ಗೆದ್ದೇ ಗೆಲ್ಲುವೆವು...

7

ಗೆದ್ದೇ ಗೆಲ್ಲುವೆವು...

Published:
Updated:
ಗೆದ್ದೇ ಗೆಲ್ಲುವೆವು...

“ಪ್ರಾಮಾಣಿಕನಾಗಿರುವೆ. ಇದುವರೆಗೆ ಯಾರಿಗೂ ಮೋಸ ಮಾಡಿಲ್ಲ. ಕಡಿಮೆ ತಿನ್ನುವೆ, ನಿಧಾನವಾಗಿ ತಿನ್ನುವೆ. ಹೀಗಾಗಿಯೇ ನನ್ನ ವಯಸ್ಸು 85 ದಾಟಿದೆ ಎಂದು ಹೇಳುವುದಕ್ಕೆ ಖುಷಿಯಾಗುತ್ತದೆ. ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದಿದ್ದರೆ ನನಗೆ ಏನನ್ನೋ ಕಳೆದುಕೊಂಡಂತಾಗುತ್ತದೆ...” 85 ವಸಂತಗಳನ್ನು ಕಂಡಿರುವ ಧಾರವಾಡದ ಚಂದ್ರಶೇಖರ ಬೆಂಡಿ ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ಹೇಳಿದ ಮಾತುಗಳಿವು.ಜನವರಿ ಮೊದಲ ವಾರ ನಡೆದಿದ್ದ 34ನೇ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ಹಿರಿಯರು ಕ್ರೀಡಾಂಗಣದ ದಾರಿ ಹುಡುಕುತ್ತಿರುವ ವೇಳೆಯಲ್ಲೇ, ಸ್ಪರ್ಧಿಗಳ ಪೈಕಿ ಅತ್ಯಂತ ಹಿರಿಯರಾದ ಬೆಂಡಿ ಎಲ್ಲರಿಗಿಂತ ಮುಂಚೆ ಕ್ರೀಡಾಂಗಣಕ್ಕೆ ಬಂದು ನಿಂತಿದ್ದರು.ಅವರಿಗೆ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತಲೂ ಪಾಲ್ಗೊಳ್ಳುವುದೇ ಮುಖ್ಯವಾಗಿತ್ತು. ಪಾಲ್ಗೊಳ್ಳುವುದಕ್ಕಿಂತಲೂ ತಮಗಿಂತ ಕಿರಿಯರಾದ ಹಿರಿಯ ಕ್ರೀಡಾಪಟುಗಳೊಂದಿಗೆ ಇರಬೇಕಾಗಿತ್ತು. ಅದು ಅವರ ಜೀವನೋತ್ಸಾಹ. ಹೀಗಾಗಿಯೇ ಅವರತ್ತ ಬಂದವರು ಸುಮ್ಮನೇ ಸುಳಿದು ಹೋಗುತ್ತಿರಲಿಲ್ಲ. ಅವರ ಉತ್ಸಾಹದ ಮಾತಗಳಿಗೆ ಕಿವಿಗೊಡುತಿದ್ದರು, ತಲೆ ಬಾಗಿಸುತ್ತಿದ್ದರು!  85 ವಯಸ್ಸು ದಾಟಿದವರ ವಿಭಾಗದ 800 ಮಿ, 1500 ಮೀ ಓಟದ ಸ್ಪರ್ಧೆಯಲ್ಲಿ ಬೆಂಡಿ ಏಕೈಕ ಸ್ಪರ್ಧಿಯಾಗಿ ಗಮನ ಸೆಳೆದರು. 5 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಅವರು 50;50 ನಿಮಿಷದಲ್ಲಿ ಗುರಿಮುಟ್ಟಿದರು!ಕೋಲಾರದಲ್ಲಿ ಇದೇ ಮೊದಲ ಬಾರಿಗೆ ನಡೆದ ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟವು ರಾಜ್ಯದ ವಿವಿಧ ಭಾಗಗಳ ಇಂಥ ನೂರಾರು ಹಿರಿಯರನ್ನು ಪರಿಚಯಿಸಿತು. ಅವರೆಲ್ಲ ಪರಸ್ಪರ ಈ ಮೊದಲು ಪರಿಚಿತರೇ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗಾಗಿ ದೇಶಗಳ ಗೆರೆ ಮೀರಿ ಸಂಚರಿಸುತ್ತಿರುವವರು. ವಯಸ್ಸಿನ ಗಡಿ, ದೇಶಗಳ ಗಡಿ ಮೀರಿ ಅವರೆಲ್ಲ ಆಟದ ಅಂಕಣದಲ್ಲಿ ಖುಷಿಯಿಂದ ಖುಷಿಗಾಗಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರ. ಓಟ, ಜಿಗಿತ, ಎಸೆತ ಎಲ್ಲದರಲ್ಲಿಯೂ ಅವರು ನಿಜವಾದ ಅರ್ಥದಲ್ಲಿ ಶಕ್ತಿಮೀರಿ ಸಕ್ರಿಯವಾಗಿದ್ದವರು.ಮೈದಾನದ ಆಟೋಟಗಳಲ್ಲಿ ಪಾಲ್ಗೊಳ್ಳುವುದಕ್ಕೆ ವಯಸ್ಸು ಅವರಿಗೆ ಅಡ್ಡಿಯಲ್ಲ. ಹೀಗಾಗಿಯೇ ಅವರನ್ನು ಕಂಡ ಕೋಲಾರದ ಬಹಳ ಮಂದಿ, ಅದರಲ್ಲೂ ಯುವಕ-ಯುವತಿಯರು, ತಮ್ಮ ಜೀವನ ಇನ್ನೇನು ಮುಗಿಯಿತು ಎಂಬ ಸಿನಿಕತೆಯನ್ನು ರೂಢಿಸಿಕೊಂಡ ಹಲವು ಮಧ್ಯವಯಸ್ಕರು ಮೂಗಿನ ಮೇಲೆ ಬೆರಳಿಟ್ಟುಕೊಂಡರು. 5 ಕಿಮೀ, 10 ಕಿಮೀ ರಸ್ತೆ ಓಟದ ಸ್ಪರ್ಧೆಗಳಲ್ಲಿ ಈ ವೃದ್ಧಜೀವಗಳು ಬೆವರಳಿಸಿ ಓಡುತ್ತಿದ್ದರೆ ಬಹಳ ಮಂದಿ ಬೆರಗಾದರು, ನಾಚಿಕೊಂಡರು.ಉತ್ತಮ ಆರೋಗ್ಯಕ್ಕಾಗಿ...

70 ವಯಸ್ಸಿನವರ ವಿಭಾಗದ 10 ಕಿ ಮೀ, 5 ಕಿ ಮೀ ಓಟದ ಸ್ಪರ್ಧೆಯಲ್ಲಿ ಮೊದಲಿಗರಾದ ಧಾರವಾಡದ ಬ್ಯಾಹಟ್ಟಿ ಗ್ರಾಮದ ಆರ್.ಎಚ್.ಹಿರೇಗಣ್ಣನವರ ರೈತ ಕೂಲಿ. 4 ವರ್ಷದಿಂದಷ್ಟೇ ಅಭ್ಯಾಸ ನಡೆಸುತ್ತಿರುವವರು. 'ಶರೀರ ಆರೋಗ್ಯವಾಗಿರ‌್ತದೆ' ಎಂದು ಓಟವನ್ನು ಪ್ರೀತಿಸಿದವರು. ಪತ್ನಿ ತೀರಿಕೊಂಡು 8 ವರ್ಷವಾಗಿದೆ. ಐವರು ಮಕ್ಕಳ ತಂದೆ. ಇಂಥ ಸನ್ನಿವೇಶದ ನಡುವೆ ಅವರು ತಮ್ಮ ಉತ್ಸಾಹವನ್ನು ಬಿಟ್ಟುಕೊಟ್ಟಿಲ್ಲ ಎಂಬುದೇ ವಿಶೇಷ.80 ವರ್ಷದವರ ವಿಭಾಗದ 800 ಮೀ, 400 ಮೀ ಓಟದ ಸ್ಪರ್ಧೆಯಲ್ಲಿ ಮೊದಲಿಗರಾದ ಬಿಜಾಪುರದ ಬಿ.ಡಿ.ಖೋಜಗೀರ ವಾಚ್ ರಿಪೇರಿ ಕೆಲಸ ನೆಚ್ಚಿಕೊಂಡವರು. 9 ಮಕ್ಕಳ ತಂದೆ. ಮಕ್ಕಳು ಕೊಡುವ ಖರ್ಚಿನ ಹಣವನ್ನು ಹಿರಿಯರ ಕ್ರೀಡಾಕೂಟದ ಖರ್ಚುಗಳಿಗಾಗಿ ಕೂಡಿಸಿಡುವುದು ಅವರ `ಖಯಾಲಿ'. ಈ ವಯಸ್ಸಿನಲ್ಲಿ ಅವರು ಪ್ರತಿ ದಿನ ಐದರಿಂದ ಹತ್ತು ಕಿಮೀ ಓಡುವ ಅಭ್ಯಾಸವನ್ನು ಬಿಟ್ಟಿಲ್ಲ.ಮೂರು ತಿಂಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಯೊಂದಕ್ಕೆ ಒಳಗಾಗಿದ್ದ ಹೊಸಕೋಟೆಯ ಮಂಜುನಾಥ್, ಮನೆಯವರ ಆಕ್ಷೇಪಣೆಯನ್ನು ನಯವಾಗಿ ಎದುರಿಸಿ, ವೈದ್ಯರ ಸಲಹೆ ಪಡೆದು ಕ್ರೀಡಾಕೂಟಕ್ಕೆ ಬಂದು, 60 ವಯಸ್ಸಿನವರ ವಿಭಾಗದ 5 ಕಿ ಮೀ ಮತ್ತು 10 ಕಿ ಮೀ ರಸ್ತೆ ಓಟದ ಸ್ಪರ್ಧೆಯಲ್ಲಿ ಮೊದಲಿಗರಾದರು!

ಬೆಂಗಳೂರಿನ ಕೆಕೆಇಸಿಎಸ್ ಕಾಲೇಜಿನಲ್ಲಿ ಪ್ರಾಂಶುಪಾಲೆಯಾಗಿರುವ ಟಿ.ವಿ.ಲಲಿತಮ್ಮ `ಲಾಂಗ್ ಡಿಸ್ಟೇನ್ಸ್ ರನ್ನರ್'. 65 ವಯಸ್ಸಿನವರ ವಿಭಾಗದ 5 ಕಿ ಮೀ ರಸ್ತೆ ಓಟ ಮತ್ತು 5 ಕಿ ಮೀ ನಡಿಗೆ ಸ್ಪರ್ಧೆಯಲ್ಲಿ ಮೊದಲಿಗರಾದರು. ಅವರದು ಕ್ರೀಡೆಯ ಬಗ್ಗೆ ಕೇವಲ ಆಸಕ್ತಿ ಮೀರಿದ ಬದ್ಧತೆ. 25 ವರ್ಷದಿಂದ ಅವರು ಹಿರಿಯರ ಕ್ರೀಡಾಕೂಟಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದಾರೆ!  ನಮ್ಮ  ಆರೋಗ್ಯ ನಮ್ಮ ಕೈಯಲ್ಲೇ ಇರಬೇಕು ಎನ್ನುತ್ತಾರೆ.75 ವಯಸ್ಸು ದಾಟಿದವರ ವಿಭಾಗದ 100 ಮೀ ಓಟ , ಟ್ರಿಪಲ್ ಜಂಪ್, ಲಾಗ್‌ಜಂಪ್‌ನಲ್ಲಿ ಮೊದಲ ಸ್ಥಾನ ಗಳಿಸಿದ ಡಾ.ಸೀತಾ ಚಿಟ್ಟಿಯಪ್ಪ 26 ವರ್ಷದಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡವರು. ಮನಃಶಾಸ್ತ್ರದ ನಿವೃತ್ತ ಪ್ರಾಧ್ಯಾಪಕಿಯಾದ ಅವರು ನಾಲ್ಕು ಹೆಣ್ಣುಮಕ್ಕಳನ್ನು ಸಾಕಿಕೊಂಡಿರುವ ಅಪರೂಪದ ತಾಯಿ. ಮಕ್ಕಳಿಲ್ಲದ ಕೊರತೆಯನ್ನು ಡಾ.ಸೀತಾ ಅವರು ಹೀಗೆ ನೀಗಿಕೊಂಡರೆ, ಪತಿವಿಯೋಗದ ದುಃಖ ತಮ್ಮನ್ನು ಮುಟ್ಟಲೂ ಬಿಡದೆ 2008ರಿಂದ ಕ್ರೀಡಾಂಗಣಕ್ಕೆ ಬಂದವರು ಅದೇ ಬೆಂಗಳೂರಿನ ಮುಕ್ತಾ ಉದಯಶೆಟ್ಟಿ. 65 ವಯಸ್ಸು ಮೀರಿದವರ ವಿಭಾಗದ 100 ಮೀ ಓಟದಲ್ಲಿ ಪ್ರಥಮ, ಡಿಸ್ಕಸ್ ಎಸೆತದಲ್ಲೂ ಪ್ರಥಮ ಸ್ಥಾನಗಳಿಸಿದ ಅವರು ತರಬೇತುದಾರರೇ ಇಲ್ಲದೆ ಮುಂದೆ ಬಂದವರು.ಹೀಗೆ ಒಬ್ಬೊಬ್ಬ ಹಿರಿಯ ಕ್ರೀಡಾಪಟುವಿನ ಜೀವನದಲ್ಲೂ ಒಂದೊಂದು ಶೋಕ, ಕೊರತೆಯ ಗೆರೆ ಇದೆ. ಕೆಲವರನ್ನು ಹೊರತುಪಡಿಸಿದರೆ ಬಹುತೇಕರ ಮನೆಗಳಲ್ಲಿ ಅವರ ಉತ್ಸಾಹಕ್ಕೆ ನಿತ್ಯವೂ ತಣ್ಣೀರೆರಚುವ ಮಂದಿಯೂ ಇದ್ದಾರೆ. ಇಂಥ ಸಂಕಟಗಳ ಗೆರೆಗಳೊಳಗೆ ನಲುಗದೆ, ನಿರಾಶವಾದಿಗಳಾಗದೆ ಹೊರಬಂದ ಈ ಹಿರಿಯರು ನೋಡುಗರಲ್ಲಿ ಉತ್ಸಾಹ ಎಂದರೆ ಏನೆಂದು ತೋರಿಸಿಕೊಟ್ಟರು ಎಂಬುದೇ ವಿಶೇಷ. ಜೀವನಪ್ರೀತಿ ಇದ್ದರೆ ಎಂಥ ಕೊರತೆಯಾಗಲೀ, ಅಡೆತಡೆಗಳಗಲೀ, ಅವಹೇಳನ, ಅವಮಾನಗಳಾಗಲೀ, ಸೋಲಾಗಲೀ ದೊಡ್ಡ ವಿಚಾರ ಅಲ್ಲವೇ ಅಲ್ಲ ಎಂಬುದನ್ನು ಅವರು ಬಲವಾಗಿ ನಂಬಿರುವವರು. ಕ್ರೀಡಾಕೂಟದ ಎರಡೂ ದಿನ ಅವರು ನಡೆದಷ್ಟೂ, ಓಡಿದಷ್ಟೂ ದೂರ, ಜಿಗಿದಷ್ಟೂ ಎತ್ತರದಲ್ಲಿ ಅವರ ಕಡೆಗೇ ಸೂರ್ಯನೂ ಮೆಚ್ಚುಗೆಯ ನೋಟ ಬೀರಿದ್ದ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry