ಇದು ತೀರಾ ಸಾಮಾನ್ಯ. ಏಕದಿನ ಕ್ರಿಕೆಟ್ ಪಂದ್ಯಗಳ ರೋಚಕತೆ ಇರುವುದೇ ಈ ನಿರೀಕ್ಷೆಯಲ್ಲಿ.

 

1983ರಲ್ಲಿ ನಿರೀಕ್ಷೆಯನ್ನು ಮೀರಿ ಭಾರತ ವಿಶ್ವಕಪ್ ಗೆದ್ದಾಗ ಭಾರತ ಖಂಡಿತವಾಗಿಯೂ ಬಲಿಷ್ಠ ತಂಡವಾಗಿರಲಿಲ್ಲ. ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾರತಕ್ಕಿಂತ ಬಲಿಷ್ಠವಾಗಿದ್ದವು. ಈ ಮೂರು ತಂಡಗಳಲ್ಲಿ ಯಾವುದಾದರೊಂದು, ವಿಶೇಷವಾಗಿ ವೆಸ್ಟ್‌ಇಂಡೀಸ್ ಕಪ್ ಗೆಲ್ಲಬಹುದೆಂಬ ನಿರೀಕ್ಷೆ ಸರ್ವತ್ರವಾಗಿತ್ತು. ಭಾರತ ಗೆಲ್ಲಬಹುದೆಂದು ತಂಡದ ಕಟ್ಟಾ ಅಭಿಮಾನಿ ಕೂಡ ನಿರೀಕ್ಷಿಸಿರಲಿಲ್ಲ. ಭಾರತ ಒಂದೆರಡು ಪಂದ್ಯಗಳನ್ನು ಗೆದ್ದಾಗ ಬ್ರಿಟಿಷ್ ಪತ್ರಿಕೆಗಳು ಅದನ್ನು ಆಕಸ್ಮಿಕ ಎಂದು ಬರೆದಿದ್ದವು.ವೆಸ್ಟ್‌ಇಂಡೀಸ್ ನಿಜವಾಗಿ ಬಲಿಷ್ಠವಾಗಿತ್ತು. ಉಳಿದವುಗಳು ಕಾಗದದ ಮೇಲಿನ ಆಂದಾಜಿಗಿಂತ ಪ್ರತ್ಯಕ್ಷದಲ್ಲಿ ಅಜೇಯ ಎನಿಸುವಷ್ಟು ಬಲಶಾಲಿಯಾಗಿರಲಿಲ್ಲ. ಆದರೂ ಕಪಿಲ್‌ದೇವ್ ನಾಯಕತ್ವದ ಭಾರತ ತಂಡ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಿಗಿಂತ ಬಹಳ ಕೆಳಗೇ ಇತ್ತು. ಭಾರತದ ಮೇಲೆ ಬಾಜಿ ಕಟ್ಟುವ ಜೂಜುಗಾರರೇ ಇರಲಿಲ್ಲ. ಪಟೇಲ್ ಎಂಬ ಅಪ್ಪಟ ಭಾರತಪ್ರೇಮಿಯೊಬ್ಬ ಕೇವಲ ಅಭಿಮಾನದಿಂದ ಭಾರತ ಗೆಲ್ಲುವುದಾಗಿ ದೊಡ್ಡ ಮೊತ್ತದ ಹಣವನ್ನು ಕಟ್ಟಿದ. ಅವನಿಗೆ, ನನಗೆ ನೆನಪಿರುವಂತೆ ಹತ್ತು ಲಕ್ಷ ಪೌಂಡ್ ಹಣವನ್ನು ಬಾಜಿದಾರರು ತೆರಬೇಕಾಯಿತು.ಬಿಷನ್‌ಸಿಂಗ್ ಬೇಡಿ ನಾಯಕತ್ವದ ಭಾರತ, ಮೊದಲನೇ ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದರೆ ವೆಂಕಟರಾಮನ್ ನಾಯಕತ್ವದ ತಂಡ 1979ರ ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಇಂಥ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳಲು ಹೇಗೆ ಸಾಧ್ಯ? ಮೊದಲನೆಯದಾಗಿ ಭಾರತದ ಆಟಗಾರರಲ್ಲಿ ಹೆಚ್ಚಿನವರು ಟೆಸ್ಟ್ ಕ್ರಿಕೆಟ್ ನಿಷ್ಣಾತರು.ಉಳಿದವರಲ್ಲಿ ಅನೇಕರು ಇನ್ನೂ ಅಷ್ಟಾಗಿ ಜಗತ್ತಿನ ಗಮನಕ್ಕೆ ಬಾರದಿದ್ದ ಸಾಮಾನ್ಯ ಆಲ್‌ರೌಂಡರ್‌ಗಳು. ಕಪಿಲ್‌ದೇವ್ ಒಬ್ಬರೇ ಮನ್ನಣೆ ಪಡೆದಿದ್ದ ವಿಶ್ವದರ್ಜೆಯ ಆಲ್‌ರೌಂಡರ್. ಅವರೇ ನಾಯಕ, ಮೇಲಾಗಿ ನಿಗದಿತ ಓವರ್‌ಗಳ ಕ್ರಿಕೆಟ್‌ಗೆ ಭಾರತೀಯರು ಅಯೋಗ್ಯರು ಎಂಬ ಟೀಕೆ ಅವರನ್ನು ಮಾನಸಿಕವಾಗಿ ಬಹಳಷ್ಟು ಘಾಸಿಗೊಳಿಸಿತ್ತು.1983ರ ವಿಶ್ವಕಪ್‌ಗೆ ಮೊದಲು ಭಾರತ ತಾನು ಆಡಿದ್ದ 42 ನಿಗದಿತ ಓವರ್‌ಗಳ ಪಂದ್ಯಗಳಲ್ಲಿ 14ರಲ್ಲಿ ಮಾತ್ರ ಜಯಗಳಿಸಿತ್ತು. ಆದರೆ ಈ 14ರ ಪೈಕಿ ಭಾರತ, ಒಂದೆರಡು ಪಂದ್ಯಗಳಲ್ಲಿ ಪ್ರಬಲ ವೆಸ್ಟ್‌ಇಂಡೀಸ್ ಹಾಗೂ ಆಸ್ಟ್ರೇಲಿಯಾವನ್ನು ಚೆನ್ನಾಗಿ ಹಣಿದಿತ್ತು. ಎಂಥ ಬಲಿಷ್ಠ ತಂಡವೂ ಅಜೇಯವಲ್ಲ ಎಂಬ ಸತ್ಯ ಅದಾಗಲೇ ಗೋಚರಿಸಿತ್ತು.1983ರ ವಿಶ್ವಕಪ್‌ಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ನಾಯಕ ಕಪಿಲ್‌ದೇವ್ ಬಯಸಿದ ಆಟಗಾರರೇ ಇದ್ದರು. ಸುನಿಲ್ ಗಾವಸ್ಕರ್ ಮತ್ತು ದಿಲೀಪ್ ವೆಂಗ್‌ಸರಕರ್ ಅವರನ್ನು ಕೈಬಿಡಲು ಅವರು ಒಪ್ಪಲಿಲ್ಲ. ಇವರು ತಂಡದಲ್ಲಿದ್ದರೆ ತಂಡ ಕಾಗದದ ಮೇಲಾದರೂ ಬಲಿಷ್ಠವಾಗಿ ಕಾಣಲಿ ಎಂಬ ಉದ್ದೇಶ ಅವರಿಗೆ ಇದ್ದಿರಬೇಕು. ಕೊನೆಗೆ ಗಾವಸ್ಕರ್ ಮತ್ತು ವೆಂಗ್‌ಸರಕರ್ ಅಪೇಕ್ಷಿಸಿದಷ್ಟು ಉಪಯೋಗ ಆಗಲಿಲ್ಲ. ಅದು ಬೇರೆ ಮಾತು.

 

ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಆಲ್‌ರೌಂಡರ್‌ಗಳು ಬಹಳ ಉಪಯುಕ್ತ ಎಂದು ಭಾವಿಸಿ, ಮಧ್ಯಮ ವೇಗದ ಬೌಲರ್‌ಗಳಾದ ಮದನ್‌ಲಾಲ್, ಮೊಹಿಂದರ್ ಅಮರ್‌ನಾಥ್, ರೋಜರ್ ಬಿನ್ನಿ, ಬಲವಿಂದರ್ ಸಂಧು ಅವರನ್ನು ಅವರು ಆರಿಸಿದ್ದರು. ಇದು ನಿರೀಕ್ಷಿತ ಫಲ ಕೊಟ್ಟ ಆಯ್ಕೆ. ಹೊರಗಿನವರ ದೃಷ್ಟಿಯಲ್ಲಿ ಕಪಿಲ್ ಒಬ್ಬರೇ ನಿಜಾರ್ಥದಲ್ಲಿ ಆಲ್‌ರೌಂಡರ್. ತಂಡದಲ್ಲಿದ್ದ, ಅದೇ ಆಗ ಆಲ್‌ರೌಂಡರ್ ಆಗಿ ರೂಪುಗೊಳ್ಳುತ್ತಿದ್ದ ರವಿಶಂಕರ ಶಾಸ್ತ್ರಿ, ಅನುಭವದ ಕೊರತೆಯಿಂದ ನಿರೀಕ್ಷಿತ ಮಟ್ಟಕ್ಕೆ ತಲುಪಲಿಲ್ಲ. ಅವರಿಗೆ ಸಿಕ್ಕ ಅವಕಾಶಗಳೂ ಕಡಿಮೆ. ಮದನ್‌ಲಾಲ್, ಅಮರನಾಥ್ ಮತ್ತು ರೋಜರ್ ಬಿನ್ನಿ, ಕಠಿಣ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಮಿಂಚಿ, ಅಂತಿಮ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

 

ಯಶಪಾಲ್ ಶರ್ಮ ಹಾಗೂ ಸಂದೀಪ್ ಪಾಟೀಲರ ಮೇಲಿನ ಭರವಸೆ ಸುಳ್ಳಾಗಲಿಲ್ಲ. ಆದರೆ ಅಂತರರಾಷ್ಟ್ರೀಯ ಸಮೂಹ ಈ ರಚನೆಯ ಮಹತ್ವವನ್ನು ಅರಿತುಕೊಳ್ಳಲಿಲ್ಲ. ಕಪಿಲ್‌ದೇವ್ ನಾಯಕನ ಗೌರವಕ್ಕೆ ಶೋಭೆ ತರುವಂಥ ಆಟವನ್ನು ಆಡಿ, ಜಿಂಬಾಬ್ವೆ ಕೈಯಲ್ಲಿ ಹೀನಾಯ ಸೋಲು ತಪ್ಪಿಸಿದ ನಂತರ ತಂಡದಲ್ಲಿ ಒಗ್ಗಟ್ಟು ಹಾಗೂ ಆತ್ಮವಿಶ್ವಾಸ ಹೆಚ್ಚಿ ಅದು ನಿರ್ದಿಷ್ಟ ಗುರಿಯತ್ತ ಸಾಗುವ ದಾರಿಯನ್ನು ಕಂಡುಕೊಂಡಿತು.ಬಲಶಾಲಿಯಲ್ಲದ, ಯಾರ ಪರಿಗಣನೆಗೂ ಸಿಗದ ತಂಡವೊಂದು ತನಗಿಂತ ಅನೇಕ ಪಟ್ಟು ಬಲಶಾಲಿಯಾಗಿದ್ದ ತಂಡಗಳನ್ನು ಬಗ್ಗುಬಡಿಯಿತು. ಅಬದ್ಧತೆ, ಅಸಮರ್ಪಕ ನಾಯಕತ್ವ, ಮುಂದಿನ ತಂಡಗಳ ಆದ್ಯ ಗುಣಗಳಾಗಿದ್ದವು. ಕಪಿಲ್‌ದೇವ್ ಯಾವಾಗಲೂ 1983 ಹಾಗೂ ಉಳಿದ ತಂಡಗಳ ನಡುವಿನ ದೊಡ್ಡ ವ್ಯತ್ಯಾಸವಾಗಿದ್ದಾರೆ.1983ರ ನಂತರ ಪ್ರತಿಯೊಂದು ಭಾರತೀಯ ವಿಶ್ವಕಪ್ ತಂಡ ನಿಜಾರ್ಥದಲ್ಲಿ ಬಲಿಷ್ಠವಾಗಿತ್ತು. 2003ರಲ್ಲಿ ಸೌರವ್ ಗಂಗೂಲಿ ತಂಡಕ್ಕಂತೂ ಗೆಲ್ಲುವ ಕುದುರೆಯ ಹಣೆಪಟ್ಟಿ ಕಟ್ಟಲಾಗಿತ್ತು. ಆದರೆ ಕಪ್ ಗೆದ್ದವರು ಆಸ್ಟ್ರೇಲಿಯನ್ನರು. ಆ ತಂಡ, ಆಸ್ಟ್ರೇಲಿಯಾದ ಅಲ್ಲಿಯವರೆಗಿನ ಅತಿ ಬಲಿಷ್ಠ ತಂಡ.ಅಂತಿಮ ಪಂದ್ಯದಲ್ಲಿ ಭಾರತ ಸೋತರೂ ಗಂಗೂಲಿ, ತೆಂಡೂಲ್ಕರ್, ಶ್ರೀನಾಥ್. ದ್ರಾವಿಡ್, ಸೆಹ್ವಾಗ್, ಜಹೀರ್‌ಖಾನ್, ನೆಹ್ರಾ, ಹರ್‌ಭಜನ್‌ಸಿಂಗ್ ಮೊದಲಾದವರು ಅದನ್ನು ಕೊನೆಯ ಹಂತದವರೆಗೆ ತಲುಪಿಸುವಲ್ಲಿ ಸಫಲರಾದರು. ಆದರೆ ಈ ಬಲಿಷ್ಠ ತಂಡ, 2007ರಲ್ಲಿ ಹೆಚ್ಚು ಬದಲಾವಣೆಯಿಂದ ಕೂಡಿರಲಿಲ್ಲ.

 

ಆದರೂ ಅದು ಪ್ರಾಥಮಿಕ ಸುತ್ತಿನಲ್ಲೇ ನಿರ್ಗಮಿಸಬೇಕಾಯಿತು. ಹಾಗಾದರೆ ಅದು ಬಲಿಷ್ಠ ತಂಡವೇ?

2007ರ ತಂಡಕ್ಕಿಂತ ಸ್ವಲ್ಪವಾದರೂ ಬಲಿಷ್ಠವಾಗಿರುವ ಭಾರತದ 2011ರ ತಂಡಕ್ಕೆ ಈಗಾಗಲೇ ಗೆಲುವಿನ ಕೊರಳಪಟ್ಟಿ ತೊಡಿಸಲಾಗಿದೆ.ತೆಂಡೂಲ್ಕರ್, ದೋನಿ, ಯುವರಾಜ್, ಸುರೇಶ ರೈನಾ, ಸೆಹ್ವಾಗ್, ಗಂಭೀರ್, ಜಹೀರ್‌ಖಾನ್, ಶ್ರೀಶಾಂತ್, ನೆಹ್ರಾ, ಮುನಾಫ್ ಪಟೇಲ್, ಹರ್‌ಭಜನ್ ಸಿಂಗ್ ಮೊದಲಾದವರಿಂದ ಕೂಡಿದ ತಂಡ, ತಾತ್ವಿಕವಾಗಿ ಪ್ರತ್ಯಕ್ಷದಲ್ಲಿಯೇ ಬಲಿಷ್ಠವಾಗಿದೆ. ಹಾಗಾದರೆ ಅದು ವಿಶ್ವಕಪ್ ಗೆಲ್ಲುತ್ತದೆಯೇ? ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಿಜವಾಗಿಯೂ ಬಲಶಾಲಿಯಾಗಿವೆ.ಶ್ರೀಲಂಕಾ ಹಾಗೂ ಪಾಕಿಸ್ತಾನ ಸಮಬಲದ ತಂಡಗಳು. ಯಾವತ್ತೂ ಗಂಭೀರವಾಗಿ ಪರಿಗಣನೆಗೆ ಬಾರದಿರುವ ದಕ್ಷಿಣ ಆಫ್ರಿಕಾ ನಿಜಕ್ಕೂ ಕಪ್ಪು ಕುದುರೆ. ಬಲಿಷ್ಠ ತಂಡವೇ ಗೆಲ್ಲಬೇಕಾಗಿಲ್ಲ. ಇದು ಟೆಸ್ಟ್ ಕ್ರಿಕೆಟ್ ಅಲ್ಲ. ಆಟಗಾರ ತನಗೆ ತೋಚಿದಂತೆ ಆಡಲಾರ. ಅವರು ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಂತಲ್ಲಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸಮಯಸ್ಫೂರ್ತಿ ಅತ್ಯವಶ್ಯಕ ಸಂಗತಿ. ಅಂದಿಗೆ ಅಂದಿನ ಆಟವೇ ಮುಖ್ಯ. ಆಟಗಾರ, ತಂಡದ ಶ್ರೇಯಾಂಕ ನಗಣ್ಯ. ಬಲಿಷ್ಠ ತಂಡವೇ ಗೆಲ್ಲುತ್ತದೆ ಎಂಬ ಭ್ರಮೆ ಬೇಡ.ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ಸಿದ್ಧತೆ ತಕ್ಕ ರೀತಿಯಲ್ಲಿ ನಡೆದಿದೆ.  ಚಿತ್ರಗಳು: ಆರ್. ಶ್ರೀಕಂಠ ಶರ್ಮ1983ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಬಲಿಷ್ಠ ತಂಡಗಳೇ ಆಗಿದ್ದವು. ಈ ಪೈಕಿ ಒಂದೂ ಫೈನಲ್‌ಗೆ ಬರಲಿಲ್ಲ. ಅಷ್ಟೇ ಏಕೆ, ಬಲಿಷ್ಠ ತಂಡವೆಂದು ಹೆಸರಿಟ್ಟುಕೊಂಡು ಗಡಿದಾಟಿ ಹೋದ ಯಾವ ಭಾರತೀಯ ತಂಡವೂ ಗೆದ್ದಿಲ್ಲ. ಬಲಿಷ್ಠ ತಂಡಗಳೇ ಆಗಿದ್ದ ಭಾರತ ಹಾಗೂ ಪಾಕಿಸ್ತಾನ 2007ರಲ್ಲಿ ದುರ್ಬಲ ತಂಡಗಳ ವಿರುದ್ಧ ಏಕೆ ಸೋತು ಬಂದವು?2011ರ ಟೂರ್ನಿಯಲ್ಲಿರುವ ವಾಸ್ತವವಾಗಿ ಬಲಿಷ್ಠ ತಂಡಗಳೆಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಹಾಗೂ ದಕ್ಷಿಣ ಆಫ್ರಿಕಾ. ಇವೆಲ್ಲವುಗಳ ನಡುವೆ ಶ್ರೀಲಂಕಾ, ಪಾಕಿಸ್ತಾನದಂಥ ತಂಡಗಳಿಗೆ ತೂರಿಬರುವ ಅವಕಾಶ ಇದೆ, ಸಾಮರ್ಥ್ಯವೂ ಇದೆ. ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳಲ್ಲಿ ಬದ್ಧತೆ ಇದೆ. ಈ ಬದ್ಧತೆಯೇ ಗೆಲ್ಲುವ ಗುಣ. ಹಾಗಾದರೆ ಬಲಿಷ್ಠ ತಂಡ ಯಾವುದು? ಗೆಲ್ಲುವ ತಂಡವೇ ಬಲಿಷ್ಠ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry