ಗೆಲುವಿನ ಒತ್ತಡದಲ್ಲಿ ಭಾರತ ತಂಡ

ವೆಲಿಂಗ್ಟನ್ (ಪಿಟಿಐ/ಐಎಎನ್ಎಸ್): ಏಕದಿನ ಸರಣಿಯಲ್ಲಿ ಸೋಲು ಮತ್ತು ಪ್ರಥಮ ಟೆಸ್ಟ್ನಲ್ಲಿ ಅನುಭವಿಸಿದ ನಿರಾಸೆ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆ. ಈ ಒತ್ತಡದ ನಡುವೆ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಪ್ರವಾಸಿ ತಂಡ ಶುಕ್ರವಾರ ಆರಂಭವಾಗಲಿರುವ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಬೇಕಿದೆ.
ಮತ್ತೊಂದು ಸರಣಿ ಗೆಲುವಿನ ಕನಸು ಹೊತ್ತು ಕಿವೀಸ್ ನಾಡಿಗೆ ತೆರಳಿದ್ದ ಭಾರತ ತಂಡ ಈಗಾಗಲೇ ಸಾಕಷ್ಟು ಆಘಾತ ಅನುಭವಿಸಿದೆ. ಜೊತೆಗೆ ಮೊದಲ ಟೆಸ್ಟ್ನಲ್ಲಿ ಗೆಲುವಿನ ಸನಿಹ ಬಂದು ಸೋಲು ಕಂಡಿರು ವುದು ಆಟಗಾರರ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಆದ್ದರಿಂದ ಕೊನೆಯ ಟೆಸ್ಟ್ನಲ್ಲಿಯಾದರೂ ಜಯ ಪಡೆಯಬೇಕೆನ್ನುವ ಲೆಕ್ಕಾಚಾರ ಪ್ರವಾಸಿ ಬಳಗದ್ದಾಗಿದೆ.
ಸವಾಲು: ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ನಲ್ಲಿ ಭಾರತದ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದ್ದರು. ಈ ವೈಫಲ್ಯದಿಂದ ಹೊರಬರಬೇಕಾದ ಸವಾಲಿದೆ.
ಆರಂಭಿಕ ಆಟಗಾರ ಶಿಖರ್ ಧವನ್ ಶತಕ ಗಳಿಸಿದ್ದರು. ಇವರನ್ನು ಹೊರತುಪಡಿಸಿದರೆ, ಮುರಳಿ ವಿಜಯ್, ಟೆಸ್ಟ್ ಪರಿಣತ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ನಾಯಕ ದೋನಿ ಅವರು ತಮ್ಮ ಜವಾಬ್ದಾರಿಗೆ ತಕ್ಕಂತೆ ಆಡಿರಲಿಲ್ಲ.
ವೇಗಿಗಳ ಮೇಲಿದೆ ಅಪಾರ ನಿರೀಕ್ಷೆ: ಭಾರತದ ವೇಗಿಗಳು ಮೊದಲ ಟೆಸ್ಟ್ನಲ್ಲಿ ಕಿವೀಸ್ ತಂಡಕ್ಕೆ ಅಪಾಯಕಾರಿಯಾಗಿದ್ದರು.
ಎರಡನೇ ಇನಿಂಗ್ಸ್ನಲ್ಲಿ ಆತಿಥೇಯ ತಂಡವನ್ನು ಭಾರತದ ಬೌಲರ್ಗಳು ಕೇವಲ 105 ರನ್ಗೆ ಕಟ್ಟಿ ಹಾಕಿದ್ದರು.
ಪ್ರವಾಸಿ ತಂಡ ಟೆಸ್ಟ್ ಸರಣಿಯಲ್ಲಿ ಸೋಲು ತಪ್ಪಿಸಿಕೊಳ್ಳಬೇಕಾದರೆ, ಈ ಪಂದ್ಯದಲ್ಲಿ ಗೆಲುವು ಅಗತ್ಯ. ಆದ್ದರಿಂದ ಬೌಲರ್ಗಳ ಮುಂದೆ ಈಗ ದೊಡ್ಡ ಸವಾಲಿದೆ. ಹಿಂದಿನ ಟೆಸ್ಟ್ನಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದ ಇಶಾಂತ್ ಶರ್ಮ ಮೇಲೆ ಹೆಚ್ಚು ನಿರೀಕ್ಷೆಯಿದೆ. ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿರುವ ಕಾರಣ ಭಾರತ ಅಂತಿಮ ಇಲೆವೆನ್ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆಯಿದೆ.
ವಿಶ್ವಾಸದಲ್ಲಿ ಕಿವೀಸ್: ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಹೊಂದಿದ್ದ ಭಾರತ ತಂಡವನ್ನು ಮಣಿಸಿರುವ ಕಿವೀಸ್ ಬಳಗ ಮತ್ತೊಂದು ಸರಣಿ ಗೆದ್ದುಕೊಳ್ಳುವ ವಿಶ್ವಾಸದಲ್ಲಿದೆ. ಈ ತಂಡ ಏಕದಿನ ಸರಣಿಯಲ್ಲಿ 4-0ರಲ್ಲಿ ಜಯಿಸಿತ್ತು.
ಜೊತೆಗೆ ಹಿಂದಿನ ಟೆಸ್ಟ್ನಲ್ಲಿ ಪಡೆದ ಅಮೋಘ ಗೆಲುವು ತಂಡದ ವಿಶ್ವಾಸ ಹೆಚ್ಚಿಸಿದೆ. ಆ ಪಂದ್ಯದಲ್ಲಿ ಶತಕ ಗಳಿಸಿದ್ದ ಕೇನ್ ವಿಲಿಯಮ್ಸನ್ (113) ಮತ್ತು ದ್ವಿಶತಕ ಬಾರಿಸಿದ್ದ ಬ್ರೆಂಡನ್ ಟೇಲರ್ (224) ಉತ್ತಮ ಫಾರ್ಮ್ನಲ್ಲಿದ್ದಾರೆ. ರಾಸ್ ಟೇಲರ್ ಎರಡನೇ ಟೆಸ್ಟ್ಗೆ ಅಲಭ್ಯರಾಗಿದ್ದು ಇವರ ಸ್ಥಾನದಲ್ಲಿ 21 ವರ್ಷದ ಟಾಮ್ ಲಾಥಮ್ ಆಡಲಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಹಾಗೂ ಮಧ್ಯಮ ವೇಗಿ ಬೌಲರ್ ಆಗಿರುವ ಲಾಥಮ್ಗೆ ಇದು ಪದಾರ್ಪಣೆ ಟೆಸ್ಟ್.
ಕೊನೆಯ ಟೆಸ್ಟ್ ಡ್ರಾ: 2009ರಲ್ಲಿ ಭಾರತ ತಂಡ ಇಲ್ಲಿನ ಬಾಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಕೊನೆಯ ಸಲ ಟೆಸ್ಟ್ ಆಡಿತ್ತು. ಆ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು.
ಹೋದ ವರ್ಷದ ಡಿಸೆಂಬರ್ನಲ್ಲಿ ನ್ಯೂಜಿಲೆಂಡ್ ತಂಡ ವೆಸ್ಟ್ಇಂಡೀಸ್ ಎದುರು ಈ ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ಆಡಿದ್ದ ಟೆಸ್ಟ್ನಲ್ಲಿ ಕಿವೀಸ್ ಇನಿಂಗ್ಸ್ ಹಾಗೂ 73 ರನ್ಗಳ ಗೆಲುವು ಸಾಧಿಸಿತ್ತು.
ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿ ಲೆಂಡ್ ತಂಡಗಳು ಆರು ಸಲ ಮುಖಾಮುಖಿ ಯಾಗಿವೆ. ಒಂದು ಪಂದ್ಯ ಡ್ರಾ ಆಗಿದ್ದರೆ, ನಾಲ್ಕು ಪಂದ್ಯಗಳಲ್ಲಿ ಆತಿಥೇಯರು ಗೆಲುವು ಸಾಧಿಸಿದ್ದರು. ಆದ್ದರಿಂದ ಕಿವೀಸ್ ತಂಡಕ್ಕೆ ಇದು ಅದೃಷ್ಟದ ಅಂಗಳ.
ಸಾಕಷ್ಟು ಪಾಠ ಕಲಿತಿದ್ದೇವೆ: ‘ಈ ಪ್ರವಾಸದಲ್ಲಿ ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ. ಯುವ ಆಟಗಾರರನ್ನೇ ಹೆಚ್ಚಾಗಿ ಹೊಂದಿರುವ ನಮ್ಮ ತಂಡ ಬಲಿಷ್ಠವಾಗಿದೆ. ಆದರೆ, ಕೆಲ ಅನಿರೀಕ್ಷಿತ ಸೋಲುಗಳು ಎದುರಾಗುತ್ತಿವೆ’ ಎಂದು ಶಿಖರ್ ಧವನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದೆವು. ಗೆಲುವಿನ ಸನಿಹ ಬಂದು ಸೋಲು ಕಂಡಿದ್ದರಿಂದ ಬೇಸರವಾಗಿದೆ. ಆದರೆ, ಇತಿಹಾಸದ ನೆನಪಿಗಿಂತ ನಾಳೆಯ ಬಗ್ಗೆ ನಮಗೆ ಹೆಚ್ಚು ಭರವಸೆಯಿದೆ. ಹಿಂದಿನ ನಿರಾಸೆಯನ್ನು ಮರೆತಿದ್ದೇವೆ. ಮತ್ತೆ ಕಠಿಣ ಅಭ್ಯಾಸ ನಡೆಸಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದ್ದೇವೆ’ ಎಂದೂ ಅವರು ನುಡಿದರು.
ಪಂದ್ಯ ಆರಂಭ
ಬೆಳಿಗ್ಗೆ 3.30ಕ್ಕೆ (ಭಾರತೀಯ ಕಾಲಮಾನ). ನೇರ ಪ್ರಸಾರ: ಸೋನಿ ಸಿಕ್ಸ್.
ಪತ್ರಿಕಾಗೋಷ್ಠಿಗೆ ಬಾರದ ದೋನಿ
ವೆಲಿಂಗ್ಟನ್ (ಐಎಎನ್ಎಸ್): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕ ರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಎದುರಾಗಬಹುದು ಎನ್ನುವ ಕಾರಣಕ್ಕಾಗಿ ನಾಯಕ ಮಹೇಂದ್ರ ಸಿಂಗ್ ದೋನಿ ಗುರುವಾರ ಪತ್ರಿಕಾಗೋಷ್ಠಿಗೆ ಬರಲಿಲ್ಲ.
ಪಂದ್ಯದ ಮುನ್ನ ತಂಡದ ನಾಯಕ ಪತ್ರಿಕಾ ಗೋಷ್ಠಿಗೆ ಬರುವುದು ವಾಡಿಕೆ. ಆದರೆ, ದೋನಿ ಬದಲು ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗೋಷ್ಠಿಗೆ ಬಂದರು.
ಸ್ಪಾಟ್ ಫಿಕ್ಸಿಂಗ್ ಕುರಿತು ಮುಕುಲ್ ಮುದ್ಗುಲ್ ನೇತೃತ್ವದ ಸಮಿತಿ ಸುಪ್ರೀಂ ಕೋರ್ಟ್ಗೆ ವರದಿ ನೀಡಿದೆ. ಈ ಕುರಿತು ಧವನ್ ಅವರನ್ನು ಪ್ರಶ್ನಿಸಲು ಮುಂದಾದರೆ, ಮಾಧ್ಯಮ ಮ್ಯಾನೇಜರ್ ಅವಕಾಶ ನೀಡಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.